Dr N Someshwar Column: ವ್ಯಕ್ತಿತ್ವವನ್ನು ನಿರ್ಧರಿಸುವುದು ನಿಮ್ಮ ಹುಟ್ಟೋ ಅಥವಾ ಶಿಕ್ಷಣವೋ ?
ಒಬ್ಬನ ವ್ಯಕ್ತಿತ್ವವನ್ನು ವಂಶವಾಹಿಗಳು ನಿರ್ಧರಿಸುತ್ತವೆಯೋ ಅಥವಾ ಶಿಕ್ಷಣವು ನಿರ್ಮಿಸು ತ್ತದೆಯೋ ಎನ್ನುವುದು ಇಂದಿನ ಚರ್ಚೆಯ ತಿರುಳು. ಇದು ಅನಾದಿ ಕಾಲದ ಪ್ರಶ್ನೆ. ಈ ವಿಚಾರ ವನ್ನು ಕುರಿತು ಚರ್ಚೆಗಳು ಹಾಗೂ ವಾಗ್ವಾದಗಳು ಕನಿಷ್ಠ ಗ್ರೀಕರ ಕಾಲದಿಂದ ನಡೆದುಕೊಂಡು ಬಂದಿರುವುದನ್ನು ನಾವು ನೋಡಬಹುದು

ಅಂಕಣಕಾರ ಡಾ.ನಾ.ಸೋಮೇಶ್ವರ

ಹಿಂದಿರುಗಿ ನೋಡಿದಾಗ
ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುವ ಅಂಶಗಳು ಯಾವುವು? ಅದನ್ನು ಒಬ್ಬ ವ್ಯಕ್ತಿಯ ಹುಟ್ಟು ಅಂದರೆ ಅವನ ಆನುವಂಶಿಕತೆಯು ನಿರ್ಧರಿಸುತ್ತದೆಯೋ ಅಥವಾ ಅವನ ಕಲಿಕೆಯು ನಿರ್ಧರಿಸುತ್ತದೆಯೋ? ಇದನ್ನು ಇಂಗ್ಲಿಷಿನಲ್ಲಿ ‘ನೇಚರ್ ಆರ್ ನರ್ಚ ರ್?’ ಎಂದು ಪ್ರಶ್ನಿಸಿರುವುದುಂಟು. ನೇಚರ್ ಎಂದರೆ ಒಬ್ಬ ವ್ಯಕ್ತಿಯ ಹುಟ್ಟು ಅಥವಾ ಆನುವಂಶಿಕತೆ. ಇದನ್ನು ಪ್ರಕೃತಿ, ಸ್ವಭಾವ, ಹುಟ್ಟುಗುಣ, ನೈಸರ್ಗಿಕ ಗುಣ, ಸಹಜ ಗುಣ ಎಂದೆಲ್ಲ ವಿವರಿಸಬಹುದು. ನರ್ಚರ್ ಎಂದರೆ ಪಾಲನೆ ಅಥವಾ ಪೋಷಣೆ. ಆರೈಕೆಯನ್ನು ಮಾಡು, ಪೋಷಿಸು, ಬೆಳೆಸು, ಸಾಕು, ಪಾಲಿಸು, ಶಿಕ್ಷಣವನ್ನು ನೀಡು, ತರಬೇತಿ ನೀಡು, ಉತ್ತಮ ಪರಿಸರವನ್ನು ಸೃಜಿಸು ಎಂದೂ ಹೇಳಬಹುದು. ಈ ಅರ್ಥವನ್ನು ಹೊಮ್ಮಿಸುವ ‘ಶಿಕ್ಷಣ’ ಎಂಬ ಶಬ್ದವನ್ನು ನರ್ಚರ್ ಎನ್ನುವ ಶಬ್ದಕ್ಕೆ ಸಮನಾರ್ಥಕವಾಗಿ ಬಳಸೋಣ.
ಒಬ್ಬನ ವ್ಯಕ್ತಿತ್ವವನ್ನು ವಂಶವಾಹಿಗಳು ನಿರ್ಧರಿಸುತ್ತವೆಯೋ ಅಥವಾ ಶಿಕ್ಷಣವು ನಿರ್ಮಿ ಸುತ್ತದೆಯೋ ಎನ್ನುವುದು ಇಂದಿನ ಚರ್ಚೆಯ ತಿರುಳು. ಇದು ಅನಾದಿ ಕಾಲದ ಪ್ರಶ್ನೆ. ಈ ವಿಚಾರವನ್ನು ಕುರಿತು ಚರ್ಚೆಗಳು ಹಾಗೂ ವಾಗ್ವಾದಗಳು ಕನಿಷ್ಠ ಗ್ರೀಕರ ಕಾಲ ದಿಂದ ನಡೆದುಕೊಂಡು ಬಂದಿರುವುದನ್ನು ನಾವು ನೋಡಬಹುದು.
