ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India Pakistan Ceasefire: ಕದನ ವಿರಾಮಕ್ಕೆ ಒಪ್ಪಿದರೂ ಪಾಕ್‌ಗೆ ಸ್ಪಷ್ಟ ಸಂದೇಶ ರವಾನಿಸಲು ಭಾರತ ಯಶಸ್ವಿ; ಇನ್ನಾದರೂ ಉಗ್ರರಿಗೆ ಬೀಳುತ್ತ ಅಂಕುಶ?

Operation Sindoor: ಉಗ್ರವಾದದ ವಿರುದ್ಧ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ಪಾಕಿಸ್ತಾನಕ್ಕೆ ರವಾನಿಸಿದ ಭಾರತ ಕದನ ವಿರಾಮವನ್ನು ಒಪ್ಪಿಕೊಂಡಿದೆ. ಕದನ ವಿರಾಮ ಒಪ್ಪಂದ ಘೋಷಣೆಗೆ ಮುನ್ನ ಭಾರತ, ಭವಿಷ್ಯದಲ್ಲಿ ನಡೆಯುವ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಯನ್ನು ಯುದ್ಧ ಎಂದು ಪರಿಗಣಿಸುವುದಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.

ಕದನ ವಿರಾಮಕ್ಕೆ ಒಪ್ಪಿದರೂ ಪಾಕ್‌ಗೆ ಸ್ಪಷ್ಟ ಸಂದೇಶ ರವಾನಿಸಿದ ಭಾರತ

Profile Ramesh B May 10, 2025 8:51 PM

ಹೊಸದಿಲ್ಲಿ: ಉಗ್ರವಾದದ ವಿರುದ್ಧ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ಪಾಕಿಸ್ತಾನಕ್ಕೆ ರವಾನಿಸಿದ ಭಾರತ ಕದನ ವಿರಾಮವನ್ನು ಒಪ್ಪಿಕೊಂಡಿದೆ (India Pakistan Ceasefire). ಇನ್ನುಮುಂದೆ ಗಡಿಯಲ್ಲಿ ಯಾವುದೇ ರೀತಿಯ ಫೈರಿಂಗ್‌ ನಡೆಸುವುದಿಲ್ಲ ಎಂದು ಎರಡೂ ದೇಶಗಳು ತಿಳಿಸಿವೆ. ಆ ಮೂಲಕ ಕವಿದಿದ್ದ ಯುದ್ಧದ ಕಾರ್ಮೋಡ ತಿಳಿಯಾಗಿದೆ. ಜತೆಗೆ ಜನರ ರಕ್ಷಣೆಗಾಗಿ ಯಾರ ಅನುಮತಿಗೂ ಕಾಯುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಆ ಮೂಲಕ ತನ್ನ ಪ್ರಜೆಗಳ ರಕ್ಷಣೆಯೇ ಮೊದಲ ಆದ್ಯತೆ ಎನ್ನುವುದನ್ನು ಒತ್ತಿ ಹೇಳಿದೆ. ಅದಾಗ್ಯೂ ಉಗ್ರರ ವಿರುದ್ಧದ ಹೋರಾಟವನ್ನು ಭಾರತ ಮುಂದುವರಿಸಲಿದೆ ಎಂದು ತಿಳಿಸಿದೆ.

ಉಗ್ರರು ಮತ್ತು ಅವರ ಪೋಷಕರನ್ನು ಹುಡುಕಿ ಹೊಡೆದುರುಳಿಸುವ ಕಾರ್ಯವನ್ನು ಮುಂದುವರಿಸಲಿದ್ದೇವೆ ಎನ್ನುವ ಸಂದೇಶವನ್ನು ಭಾರತ ಈಗಾಗಲೇ ರವಾನಿಸಿದೆ. ಕದನ ವಿರಾಮ ಒಪ್ಪಂದ ಘೋಷಣೆಗೆ ಮುನ್ನ ಭಾರತ, ಭವಿಷ್ಯದಲ್ಲಿ ನಡೆಯುವ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಯನ್ನು ಯುದ್ಧ ಎಂದು ಪರಿಗಣಿಸುವುದಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತು.



