Mohammed Shami: ಮೊಹಮ್ಮದ್ ಶಮಿಗೆ ಜೀವ ಬೆದರಿಕೆ ಜತೆ 1 ಕೋಟಿ ಬೇಡಿಕೆ
ಸದ್ಯ ಶಮಿ ಐಪಿಎಲ್ 18ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಶಮಿ ಪ್ರದರ್ಶನ ಅಷ್ಟಾಗಿ ಗಮನಸೆಳೆದಿಲ್ಲ. ಆಡಿದ ಎಲ್ಲ ಪಂದ್ಯಗಳಲ್ಲಿಯೂ ದುಬಾರಿಯಾಗುತ್ತಿದ್ದು ಅನಗತ್ಯ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಳ್ಳುತ್ತಿದ್ದಾರೆ.


ನವದೆಹಲಿ: ಇತ್ತೀಚೆಗಷ್ಟೇ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಇ–ಮೇಲ್ ಮೂಲಕ ಜೀವ ಬೆದರಿಕೆ ಸಂದೇಶ ಬಂದಿತ್ತು. ಇದೀಗ ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಅವರಿಗೂ ಇದೇ ರೀತಿಯ ಜೀವ ಬೆದರಿಕೆ ಬಂದಿದ್ದು, 1 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಜಪೂತ್ ಸಿಂಧರ್ ಎನ್ನುವ ಹೆಸರಿನ ವ್ಯಕ್ತಿಯಿಂದ ಇ–ಮೇಲ್ ಬಂದಿದ್ದು, ಮೊಹಮ್ಮದ್ ಶಮಿಯನ್ನು ಕೊಲೆ ಮಾಡುವುದಾಗಿಯೂ, 1 ಕೋಟಿ ಹಣ ನೀಡಬೇಕೆಂದೂ ಸಂದೇಶ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೆದರಿಕೆ ಸಂದೇಶದ ಕುರಿತು ಸ್ಥಳೀಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದು, ಆರೋಪಿಯ ಪತ್ತೆ ಕಾರ್ಯ ಆರಂಭವಾಗಿದೆ ಎಂದು ಅಮ್ರೋಹಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಸದ್ಯ ಶಮಿ ಐಪಿಎಲ್ 18ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಶಮಿ ಪ್ರದರ್ಶನ ಅಷ್ಟಾಗಿ ಗಮನಸೆಳೆದಿಲ್ಲ. ಆಡಿದ ಎಲ್ಲ ಪಂದ್ಯಗಳಲ್ಲಿಯೂ ದುಬಾರಿಯಾಗುತ್ತಿದ್ದು ಅನಗತ್ಯ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಳ್ಳುತ್ತಿದ್ದಾರೆ.
ಕಳೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶಮಿ ನಾಲ್ಕು ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದೆ ಬರೋಬ್ಬರಿ 75 ರನ್‌ಗಳನ್ನು ಬಿಟ್ಟುಕೊಟ್ಟು ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಬೌಲಿಂಗ್ ನಡೆಸಿದ ಭಾರತೀಯ ಬೌಲರ್ ಎಂಬ ಅನಗತ್ಯ ದಾಖಲೆಯನ್ನು ಬರೆದಿದ್ದರು. ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಮೋಹಿತ್ ಶರ್ಮ(73 ರನ್) ಹೆಸರಿನಲ್ಲಿತ್ತು.
ಗಂಭೀರ್ ಅವರಿಗೆ ಇ–ಮೇಲ್ ಮೂಲಕ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ದೆಹಲಿ ಪೊಲೀಸರು 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಆದರೆ ಬಂಧಿತನಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ನಡೆದ ಬೆನ್ನಲ್ಲೇ ಗಂಭೀರ್‌ಗೆ ಹತ್ಯೆಗೈಯುವುದಾಗಿ ಐಸಿಸ್ ಕಾಶ್ಮೀರ ಎಂದು ಹೇಳಿಕೊಂಡು ಇ-ಮೇಲ್ ಸಂದೇಶದ ಮೂಲಕ ಕೊಲೆ ಬೆದರಿಕೆ ಬಂದಿತ್ತು. ಈ ಕುರಿತು ಗಂಭೀರ್ ರಾಜಿಂದರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.