ಇದನ್ನೂ ಓದಿ: Dr N Someshwara Column: ಜಿಬಿ ಸಿಂಡ್ರೋಮ್ ಮುನ್ನೆಚ್ಚರಿಕೆಯ ಮಂತ್ರ
ಈ ಪ್ರಶ್ನೆಯು ಜೀವವಿಜ್ಞಾನ, ತಳಿ ವಿಜ್ಞಾನ, ಮನೋವಿಜ್ಞಾನ, ಸಮಾಜ ವಿಜ್ಞಾನ, ಶಿಕ್ಷಣ ವಿಜ್ಞಾನ ಹಾಗೂ ದರ್ಶನ ವಿಜ್ಞಾನಗಳಿಗೆಲ್ಲ ಬಿಡಿಸಲಾಗದ ಕಗ್ಗಂಟಾಗಿದೆ. ಇದುವರೆಗೆ ನಡೆದ ಚರ್ಚೆಗಳೆಲ್ಲ ವಂಶವಾಹಿಗಳ ಕಡೆಗೆ ಇಲ್ಲವೇ ಶಿಕ್ಷಣದ ಕಡೆಗೆ ವಾಲಿರುವುದನ್ನು ನಾವು ನೋಡಬಹುದು. ಆದರೆ ಆಧುನಿಕ ವಿಜ್ಞಾನದ ಹಿನ್ನೆಲೆಯಲ್ಲಿ ಈ ವಿಚಾರವನ್ನು ವಿಶ್ಲೇಷಿಸಿದಾಗ, ಅದು ಆನುವಂಶಿಕತೆ ಅಥವಾ ಶಿಕ್ಷಣದ ಕಡೆಗೆ ಒಲವನ್ನು ತೋರದೆ, ಇವೆರಡರ ನಡುವೆ ಅತ್ಯಂತ ಸಂಕೀರ್ಣವಾದ ಸಂಬಂಧಗಳ ಜಾಲ ಇರುವುದನ್ನು ಎತ್ತಿ ತೋರಿಸುತ್ತದೆ.
ಗ್ರೀಕರು: ಮನುಷ್ಯರ ವ್ಯಕ್ತಿತ್ವವನ್ನು ನಿರ್ಧರಿಸುವುದು ಆನುವಂಶಿಕತೆಯೋ ಇಲ್ಲ ಪರಿಸರವೋ ಎನ್ನುವ ಪ್ರಶ್ನೆಯು ಬಹುಶಃ ಮೊದಲ ಬಾರಿಗೆ ಗ್ರೀಕ್ ದಾರ್ಶನಿಕರನ್ನು ಕಾಡಿತು ಎಂದು ಕಾಣುತ್ತದೆ. ಪ್ಲೇಟೋ (ಕ್ರಿ.ಪೂ.428-ಕ್ರಿ.ಪೂ.423) ಮತ್ತು ಅವನ ಸಹಚ ರರು ಮನುಷ್ಯರ ಲಕ್ಷಣಗಳು ಆನುವಂಶಿಕವಾಗಿ ಹರಿದುಬರುವುದನ್ನು ತೋರಿಸುತ್ತಾ, ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಆನುವಂಶಿಕತೆಯೇ ನಿರ್ಧರಿಸುತ್ತದೆ ಎಂದು ವಾದಿಸಿದರು.
ಇದಕ್ಕೆ ತದ್ವಿರುದ್ಧವಾದ ವಾದವನ್ನು ಅರಿಸ್ಟಾಟಲ್ ಹಾಗೂ ಅವನ ಸಂಗಡಿಗರು (ಕ್ರಿ.ಪೂ.384-ಕ್ರಿ.ಪೂ.322) ಮಂಡಿಸಿದರು. ಪ್ರತಿಯೊಂದು ಮಗುವು ಹುಟ್ಟುವಾಗ ಅದರ ಮನಸ್ಸು ‘ಖಾಲಿ ಸ್ಲೇಟಿನ’ ಹಾಗೆ ಇರುತ್ತದೆ ಎಂದರು. ಇದನ್ನು ಅವರು ತಮ್ಮದೇ ಆದ ಪರಿಭಾಷೆಯಲ್ಲಿ ‘ಟ್ಯಾಬುಲ ರಾಸ’ ಎಂದು ಕರೆದರು. ಆ ಮಗುವು ತಾನು ಬೆಳೆಯುತ್ತಿರುವ ಪರಿಸರಕ್ಕೆ, ಪಡೆಯುವ ಶಿಕ್ಷಣಕ್ಕೆ ಅನುಗುಣವಾಗಿ ಹೊಸ ಹೊಸ ವಿಷಯಗಳನ್ನು ಕಲಿಯು ತ್ತಾ ಹೋಗುತ್ತದೆ.