ಈ ಸುದ್ದಿಯನ್ನೂ ಓದಿ: India Pakistan Ceasefire: ಭಾರತ- ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ; ಡೊನಾಲ್ಡ್‌ ಟ್ರಂಪ್‌ ಹೇಳಿಕೆ

ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ಗೆ ನುಗ್ಗಿ 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಉಗ್ರರ ವಿರುದ್ದ ಸಮರ ಸಾರಿರುವ ಭಾರತ ಆಪರೇಷನ್‌ ಸಿಂದೂರ್ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅವರ ನೆಲೆಗಳನ್ನು ನಾಶಗೈದಿದೆ. ಆ ಮೂಲಕ ಉಗ್ರ ವಾದವನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ. ಈ ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಿದೆ ಎಂದಿರುವ ಭಾರತೀಯ ಸೇನೆ 9 ಉಗ್ರ ನೆಲೆಯನ್ನು ಸಂಪೂರ್ಣ ನಾಶಪಡಿಸಿದ್ದಾಗಿ ತಿಳಿಸಿದೆ. ಜತೆಗೆ 100 ಉಗ್ರರನ್ನು ಹೊಡೆದುರುಳಿಸಿರುವುದಾಗಿ ಹೇಳಿದೆ.

ಗಡಿ ಮಾತ್ರವಲ್ಲದೆ ಪಾಕಿಸ್ತಾನದ ಸುಮಾರು 100 ಕಿ.ಮೀ. ಒಳಕ್ಕೆ ತೆರಳಿದ ಭಾರತೀಯ ಕ್ಷಿಪಣಿಗಳು ಉಗ್ರರ ತಾಣವನ್ನು ಹೇಳ ಹೆಸರಿಲ್ಲದಂತೆ ಧ್ವಂಸ ಮಾಡಿವೆ. ಪಾಕ್ ಸೇನೆಯ ಕಣ್ಗಾವಲು ಪ್ರದೇಶ ಎನಿಸಿಕೊಂಡಿರುವ ಪಂಜಾಬ್‌ ಪ್ರಾಂತ್ಯ, ಬಹವಾಲ್ಪುರಕ್ಕೂ ಭಾರತೀಯ ಕ್ಷಿಪಣಿ ನುಗ್ಗಿದ್ದು ನಮ್ಮ ಸಾಮರ್ಥ್ಯವನ್ನು ಪಾಕ್‌ನ ಎದುರು ಮತ್ತೊಮ್ಮೆ ಅನಾವರಣಗೊಳ್ಳುವಂತೆ ಮಾಡಿದೆ. ಪಾಕ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ದಾಟಿ ಮುನ್ನುಗ್ಗಿದ್ದ ಭಾರತದ ಕ್ಷಿಪಣಿ ಸುಮಾರು 23 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿದ್ದು ಪಾಕ್‌ಗೆ ನಡುಕ ಹುಟ್ಟಿಸಿದೆ.

ಈ ದಾಳಿಯಲ್ಲಿ ಹತರಾದವರಲ್ಲಿ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರೂ ಸೇರಿದ್ದಾರೆ. ಭಾರತದ ವಿರುದ್ಧ ಪೈಶಾಚಿಕ ಕೃತ್ಯದ ಯೋಜನೆ ರೂಪಿಸಿದ ಅನೇಕ ತಾಣಗಳು‍ ಧ್ವಂಸಗೊಂಡಿವೆ ಎನ್ನುವುದು ವಿಶೇಷ. ಆಪರೇಷನ್‌ ಸಿಂದೂರ್‌ ಮೂಲಕ ಪಹಲ್ಗಾಮ್‌ ದಾಳಿಯ ಉಗ್ರರು ಮಾತ್ರವಲ್ಲ ಭಾರತದ ಮೇಲೆ ನಡೆದ ಹಿಂದಿನ ಭಯೋತ್ಪದಕ ದಾಳಿಯ ಸೂತ್ರರದಾರರನ್ನೂ ಸದೆಬಡಿಯಲಾಗಿದೆ ಎಂದು ಕೇಂದ್ರ ತಿಳಿಸಿದೆ. 26/11ರ ಮುಂಬೈ ದಾಳಿಯ ಅಜ್ಮಲ್‌ ಕಸಬ್‌, ಡೇವಿಡ್‌ ಹೆಡ್ಲಿ ಮತ್ತು ಕಂದಾಹಾರ್‌ ವಿಮಾನ ಅಪಹರಿಸಿದ ಉಗ್ರರಿಗೆ ತರಬೇತಿ ನೀಡಿದ ಕ್ಯಾಂಪಸ್‌ ಅನ್ನು ಉಡೀಸ್‌ ಮಾಡಲಾಗಿದೆ. ಆ ಮೂಲಕ ಆಪರೇಷನ್‌ ಸಿಂದೂರ್‌ ಸಂಪೂರ್ಣ ಯಶಸ್ವಿಯಾಗಿದೆ. ಇದರ ಜತೆಗೆ ಸಿಂದೂ ನದಿ ಒಪ್ಪಂದವನ್ನು ರದ್ದುಪಡಿಸುವ ಮೂಲಕ ಭಾರತ ಪಾಕ್‌ನ ಬೆನ್ನುಲುಬಿಗೆ ಬಲವಾದ ಪೆಟ್ಟು ನೀಡಿದೆ.