Harish Kera Column: ದೈವ ಭೂತಗಳೂ ಯಕ್ಷ ಗಂಧರ್ವರೂ
ಮಾರ್ಚ್, ಏಪ್ರಿಲ್, ಮೇ- ಈ ಮೂರು ತಿಂಗಳುಗಳು ಕರ್ನಾಟಕದ ಕರಾವಳಿಗೆ, ಅದರಲ್ಲೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ನೀವು ಹೋದರೆ ಬೇರೆಯದೇ ಲೋಕವೊಂದನ್ನು ಹೊಕ್ಕಂತಾಗು ತ್ತದೆ. ಇಲ್ಲಿ ಯಾವ ಊರಿಗೆ ಹೋದರೂ ಅಲೌಕಿಕದ ಕರೆಯೊಂದು ನಿಮ್ಮನ್ನು ಆವರಿಸದೇ ಬಿಡದು. ಹಗಲು ಮದುವೆ, ದೇವಸ್ಥಾನದ ಜಾತ್ರೆ ಮುಂತಾದ ಸಮಾರಂಭಗಳು, ಮಂಗಲ ವಾದ್ಯಗಳ ರವ


ಕಾಡುದಾರಿ
ತಂದೆ ಮಗುವನ್ನು ಬೆನ್ನಲ್ಲಿ ಹೊತ್ತು ನಡೆದಿದ್ದರು. ಮನೆಯಿಂದ ಕೆಲವು ಮೈಲು ದೂರದಲ್ಲಿರುವ ಮರಗಳ ನಡುವಿನ ತಾಣ. ಆಗಿನ್ನೂ ಇರುಳು ಇಳಿಯುತ್ತಿತ್ತು. ಇವರು ಹೋದಾಗ ಊರಿನ ಜನ ಸೇರುತ್ತಿದ್ದರು. ಇವರೂ ಸದ್ದಿಲ್ಲದೆ ಕುಳಿತರು. ಒಂದು ಮೂಲೆಯಲ್ಲಿ ಗುಡಿಯ ಎದುರು ದೀಪ ಬೆಳಗಿಸಿ ಇರಿಸಲಾಗಿತ್ತು. ಜೊತೆಗೆ ಅರಳು, ಎಳನೀರು, ಬತ್ತ, ತಂಗಿನಕಾಯಿ, ಅಡಿಕೆ ಹೂವಿನ ಸಿಂಗಾರ ಇತ್ಯಾದಿ. ಒಂದು ಮೂಲೆಯಲ್ಲಿ ವಯಸ್ಸಾದವರೊಬ್ಬರು ಕುಳಿತು ಮುಖಕ್ಕೆ ಬಣ್ಣ ಬಳಿದುಕೊಳ್ಳುತ್ತಿದ್ದರು. ಒಂದು ಹಂತದ ಬಣ್ಣ ಮುಗಿಸಿ ಗೆಜ್ಜೆಯಂತೆ ಸದ್ದು ಮಾಡುವ ಕಡಗ ಗಳನ್ನು ಕಾಲಿಗೆ ಕಟ್ಟಿಕೊಂಡರು. ಅದರ ಹೆಸರು ಗಗ್ಗರ ಎಂಬುದು ಆಮೇಲೆ ಗೊತ್ತಾಯಿತು. ತೆಂಗಿನ ಎಳೆಗರಿಗಳನ್ನು ಸಿಗಿದು ಮಾಡಿದ ಸೊಂಟದ ಸುತ್ತುಡುಗೆ ಧರಿಸಿಕೊಂಡರು.