ಹಾಗಾಗಿ ಮಗುವು ಬೆಳೆಯುವ ಪರಿಸರವು ಹಾಗೂ ಪಡೆಯುವ ಶಿಕ್ಷಣವು ಮಗುವಿನ ವ್ಯಕ್ತಿತ್ವ ವನ್ನು ನಿರ್ಧರಿಸುತ್ತದೆ ಎನ್ನುವುದು ಅವರ ವಾದದ ತಿರುಳಾಗಿತ್ತು. 17 ಮತ್ತು 18ನೆಯ ಶತಮಾನಗಳು ನವೋದಯದ ಕಾಲ. ನಮ್ಮ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ವಿಚಾರಗಳು ಬೆಳಕಿಗೆ ಬಂದಂಥ ಕಾಲ. ಈ ವಿಷಯದಲ್ಲೂ ಚರ್ಚೆಯು ತೀವ್ರ ಸ್ಥಿತಿಯನ್ನು ತಲುಪಿತು. ರೆನೆ ಡೆಸ್ಕಾರ್ಟೆ (1596-1650) ಮತ್ತು ಅವನ ಅನುಯಾಯಿಗಳು ಪ್ಲೇಟೋ ವಿನ ವಾದವನ್ನು ಎತ್ತಿಹಿಡಿದರೆ ಜಾನ್ ಲೋಕೆ (1632-1704) ಮತ್ತು ಅವನ ಸಂಗಡಿಗರು ಅರಿಸ್ಟಾಟಲನ ವಿಚಾರವೇ ಸತ್ಯವೆಂದು ವಾದಿಸಿದರು. ಈ ಚರ್ಚೆಯು 19 ಮತ್ತು 20ನೆಯ ಶತಮಾನಗಳಲ್ಲೂ ಮುಂದುವರಿಯಿತು.
ಈ ೨ ಶತಮಾನಗಳ ವಾದವು ಭಾವನಾತ್ಮಕವಾಗಿರುವ ಬದಲು ಅಂದು ಲಭ್ಯವಿದ್ದ ವೈಜ್ಞಾ ನಿಕ ತತ್ತ್ವಗಳನ್ನು ಆಧರಿಸಿದ್ದವು. ಚಾರ್ಲ್ಸ್ ಡಾರ್ವಿನ್ (1809-1882) ತನ್ನ ವಿಕಾಸವಾದ (ಎವಲ್ಯೂಶನ್) ಹಾಗೂ ನೈಸರ್ಗಿಕ ಆಯ್ಕೆಯ (ನ್ಯಾಚುರಲ್ ಸೆಲೆಕ್ಷನ್) ತತ್ತ್ವವನ್ನು ಮಂಡಿ ಸಿದ ಹಾಗೂ ‘ಅರಿಜಿನ್ ಆಫ್ ಸ್ಪೀಸೀಸ್’ ಪುಸ್ತಕವನ್ನು ಪ್ರಕಟಿಸಿದ.
ಇದು ‘ಮನುಷ್ಯನು ತನ್ನ ಗುಣಲಕ್ಷಣಗಳನ್ನು ಆನುವಂಶಿಕವಾಗಿ ಪಡೆಯುತ್ತಾನೆ’ ಎನ್ನುವ ವಾದಕ್ಕೆ ಪುರಾವೆಯನ್ನು ಒದಗಿಸಿತು. ಇದೇ ವೇಳೆಗೆ ಅವನ ಸೋದರ ಸಂಬಂಧಿ ಫ್ರಾನ್ಸಿಸ್ ಗಾಲ್ಟನ್ (1822-1911) ‘ಸುಜನನ ವಿಜ್ಞಾನ’ದ (ಯೂಜೆನಿಕ್ಸ್) ಪರಿಕಲ್ಪನೆಯನ್ನು ಮಂಡಿ ಸಿದ್ದ. ಇದು ಉತ್ತಮ ಸಂತಾನವನ್ನು ಪಡೆಯುವುದಕ್ಕೆ ಸಂಬಂಧಿಸಿದ್ದ ಹೊಸ ವಿಜ್ಞಾನ ಶಾಖೆಯಾಗಿತ್ತು.
ಇವನು “ಆಯ್ದ ತಳಿಗಳ ನಡುವೆ ಸಂತಾನೋತ್ಪತ್ತಿಯನ್ನು ಮಾಡುವುದರ ಮೂಲಕ ಉತ್ತಮ ಸಂತಾನವನ್ನು ಪಡೆಯಲು ಸಾಧ್ಯ" ಎಂದ. ಗಾಲ್ಟನ್‌ಗಿಂತಲೂ ಸಾವಿರಾರು ವರ್ಷಗಳ ಹಿಂದೆ ಪ್ಲೇಟೋ ‘ಆಯ್ದ ಸಂತಾನೋತ್ಪತ್ತಿ’ ಅಥವಾ ‘ಸೆಲೆಕ್ಟಿವ್ ಬ್ರೀಡಿಂಗ್’ ಬಗ್ಗೆ ತನ್ನ ರಿಪಬ್ಲಿಕ್ (ಕ್ರಿ.ಪೂ.375) ಕೃತಿಯಲ್ಲಿ ಬರೆದಿದ್ದ.
