ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಕವಿಯೂ ಕಲಿಯೂ ಸಮರಕಾವ್ಯವೂ

ಲಂಕೆಗೆ ಹೋಗಲು ದಾರಿ ಬಿಡು ಎಂದು ಶ್ರೀರಾಮ ಜಲಧಿಯ ಮುಂದೆ ವಿನಂತಿಸಿದ್ದಾನೆ. ಮೂರು ದಿನವಾದರೂ ಸಮುದ್ರರಾಜ ಉತ್ತರಿಸಿಲ್ಲ. ಕೋಪದಿಂದ ‘ಭೀತಿಯಿಲ್ಲದೆ ಪ್ರೀತಿಯೂ ಇಲ್ಲ’ ಎಂದು ಬಿಲ್ಲಿನ ಎದೆಯೇರಿಸುತ್ತಾನೆ. ಪರಿಣಾಮ- ಸಮುದ್ರರಾಜ ತಗ್ಗಿಬಗ್ಗಿ ರಾಮನ ಮುಂದೆ ಬರುತ್ತಾನೆ. ಏರ್ ಮಾರ್ಷಲ್‌ಗೆ ಈ ಕಾವ್ಯದ ಸಾಲುಗಳು ಹೃದಯಸ್ಥವಾಗಿದ್ದಿರಬೇಕು; ಯಾಕೆಂದರೆ ಅದನ್ನು ಅವರು ತಡಬಡಾಯಿಸದೇ, ಯಾವುದೇ ಚೀಟಿ ನೋಡದೇ ಮುಗುಳ್ನಗುತ್ತ ಹೇಳಿದರು.

ಕವಿಯೂ ಕಲಿಯೂ ಸಮರಕಾವ್ಯವೂ

ಹರೀಶ್‌ ಕೇರ ಹರೀಶ್‌ ಕೇರ May 15, 2025 7:07 AM

ಕಾಡುದಾರಿ

ಆಪರೇಶನ್ ಸಿಂದೂರ್ ಮುಗಿದ ನಂತರ ಭಾರತೀಯ ಸೇನೆಯ ಮೂರೂ ಪಡೆಗಳ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರು (ಡಿಜಿಎಂಒ) ಸುದ್ದಿಗೋಷ್ಠಿ ನಡೆಸಿದರು. ಅದರಲ್ಲಿ ಏರ್ ಮಾರ್ಷಲ್ ಎ.ಕೆ.ಭಾರ್ತಿ ಅವರು ಆಡಿದ ಮಾತುಗಳನ್ನು ಈಗ ದೇಶದಲ್ಲಿ ಮೆಲುಕು ಹಾಕಲಾಗು ತ್ತಿದೆ. ಪತ್ರಿಕಾಗೋಷ್ಠಿಯ ಮೊದಲು ಸೇನೆ ಪ್ಲೇ ಮಾಡಿದ ವಿಡಿಯೋ ಕ್ಲಿಪಿಂಗ್‌ನಲ್ಲಿ ರಾಷ್ಟ್ರಕವಿ ರಾಮಧಾರಿ ಸಿಂಗ್ ದಿನಕರ್ ಅವರ ಕಾವ್ಯದ ಸಾಲುಗಳು ಹಿನ್ನೆಲೆಯಲ್ಲಿದ್ದವು. ಕೃಷ್ಣಸಂಧಾನ, ದುರ್ಯೋ ಧನನ ಉದ್ಧಟತನ, ಕೃಷ್ಣನನ್ನು ಕಟ್ಟಿಹಾಕಲು ಮುಂದಾಗುವ ಸನ್ನಿವೇಶದ ಪದ್ಯಗಳು ಅವು. ಮನುಷ್ಯನನ್ನು ಪತನ ಆವರಿಸಿಕೊಂಡಾಗ ವಿವೇಕ ನಾಶವಾಗುತ್ತದೆ.