ಪಾತ್ರಿಗಳು ಬಂದು ಆ ಕಲಾವಿದರಿಗೆ ಏನೋ ನಿರ್ದೇಶನ ಕೊಟ್ಟರು. ಮುಖವರ್ಣಿಕೆ ಮುಗಿಸಿ, ತಮ್ಮ ಹಿಂದೆ ಕುಳಿತವರು ಹೇಳುತ್ತಿದ್ದ ಸಂದಿಯ ಹಾಡಿಗೆ ತಲೆ ಕುಣಿಸುತ್ತಿದ್ದ ಆ ಕಲಾವಿದರು ಧಿಗ್ಗನೆ ಎದ್ದು ನಿಂತರು. ಮೈ ಯಾರೋ ಹಿಡಿದು ಅಲುಗಿಸಿದಂತೆ ಕಂಪಿಸುತ್ತಿತ್ತು. ಕಣ್ಣುಗಳು ಕೆಂಡದುಂಡೆ ಗಳಾಗಿದ್ದವು. ಹಿಂದಿದ್ದ ವಾಲಗದವರ ತಾಸೆ ತೆಂಬರೆ ಲಯವಾದ್ಯಗಳ ನುಡಿತ ಜೋರಾಯಿತು. ಸೇರಿದ್ದ ಊರ ಜನ ಮೈಯೆಲ್ಲ ಕಣ್ಣಾಗಿ, ಕಿವಿಯಾಗಿದ್ದರು.
ಇದನ್ನೂ ಓದಿ: Harish Kera Column: ಮಾವೋವಾದಿಗಳ ಮಾವಿನ ಭ್ರಾಂತಿಯ ಕತೆ
ಆ ಕಲಾವಿದರ ಕುಣಿತ, ಆವೇಶ, ಮೈಮಣಿತ, ನುಡಿ- ಎಲ್ಲವೂ ಸಣ್ಣ ಮಗುವಿನ ಮೈಯಲ್ಲಿ ರೋಮಾಂಚನ ಉಂಟು ಮಾಡುತ್ತಿದ್ದವು. ಮುಂದೆ ಜೀವನದಲ್ಲಿ ಎಂದೂ ಮರೆಯದ ಅನುಭವ ವಾಗಿತ್ತು ಅದು. ಇದು ತುಳುನಾಡಿನ, ಅಂದರೆ ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಹುಟ್ಟಿದ ಯಾವುದೇ ಮಗುವಿನ ಅನುಭವವೂ ಇರಬಹುದು.
ಮಾರ್ಚ್, ಏಪ್ರಿಲ್, ಮೇ- ಈ ಮೂರು ತಿಂಗಳುಗಳು ಕರ್ನಾಟಕದ ಕರಾವಳಿಗೆ, ಅದರಲ್ಲೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ನೀವು ಹೋದರೆ ಬೇರೆಯದೇ ಲೋಕವೊಂದನ್ನು ಹೊಕ್ಕಂತಾ ಗುತ್ತದೆ. ಇಲ್ಲಿ ಯಾವ ಊರಿಗೆ ಹೋದರೂ ಅಲೌಕಿಕದ ಕರೆಯೊಂದು ನಿಮ್ಮನ್ನು ಆವರಿಸದೇ ಬಿಡದು. ಹಗಲು ಮದುವೆ, ದೇವಸ್ಥಾನದ ಜಾತ್ರೆ ಮುಂತಾದ ಸಮಾರಂಭಗಳು, ಮಂಗಲ ವಾದ್ಯಗಳ ರವ. ರಾತ್ರಿಯಾದರೆ ಸಾಕು ಯಾವುದೋ ದಿಕ್ಕಿನಿಂದ ಕೇಳಿಬರುವ ಯಕ್ಷಗಾನದ ಹಾಡುಗಳ, ಚೆಂಡೆ ಮದ್ದಲೆಗಳ, ಭೂತಕೋಲದ ಡೋಲು ತಾಸೆಗಳ ಸದ್ದು. ಮೈ ಬೀಸಿ ಕುಣಿವ ಭೂತದ ಗಗ್ಗರದ ಧ್ವನಿ. ಭೂತದ ಮುಂದೆ ಹೇಳಿಕೊಳ್ಳುವ ‘ಮದಿಪು ಪಾರಿ’ ಗಳು.

