Siddaganga Mutt: ಸಿದ್ಧಗಂಗಾ ಮಠದಲ್ಲಿ ಬೃಹತ್ ಹೆಬ್ಬಾವು ಪತ್ತೆ!
Siddaganga Mutt: ತುಮಕೂರು ನಗರದ ಸಿದ್ಧಗಂಗಾ ಮಠದಲ್ಲಿ ಬೃಹತ್ ಹೆಬ್ಬಾವು ಕಾಣಿಸಿಕೊಂಡು ಆತಂಕ ಮೂಡಿಸಿದೆ. ಮಠದ ಸಿಬ್ಬಂದಿ ಉರಗ ತಜ್ಞರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಬಂದು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.


ತುಮಕೂರು: ನಗರದ ಸಿದ್ಧಗಂಗಾ ಮಠದಲ್ಲಿ 8 ಅಡಿ ಉದ್ದದ ಬೃಹತ್ ಹೆಬ್ಬಾವು ಕಾಣಿಸಿಕೊಂಡು ಮಕ್ಕಳಲ್ಲಿ ಆತಂಕ ಮೂಡಿಸಿದ ಘಟನೆ (Siddaganga Mutt) ನಡೆದಿದೆ. ತಕ್ಷಣ ಮಠದ ಸಿಬ್ಬಂದಿ ಉರಗ ತಜ್ಞ ಕಾರ್ತಿಕ್ ಮತ್ತು ಸೂರ್ಯ ಅವರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಬಂದು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಸುಮಾರು ಎಂಟು ಅಡಿ ಉದ್ದದ ಹೆಬ್ಬಾವು, ಮಠದ ಆವರಣದಲ್ಲಿರುವ ದೇವಸ್ಥಾನಕ್ಕೆ ಕಿಟಕಿ ಮೂಲಕ ಪ್ರವೇಶಿಸಿದೆ. ಮಠದ ಸಿಬ್ಬಂದಿ ಇದನ್ನು ಕಂಡು ಕೆಲಕಾಲ ಗಾಬರಿಗೊಂಡಿದ್ದರು. ಉರಗ ತಜ್ಞರು, ಹೆಬ್ಬಾವು ಹಿಡಿದು ಕಾಡಿಗೆ ಬಿಟ್ಟಾಗ ನಿಟ್ಟಿಸಿರು ಬಿಟ್ಟರು.

ಈ ವೇಳೆ ಮಾತನಾಡಿದ ಉರಗ ತಜ್ಞ ಕಾರ್ತಿಕ್, ಹೆಬ್ಬಾವು ಬೇಟೆಗೆ ಸಿಕ್ಕ ಪ್ರಾಣಿಯನ್ನು ಒಂದೇ ಬಾರಿಗೆ ನುಂಗುವುದಿಲ್ಲ. ಮೊದಲು ತನ್ನ ಬಲಿಷ್ಠವಾದ ದೇಹದಿಂದ ಪ್ರಾಣಿಯನ್ನು ಸುತ್ತಿ, ಉಸಿರುಗಟ್ಟಿಸಿ ಕೊಂದ ಬಳಿಕ ತಿನ್ನುತ್ತದೆ. ಈ ಹಾವಿನಲ್ಲಿ ವಿಷವಿಲ್ಲ. ಆದರೆ ಇದರ ಹಲ್ಲುಗಳು ಬಹಳ ಬಲಿಷ್ಠವಾಗಿದ್ದು, ಒಂದು ಬಾರಿ ಕಚ್ಚಿದರೆ ಮಾಂಸ ಸಮೇತ ಬರುತ್ತದೆ ಎಂದು ತಿಳಿಸಿದ್ದಾರೆ.
ವೀರಶೈವ, ಲಿಂಗಾಯಿತರಲ್ಲಿ ಸಂಪ್ರದಾಯ ಕಡಿಮೆಯಾಗುತ್ತಿದೆ

ತುಮಕೂರು: ವೀರಶೈವ, ಲಿಂಗಾಯಿತರಲ್ಲಿ ಐಕ್ಯತೆ ಮತ್ತು ಅಭಿವೃದ್ಧಿ ಕಾಣುವುದೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಮುಖ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಶ್ರೀಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ವಸತಿ ವತಿಯಿಂದ ಆಯೋಜಿಸದಸ ಸೇವಾಧೀಕ್ಷೆ,ಸಾಧಕರಿಗೆ ಸನ್ಮಾನ ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದರು.