ಹರಿಯನ್ನು ಕಟ್ಟಿಹಾಕಲು ಮುಂದಾದ. ಅಸಾಧ್ಯವಾದದ್ದನ್ನು ಸಾಧಿಸಲು ಹೊರಟ, ವಿವೇಚನೆ ಇಲ್ಲದೆ ಹಾಳಾದ ಎಂಬ ಅರ್ಥ ಬರುವ ಸಾಲುಗಳು. ಇದನ್ನು ಬಳಸಿಕೊಂಡದ್ದು ಏಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಭಾರ್ತಿ ಇನ್ನೊಂದು ಕಾವ್ಯದ ಸಾಲನ್ನೇ ಉತ್ತರವಾಗಿ ನೀಡಿದರು- ತುಳಸೀ ದಾಸರ ರಾಮಚರಿತಮಾ ನಸದ ’ಬಿನಯ್ ನ ಮಾನತ ಜಲಧಿ ಜಡ/ ಗಯ ತೀನಿ ದಿನ ಬೀತೀ/ ಬೋಲೇ ರಾಮ ಸಕೋಪ ತಬ/ ಭಯ ಬಿನು ಹೋಯೀ ನ ಪ್ರೀತಿ’. ಅದರರ್ಥ ಇಷ್ಟು- ಲಂಕೆಗೆ ಹೋಗಲು ದಾರಿ ಬಿಡು ಎಂದು ಶ್ರೀರಾಮ ಜಲಧಿಯ ಮುಂದೆ ವಿನಂತಿಸಿದ್ದಾನೆ. ಮೂರು ದಿನವಾದರೂ ಸಮುದ್ರರಾಜ ಉತ್ತರಿಸಿಲ್ಲ. ಕೋಪದಿಂದ ‘ಭೀತಿಯಿಲ್ಲದೆ ಪ್ರೀತಿಯೂ ಇಲ್ಲ’ ಎಂದು ಬಿಲ್ಲಿನ ಎದೆಯೇರಿಸುತ್ತಾನೆ. ಪರಿಣಾಮ- ಸಮುದ್ರರಾಜ ತಗ್ಗಿಬಗ್ಗಿ ರಾಮನ ಮುಂದೆ ಬರುತ್ತಾನೆ. ಏರ್ ಮಾರ್ಷಲ್‌ಗೆ ಈ ಕಾವ್ಯದ ಸಾಲುಗಳು ಹೃದಯಸ್ಥವಾಗಿದ್ದಿರಬೇಕು; ಯಾಕೆಂದರೆ ಅದನ್ನು ಅವರು ತಡಬಡಾಯಿಸದೇ, ಯಾವುದೇ ಚೀಟಿ ನೋಡದೇ ಮುಗುಳ್ನಗುತ್ತ ಹೇಳಿದರು.

ಬುದ್ಧಿ ವಂತರಿಗೆ ಇಷ್ಟು ಹೇಳಿದರೆ ಸಾಕು ಅನಿಸುತ್ತೆ ಎಂದರು. ಸೈನ್ಯಾಧಿಕಾರಿಗಳ ಸುದ್ದಿಗೋಷ್ಠಿ ಯಲ್ಲಿ ಕಾವ್ಯವನ್ನು ನಿರೀಕ್ಷಿಸಿರದೇ ಇದ್ದ ಪತ್ರಕರ್ತರು, ಇದನ್ನು ಲೈವ್ ಆಗಿ ನೋಡುತ್ತಿದ್ದ ಜನರಿಗೂ ಇದೊಂದು ಅಚ್ಚರಿ. ಸದಾ ಮಿಗ್, ರಫೆಲ್, ಮಿಸೈಲ್, ಡ್ರೋನ್, ರೆಡಾರ್ ಎಂದು ಕನವರಿಸುತ್ತಿರುವ, ವೈರಿ ನೆಲದ ಗುರಿಗಳ ಮೇಲೆ ಕಣ್ಣಿಟ್ಟು ಆಪರೇಶನ್‌ನ ಚೆಸ್ ಕಾಯಿಗಳನ್ನು ಮುನ್ನಡೆಸಬೇಕಿರುವ ಸೇನಾಧಿಕಾರಿಗಳ ನಾಲಿಗೆಯಲ್ಲೂ ಕಾವ್ಯವೇ ಎಂದುಕೊಳ್ಳುವಂತೆ ಆದದ್ದಂತೂ ನಿಜ.

