Happy Birthday Hitman: ಯಾರಿಂದಲೂ ಮುರಿಯಲಾಗದ ರೋಹಿತ್ ಶರ್ಮಾರ ಈ 5 ದಾಖಲೆಗಳು!
Happy Birthday Rohit Sharma: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬುಧವಾರ ತಮ್ಮ 39ನೇ ವರ್ಷದ ಜನುಮ ದಿನವನ್ನು ಆಚರಿಸಿಕೊಂಡಿದ್ದಾರೆ. ಸ್ಟಾರ್ ಬ್ಯಾಟ್ಸ್ಮನ್ ಹುಟ್ಟು ಹಬ್ಬಕ್ಕೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಕೂಡ ಶುಭ ಕೋರಿದ್ದಾರೆ. ಸದ್ಯ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುತ್ತಿದ್ದಾರೆ.



ರೋಹಿತ್ ಶರ್ಮಾರ ಮುರಿಯದಲಾಗದ 5 ದಾಖಲೆಗಳು
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ಗಳ ಪೈಕಿ ಒಬ್ಬರಾಗಿದ್ದಾರೆ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತ ತಂಡ, 2024ರ ಐಸಿಸಿ ಟಿ20 ವಿಶ್ವಕಪ್ ಹಾಗೂ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಜನುಮ ದಿನದ ನಿಮಿತ್ತ ರೋಹಿತ್ ಶರ್ಮಾ ಅವರ ಪ್ರಮುಖ 5 ದಾಖಲೆಗಳನ್ನು ಇಲ್ಲಿ ವಿವರಿಸಲಾಗಿದೆ.

ಒಂದೇ ಒಡಿಐ ಇನಿಂಗ್ಸ್ನಲ್ಲಿ 264 ರನ್
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಹಲವು ದೊಡ್ಡ ದಾಖಲೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಅತ್ಯಂತ ವಿಶೇಷವಾದದ್ದು ಅವರ ಅತ್ಯಧಿಕ ಸ್ಕೋರ್. 2010ರ ಫೆಬ್ರವರಿ ಸಚಿನ್ ತೆಂಡೂಲ್ಕರ್ ಏಕದಿನ ಪಂದ್ಯದಲ್ಲಿ ದ್ವಿಶತಕ ಗಳಿಸುವ ದಾಖಲೆಯನ್ನು ಬರೆದಿದ್ದರು. ಇದಾದ ನಂತರ ಅನೇಕ ಬ್ಯಾಟ್ಸ್ಮನ್ಗಳು ದ್ವಿಶತಕ ಗಳಿಸಿದರು. ನಂತರ ರೋಹಿತ್ ಶರ್ಮಾ 2014ರ ನವೆಂಬರ್ನಲ್ಲಿ 173 ಎಸೆತಗಳಲ್ಲಿ 264 ರನ್ ಗಳಿಸುವ ಎಲ್ಲರ ದಾಖಲೆಯನ್ನು ಮುರಿದಿದ್ದರು. ಅಂದಿನಿಂದ, ಯಾರೂ ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

ಮೂರು ದ್ವಿಶತಕಗಳ ಸಾಧನೆ
ರೋಹಿತ್ ಶರ್ಮಾ ಏಕದಿನ ಪಂದ್ಯದಲ್ಲಿ 264 ರನ್ ಗಳಿಸಿದ್ದಾರೆ, ಅದು ದೊಡ್ಡ ವಿಷಯ. ಆದರೆ ಅವರು ತಮ್ಮಒಡಿಐ ವೃತ್ತಿಜೀವನದಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ್ದಾರೆ. 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲನೇ ದ್ವಿಶತಕ, ಇನ್ನುಳಿದ ಎರಡು ದ್ವಿಶತಕಗಳನ್ನು ಅವರು ಶ್ರೀಲಂಕಾ ವಿರುದ್ಧ ಸಿಡಿಸಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 5 ಶತಕಗಳು
2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ನಲ್ಲಿ ಸೋಲು ಅನುಭವಿಸಿತ್ತು. ಆದರೆ, ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ ತಮ್ಮ ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನವನ್ನು ತೋರಿದ್ದರು. ಈ ಟೂರ್ನಿಯಲ್ಲಿ ಅವರು ಒಟ್ಟು 5 ಶತಕಗಳನ್ನು ಬಾರಿಸಿದ್ದರು. ಆ ಮೂಲಕ ಏಕೈಕ ಒಡಿಐ ವಿಶ್ವಕಪ್ನಲ್ಲಿ 5 ಶತಕಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.

ಅತಿ ಹೆಚ್ಚು ಸಿಕ್ಸರ್ಗಳ ದಾಖಲೆ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದಾಖಲೆ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದೆ. 2023ರ ಏಕದಿನ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ರೋಹಿತ್ ಈ ದಾಖಲೆಯನ್ನು ಬರೆದಿದ್ದರು. ರೋಹಿತ್ ತಮ್ಮ ವೃತ್ತಿಜೀವನದಲ್ಲಿ 637 ಸಿಕ್ಸರ್ಗಳನ್ನು ಬಾರಿಸಿದ್ದರೆ, ಗೇಲ್ 553 ಸಿಕ್ಸರ್ಗಳನ್ನು ಬಾರಿಸಿದ್ದಾರೆ.

ರೋಹಿತ್ ಹೆಸರಿನಲ್ಲಿ ಮತ್ತೊಂದು ದಾಖಲೆ
ರೋಹಿತ್ ಶರ್ಮಾ ಮತ್ತು ಶಕಿಬ್ ಅಲ್ ಹಸನ್ ಟಿ20 ವಿಶ್ವಕಪ್ನ ಎಲ್ಲಾ ಆವೃತ್ತಿಗಳನ್ನು ಆಡಿದ ಇಬ್ಬರು ಆಟಗಾರರು. ರೋಹಿತ್ ಭಾರತ ಪರ 159 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ. ಐರ್ಲೆಂಡ್ನ ಪಾಲ್ ಸ್ಟಿರ್ಲಿಂಗ್ 145 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರು ರೋಹಿತ್ ದಾಖಲೆಯನ್ನು ಮುರಿಯಬಲ್ಲರು.