Laxmi Hebbalkar: ಅವಿಭಜಿತ ದ.ಕ.ಜಿಲ್ಲೆಯ ಆಯುರ್ವೇದ ಚಿಕಿತ್ಸೆ ಇಡೀ ವಿಶ್ವಕ್ಕೆ ಮಾದರಿ- ಲಕ್ಷ್ಮೀ ಹೆಬ್ಬಾಳ್ಕರ್
Laxmi Hebbalkar: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಯುರ್ವೇದ ಚಿಕಿತ್ಸೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಆಯುರ್ವೇದಕ್ಕೆ 5 ಸಾವಿರ ವರ್ಷಗಳಷ್ಟು ಇತಿಹಾಸವಿದ್ದು, ಆಯುರ್ವೇದ ಚಿಕಿತ್ಸೆಯನ್ನು ಇಡೀ ದೇಶವೇ ಒಪ್ಪಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.


ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಯುರ್ವೇದ ಚಿಕಿತ್ಸೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಆಯುರ್ವೇದಕ್ಕೆ 5 ಸಾವಿರ ವರ್ಷಗಳಷ್ಟು ಇತಿಹಾಸವಿದ್ದು, ಆಯುರ್ವೇದ ಚಿಕಿತ್ಸೆಯನ್ನು ಇಡೀ ದೇಶವೇ ಒಪ್ಪಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ತಿಳಿಸಿದರು. ಉಡುಪಿಯ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರೋಗ ನಿರ್ಣಾಯಕ ಘಟಕದ ವಿನೂತನ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಆಯುರ್ವೇದದಲ್ಲಿ ಎಸ್‌ಡಿಎಂ ಕಾಲೇಜು ಇಡೀ ದೇಶದಲ್ಲೇ ಉತ್ತಮ ಸಂಶೋಧನೆ ಮಾಡುತ್ತಿದೆ ಎಂದು ಹೇಳಿದರು.
ನಾನು ಕುಟುಂಬ ಸಮೇತ ಪ್ರತಿವರ್ಷ ಉಜಿರೆಗೆ ಆಯುರ್ವೇದ ಚಿಕಿತ್ಸೆಗೆ ಬರುತ್ತಿದ್ದೆ. ಈಗ ಬೆಂಗಳೂರು ಬಳಿಯಿರುವ ಇದೇ ಸಂಸ್ಥೆಯ ಕ್ಷೇಮವನಕ್ಕೆ ಹೋಗುತ್ತಿದ್ದೇವೆ. ಆಯುರ್ವೇದ ಚಿಕಿತ್ಸೆ ಮನಸ್ಸಿಗೆ ಹಿತ ನೀಡುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಖಾಸಗಿ ವಲಯದ ಕಾಲೇಜುಗಳಲ್ಲಿ ಎಸ್‌ಡಿಎಂ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇಲ್ಲಿ ಅದ್ಭುತವಾದ ಕೆಲಸ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಲೋಪತಿಗಿಂತ ಆಯುರ್ವೇದದ ಮೇಲೆ ಹೆಚ್ಚು ವಿಶ್ವಾಸ ಬಂದಿದೆ. ಈ ಕಾಲೇಜು ಇನ್ನೂ ಉನ್ನತ ಸ್ಥಾನಕ್ಕೇರಲಿ, ದೇಶಕ್ಕೇ ಹೆಸರುವಾಸಿಯಾಗಲಿ, ಸಮಾಜಕ್ಕೆ ಮಾದರಿಯಾಗಲಿ ಎಂದು ಹಾರೈಸುತ್ತೇನೆ ಎಂದು ಸಚಿವರು ಹೇಳಿದರು.
ಈ ಸುದ್ದಿಯನ್ನೂ ಓದಿ | Laxmi Hebbalkar: ಪುರುಷಗಿಂತ ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಜಾಸ್ತಿ-ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಮಮತಾ, ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್, ಕಾಲೇಜಿನ ನಿರ್ದೇಶಕ ಪ್ರಸನ್ನ ರಾವ್, ಫಾರ್ಮಸಿ ವಿಭಾಗದ ಮುಖ್ಯಸ್ಥ ಮುರಳೀಧರ್ ಬಲ್ಲಾಳ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.