‘ರಾಜ್ಯ ನಿರ್ವಹಿತ ಮಿಲನ’ ಅಂದರೆ ‘ಸ್ಟೇಟ್ ಮ್ಯಾನೇಜ್ಡ್ ಮೇಟಿಂಗ್’ ಅಗತ್ಯವೆಂದ. ಅಂದರೆ ‘ಸರಕಾರವೇ ಯಾವ ಗಂಡು ಮತ್ತು ಹೆಣ್ಣಿನ ನಡುವೆ ಸಂತಾನವರ್ಧನೆಯು ನಡೆ ಯಬೇಕು ಎನ್ನುವುದನ್ನು ನಿರ್ಧರಿಸಬೇಕು’ ಎಂದ. ಹೀಗೆ ಆಯ್ದ ಸಂತಾನವರ್ಧನೆಯನ್ನು ಮಾಡಿದರೆ ಉತ್ತಮ ಸಂತಾನವು ಹುಟ್ಟುತ್ತದೆ, ಉತ್ತಮ ಸಮಾಜವು ನಿರ್ಮಾಣವಾಗುತ್ತದೆ ಎಂದ.
20ನೆಯ ಶತಮಾನದಲ್ಲಿ ವರ್ತನಾ ವಿಜ್ಞಾನಿಗಳಾದ ಜಾನ್ ಬಿ.ವ್ಯಾಟ್ಸನ್ (1878-1958) ಹಾಗೂ ಬಿ.ಎ-.ಸ್ಕಿನ್ನರ್ (1904-1990) ‘ಒಬ್ಬ ಮನುಷ್ಯನ ವ್ಯಕ್ತಿತ್ವವನ್ನು ಅವನು ಗಳಿಸಿದ ವಿದ್ಯಾಭ್ಯಾಸದ ಮಟ್ಟ ಹಾಗೂ ಅವನು ಬೆಳೆದು ಬಂದಿರುವ ಪರಿಸರವು ನಿರ್ಧರಿಸುತ್ತದೆ’ ಎಂದು ಪರಿಸರ ಹಾಗೂ ಶಿಕ್ಷಣಕ್ಕೆ ಒತ್ತನ್ನು ನೀಡಿದರು.
ಭಾರತದ ಕೊಡುಗೆ: ಒಬ್ಬ ಮನುಷ್ಯನ ವ್ಯಕ್ತಿತ್ವವನ್ನು ನಿರ್ಧರಿಸುವ ವಿಚಾರದಲ್ಲಿ ನಮ್ಮ ಪ್ರಾಚೀನ ಭಾರತದ ಕೊಡುಗೆಯೂ ಇದೆ. ಭಗವದ್ಗೀತೆಯ 4ನೆಯ ಅಧ್ಯಾಯದ 13ನೆಯ ಶ್ಲೋಕವು ‘ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶಃ’ ಎನ್ನುತ್ತದೆ. ಇಲ್ಲಿ ಎರಡು ಶಬ್ದಗಳನ್ನು ನಾವು ವಿವೇಚಿಸಬೇಕು. ಮೊದಲನೆಯದು ‘ಗುಣ’. ಗುಣ ಎನ್ನುವುದು ಹುಟ್ಟಿನಿಂದ ಬರುವಂಥದ್ದು.
‘ಕರ್ಮ’ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೀವಮಾನದಲ್ಲಿ ಪಡೆದ ಶಿಕ್ಷಣದ ಮೂಲಕ ಕಲಿತದ್ದು. ಅಂದರೆ ‘ಆನುವಂಶಿಕತೆ’ ಹಾಗೂ ‘ಶಿಕ್ಷಣ’ಗಳೆರಡೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ವನ್ನು ನಿರ್ಧರಿಸುತ್ತವೆ ಎಂದಾಯಿತು. ಭಗವದ್ಗೀತೆಯ 18ನೆಯ ಅಧ್ಯಾಯದ 1-44ನೆಯ ಶ್ಲೋಕಗಳು ಒಬ್ಬ ವ್ಯಕ್ತಿಯ ‘ಸ್ವಭಾವ’ ಮತ್ತು ‘ಸ್ವಧರ್ಮ’ಗಳು ಅವನ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ ಎನ್ನುತ್ತವೆ.