ಇದನ್ನೂ ಓದಿ: Harish Kera Column: ಭವಿಷ್ಯದ ಸಮರ ರಂಗಭೂಮಿಗಿದು ಮುನ್ನೋಟ

ಏನಿದ್ದರೇನು ಅವರೂ ನಮ್ಮಂತೆಯೇ ಮನಸ್ಸು ಹೃದಯಗಳನ್ನು ಹೊಂದಿರುವ ಮನುಷ್ಯರು. ಹೀಗಾಗಿ ಅವರು ಕೂಡ ಕಾವ್ಯ-ಸಾಹಿತ್ಯ ಓದಿರಲು ಸಾಧ್ಯ ಎಂಬುದಂತೂ ನಿಜ. ಆದರೆ ಇದೀಗಷ್ಟೆ ಶತ್ರು ದೇಶದ ಎದೆ ನಡುಗಿಸಿ ಬಂದು ಕುಳಿತು ಒಂದು ಕಾವ್ಯದ ಸಾಲನ್ನು ಉದ್ಗರಿಸಲು ಯೋಧ-ಕವಿ ಎರಡೂ ಸೇರಿದ ವ್ಯಕ್ತಿತ್ವವೇ ಬೇಕಾದೀತು.

ಭಾರ್ತಿ ಅವರು ಕಾವ್ಯ ಬರೆದಿರಲಾರರು; ಆದರೆ ರಾಮಚರಿತಮಾನಸದ ಸಾಲುಗಳನ್ನು ಉದ್ಗರಿಸಿದ ಕ್ಷಣವಂತೂ ಒಂದು ವಿಸಂಗತಿಯೇ ಆಗಿತ್ತು- ಅಂದರೆ ಸಾಮಾನ್ಯವಾಗಿ ನಾವು ನೋಡದ ಸಂಗತಿ ಎಂಬರ್ಥದಲ್ಲಿ. ವಿಸಂಗತಿ ಯಾಕೆಂದರೆ, ಕಾವ್ಯ ಹಾಗೂ ಸಮರ ಎರಡು ವಿರುದ್ಧ ಸಂಗತಿಗಳು ಎಂದು ನಾವು ಕಾಣುತ್ತ ಬಂದಿದ್ದೇವೆ.

ಕಾವ್ಯವಿದ್ದಲ್ಲಿ ಯುದ್ಧವಿರಲು ಸಾಧ್ಯವಿಲ್ಲ, ಯುದ್ಧ ನಡೆಯುತ್ತಿರುವಲ್ಲಿ ಕಾವ್ಯಕ್ಕೆ ಜಾಗವಿಲ್ಲ; ಕದನ-ಕವನ ಜೊತೆಯಾಗಿ ಸಾಗುವಂಥವುಗಳಲ್ಲ ಎಂದೇ ನಮಗೆ ಪಾಠ ಮಾಡಲಾಗಿದೆ. ಆದರೆ ಅದು ಸುಳ್ಳಾದ ಪ್ರಮೇಯಗಳನ್ನೂ ನಾವು ಮುಂದಿಡಬಹುದು. ಹಾಗೆ ನೋಡಿದರೆ ಮಹಾಭಾರತ ಕಾವ್ಯವಿಡೀ ರೂಪುಗೊಂಡಿರುವುದೇ ಯುದ್ಧ ಮತ್ತು ಅದರ ಸುತ್ತಮುತ್ತಲಿನ ಘಟನೆಗಳಿಂದ. ಕುಮಾರವ್ಯಾಸನ ಸಂಜಯನಂತೂ ಕುರುಕ್ಷೇತ್ರದಲ್ಲಿ ಓಡಾಡಿ ಸುದ್ದಿ ಸಂಗ್ರಹಿಸಿ ಮರಳಿ ಬಂದು ಧೃತರಾಷ್ಟ್ರನಿಗೆ ಅರುಹುವಾಗ ಯಥಾರ್ಥದಲ್ಲಿ ಕವಿಯೇ ಆಗಿ ಬಿಡುತ್ತಾನೆ.