ಹಿನ್ನೆಲೆಯಲ್ಲಿ ಹಾಡುವವರ ಪಾಡ್ದನ, ಸಂದಿಗಳು. ಸುತ್ತ ಹರಡಿಕೊಂಡಿರುವ ಜಾತ್ರೆಯ ನಾನಾ ನೋಟ ಮಾಟಗಳು. ಕೋಲ, ನೇಮ, ಬಲಿ, ಅಗೆಲು, ತಂಬಿಲ, ಬಂಡಿ ಮೊದಲಾದ ಹೆಸರುಗಳಿಂದ ಕರೆಯಲಾಗುವ ನಾನಾ ಬಗೆ ಉತ್ಸವ ಸೇವೆಗಳಿಗೆಲ್ಲ ಈ ನಡುಬೇಸಿಗೆಯ ರಾತ್ರಿಗಳೇ ಮುಹೂರ್ತ. ಅದು ‘ಜೋಗ ಬಿಟ್ಟು ಮಾಯ ಸೇರಿದ’ ಭೂತಗಳೆಲ್ಲ ಮತ್ತೆ ಧರೆಗಿಳಿದು ಬರುವ ಸಮಯ.
ಜೋಗ ಮತ್ತು ಮಾಯ ಎಂಬ ಸ್ಥಿತಿಗಳ ಕಲ್ಪನೆ ಇಲ್ಲುಂಟು. ಜೊತೆಗೆ ಕಾಯ ಎಂಬುದು ಕೂಡ. ಕಾಯವೆಂದರೆ ದೇಹ, ಜೋಗ ಎಂದರೆ ಲೌಕಿಕ, ಮಾಯ ಎಂದರೆ ಅಲೌಕಿಕ. ಈ ಭೂಮಿಯ ಬದುಕಿಗೆ ಈ ಮೂರು ಮುಖಗಳು. ದೇಹವಿಲ್ಲದೆ ಮನುಷ್ಯನಿಲ್ಲ. ಹಾಗೇ ಅವನಿಗೆ ನೆಮ್ಮದಿಯ ಬದುಕು ಬೇಕೆಂದಿದ್ದರೆ ಜೋಗ ಹಾಗೂ ಮಾಯಗಳೆರಡೂ ಬೇಕು.
ವರ್ಷವಿಡೀ ‘ಮಾಯ’ದಲ್ಲಿರುವ ಭೂತಗಳು ಇದೀಗ ನಮ್ಮ ನಿಮ್ಮ ನಡುವೆ ಬರುವ ಸಮಯ. ಹಾಂ, ಭೂತ ಎಂದರೆ ಪಾಶ್ಚಾತ್ಯರಂತೆ ‘ಡೆವಿಲ್’ ಎಂದು ಅರ್ಥಮಾಡಿಕೊಳ್ಳಬೇಡಿ. ಭೂತಗಳು ಅಥವಾ ದೈವಗಳು- ಡೆವಿಲ್‌ಗಳಲ್ಲ. ಭೂತಾರಾಧನೆಯ ಆರಂಭಿಕ ಅಧ್ಯಯನಕಾರರು ಬರೆದುಕೊಂಡಂತೆ ಇದು ಡೆವಿಲ್ ವರ್ಷಿಪ್ ಕೂಡ ಅಲ್ಲ. ಈ ದೈವಗಳು ತಮ್ಮ ಹಿಂದಿನ ಜನ್ಮದಲ್ಲಿ ಮನುಷ್ಯರೇ.
ವಿಧಿಯ ಆಕಸ್ಮಿಕದಲ್ಲಿ ಇವರೆಲ್ಲ ಜೀವ ತೊರೆದು ದೈವವಾದವರು. ಈ ದೈವಗಳಿಗೆ ಒಂದು ಅಲೌಕಿಕ ಕರ್ತವ್ಯ ಇದೆ. ಅದೇನೆಂದರೆ, ತಮ್ಮನ್ನು ಆರಾಧಿಸುವವರನ್ನು ಕಾಯುವುದು. ನಿಗ್ರಹ-ಅನುಗ್ರಹ ಶಕ್ತಿಗಳೆರಡನ್ನೂ ಹೊಂದಿರುವ ಈ ದೈವಗಳನ್ನು ಈಗ ನುಡಿ ಕೊಟ್ಟು ನಮ್ಮ ನಡುವೆ ಕರೆಸಿ ಮಾತನಾಡಿಸುವ ಹೊತ್ತು. ಹಾಗೆ ಭೂತದ ಪಾತ್ರಿಯ ಮೇಲೆ ದೈವ ಆವಾಹನೆಯಾಗುವುದೂ ‘ಮುಕ್ಕಾಲು ಮೂರು ಗಳಿಗೆ’ ಮಾತ್ರ. ದೈವವು ಜೋಗಕ್ಕೆ ಬರಲು ಅಷ್ಟು ಮಾತ್ರದ ಕಟ್ಟುಕಟ್ಟಳೆ ಯುಂಟು. ಉಳಿದ ವಿಸ್ಮಯಗಳನ್ನೆಲ್ಲ ಅದು ಮಾಯದಲ್ಲಿಯೇ ನೋಡಿಕೊಳ್ಳುತ್ತದೆ.