ಭಗವದ್ಗೀತೆಯು ಬಹುಶಃ ಕ್ರಿ.ಪೂ.500-ಕ್ರಿ.ಪೂ.200ರ ನಡುವೆ ರಚನೆಯಾಗಿರಬೇಕು ಎಂಬ ವಾದವಿದೆ. ಅಂದರೆ ‘ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುವುದರಲ್ಲಿ ಆನುವಂಶಿಕತೆ ಹಾಗೂ ಶಿಕ್ಷಣಗಳೆರಡರ ಪಾತ್ರವಿದೆ’ ಎಂದು ಸ್ಪಷ್ಟವಾಗಿ ಸಾರಿದ ಮೊದಲ ದಾಖಲೆಯು ಭಗವದ್ಗೀತೆಯದು ಎನ್ನಬಹುದು. ಆಯುರ್ವೇದವು ‘ತ್ರಿದೋಷ’ಗಳು ಅಂದರೆ ವಾತ-ಪಿತ್ತ-ಕಫವು ಆನುವಂಶಿಕವಾಗಿ ಬರುವಂಥದ್ದು; ಆದರೆ ವ್ಯಕ್ತಿಯ ಆಹಾರ, ನಡೆಸುವ ಜೀವನ ಶೈಲಿ ಹಾಗೂ ಅವನು ಬೆಳೆಯುವ ಪರಿಸರವು ಅವನ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ ಎನ್ನುತ್ತದೆ.
ಪತಂಜಲಿಯ ಯೋಗಸೂತ್ರವು (ಅಧ್ಯಾಯ 2: ಸಾಧನಾ ಪದ; ಸೂತ್ರ 2.3-2.4) ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಹಾಗೂ ಅವನ ಆಧ್ಯಾತ್ಮಿಕ ಬೆಳವಣಿಗೆಯನ್ನು ಅವನ ‘ವಾಸನೆ ಗಳು’ (ಹುಟ್ಟಿನಿಂದ ಬಂದ ಗುಣಗಳು) ಹಾಗೂ ಅವನ ‘ಸಂಸ್ಕಾರಗಳು’ (ಜೀವನದಲ್ಲಿ ಗಳಿಸಿದ ಅರಿವು) ನಿರ್ಧರಿಸುತ್ತವೆ ಎನ್ನುತ್ತದೆ. ಆದಿ ಶಂಕರಾಚಾರ್ಯರ ‘ವಿವೇಕ ಚೂಡಾ ಮಣಿ’ಯು ಒಬ್ಬನ ‘ಸ್ವಭಾವ’ವನ್ನು (ಅಂದರೆ ಹುಟ್ಟಿನಿಂದ ಬಂದಿರುವ ಗುಣಗಳನ್ನು) ಜ್ಞಾನ, ಶಿಸ್ತು ಮತ್ತು ಗುರುವಿನ ಮಾರ್ಗದರ್ಶನದಲ್ಲಿ ಪಡೆಯುವ ಶಿಕ್ಷಣದಿಂದ ಪರಿಷ್ಕರಿಸ ಬಹುದು ಎನ್ನುತ್ತದೆ.
ಮುಖ್ಯಾಂಶಗಳು: ನಮ್ಮ ವ್ಯಕ್ತಿತ್ವವನ್ನು ಆನುವಂಶಿಕತೆಯು ನಿರ್ಧರಿಸುತ್ತದೆಯೋ ಅಥವಾ ನಾವು ಬೆಳೆಯುವ ಪರಿಸರ ಹಾಗೂ ಪಡೆದ ಶಿಕ್ಷಣವು ನಿರ್ಧರಿಸುತ್ತದೆಯೋ ಎಂಬ ಎರಡು ಪಂಥಗಳ ಮುಖ್ಯಾಂಶಗಳನ್ನು ಮೊದಲು ನೋಡೋಣ.
ತಂದೆ ಮತ್ತು ತಾಯಿಗಳಿಂದ ಮಗುವಿನ ದೇಹವನ್ನು ಪ್ರವೇಶಿಸುವ 23 ಜೊತೆ ಕ್ರೋಮೋ ಸೋಮುಗಳು ತಂದೆ ಮತ್ತು ತಾಯಿಯ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಲಕ್ಷಣ ಗಳನ್ನು ಪಡೆಯುವುದರ ಜತೆಯಲ್ಲಿ ತಾತ ಮುತ್ತಾತಂದಿರ ಗುಣ ಲಕ್ಷಣಗಳನ್ನೂ ಪಡೆಯು ವುದನ್ನು ನಾವು ನೋಡಿದ್ದೇವೆ. ಮಗುವಿನ ಮುಖ ಮತ್ತು ದೇಹ ಲಕ್ಷಣ, ಚರ್ಮ, ಕೂದಲು ಮತ್ತು ಕಣ್ಣಿನ ಬಣ್ಣಗಳೆಲ್ಲ ಆನುವಂಶಿಕವಾಗಿಯೇ ನಿರ್ಧಾರವಾಗುತ್ತವೆ.