7 R

‘ಹೇಳಿ ಫಲವೇ ನಿನ್ನು ಮುಂದಣ ಕಾಳೆಗದ ಕರ್ಣಾಮೃತದ ಮಳೆಗಾಲ ಮಾದು ವಿಲೋಚನದ ಮಳೆಗಾಲವಾಯ್ತೆಂದ’, ‘ದ್ಯುಮಣಿ ಕರ್ಣದ್ಯುಮಣಿ ಸಹಿತಸ್ತಮಿಸೆ ಕಮಲಿನಿ ಕೌರವನ ಮುಖ ಕಮಲ ಬಾಡಿತು’ ಎಂದೆಲ್ಲ ಕಾವ್ಯಮಯ ವರ್ಣನೆಗಳಲ್ಲಿ ಯುದ್ಧಸುದ್ದಿಯನ್ನು ತಿಳಿಸುತ್ತಾನೆ. ಇದು ಕುಮಾರವ್ಯಾಸನ ಕಾವ್ಯಶಕ್ತಿ ಎಂಬುದು ನಿಜ; ಆದರೆ ಯುದ್ಧರಂಗದಲ್ಲಿ ತಿರುಗಾಡಿ ಬಂದವನ ನಾಲಿಗೆಯಲ್ಲಿ ಕಾವ್ಯ ಹೊರಡಿಸುವುದು ಅಸಂಗತವೆಂದೇನೂ ಕುಮಾರವ್ಯಾಸ ತಿಳಿದಂತಿಲ್ಲ.

ಹಾಗೆ ನೋಡಿದರೆ ನಮ್ಮ ಆದಿಕವಿಯೇ ಕಲಿಯೂ ಹೌದಂತೆ. ಚಾಳುಕ್ಯ ದೊರೆ ಅರಿಕೇಸರಿಯ ಆಸ್ಥಾನದಲ್ಲಿದ್ದ ನಮ್ಮ ಪಂಪನನ್ನು ‘ಏಂ ಕಲಿಯೋ ಸತ್ಕವಿಯೋ ಕವಿತಾಗುಣಾರ್ಣಭವಂ’ ಎಂದು ಕೊಂಡಾಡಿದವರಿದ್ದಾರೆ. ಪಂಪ ಹೋರಾಡಿದ ಯುದ್ಧಗಳ ವಿವರವೇನೂ ನಮ್ಮಲ್ಲಿಲ್ಲ ವಾದರೂ ಅವನನನ್ನು ಯೋಧ- ಕವಿ ಎಂದೇ ಒಪ್ಪುವುದು ರೂಢಿ.

ಮೋಹನ ತರಂಗಿಣಿಯನ್ನೂ ಕೀರ್ತನೆಗಳನ್ನೂ ಬರೆದ ಕನಕದಾಸರು ಸ್ವತಃ ಯೋಧರಾಗಿದ್ದರು, ಹೋರಾಡಬಲ್ಲವರಾಗಿದ್ದರು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಚಾವುಂಡರಾಯ ಪುರಾಣ ಬರೆದ ಗಂಗರ ಚಾವುಂಡರಾಯನೂ ಸೇನಾನಾಯಕ, ಪರಾಕ್ರಮಶಾಲಿ. ನಮ್ಮಲ್ಲಿ ಕವಿಗಳಾಗಿಯೇ ನೆಲೆ ನಿಂತಿರುವುದರಿಂದ ಇವರಲ್ಲಿರುವ ಯೋಧಪಾತ್ರ ಗೌಣ. ಯೋಧರಾಗಿರುವುದರಿಂದ ಇವರ ಕಾವ್ಯಕ್ಕೆ ಬಂದ ನಿರ್ದಿಷ್ಟ ಗುಣಗಳು ಯಾವುದನ್ನೂ ನಾವು ಕಾಣೆವು.