ಮನುಷ್ಯ ಮೂಲತಃ ಪ್ರಕೃತಿ ಆರಾಧಕ ಮತ್ತು ಪಿತೃ ಆರಾಧಕ. ದೇವರು ಎಂಬ ಕಲ್ಪನೆ ಮತ್ತೆ ಬಂತು. ಪ್ರಕೃತಿ ಹಾಗೂ ಪಿತೃಗಳೆರಡೂ ಸೇರಿಕೊಂಡು ದೈವ ಭೂತಗಳಾದರು. ಮನುಷ್ಯನೇ ದೈವವಾಗಿ ಆರಾಧನೆ ಪಡೆಯುವುದರ ಹಿಂದೆ ನಾನಾ ಚೋದ್ಯಗಳುಂಟು. ನ್ಯಾಯ ನೀತಿ ನಿಷ್ಠೆಗ ಳಿಂದ ಬದುಕಿ ಬಾಳಿದ ಅಂದರೆ ‘ಕಾಯ’ದಲ್ಲಿದ್ದ ಮನುಷ್ಯ ಹೋರಾಟದಲ್ಲಿ, ದುಷ್ಟರ ಸಂಚಿನಿಂದ, ಶ್ರೀಮಂತರ ತುಳಿತದಿಂದ ಈ ಕಾಯವನ್ನು ಬಿಡಬೇಕಾಗಿ ಬಂದಾಗ, ಮುಂದೆ ತಾನು ದೈವವಾಗಿ ಬಂದು ತನ್ನನ್ನು ನಂಬಿದವರನ್ನು ರಕ್ಷಿಸುವೆ ಎಂದು ಭರವಸೆ ನೀಡಿಯೇ ತೆರಳುವುದು.
ಸಾಮಾನ್ಯವಾಗಿ ಇವರು ವೀರರು/ ದಿಟ್ಟೆಯರು. ಅಪ್ರಾಕೃತಿಕವಾಗಿ ಜೀವ ತೊರೆಯಲು ಕಾರಣ ಸಾಮಾನ್ಯವಾಗಿ ಜಾತಿ ಶ್ರೇಷ್ಠರಿಂದ ಆಗುವ ಅನ್ಯಾಯ. ಇದೆಲ್ಲವನ್ನೂ ಕರಾವಳಿಯ ತುಂಬ ಇರುವ ಸಹಸ್ರಾರು ಭೂತಗಳ ಸಂದಿ- ಪಾಡ್ದನಗಳಿಂದ ಅರ್ಥ ಮಾಡಿಕೊಳ್ಳಬಹುದು.
ಸಂಧಿಗಳೆಂದರೆ ಭೂತಗಳ ಕತೆ ಹೇಳುವ ಹಾಡುಗಳು. ಆನಂದವಾಗಿ ಬದುಕಿ ನೆಮ್ಮದಿಯಾಗಿ ತೀರಿಕೊಂಡವರು ದೈವ ಆಗುವ ಉದಾಹರಣೆ ವಿರಳ. ಹಾಗೇ ಈ ದೈವಗಳ ವೇಷ ಕಟ್ಟುವವರು, ಕುಣಿಯುವವರು, ಹಾಡುವವರು ಸಮಾಜದ ತೀರಾ ಅಂಚಿನಲ್ಲಿರುವ ಜಾತಿ ಜನಾಂಗದವರು. ಆ ಒಂದು ರಾತ್ರಿ ಆ ಪಾತ್ರಿಯೇ ಊರ ಕಾಯುವ ದೈವ. ಅಂದು ಊರಿನ ಎಲ್ಲ ‘ಜಾತಿ ಶ್ರೇಷ್ಠ’ರೂ ಅವರ ಮುಂದೆ ಕೈಕಟ್ಟಿ ನಿಲ್ಲಬೇಕು.