ಹಾಗೆಯೇ ಸ್ಕಿಜ಼ೋಫ್ರೀನಿಯ, ಆಟಿಸಂ, ಖಿನ್ನತೆ, ಕೆಲವು ಕ್ಯಾನ್ಸರ್ ಮುಂತಾದ ರೋಗಗಳು ಆನುವಂಶಿಕವಾಗಿಯೇ ಬರುವುದನ್ನು ನಾವು ನೋಡಿದ್ದೇವೆ. ಒಂದು ಮಗುವು ಬೆಳೆಯುವ ಮನೆಯ ಪರಿಸರವು ಅದರ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಮುಖ್ಯವಾಗಿ ಮನೆಯಲ್ಲಾಡುವ ಭಾಷೆಗಳನ್ನು ಮಗುವು ಕಲಿಯುತ್ತದೆ. ಮನೆಯಲ್ಲಿ ದೊರೆಯುವ ಶಿಕ್ಷಣ, ವರ್ತನೆ, ಸಂಸ್ಕಾರವನ್ನೇ ಮಗುವು ಕಲಿಯುತ್ತದೆ. ಇದರಲ್ಲಿ ಆನು ವಂಶಿಕತೆಯ ಪಾಲಿಲ್ಲ. ಬಾಲ್ಯದಲ್ಲಿ ಮಗುವು ಅನುಭವಿಸಿದ ಆಘಾತಕರ ಘಟನೆಗಳು (ಉದಾ: ಲೈಂಗಿಕ ದುರ್ಬಳಕೆ- ಪೋಸ್ಟ್ ಟ್ರಮಾಟಿಕ್ ಸ್ಟ್ರೆಸ್ ಡಿಸಾರ್ಡರ್) ಮಗುವಿನ ಭವಿಷ್ಯ ಬದುಕಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಒಂದು ಮಗುವು ದುರ್ವ್ಯಸನಕ್ಕೆ ತುತ್ತಾಗುವ ಸಾಧ್ಯತೆಯು (ಅದು ವಂಶವಾಹಿಗಳಲ್ಲಿ ಇದ್ದರೂ) ಅದು ಬೆಳೆಯುವ ಪರಿಸರವನ್ನು ಆಧರಿಸಿರುತ್ತದೆ ಎನ್ನಬಹುದು.
ಅಧ್ಯಯನಗಳು: ಆನುವಂಶಿಕತೆ ಮತ್ತು ಶಿಕ್ಷಣದ ಪ್ರಾಮುಖ್ಯಕ್ಕೆ ಸಂಬಂಧಿಸಿದ ಹಾಗೆ ಕೆಲವು ಗಮನೀಯ ಅಧ್ಯಯನಗಳು ನಡೆದಿವೆ. ತದ್ರೂಪಿ ಅವಳಿಗಳು (ಐಡೆಂಟಿಕಲ್ ಟ್ವಿನ್ಸ್) 100ಕ್ಕೆ 100ರಷ್ಟು ವಂಶವಾಹಿಗಳನ್ನು ಹಂಚಿಕೊಂಡಿರುತ್ತವೆ. ಸೋದರ ಅವಳಿಗಳು (-ಟರ್ನಲ್ ಟ್ವಿನ್ಸ್) ಶೇ.50ರಷ್ಟು ವಂಶವಾಹಿಗಳನ್ನು ಮಾತ್ರ ಹಂಚಿಕೊಂಡಿರುತ್ತವೆ.
ಕೆಲವು ತದ್ರೂಪಿ ಅವಳಿಗಳನ್ನು ಒಟ್ಟಿಗೆ ಬೆಳೆಯಲು ಬಿಟ್ಟರು. ಕೆಲವು ತದ್ರೂಪಿಗಳನ್ನು ಭೌಗೋಳಿಕವಾಗಿ ವಿಭಿನ್ನ ಪ್ರದೇಶಗಳಲ್ಲಿ, ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯ ಪೋಷಕರ ಉಸ್ತುವಾರಿಯಲ್ಲಿ ಬೆಳೆಸಿದರು. ಹಾಗೆಯೇ ಸೋದರ ಅವಳಿಗಳ ವಿಷಯದಲ್ಲೂ ಅಧ್ಯಯನವನ್ನು ಕೈಗೊಂಡರು.
‘ಮಿನೆಸೋಟ ಟ್ವಿನ್ ಸ್ಟಡಿ’ ಎಂಬ ಅಧ್ಯಯನವು 1980ರಲ್ಲಿ ಹಾಗೂ 1990ರಲ್ಲಿ ನಡೆದವು. ಒಟ್ಟಿಗೆ ಬೆಳೆದ ತದ್ರೂಪಿಗಳು ಹಾಗೂ ದೂರ ದೂರ ಬೆಳೆದ ತದ್ರೂಪಿ ಅವಳಿಗಳ ಬುದ್ಧಿ ವಂತಿಕೆ ಹಾಗೂ ವ್ಯಕ್ತಿತ್ವವು ಬಹುಪಾಲು ಏಕರೂಪವಾಗಿರುವುದನ್ನು ಗಮನಿಸಿದರು. ಈ ಹಿನ್ನೆಲೆಯಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುವುದರಲ್ಲಿ ಆನುವಂಶಿಕತೆಯ ಪಾಲಿದೆ ಎಂಬ ತೀರ್ಮಾನಕ್ಕೆ ಬಂದರು.