ಕಾವ್ಯವನ್ನು ಮುಂಚೂಣಿಗೆ ತರಬೇಕಿದ್ದರೆ ತಮ್ಮಲ್ಲಿದ್ದ ಯೋಧನನ್ನು ಇವರು ಹತ್ತಿಕ್ಕಬೇಕಾಗಿರ ಬಹುದು; ಚರಿತ್ರೆಯನ್ನು ನೋಡಿದರೆ ಇದಕ್ಕೆ ಪೂರಕ ವಿವರ ಸಿಗಲು ಸಾಧ್ಯ. ಕವಿಗಳು ಯೋಧ ರಾಗಿರಬೇಕಿಲ್ಲ ಅಥವಾ ಯೋಧರು ಕವಿಗಳಾಗಿರಬೇಕಿಲ್ಲ ಎಂಬುದನ್ನು ಒಪ್ಪೋಣ. ಆದರೆ ತೂಸಿಡಿಡೆಸ್ ಎಂಬ ಗ್ರೀಕ್ ತತ್ವಜ್ಞಾನಿ ಹೇಳಿದ ಈ ಮಾತನ್ನು ಸ್ವಲ್ಪ ಗಮನಿಸಿ- ತನ್ನ ಯೋಧ ರನ್ನು ಕವಿಗಳಿಂದ ಬೇರ್ಪಡಿಸುವ ಸಮಾಜವು ತನ್ನ ಚಿಂತನೆಯನ್ನು ಹೇಡಿಗಳಿಂದ ಮತ್ತು ತನ್ನ ಹೋರಾಟವನ್ನು ಮೂರ್ಖರಿಂದ ಮಾಡಿಸುತ್ತದೆ.

ಕ್ರಿಸ್ತನಿಗಿಂತಲೂ 400 ವರ್ಷ ಮೊದಲೇ ಇದ್ದ ಇವನು ತತ್ವಜ್ಞಾನಿ ಹೇಗೋ ಹಾಗೆ ಸೈನ್ಯದ ಜನರಲ್ ಕೂಡ ಆಗಿದ್ದವನು. ಪಿಲೋಪೆ ನೇಸಿಯನ್ಸ್ ಹಾಗೂ ಅಥೀನಿಯನ್ಸ್ ನಡುವಿನ ಕಾಳಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಇವನು ಬರೆದಿಟ್ಟ ಹಲವು ಬರಹಗಳು ಇಂದೂ ಕೆಲವು ಯುನಿವರ್ಸಿಟಿಗಳಲ್ಲಿ ರಾಜ್ಯಶಾಸದ ಪಠ್ಯಗಳಾಗಿವೆ. ಯೋಧನಿಗಿಂತಲೂ ಹೆಚ್ಚಾಗಿ ಇವನ ಹೃದಯದಲ್ಲಿ ಒಬ್ಬ ಇತಿಹಾಸಜ್ಞ ಮತ್ತು ತತ್ವಜ್ಞಾನಿಯಿದ್ದ ಎನ್ನಬಹುದು.

ದೇಶವನ್ನು ನಡೆಸುವವರಲ್ಲಿ ಕವಿಹೃದಯ ಇರಬೇಕು, ಕಾವ್ಯ-ಸಾಹಿತ್ಯ ತರಬಲ್ಲ ಮಾರ್ದವ ಅವರಲ್ಲಿದ್ದರೆ ಒಳಿತು ಎಂದು ಇವನು ಒಪ್ಪುತ್ತಾನೆ. ಯುದ್ಧದ ಬಗ್ಗೆ ಬರೆದ ಕವಿಗಳಲ್ಲಿ ದೂರ ಕುಳಿತು ಬರೆದವರೇ ಬಹಳ, ಯುದ್ಧವೆಂದರೆ ಹಿಂಸೆ, ಮನುಕುಲದ ವಿಕಲತೆಗಳಿಗೆ ಮುನ್ನುಡಿ ಎಂದೆಲ್ಲ ಬರೆದ ಬಹಳಷ್ಟು ಮಂದಿ ನೇರವಾಗಿ ಯುದ್ಧದಲ್ಲಿ ಭಾಗವಹಿಸಿದವರಲ್ಲ ಎಂಬ ದೂರನ್ನೂ ನಾವು ಕೇಳಬಹುದು. ಆದರೆ ಇದೂ ನಿಜವಲ್ಲ. ಭಾರತದಲ್ಲಿದ್ದ ಜಾರ್ಜ್ ಆರ್ವೆಲ್ (ಆನಿಮಲ್ ಫಾರ್ಮ್ ಖ್ಯಾತಿ) ಸ್ಪ್ಯಾನಿಶ್ ಯುದ್ಧದಲ್ಲಿ ಭಾಗವಹಿಸಿದ್ದ.