ವೀರಶೈವ, ಲಿಂಗಾಯತ ಧರ್ಮದ ಆಚರಣೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಅಂಗೈಯಲ್ಲಿ ಲಿಂಗಧರಿಸಿ ನಿತ್ಯವೂ ಪೂಜೆ ಸಲ್ಲಿಸುವ ಸಂಪ್ರದಾಯ ಕಡಿಮೆಯಾಗಿದೆ. ಇನ್ನೊಂದು ಧರ್ಮದ ಅನುಸರಣೆ ಮಾಡುವುದು ಸರಿಯಲ್ಲ. ಸತ್ಯ ನಾರಾಯಣ ಪೂಜೆಗೂ ಲಿಂಗಾಯಿತ, ವೀರಶೈವರಿಗೂ ಸಂಬಂಧವೇನು?. ಪರಧರ್ಮ ಸಹಿಷ್ಣತೆ ಇರಲಿ, ಆದರೆ ನಮ್ಮ ಧರ್ಮದ ಆಚರಣೆ ಇರಲಿ, ಯಾರು ಲಿಂಗಧಾರಣೆ ಮಾಡಿಕೊಂಡಿಲ್ಲವೋ, ಅವರಿಗೆ ಸೇವಾದೀಕ್ಷೆ ಮಾಡುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲಿ ಒಗ್ಗಟ್ಟು ಕೇವಲ ರಾಜಕೀಯ ಅಧಿಕಾರಕ್ಕಾಗಿ ಮಾತ್ರ ಆದರೆ ಸಾಲದು, ಎಲ್ಲಾ ರಂಗದಲ್ಲಿಯೂ ವೀರಶೈವ, ಲಿಂಗಾಯಿತರು ಮುಂದೆಬರುವಂತೆ ಆಗಬೇಕು ಎಂದರು.
ಮಹಾಸಭಾದ ರಾಜ್ಯಘಟಕದ ಅಧ್ಯಕ್ಷ ಶಂಕರಬಿದರಿ ಮಾತನಾಡಿ, ಭಾರತದಲ್ಲಿ ವೀರಶೈವ,ಲಿಂಗಾಯಿತರು ಬಹುಸಂಖ್ಯೆಯಲ್ಲಿದ್ದಾರೆ. ಆದರೆ ಒಗ್ಗಟ್ಟಿನ ಕೊರತೆಯಿಂದ ಎಲ್ಲಾ ವರ್ಗಗಳಲ್ಲಿಯೂ ಹಿಂದುಳಿದಿದ್ದೇವೆ. ಭಾರತದ ಒಟ್ಟಾರೆ ಜನಸಂಖ್ಯೆಯ ಶೇ.3 ರಷ್ಟಿರುವ ಬ್ರಾಹ್ಮಣರೇ ಇಡೀ ದೇಶವನ್ನು ಲೀಡ್ ಮಾಡುತ್ತಿದ್ದಾರೆ. ಎಲ್ಲಾ ರಂಗದಲ್ಲಿಯೂ ಬ್ರಾಹ್ಮಣ ಸಮುದಾಯ ರಾಜಕೀಯವಾಗಿ, ಅರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸಿಂಹಪಾಲು ಪಡೆದಿದೆ.ಕೇಂದ್ರದ ಮಂತ್ರಿ ಮಂಡಲದಲ್ಲಿ 18 ಜನ ಕ್ಯಾಬಿನೆಟ್ ದರ್ಜೆ ಸಚಿವರಿದ್ದಾರೆ.ನಮ್ಮವರಿಗೆ ಇದುವರೆಗೂ ಕ್ಯಾಬಿನೆಟ್ ಸ್ಥಾನಮಾನ ಸಿಕ್ಕಿಲ್ಲ. ಐಎಎಸ್, ಐಪಿಎಸ್, ರಾಜ್ಯಪಾಲರ ಹುದ್ದೆಗಳಲ್ಲಿ ಆ ಸಮುದಾಯವೇ ಹೆಚ್ಚಿದೆ.ಇದಕ್ಕೆ ಸಂಘಟನೆಯ ಕೊರತೆಯೇ ಕಾರಣ. ವೀರಶೈವ,ಲಿಂಗಾಯಿತ ಎಂಬ ನಮ್ಮಲ್ಲಿನ ಒಡಕು ಹೋಗಬೇಕು. ಲಿಂಗೈಕ್ಯ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳು ಹೇಳಿದಂತೆ ವೀರಶೈವ, ಲಿಂಗಾಯಿತ ಬೇರೆ ಬೇರೆಯಲ್ಲ ಎಂಬ ಕಿವಿ ಮಾತು ಹೇಳಿದರು.
ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಹನ್ನೆರಡೆನೇ ಶತಮಾನದ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ಯಾವುದಾದರೂ ಸಮುದಾಯಗಳಿದ್ದರೆ ಅದು ವೀರಶೈವ ಮತ್ತು ಲಿಂಗಾಯಿತ ಮಾತ್ರ. ನಮ್ಮಲ್ಲಿಯೇ ಸಣ್ಣ ಸಣ್ಣ ಸಂಘಟನೆಗಳು ಹುಟ್ಟಿಕೊಂಡು ಶಕ್ತಿ ಕುಂದಿದೆ. ಹಾಗಾಗಿ ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾದ ಹೆಸರಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಜಿಲ್ಲಾಧ್ಯಕ್ಷ ಡಾ.ಪರಮೇಶ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ವೀರಶೈವ,ಲಿಂಗಾಯಿತರು ಸುಮಾರು 7-8 ಲಕ್ಷ ಜನಸಂಖ್ಯೆ ಇದೆ. ಆದರೆ ಮಹಾಸಭಾದಲ್ಲಿ ಸದಸ್ಯರಾಗಿರುವುದು ಕೇವಲ 2 ಸಾವಿರ ಜನ ಮಾತ್ರ. ಮಹಾಸಭಾದ ತೀರ್ಮಾನದಂತೆ ಮುಂದಿನ ಒಂದು ವರ್ಷದಲ್ಲಿ ರಾಜ್ಯದ ಪ್ರತಿ ಮನೆಯಲ್ಲಿಯೂ ಓರ್ವ ಸದಸ್ಯನನ್ನು ನೊಂದಾಯಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಈ ಕೆಲಸವನ್ನು ನಾನು ಮತ್ತು ನನ್ನ ತಂಡ ಶಿರಾಸಹ ವಹಿಸಿ ಪಾಲಿಸುತ್ತೇವೆ.ಸಮುದಾಯದ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಒಗ್ಗಟ್ಟು ಮುಖ್ಯವಾಗಿದೆ ಎಂದರು.
ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಿರೇಮಠದ ಡಾ.ಶ್ರೀ ಶಿವಾನಂದ ಶಿವಾಚಾರ್ಯಸ್ವಾಮೀಜಿ, ಡಾ.ಶಿವರುದ್ರಶಿವಾಚಾರ್ಯ ಸ್ವಾಮೀಜಿ, ಬೆಟ್ಟದಳ್ಳಿ ಶ್ರೀಚಂದ್ರಶೇಖರ ಸ್ವಾಮೀಜಿ, ಶ್ರೀರೇವಣಸಿದ್ದೇಶ್ವರ ಶಿವಾಚಾರ್ಯಸ್ವಾಮೀಜಿ ವಹಿಸಿದ್ದರು.
ಈ ಸುದ್ದಿಯನ್ನೂ ಓದಿ | Tumakuru railway station: ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರು ಅಂತಿಮ
ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಬಿ.ಎಸ್.ಸಚ್ಚಿದಾನಂದಮೂರ್ತಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಸ್.ಕೆ.ರಾಜಶೇಖರ್, ಮಹಿಳಾ ವಿಭಾಗದ ಮುಖ್ಯಸ್ಥರಾದ ಮುಕ್ತಾಂಭ, ಜಿಲ್ಲಾ ಪದಾಧಿಕಾರಿಗಳಾದ ಡಾ.ಎಸ್.ಪರಮೇಶ್, ಎಸ್.ಡಿ.ದಿಲೀಪ್‌ಕುಮಾರ್, ಎಲ್.ಪಿ.ರವಿಶಂರ್, ಗೀತಾ ರುದ್ರೇಶ್, ಶಶಿ ಹುಲಿಕುಂಟೆ ಮಠ್, ವಿಶ್ವನಾಥ್ ಅಪ್ಪಾಜಪ್ಪ, ಆರ್.ಬಿ.ಜಯಣ್ಣ, ಟಿ.ಎಸ್.ರುದ್ರಪ್ರಸಾದ್, ಟಿ.ಎಂ.ವಿಜಯಕುಮಾರ್, ಟಿ.ಎಂ.ವಿಜಯಕುಮಾರ್ ತಳವಾರನಹಳ್ಳಿ, ಬಿಂದು, ಯುವ ಘಟಕದ ಅಧ್ಯಕ್ಷ ಡಾ.ಕೆ.ಎಲ್.ದರ್ಶನ್, ಮಹಿಳಾ ಘಟಕದ ಅಧ್ಯಕ್ಷೆ ಮಮತ ದಿವಾಕರ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.