ದತ್ತು ಮಕ್ಕಳ ಅಧ್ಯಯನವನ್ನು ನಡೆಸಿದರು. ದತ್ತು ಮಕ್ಕಳು ಹೆತ್ತವರ ಬುದ್ಧಿವಂತಿಕೆ ಮತ್ತು ಮನೋಧರ್ಮ ಲಕ್ಷಣಗಳನ್ನು ಹೊತ್ತಿದ್ದರೆ, ದತ್ತು ತಂದೆ-ತಾಯಿಗಳ ಪ್ರಭಾವದಲ್ಲಿ ತಮ್ಮ ಸಾಮಾಜಿಕ ವರ್ತನೆ ಮತ್ತು ಜೀವನ ಮೌಲ್ಯಗಳನ್ನು ರೂಢಿಸಿಕೊಂಡಿದ್ದರು. ಹಾಗಾಗಿ ಮಕ್ಕಳು ಬೆಳೆಯುವ ಪರಿಸರವು ಹಾಗೂ ಪಡೆಯುವ ಶಿಕ್ಷಣವು ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತವೆ ಎನ್ನುವುದಕ್ಕೆ ಪುರಾವೆಯು ದೊರೆಯಿತು.
ಮಾನವನ ತಳಿವಿನ್ಯಾಸದ ಅನಾವರಣವು (ಹ್ಯೂಮನ್ ಜೀನೋಮ್ ಪ್ರಾಜೆಕ್ಟ್) ಮನು ಷ್ಯನ ಗುಣಲಕ್ಷಣಗಳಿಗೆ ವಂಶವಾಹಿಗಳೇ ಕಾರಣ ಎನ್ನುವುದನ್ನು ನಿರೂಪಿಸಿದೆ. ಜತೆಗೆ ಕೆಲವು ಸಂಕೀರ್ಣ ಗುಣಲಕ್ಷಣಗಳನ್ನು ಒಂದಕ್ಕಿಂತ ಹೆಚ್ಚಿನ ವಂಶವಾಹಿಗಳು ಹಾಗೂ ಮಗುವು ಬೆಳೆಯುವ ಪರಿಸರವು ಒಟ್ಟಿಗೆ ನಿರ್ಧರಿಸುತ್ತವೆ ಎನ್ನುವ ವಿಚಾರವನ್ನೂ ಹೊರ ಹಾಕಿದೆ.
ನಮ್ಮ ದೈನಂದಿನ ಆಹಾರ, ನಮ್ಮ ಒತ್ತಡಗಳು, ನಮ್ಮ ದೇಹವನ್ನು ಪ್ರವೇಶಿಸುವ ವಿಷ ವಸ್ತುಗಳು (ಟಾಕ್ಸಿನ್ಸ್) ವಂಶವಾಹಿಗಳ ಸಹಜ ಅಭಿವ್ಯಕ್ತಿಯನ್ನೇ (ಎಕ್ಸ್‌ಪ್ರೆಶನ್) ಬದಲಿಸು ತ್ತದೆ ಎನ್ನುವ ವಿಚಾರವು ತಿಳಿದು ಬಂದಿದ್ದು ‘ಊರ್ಧ್ವ ತಳಿವಿಜ್ಞಾನ’ ಅಥವಾ ‘ಎಪಿಜೆನೆ ಟಿಕ್’ ಎಂಬ ಹೊಸ ವಿಜ್ಞಾನ ಶಾಖೆಯು ಹುಟ್ಟಲು ಕಾರಣವಾಗಿದೆ.
ಡಿಎನ್‌ಎ ಮೆಥಿಲೇಶನ್ ಮತ್ತು ಹಿಸ್ಟೋನ್ ಮಾಡಿಫಿಕೇಶನ್ ವಿಧಾನಗಳು ವಂಶವಾಹಿಗಳ ಅಭಿವ್ಯಕ್ತಿ ಸಾಮರ್ಥ್ಯವನ್ನೇ (ಎಕ್ಸ್‌ಪ್ರೆಶನ್) ಬದಲಿಸುವುದನ್ನು ತೋರಿಸಿಕೊಟ್ಟವು. ಜರ್ಮನಿ ಹಾಗೂ ಜಪಾನಿನ ಜನಸಾಮಾನ್ಯರು ದ್ವಿತೀಯ ಮಹಾಯುದ್ಧಗಳಲ್ಲಿ ಅನು ಭವಿಸಿದ ಆಘಾತಗಳು (ಟ್ರಮಾಟಿಕ್ ಎಕ್ಸ್‌ಪೀರಿಯನ್ಸ್) ಅವರ ಸಂತಾನದ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವುದನ್ನು ಗಮನಿಸಲಾಗಿದೆ.