ಇಂಥ ಬರಹಗಾರರಲ್ಲಿ ಎರಡು ಬಗೆಯಿದೆ. ಯುದ್ಧಗಳ ಬಗ್ಗೆ ಕವಿತೆ- ಕಾದಂಬರಿಗಳನ್ನು ಬರೆದವ ರಲ್ಲಿ ಬಹುತೇಕರು ಅದರಲ್ಲಿ ಭಾಗವಹಿಸಿದವರಲ್ಲ. ಆದರೆ ಯುದ್ಧರಂಗದಲ್ಲಿ ಭಾಗವಹಿಸಿದ ಅನೇಕರು ನಾನ್ ಫಿಕ್ಷನ್, ಆತ್ಮಕಥನಾತ್ಮಕ ಬರಹಗಳನ್ನು ಬರೆದಿಟ್ಟಿಜ್ಞಾರೆ.

‘ಯುದ್ಧಕವಿತೆ’ ಎಂದರೆ ‘ಯುದ್ಧವಿರೋಽ ಕವಿತೆ’ಯೇ ಆಗಿರಬೇಕೆಂದಿಲ್ಲ. ಇವು ಯುದ್ಧದ ಆವರಣ ದಲ್ಲಿ ಹುಟ್ಟಿಕೊಂಡ ಬದುಕಿನ ಬಹುಮುಖ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನಗಳು-ಗುರುತು, ಮುಗ್ಧತೆ, ಪಾಪಪ್ರಜ್ಞೆ, ಸಾವು, ದೇಶಭಕ್ತಿ, ಧೈರ್ಯ, ಮಮತೆ, ಮಾನವೀಯತೆಗಳನ್ನೆಲ್ಲ ಆಳದಿಂದ ಲೇ ಮತ್ತೊಮ್ಮೆ ಪರಿಶೀಲಿಸಿ ನೋಡುವ ಯತ್ನಗಳು.

ಅಮೆರಿಕದ ಸಾಹಿತಿ ಅರ್ನೆಸ್ಟ್ ಹೆಮಿಂಗ್ವೇ ಯುದ್ಧವನ್ನು ಸಾಕಷ್ಟು ಕಂಡುಂಡವನು ಮತ್ತು ಯುದ್ಧದ ಬಗ್ಗೆ ಬರೆದವನು. ಬಹುಶಃ 20ನೇ ಶತಮಾನದಲ್ಲಿ ಯುದ್ಧದ ಬಗ್ಗೆ ಇವನಷ್ಟು ಅಥೆಂಟಿಕ್ ಆಗಿ ಬರೆದ ಇನ್ನೊಬ್ಬ ಸಾಹಿತಿ ಇನ್ನೊಬ್ಬ ಸಿಗಲಾರನೇನೋ. ಅಥೆಂಟಿಕ್ ಯಾಕೆಂದರೆ ಇವನು ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿ ಗಾಯಗೊಂಡವನು.

