India Pakistan Ceasefire: ಉಗ್ರರ ವಿರುದ್ಧದ ಹೋರಾಟ ಮುಂದುವರಿಯಲಿದೆ; ಪಾಕ್ ಜತೆಗಿನ ಕದನ ವಿರಾಮದ ಬೆನ್ನಲ್ಲೇ ಎಚ್ಚರಿಕೆ ನೀಡಿದ ಭಾರತ
S.Jaishankar: ʼʼಅಮೆರಿಕದ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಎಲ್ಲ ರೀತಿಯ ಸೇನಾ ಕಾರ್ಯಾಚರಣೆ ನಿಲ್ಲಿಸುವ ಒಪ್ಪಂದಕ್ಕೆ ಬಂದಿವೆ. ಆದರೆ ಉಗ್ರರ ವಿರುದ್ಧದ ಭಾರತದ ಕಠಿಣ ನಿಲುವು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲʼʼ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಎಚ್ಚರಿಸಿದ್ದಾರೆ.

ಎಸ್.ಜೈಶಂಕರ್.

ಹೊಸದಿಲ್ಲಿ: ಕೆಲವು ದಿನಗಳಿಂದ ನಡೆಯುತ್ತಿದ್ದ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಬಿದ್ದಿದೆ. ಎರಡೂ ದೇಶಗಳು ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿಸಿವೆ (India Pakistan Ceasefire). ಆ ಮೂಲಕ ಗಡಿಗಳಲ್ಲಿ ಮೊಳಗುತ್ತಿದ್ದ ಗುಂಡು, ಶೆಲ್, ಡ್ರೋನ್ ಸದ್ದಡಗಿದೆ. ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಸಹಿ ಹಾಕುವುದೆಂದರೆ ಭಯೋತ್ಪಾದನೆ ವಿರುದ್ಧ ಭಾರತ ಮೃದು ಧೋರಣೆ ತಾಳಿದೆ ಎಂದರ್ಥವಲ್ಲ ಎಂದು ಹೇಳುವ ಮೂಲಕ ಇತ್ತ ವಿದೇಶಾಂಗ ಸಚಿವ ಎಸ್.ಜೈಶಂಕರ್ (S.Jaishankar) ಉಗ್ರರನ್ನು ಮಟ್ಟ ಹಾಕುವುದನ್ನು ಮುಂದುವರಿಸುವ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ʼʼಅಮೆರಿಕದ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಎಲ್ಲ ರೀತಿಯ ಸೇನಾ ಕಾರ್ಯಾಚರಣೆ ನಿಲ್ಲಿಸುವ ಒಪ್ಪಂದಕ್ಕೆ ಬಂದಿವೆ. ಆದರೆ ಉಗ್ರರ ವಿರುದ್ಧದ ಭಾರತದ ಕಠಿಣ ನಿಲುವು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲʼʼ ಎಂದು ಪುನರುಚ್ಚರಿಸಿದ್ದಾರೆ.
ಜೈಶಂಕರ್ ಅವರ ಎಕ್ಸ್ ಪೋಸ್ಟ್:
India and Pakistan have today worked out an understanding on stoppage of firing and military action.
— Dr. S. Jaishankar (@DrSJaishankar) May 10, 2025
India has consistently maintained a firm and uncompromising stance against terrorism in all its forms and manifestations. It will continue to do so.
ಈ ಸುದ್ದಿಯನ್ನೂ ಓದಿ: India Pakistan Ceasefire: ಕದನ ವಿರಾಮಕ್ಕೆ ಪಾಕ್‌ನಿಂದ ಭಾರತಕ್ಕೆ ಕರೆ; ಯುದ್ಧಕ್ಕೆ ಬಿತ್ತು ಬ್ರೇಕ್
ಜೈಶಂಕರ್ ಹೇಳಿದ್ದೇನು?