‘ಡಚ್ ಹಂಗರ್ ವಿಂಟರ್ ಸ್ಟಡಿ’ಯು ಹೆತ್ತವರು ನ್ಯೂನಪೋಷಣೆಯಿಂದ (ಮಾಲ್ ನ್ಯೂಟಿ ಷನ್) ನರಳಿದ್ದನ್ನು, ಆ ಹಿನ್ನೆಲೆಯಲ್ಲಿ ಅವರ ಮಕ್ಕಳು ಬೊಜ್ಜನ್ನು ಬೆಳೆಸಿಕೊಂಡು, ಮಧು ಮೇಹ ಪೀಡಿತರಾದುದನ್ನು ಎತ್ತಿ ತೋರಿತು. ಹಸಿವು ಹೆತ್ತವರ ವಂಶವಾಹಿಗಳ ಮೇಲೆ ಪ್ರಭಾವವನ್ನು ಬೀರಿದ ಕಾರಣ, ಅವರ ಮಕ್ಕಳ ವಂಶವಾಹಿಗಳು ಹೆಚ್ಚು ಹೆಚ್ಚು ತಿನ್ನುವ ಗುಣವನ್ನು ಬೆಳೆಸಿಕೊಂಡವು.
ಒಬ್ಬ ಮನುಷ್ಯನ ವ್ಯಕ್ತಿತ್ವವನ್ನು ಆನುವಂಶಿಕತೆ ಹಾಗೂ ಪರಿಸರಗಳೆರಡೂ ಸೇರಿ ನಿರ್ಣ ಯಿಸುತ್ತವೆ ಎನ್ನುವುದು ಇಂದಿನ ವಿಜ್ಞಾನದ ನಿಲುವಾಗಿದೆ. ಪ್ರಕೃತಿಯಲ್ಲಿ ವಂಶವಾಹಿ ಗಳು ತಮ್ಮ ಗುಣಲಕ್ಷಣಗಳನ್ನು ಸುಪ್ತವಾಗಿ ಇಟ್ಟಿರುತ್ತವೆ. ಪರಿಸರವು ಆ ಸುಪ್ತವಾಗಿರುವ ಗುಣಲಕ್ಷಣಗಳನ್ನು ಜಾಗೃತಗೊಳಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಬಾಲ್ಯದಲ್ಲಿ ಮಕ್ಕಳು ಒಮ್ಮೆಲೇ ಒಂದಲ್ಲ ನಾಲ್ಕೈದು ಭಾಷೆಗಳನ್ನು ಒಟ್ಟಿಗೆ ಸುಲಭವಾಗಿ ಕಲಿಯ ಬಲ್ಲವು.
ವಯಸ್ಸಾಗುತ್ತಾ ಹೋದ ಹಾಗೆ ಹೊಸ ಭಾಷೆಯನ್ನು ಕಲಿಯುವ ವೇಗವು ಕುಂಠಿತ ವಾಗುತ್ತಾ ಹೋಗುತ್ತದೆ. ಶಿಕ್ಷಣ, ಜೀವನ ಮೌಲ್ಯ, ಸಂಸ್ಕಾರ, ಸಂಸ್ಕೃತಿಗಳನ್ನು ನಮ್ಮ ಸಮಾಜ ಹಾಗೂ ನಮ್ಮ ಮನೆಯ, ಶಾಲೆಯ, ಸಮಾಜದ ಪರಿಸರ ನಿರ್ಧರಿಸುತ್ತವೆ. ಆಧು ನಿಕ ವಿಜ್ಞಾನವು ಈ ಸತ್ಯವನ್ನು ತಿಳಿಯುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಭಗವದ್ಗೀತೆಯು ಗುಣ (ಆನುವಂಶಿಕತೆ) ಹಾಗೂ ಕರ್ಮ (ಶಿಕ್ಷಣ) ಒಬ್ಬ ವ್ಯಕ್ತಿಯ ವ್ಯಕ್ತಿತ್ವ ವನ್ನು ನಿರ್ಧರಿಸುತ್ತವೆ ಎಂದು ಸ್ಪಷ್ಟವಾಗಿ ಹೇಳಿದೆ.
ತಳಿವಿಜ್ಞಾನ ಹಾಗೂ ನರವಿಜ್ಞಾನಗಳೆರಡೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸು ವಲ್ಲಿ ಆನುವಂಶಿಕತೆ ಹಾಗೂ ಪರಿಸರಗಳು ಹೇಗೆಲ್ಲ ಪರಸ್ಪರ ಪ್ರಭಾವಿಸುತ್ತವೆ ಎನ್ನುವು ದನ್ನು ತಿಳಿಯುವತ್ತ ಹಲವು ಸಂಶೋಧನೆಗಳನ್ನು ನಡೆಸುತ್ತಿದೆ.