ಆ ಯುದ್ಧದಲ್ಲಿ ಅಮೆರಿಕದ ಕಡೆಯಿಂದ ಇಟಲಿಯಲ್ಲಿ ಅಂಬ್ಯುಲೆನ್ಸ್ ಚಾಲಕನಾಗಿ ಹೋದ. 1918ರ ಜೂನ್‌ನಲ್ಲಿ ಆಸ್ಟ್ರಿಯ ಮಾರ್ಟರ್ ದಾಳಿಗೆ ತುತ್ತಾದ. ಗಾಯಗೊಂಡರೂ ಇನ್ನೊಬ್ಬ ಇಟಲಿ ಯೋಧನನ್ನು ಹೊತ್ತು ಆಸ್ಪತ್ರೆಗೆ ಸಾಗಿಸುವಾಗ ಮತ್ತೊಮ್ಮೆ ಮಶಿನ್ ಗನ್ ದಾಳಿಗೀಡಾದ. ಮುಂದೆ ಈ ಶೌರ್ಯಕ್ಕಾಗಿ ಇಟಲಿ ಸರಕಾರದಿಂದ ಸಿಲ್ವರ್ ಮೆಡಲ್ ಆಫ್ ವೇಲರ್ ಪಡೆದ. ಈ ಅನುಭವ ವನ್ನು ನೆನೆದುಕೊಳ್ಳುತ್ತ‌ ಹೆಮಿಂಗ್ವೇ ಬರೆಯುತ್ತಾನೆ-ಯವ್ವನದಲ್ಲಿ ನೀವು ಯುದ್ಧಕ್ಕೆ ಹೋದಾಗ, ನಾನು ಚಿರಂಜೀವಿ ಎಂದೇ ಭಾವಿಸಿರುತ್ತೀರಿ.

ನಾನು ಸಾಯೋಲ್ಲ, ಬೇರೆಯವರು ಮಾತ್ರ ಸಾಯುತ್ತಾರೆ ಅಂದುಕೊಳ್ಳುತ್ತೀರಿ. ಒಮ್ಮೆ ತೀವ್ರವಾಗಿ ಗಾಯಗೊಂಡಾಗ ಸತ್ಯ ನಿಮ್ಮೆದುರು ನಿಂತಿರುತ್ತದೆ-ಇದೆಲ್ಲ ನನಗೂ ಆಗಬಹುದು ಎಂಬುದು ಅರ್ಥವಾಗುತ್ತದೆ. ನನ್ನ 19ನೇ ಹುಟ್ಟುಹಬ್ಬಕ್ಕೆ ಎರಡು ವಾರ ಮೊದಲು ನಾನು ಗಾಯಗೊಂಡು ಮಲಗಿದ ನಂತರ ನನಗೆ ಅನಿಸಿದ್ದು- ನನಗಿಂತ ಮೊದಲಿನ ಯೋಧರಿಗೆ ಆದದ್ದೇ ನನಗೂ ಆಗುವುದು; ಈ ಹಿಂದಿನ ಯೋಧರು ಮಾಡಿದ್ದನ್ನೇ ನಾನೂ ಮಾಡಬೇಕಿರುವುದು; ಅವರು ಮಾಡಿದ್ದಾರೆ ಎಂದಾದರೆ ನಾನೂ ಅದನ್ನು ಮಾಡಬಹುದು ಮತ್ತು ನಾನೀಗ ಮಾಡಬಹುದಾದ ಬೆಸ್ಟ್ ಸಂಗತಿ ಎಂದರೆ ಅದರ ಬಗ್ಗೆ ಕೊರಗದೇ ಇರುವುದು.

