Greater Bengaluru: ಮೇ 15ರಿಂದ ʼಗ್ರೇಟರ್ ಬೆಂಗಳೂರುʼ ಜಾರಿ; ಅಸ್ತಿತ್ವ ಕಳೆದುಕೊಳ್ಳಲಿದೆ ಬಿಬಿಎಂಪಿ!
Greater Bengaluru: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024 ಜಾರಿಗೆ ತರಲು ಅಧಿಸೂಚನೆ ಹೊರಡಿಸಲು ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಅನುಮೋದನೆ ದೊರೆತಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.


ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇ 15ರಿಂದ ಅಸ್ತಿತ್ವ ಕಳೆದುಕೊಳ್ಳಲಿದ್ದು, ಗ್ರೇಟರ್ ಬೆಂಗಳೂರು ಪ್ರದೇಶವಾಗಿ ಪರಿವರ್ತನೆಯಾಗಲಿದೆ. ಇದಕ್ಕೆ ಸಂಬಂಧಿಸಿ ಅಧಿಸೂಚನೆ ಹೊರಡಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮೇ 15ರಂದು ಅಧಿಸೂಚನೆ ಹೊರಡಿಸುವ ಮೂಲಕ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯನ್ನು (Greater Bengaluru) ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
- ಬೆಳ್ಳಂದೂರು ಕೆರೆಯ ಪುನಶ್ವೇತನ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ 79.67 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲು ನಿರ್ಧಾರ.
- ಬೆಳಗಾವಿ ಜಿಲ್ಲೆಯ ಬೆನಕನಹಳ್ಳಿ, ಹಿಂಡಲಗಾ ಹಾಗೂ ಹಿರೇಬಾಗೇವಾಡಿ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಿ ತೀರ್ಮಾನ.
- ರಾಮನಗರ ಜಿಲ್ಲೆಯ ಗನಾಳು ಬಳಿ ಅರ್ಕಾವತಿ ನದಿಯಿಂದ ನೀರನ್ನು ಎತ್ತಿ ರಾಮನಗರ ಮತ್ತು ಕನಕಪುರ ತಾಲೂಕಿನ 46 ಕೆರೆಗಳನ್ನು ತುಂಬಿಸುವ 110 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
- 2025ರ ಮೇ 15 ರಿಂದ ಜೂನ್ 14ರವರೆಗೆ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ಕಲ್ಪಿಸಲು ನಿರ್ಧಾರ.
- ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಹೊಸ ಆಸ್ಪತ್ರೆಗೆ ಅವಶ್ಯವಿರುವ ವೈದ್ಯಕೀಯ ಯಂತ್ರೋಪಕರಣಗಳು ಹಾಗೂ ಪೀಠೋಪಕರಣಗಳನ್ನು 26.98 ಕೋಟಿ ರೂ. ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
- ಚನ್ನಪಟ್ಟಣ ತಾಲೂಕಿನ ಸರಗೂರು ಹಾಗೂ ಹೊಸಪುರ ನಡುವೆ ಶಿಂಷಾ ನದಿಗೆ ಅಡ್ಡಲಾಗಿ 15 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ನಿರ್ಧಾರ
- ಮಾಗಡಿ, ರಾಮನಗರ ಹಾಗೂ ಕುಣಿಗಲ್ ತಾಲೂಕಿನ 38 ಕೆರೆಗಳು ಹಾಗೂ ಕಟ್ಟೆಗಳನ್ನು ತುಂಬಿಸುವ 98 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ.
- ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಯೋನಿವೃತ್ತಿ ವಯಸ್ಸನ್ನು 60 ರಿಂದ 65 ವರ್ಷಕ್ಕೆ ಹೆಚ್ಚಿಸಲು ನಿರ್ಧಾರ.
- ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರಿನಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲೂಕಿನ 41 ಕೆರೆಗಳನ್ನು ತುಂಬಿಸುವ ಯೋಜನೆಯನ್ನು 280 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024
ಬಿಬಿಎಂಪಿಯನ್ನು ಜಿಬಿಎ ಎಂದು ಅಧಿಸೂಚಿಸುವವರೆಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024 ಜಾರಿಗೆ ಬರಲು ಸಾಧ್ಯವಿಲ್ಲ. ಈ ಕಾಯ್ದೆ ಅನುಷ್ಠಾನಕ್ಕೆ ತರಲು ಹಾಗೂ ಗ್ರೇಟರ್ ಬೆಂಗಳೂರು ಪ್ರದೇಶವನ್ನು ವಿಸ್ತರಿಸಲು ಅಧಿಸೂಚನೆ ಹೊರಡಿಸಲು ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಅನುಮೋದನೆ ದೊರೆತಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024ರ ಕಲಂ 1(2)ರಂತೆ, ಗ್ರೇಟರ್ ಬೆಂಗಳೂರು ಪ್ರದೇಶವನ್ನು ಅಧಿಸೂಚಿಸಲು ಹಾಗೂ ಕಲಂ 1(3)ರಂತೆ ಕಾಯ್ದೆಯನ್ನು ಜಾರಿಗೊಳಿಸಲು ಮತ್ತು ಕಲಂ 131ರಂತೆ ನಗರ ಪಾಲಿಕೆಗೆ ಅಡಳಿತಾಧಿಕಾರಿ ನೇಮಕ ಮಾಡಲು ಅಗತ್ಯವಿರುವ ಅಧಿಸೂಚನೆ ಮೇ 15ರಂದು ಹೊರಬೀಳಲಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಲ್ಲಿ ಸುಗಮ ಆಡಳಿತದ ದೃಷ್ಟಿಯಿಂದ ಬಿಬಿಎಂಪಿಯನ್ನು ಗರಿಷ್ಠ 7 ಪಾಲಿಕೆಗಳಾಗಿ ವಿಂಗಡಿಸಲು ಪ್ರಸ್ತಾಪ ಮಾಡಲಾಗಿದೆ. ಈ ಕಾಯ್ದೆಗೆ ನಿಯಮಾವಳಿ ರೂಪಿಸಿದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
'ಗ್ರೇಟರ್ ಬೆಂಗಳೂರು ಪ್ರದೇಶ' ಎಂದು ಪ್ರಸ್ತುತವಿರುವ ಬಿಬಿಎಂಪಿ ಪ್ರದೇಶವನ್ನೇ ಮೊದಲು ಅಧಿಸೂಚಿಸಲಾಗುತ್ತದೆ. ಬಿಬಿಎಂಪಿ ವಿಸರ್ಜನೆಯಾಗುವುದರಿಂದ 'ಗ್ರೇಟರ್ ಬೆಂಗಳೂರು ಪ್ರದೇಶ'ಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲಾಗುತ್ತದೆ. ಆಡಳಿತಾಧಿಕಾರಿ ನೇಮಕವಾದ ಮೇಲೆ ಕಾಯ್ದೆಗೆ ಅನುಗುಣವಾಗಿ ನಗರ ಪಾಲಿಕೆಗಳ ನಿಯಮಗಳು, ಕಾನೂನಿನ ಉಪಬಂಧಗಳನ್ನು ರಚಿಸಲಾಗುತ್ತದೆ.
ನಗರ ಪಾಲಿಕೆಗಳಡಿ ಕಾರ್ಯನಿರ್ವಹಿಸುವ ಪ್ರಾಧಿಕಾರಗಳಿಗೆ ನಿಯಮಗಳನ್ನು ಜಾರಿ ಮಾಡಿ, ಕರ್ತವ್ಯ, ಪ್ರಕಾರ್ಯಗಳನ್ನು ನಿಗದಿಪಡಿಸಲಾಗುತ್ತದೆ. ನಿಯಮಗಳಂತೆ ಎಲ್ಲ ಅಧಿಕಾರವನ್ನು ಆಡಳಿತಾಧಿಕಾರಿ ಚಲಾಯಿಸಬಹುದು. ಬಿಬಿಎಂಪಿ ವಿಸರ್ಜನೆಯಾಗಿ ಅಧಿಕಾರಕ್ಕೆ ಬರುವ ಆಡಳಿತಾಧಿಕಾರಿ ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರುವ ಕಾರ್ಯಗಳನ್ನು ನಿರ್ವಹಿಸುವಾಗ, ಸರ್ಕಾರದ ನಿರ್ದೇಶನ, ಮಾರ್ಗದರ್ಶನ ಪಡೆಯಬೇಕು. ಯಾವುದೇ ಕಾರ್ಯನೀತಿಯ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಶ್ನೆ ಉದ್ಭವಿಸಿದರೆ ಸರ್ಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಕಲಂ 131ರಲ್ಲಿ ಹೇಳಲಾಗಿದೆ. ಅಂದರೆ, ಬಿಬಿಎಂಪಿ ಆಡಳಿತ ಮೇ 15 ನಂತರ 'ಗ್ರೇಟರ್ ಬೆಂಗಳೂರು ಪ್ರದೇಶವಾಗಲಿದ್ದು, ಆಡಳಿತಾಧಿಕಾರಿ ಮೂಲಕ ಸರ್ಕಾರವೇ ಎಲ್ಲವನ್ನೂ ನಿಯಂತ್ರಿಸಲಿದೆ.
'ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024' ಜಾರಿಯಾದ ಮೇಲೆ ಮುಖ್ಯಮಂತ್ರಿಯವರ ನೇತೃತ್ವದ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (ಜಿಬಿಎ) 120 ದಿನಗಳಲ್ಲಿ ರಚನೆಯಾಗಬೇಕು. ಪ್ರಾಧಿಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಶಾಸಕರು, ಸಚಿವರು, ನಗರಾಭಿವೃದ್ಧಿ ಸಚಿವರು, ಪಾಲಿಕೆಗಳ ಮೇಯರ್‌ಗಳು, ಬಿಡಿಎ ಆಯುಕ್ತ, ಬೆಂಗಳೂರು ಜಲಮಂಡಳಿ ಅಧ್ಯಕ್ಷ, ಬಿಎಂಟಿಸಿ, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಕಂದಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ಕಮಿಷನರ್, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಹಾನಗರ ಆಯುಕ್ತ ಸದಸ್ಯರಾಗಿರುತ್ತಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.