Pradeep Eshwar: ಮಂಚೇನಹಳ್ಳಿಯ ಅಳಲು ಆಲಿಸಿದ ಶಾಸಕ ಪ್ರದೀಪ್ ಈಶ್ವರ್
ನೀವು ಕೆಟ್ಟ ದಾರಿ ಹಿಡಿಯದೇ, ಸಮಾಜದಲ್ಲಿ ಗೌರವಯುತವಾಗಿ, ಸ್ವಾಭಿಮಾನದ ಬದುಕು, ಬದುಕಲು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿ ದ್ದೀರಿ. ಈ ದೇಶಕ್ಕೆ ನೀವೆಲ್ಲರೂ ಆಸ್ತಿ. ಮಾಲ್ಗಳಲ್ಲಿ, ಎಸಿ ಮಳಿಗೆಗಳಲ್ಲಿ ಖರೀದಿ ಮಾಡುವುದು ಒಂದು ಕಡೆಯಾದರೆ, ಅದೇ ಗುಣಮಟ್ಟದ ಆಹಾರ, ವಸ್ತುಗಳನ್ನು ಅವರಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿಕೊಂಡು ಬರುತ್ತಿದ್ದೀರಿ


ಚಿಕ್ಕಬಳ್ಳಾಪುರ : ಮಂಚೇನಹಳ್ಳಿ ಅಂಗಡಿ ಮತ್ತು ಬೀದಿ ಬದಿ ವ್ಯಾಪಾರಸ್ಥರ ಸ್ವಾಭಿಮಾನದ ಬದುಕಿಗೆ ಧಕ್ಕೆಯಾಗದಂತೆ ವ್ಯವಸ್ಥೆ ಕಲ್ಪಿಸುವುದು ನನ್ನ ಜವಾಬ್ದಾರಿ ಎಂದು ಶಾಸಕ ಪ್ರದೀಪ್ ಈಶ್ವರ್ ವ್ಯಾಪಾರಿಗಳಿಗೆ ಭರವಸೆ ನೀಡಿದರು. ನಮ್ಮ ಊರಿಗೆ ನಮ್ಮ ಶಾಸಕ ಎಂಬ ಕಾರ್ಯಕ್ರಮ ದಡಿಯಲ್ಲಿ ಜಿಲ್ಲೆಯ ಮಂಚೇನಹಳ್ಳಿ ಪಟ್ಟಣದ ಗೌರಿಬಿದನೂರು- ಚಿಕ್ಕಬಳ್ಳಾಪುರ ರಸ್ತೆಯ ಅಂಗಡಿ ಮತ್ತು ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳಿಗೆ ಭೇಟಿ ನೀಡಿ ವ್ಯಾಪಾರಸ್ಥರಿಂದ ಕುಂದು ಕೊರತೆಗಳ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ವ್ಯಾಪಾರಿಗಳು ಗ್ರಾಮ ಪಂಚಾಯತಿಯಿಂದ ಪರವಾನಗಿ ಪಡೆದು ವ್ಯಾಪಾರಕ್ಕೆ ವ್ಯವಸ್ಥೆ ಮಾಡಿ ಕೊಳ್ಳಬೇಕು. ವ್ಯಾಪಾರಿಗಳ ತೊಂದರೆಗಳು ನನಗೆ ಅರ್ಥ ವಾಗುತ್ತದೆ. ಅವರಿಗೆ ಬೇಕಾದ ಮೂಲ ವ್ಯವಸ್ಥೆಗಳನ್ನು ಮಾಡಿ ಕೊಡಲಾಗುವುದು ಎಂದರು.
ಬೀದಿ ಬದಿ ವ್ಯಾಪಾರಸ್ಥರ ಕುರಿತು ಮಾತನಾಡಿ, ನೀವು ಕೆಟ್ಟ ದಾರಿ ಹಿಡಿಯದೇ, ಸಮಾಜದಲ್ಲಿ ಗೌರವಯುತವಾಗಿ, ಸ್ವಾಭಿಮಾನದ ಬದುಕು, ಬದುಕಲು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿ ದ್ದೀರಿ. ಈ ದೇಶಕ್ಕೆ ನೀವೆಲ್ಲರೂ ಆಸ್ತಿ. ಮಾಲ್ಗಳಲ್ಲಿ, ಎಸಿ ಮಳಿಗೆಗಳಲ್ಲಿ ಖರೀದಿ ಮಾಡುವುದು ಒಂದು ಕಡೆಯಾದರೆ, ಅದೇ ಗುಣಮಟ್ಟದ ಆಹಾರ, ವಸ್ತುಗಳನ್ನು ಅವರಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿಕೊಂಡು ಬರುತ್ತಿದ್ದೀರಿ ಎಂದರು.