ದೈವಾರಾಧನೆಯ ಅಗತ್ಯ-ಸ್ವರೂಪ ವಿನ್ಯಾಸವನ್ನು ಇದರಲ್ಲಿಯೇ ಅರ್ಥ ಮಾಡಿಕೊಳ್ಳ ಬಹುದು. ಕರಾವಳಿಯ ಬೇಸಿಗೆಯ ರಾತ್ರಿಗಳೆಂದರೆ ಯಕ್ಷಗಾನದ ಅಬ್ಬರದ ಸಮಯ ಕೂಡ. ಭೂತ ದೈವಗಳ ಹಾಗೆಯೇ ಇದು ಯಕ್ಷ ಗಂಧರ್ವರೂ ತಿರುಗಾಡುವ ಕಾಲ ಮತ್ತು ತಾಣ. ಹಿನ್ನೆಲೆಯ ಕಪ್ಪು ತೆರೆಯನ್ನು ಸರಿಸಿ ಮುಖದೋರಿ ಅಬ್ಬರಿಸುವ ರಾವಣ ಮೈರಾವಣ ಶುಂಭನಿಶುಂಭರು; ಭಾಗವತರ ಹಾಡುಗಾರಿಕೆ ಮನೋಧರ್ಮಕ್ಕೆ ತಕ್ಕಂತೆ ನರ್ತಿಸುವ ರಾಮ ಕೃಷ್ಣ ಸೀತೆ ಶೂರ್ಪನಖಿಯರು; ಹೊಕ್ಕು ಹರಿಯದ ವಾಗ್ಜಾಲದಲ್ಲಿ ನಿಮ್ಮನ್ನು ಮುಳುಗಲೀಯದೆ ತೇಲಿಸುವ ಕರ್ಣ ಅರ್ಜುನ ಕೃಷ್ಣ ಕೌರವರು; ಸೂಟೆಗೆ ರಾಳ ಎರಚಿ ಬೆಂಕಿ ಧಗ್ಗೆನ್ನಿಸಿ ಎದೆ ಝನ್ನುವಂತೆ ಹೂಂಕರಿಸಿ ಬರುವ ಮಹಿಷಾಸುರ ಭಸ್ಮಾಸುರರು; ಬೇರೊಂದು ಲೋಕಕ್ಕೆ ನಿಮ್ಮನ್ನು ಒಯ್ಯುವ ಮಣಿ ಕುಂಡಲ ಮಕುಟ ಕವಚಗಳು.
ಭೂತಾರಾಧನೆಯ ಕಣಗಳು ಮನರಂಜನೆಯ ಜೊತೆಗೆ ಆಸ್ತಿಕತೆಯೂ ಸಂಗಮಿಸಿದ ತಾಣ. ಆದರೆ ಯಕ್ಷಗಾನದ ವೇದಿಕೆ ಶುದ್ಧಾಂಗ ಮನರಂಜನೆಯ ನೆಲೆ. ಅದು ಕೂಡ ಹಿಂದೊಮ್ಮೆ ಆರಾಧನೆಯೇ ಆಗಿತ್ತು ಎಂದು ಹೇಳುವವರುಂಟು. ಆದರೆ ಆರಾಧನೆಯ ಚೌಕಟ್ಟನ್ನು ದಾಟಿ ಯಕ್ಷಗಾನ ಮನುಷ್ಯ ಭಾವನೆಯ ಹಲವು ಸೀಮೆಗಳನ್ನು ಮುಟ್ಟಿಬಿಟ್ಟಿದೆ.