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈಶಂಕರ್, ʼʼಭಾರತ ಮತ್ತು ಪಾಕಿಸ್ತಾನ ಶನಿವಾರ (ಮೇ 10) ಎಲ್ಲ ರೀತಿಯ ಫೈರಿಂಗ್ ಮತ್ತು ಸೇನಾ ಕಾರ್ಯಾಚರಣೆ ನಿಲ್ಲಿಸುವ ಒಪ್ಪಂದಕ್ಕೆ ಬಂದಿವೆ. ಅದಾಗ್ಯೂ ಉಗ್ರವಾದದ ವಿರುದ್ಧದ ಭಾರತದ ಹೋರಾಟ ಮುಂದುವರಿಯಲಿದೆ. ಈ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲʼʼ ಎಂದು ಅವರು ಬರೆದುಕೊಂಡಿದ್ದಾರೆ.
ಎ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ಗೆ ನುಗ್ಗಿ ಉಗ್ರರು 26 ಪ್ರವಾಸಿಗರನ್ನು ಹತ್ಯೆಗೈದ ಬಳಿಕ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಇನ್ನಷ್ಟು ಹದಗೆಟ್ಟಿದೆ. ಈ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡ ಭಾರತ ಮೇ 7 ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಆಪರೇಷನ್ ಸಿಂದೂರ್ ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾದರು.
ಹತರಾದವರಲ್ಲಿ ಉಗ್ರ ಸಂಘಟನೆಗಳ ಮುಖಂಡರಾದ ಮುದಾಸರ್ ಖಾದಿಯನ್ ಖಾಸ್, ಹಫೀಜ್ ಮುಹಮ್ಮದ್ ಜಮೀಲ್, ಮೊಹಮ್ಮದ್ ಯೂಸುಫ್ ಅಜರ್, ಖಾಲಿದ್ (ಅಬು ಆಕಾಶ) ಮತ್ತು ಮೊಹಮ್ಮದ್ ಹಸನ್ ಖಾನ್ ಸೇರಿದ್ದಾರೆ. ಇದರಿಂದ ರೊಚ್ಚಿಗೆದ್ದ ಪಾಕಿಸ್ತಾನ ಅದಾದ ಬಳಿಕ ಭಾರತದ ಮೇಲೆ ನಿರಂತರವಾಗಿ ಅಪ್ರಚೋದಿತ ದಾಳಿ ನಡೆಸುತ್ತಲೇ ಬಂತು.
ಇದನ್ನು ದಿಟ್ಟವಾಗಿ ಎದುರಿಸಿದ ಭಾರತೀಯ ಸೇನೆ ಪಾಕ್ ಯೋಜನೆಯನ್ನು ಮತ್ತೊಮ್ಮೆ ವಿಫಲಗೊಳಿಸಿತು. ಅಲ್ಲದೆ ಪಾಕ್ ನೆಲಕ್ಕೆ ನುಗ್ಗಿ ಸೇನಾ ನೆಲೆಯನ್ನು ಧ್ವಂಸಗೊಳಿಸಿತು. ಇದರಿಂದ ಪಾಕಿಸ್ತಾನ ಪತರಗುಟ್ಟಿ ಹೋಗಿದ್ದು, ಕೊನೆಗೂ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತ ಸರ್ಕಾರ ಅಧಿಕೃತವಾಗಿ ಕದನ ವಿರಾಮವನ್ನು ಖಚಿತಪಡಿಸಿದೆ. ಎಲ್ಲ ರೀತಿಯ ದಾಳಿಯನ್ನೂ ನಿಲ್ಲುಸುವುದಾಗಿ ಭಾರತ ಹೇಳಿದೆ. ಶನಿವಾರ ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಗೆ ಬರಲಿದೆ. ಕದನ ವಿರಾಮದ ಕುರಿತು ವಿದೇಶಾಂಗ ಇಲಾಖೆ ಮಾಹಿತಿಯನ್ನು ನೀಡಿದ್ದು, ಮೇ 12ರಂದು ಪಾಕಿಸ್ತಾನ ಹಾಗೂ ಭಾರತ ಅಮೆರಿಕದ ನೇತೃತ್ವದಲ್ಲಿ ಮಾತುಕತೆ ನಡೆಸಲಿವೆ.