ಇದನ್ನೂ ಓದಿ: Chikkanayakanahalli Accident: ಮದ್ಯ ಸಾಗಿಸುತ್ತಿದ್ದ ವಾಹನ ಪಲ್ಟಿ
ಕಾಂಗ್ರೆಸ್ ಪಕ್ಷ ಈ ವರ್ಗದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ಬಂದಿದೆ. ಕಾಂಗ್ರೆಸ್ ಪಕ್ಷ ಸದಾ ನೊಂದು ಬೆಂದ ಬಡವರ ಪರವಾದ ಪಕ್ಷ. ನಿಮ್ಮ ಬದುಕನ್ನು ದಿನ ಬಡ್ಡಿಯಿಂದ ತಪ್ಪಿಸಬೇಕು. ಇಂದಿರಾಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ ಮಾಡಿ, ನಿಮಗೆ ಬಂಡವಾಳಶಾಹಿಗಳ ಕಾಟ ತಪ್ಪಿಸಿದರು. ಆ ಮೂಲಕ ಜನರಿಗೆ ಸುಲಭ ಸಾಲ ಸೌಲಭ್ಯ ಕಲ್ಪಿಸುವಂತೆ ಮಾಡಿದರು. ಈಗ ಬ್ಯಾಂಕ್ಗಳು 10-15 ಸಾವಿರದಷ್ಟು ಸಣ್ಣ ಸಾಲ ನೀಡುವ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದರು.
ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಯಾಗುವವರೆಗೆ ಗ್ರಾಮ ಪಂಚಾಯತಿಯಿಂದ ಯಾವುದೇ ತೊಂದರೆ ನೀಡ ಬೇಡಿ ಎಂದು ಪಂಚಾಯತಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡಿದರೆ ಮಾತ್ರ ಜೀವನದ ಬಂಡಿ ಸಾಗಲು ಸಾಧ್ಯ. ಇಲ್ಲಿ ವ್ಯಾಪಾರಕ್ಕೆ ಬಂಡವಾಳ ಹಾಕಲು ಬ್ಯಾಂಕ್ , ಫೈನಾನ್ಸ್, ಬಡ್ಡಿ ವ್ಯಾಪಾರಿಗಳಿಂದ ಸಾಲ -ಸೋಲ ಮಾಡಿರುತ್ತಾರೆ ಅದರಲ್ಲೆ ಅವರ ಮನೆ ಬಾಡಿಗೆ, ಊಟ, ತಿಂಡಿ, ಮಕ್ಕಳ ಫೀಸ್, ಆಸ್ಪತ್ರೆ ಖರ್ಚು, ಇಎಂಐ ಎಲ್ಲ ಸರಿ ತೂಗಿಸ ಬೇಕು ಎಂಬುದನ್ನು ಅರಿತಿದ್ದೇನೆ. ಅವರಿಗೆ ಯಾವ ರೀತಿ ಸಹಾಯ ಮಾಡಬಹುದು ಎಂಬು ದನ್ನು ಮುಂದೆ ನೋಡೋಣಾ ಎಂದು ಹೇಳಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಮುಖಂಡರಾದ ಲಕ್ಷ್ಮೀನಾರಾಯಣ,ರಮೇಶ್ ಬಾಬು, ರಾಜಣ್ಣ, ಅರವಿಂದ್, ಕುಪೇಂದ್ರ, ಅಲ್ಲು ಅನಿಲ್, ವಿನಯ್ ಬಂಗಾರಿ, ಗ್ರಾಮ ಪಂಚಾಯತಿ ಅಧಿಕಾರಿಗಳು, ಮತ್ತಿತರರು ಇದ್ದರು.