ಕರಾವಳಿಯ ಬೇಸಗೆಯ ರಾತ್ರಿಗಳೇನೂ ತಂಪಾಗಿ ನಿಮ್ಮನ್ನು ಪೊರೆಯುವುದಿಲ್ಲ. ಸೆಕೆ ಸುರಿ ಯುತ್ತಿರುತ್ತದೆ. ಮೈ ಬೆವರಿ ಅಂಟುತ್ತಿರುತ್ತದೆ. ಹಗಲು ಉರಿವ ಬಿಸಿಲಿನಲ್ಲಿ ಒಬ್ಬರಿಗೊಬ್ಬರು ಅಂಟಿ ಕೊಂಡೇ ಬೆವರು ಸುರಿಸಿಕೊಂಡೇ ಜನ ಜಾತ್ರೆ ನೇಮ ಮದುವೆಗಳಲ್ಲಿ ಗುಂಪು ಸೇರುತ್ತಾರೆ. ರಾತ್ರಿ ಯೂ ಅಷ್ಟೇ, ಆದರೆ ಆ ಸೆಕೆಯೆಲ್ಲ ಕಣ್ಣೆದುರು ನಡೆಯುತ್ತಿರುವ ಲೌಕಿಕ ಅಲೌಕಿಕಗಳ ಈ ಸಂಗಮ ಜಲದಲ್ಲಿ ಮುಳುಗಿರುತ್ತದೆ.
ಮಾತುಗಳು ಸಾಮಾನ್ಯವಾಗಿ ನಿನ್ನೆ ಎಲ್ಲಿ ಕೋಲವಿತ್ತು, ನಾಳೆ ಎಲ್ಲಿ ಆಟ ಇದೆ ಎಂಬಂತಿರುತ್ತದೆ. ಆಟ ಎಂದರೆ ಯಕ್ಷಗಾನ. ಅದರ ಸಹೋದರ ತಾಳಮದ್ದಲೆ. ಹಾಗೆಂದರೆ ವೇಷದ ಗೋಜಿಲ್ಲದೆ ಯಕ್ಷಗಾನ ಪ್ರಸಂಗ ಪದ್ಯಗಳನ್ನು ಹಾಡುವ, ಅದಕ್ಕೆ ಆಯಾ ಪಾತ್ರ ವಹಿಸಿದವರು ಅರ್ಥ ಹೇಳುವ ಕಲೆ. ಅದು ಪುರಾಣದ ಜೊತೆಗೆ ಅರ್ವಾಚೀನವೂ ಸಂಗಮಿಸುವ ವಿಸ್ಮಯಕಾರಿ ರಂಗ. ನಾಟಕದಂತೆ ಪೂರ್ವನಿಶ್ಚಿತ ರಂಗಪಠ್ಯವಿಲ್ಲದೆ, ಆ ಕ್ಷಣಕ್ಕೆ ತೋಚಿದ್ದನ್ನು ಕತೆಯ ಚೌಕಟ್ಟು ಕೆಡದಂತೆ ಆಡುವ, ಅದರೊಳಗೇ ಸಮಕಾಲೀನ ತಾತ್ವಿಕ ಲೌಕಿಕ ಸಂಗತಿಗಳ ಮಿಂಚನ್ನು ಮಿಂಚಿಸುವ ಸಂವಾದ ಕಲೆ.
ಮೇ ತಿಂಗಳು ಮುಗಿಯುತ್ತ ಬಂದಂತೆ ಪಶ್ಚಿಮದ ಆಗಸದಲ್ಲಿ ಮೋಡಗಳು ಗೂಡು ಕಟ್ಟಿಕೊಳ್ಳ ತೊಡಗುತ್ತವೆ. ಅದೀಗ ದೈವ ಭೂತಗಳೂ ಯಕ್ಷಗಾನದ ಮೇಳಗಳೂ ಗೂಡು ಸೇರಿಕೊಳ್ಳುವ ಸಮಯ. ಒಂದೆರಡು ಮಳೆ ಬಿದ್ದ ಬಳಿಕ ಹೊಲ ತೋಟಗಳ ಕೆಲಸಗಳು ಶುರುವಾಗುತ್ತವೆ. ಅದಕ್ಕೂ ಮುನ್ನ ಯಕ್ಷಗಾನದ ವೇಷಗಳನ್ನು ತೊಳೆದು ಒಣಗಿಸಬೇಕು. ಯಕ್ಷಗಾನದ ಪಾತ್ರಗಳು ಆಯಾ ಕಲಾವಿದ ರಲ್ಲೂ ನೋಡುಗರಲ್ಲೂ ನೆಲೆಗೊಂಡು ಮಳೆಗಾಲದ ಪ್ರದರ್ಶನಗಳಿಗೆ ಅಣಿಯಾಗುತ್ತವೆ.