ಮುಂದೆ ಹೆಮಿಂಗ್ವೇ ಚೇತರಿಸಿಕೊಂಡ ಬಳಿಕ ಯುದ್ಧದ ಬಗ್ಗೆ ಹಲವು ಕತೆಗಳನ್ನೂ ಕಾದಂಬರಿ ಗಳನ್ನೂ ಬರೆದ. ‘ಎ ಫೇರ್‌ವೆಲ್ ಟು ಆರ್ಮ್ಸ್’ ಅವುಗಳಲ್ಲಿ ಮುಖ್ಯವಾದುದು. ಇದರಲ್ಲಿ ಬರುವ ಗಾಯಗೊಂಡು ಮಲಗಿದ್ದು ದಾದಿಯನ್ನು ಪ್ರೀತಿಸುವ ಯೋಧ ಹೆಮಿಂಗ್ವೇಯ ಅನುಭವವೇ. ಈ ಕೃತಿಗಳಲ್ಲಿ ಅವನು ಮತ್ತೆ ಮತ್ತೆ ಎದುರಾಗುವ ಮುಖ್ಯ ಪ್ರಶ್ನೆ ಎಂದರೆ-ಯುದ್ಧದಿಂದ ಮನುಷ್ಯ ಚೇತನಕ್ಕೆ ಏನಾಗುತ್ತದೆ ಎನ್ನುವುದು. ಅವನು ಮೊದಲಿನ ಮನುಷ್ಯನಾಗಿಯೇ ಉಳಿಯುತ್ತಾನೋ? ಅವನು ಇತರರನ್ನು ನೋಡುವ, ಬದುಕನ್ನು ಅನುಭವಿಸುವ ರೀತಿ ಹೇಗಿರುತ್ತದೆ? ಇವೆಲ್ಲ ಅವನ ಆಸಕ್ತಿಗಳಾಗಿದ್ದವು. ಬದುಕು ಮತ್ತು ಯುದ್ಧವನ್ನು ಬೇರೆಯಾಗಿ ಪರಿಗಣಿಸದ ಹೆಮಿಂಗ್ವೇ ‘ಎ ಫೇರ್‌ ವೆಲ್ ಟು ಆರ್ಮ್ಸ್’ ಕಾದಂಬರಿಯಲ್ಲಿ ಬರೆದ ಒಂದು ಪ್ಯಾರಾವನ್ನು ಇಲ್ಲಿ ಉಲ್ಲೇಖಿಸದೇ ಇರಲಾಗು ತ್ತಿಲ್ಲ.

ಜಗತ್ತು ಪ್ರತಿಯೊಬ್ಬನನ್ನೂ ಮುರಿಯುತ್ತದೆ. ಹೀಗೆ ಛಿದ್ರಗೊಂಡ ಕಡೆಯಲ್ಲಿಯೇ ಕೆಲವರು ಜಗಮೊಂಡರಾಗುತ್ತಾರೆ. ಹೀಗೆ ಛಿದ್ರಗೊಳಿಸಲಾಗದವರನ್ನು ಜಗತ್ತು ಕೊಲ್ಲುತ್ತದೆ. ಸಜ್ಜನ, ವಿಧೇಯ, ದಿಟ್ಟ ಎಂಬ ಯಾವುದೇ ಭೇದವಿಲ್ಲದೆ ಎಲ್ಲರನ್ನು ಅದು ಹಣಿಯುತ್ತದೆ. ನೀವು ಇದರಲ್ಲಿ ಯಾವು ದೂ ಅಲ್ಲವಾದರೂ ಸಾಯಿಸುವುದು ಖಚಿತ, ಆದರೆ ಸ್ವಲ್ಪ ನಿಧಾನವಾದೀತು ಅಷ್ಟೆ.

ಇದನ್ನು ಓದುವಾಗ ಭಗವದ್ಗೀತೆಯ ವಿಶ್ವರೂಪ ವರ್ಣನೆಯ ಭಾಗದಲ್ಲಿ ಕೃಷ್ಣನನ್ನು ಅರ್ಜುನ ಸ್ತುತಿಸುವ ವಾಕ್ಯಗಳು-ಎಲ್ಲ ನದಿಗಳು ಸಾಗರವನ್ನು ಸೇರುವಂತೆ, ಪತಂಗಗಳು ದೀಪದತ್ತ ನುಗ್ಗು ವಂತೆ ಈ ಯೋಧರೆಲ್ಲ ನಿನ್ನ ಭಯಂಕರವಾದ ಬಾಯಿಯೊಳಗೆ ಪ್ರವೇಶಿಸುತ್ತಿದ್ದಾರೆ, ನೆನಪಾ ದವೆ? ಇರಲಿ. ಭಗವದ್ಗೀತೆಯೂ ಯುದ್ಧಭೂಮಿಯಲ್ಲಿ ಹುಟ್ಟಿದ, ಯೋಧ ಕೃಷ್ಣನಿಂದ ಹೊರ ಬಂದ ಆಶುಕಾವ್ಯ ಅಂತ ನೀವು ಹೇಳಿದರೆ- ಈ ಬರಹ ನಿಲ್ಲಿಸುವ ಹೊತ್ತು ಬಂತು ಎಂದರ್ಥ.