ಭೂತ ದೈವಗಳ ಅಣಿ, ಕಡ್ಸಲೆ, ಮೊಗವಾಡ, ಗಗ್ಗರ, ಜೀಟಿಗೆಗಳೆಲ್ಲ ಮಣೆಮಂಚವನ್ನು ಸೇರಿಕೊಳ್ಳು ತ್ತವೆ. ದೈವಗಳು ಜೋಗ ತೊರೆದು ಮಾಯದಲ್ಲಿ ನೆಲೆಯಾಗುತ್ತವೆ. ಯಕ್ಷಗಾನಕ್ಕಾದರೋ ಮಳೆಗಾಲ ದಲ್ಲೂ ಪ್ರದರ್ಶನಗಳುಂಟು, ಆದರೆ ಭೂತಾರಾಧನೆ ಆ ನಿರ್ದಿಷ್ಟ ಕಾಲ- ಜಾಗ- ಸಂದರ್ಭಗಳನ್ನು ಮೀರಿ ಬೇರೆಲ್ಲೂ ಕಾಣಿಸುವಂತಿಲ್ಲ.
ಅದು ಫೇಸ್‌ಬುಕ್ ಲೈವ್‌ನಂತಲ್ಲ. ಆ ಕ್ಷಣದಲ್ಲಿ ನಮಗೆ ಅದರ ಝಲಕ್ ಸಿಕ್ಕಿದರೆ ಸಿಕ್ಕಿತು, ಇಲ್ಲದಿದ್ದರೆ ಇಲ್ಲ. ಬದುಕಿನ ಘಟನೆಗಳು ಬೇಸಿಗೆಯ ನಡು ರಾತ್ರಿಯ ಕನಸಿನಂತೆ (ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್) ಎಂದು ಹೇಳುತ್ತಾನೆ ಶೇಕ್ಸ್‌ಪಿಯರ್. ಸ್ವತಃ ನಾಟಕ ಕಲಾವಿದನಾದ ಅವನಿಗೆ ಬದುಕಿನ ನಡುವಿನ ರಂಗವು ಬೇಸಿಗೆಯ ರಾತ್ರಿ ಉಂಟು ಮಾಡುವ ಸ್ವಪ್ನ ಸದೃಶ ಸ್ಥಿತಿಯ ಅನುಭವ ಆಗಿರಲಿಕ್ಕೇ ಬೇಕು.
ಅದಕ್ಕಾಗಿಯೇ ನಿದ್ದೆ ಎಚ್ಚರಗಳು ಮಿಶ್ರವಾದಂತಿರುವ, ಸಂಗತ ಅಸಂಗತಗಳು ಬೆರೆತಂತಿರುವ ಸನ್ನಿವೇಶಗಳನ್ನು ಅದೇ ಹೆಸರಿನ ನಾಟಕದಲ್ಲಿ ಸೃಷ್ಟಿಸುತ್ತಾನೆ. ಕರಾವಳಿಯ ಬೇಸಿಗೆಯ ರಾತ್ರಿಗಳು ಇಂಥ ಸ್ವಪ್ನಸದೃಶ ಇರುಳುಗಳು. ಒಮ್ಮೆ ಹೊಕ್ಕು ಹೊರಡದೇ ಅದರ ಜಾದೂ ಅರ್ಥವಾಗು ವಂಥದಲ್ಲ. ಅ ಹುಟ್ಟಿ ಬೆಳೆದು ಇರುವವರಿಗೂ ಅದು ಮತ್ತೆ ಮತ್ತೆ ಬೇಕೆನ್ನಿಸುವ ಮಾಯೆ, ಮರುಳು. ಪುರಾಣದ ಪಾತ್ರಗಳು ಭೂತ ದೈವಗಳು ನಿಮ್ಮ ಹೆಗಲಿಗೆ ಕೈಹಾಕಿ ನಡೆಯುವ ರಾತ್ರಿಯೊಂದು ಜೀವನದಲ್ಲಿ ನಿಮಗೆ ಬೇಡವೇ?