Murder Case: ಮದುವೆ ಮನೆಯಲ್ಲಿ ತಂದೂರಿ ರೊಟ್ಟಿಗಾಗಿ ಜಗಳ; ಇಬ್ಬರ ಸಾವು!
ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರವಿಕುಮಾರ್ ಅಲಿಯಾಸ್ ಕಲ್ಲು ಎಂಬ 18 ವರ್ಷದ ಯುವಕ ಮತ್ತು 17 ವರ್ಷದ ಯುವಕ ಆಶಿಶ್ ನಡುವೆ ತಂದೂರಿ ರೊಟ್ಟಿ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಇಬ್ಬರೂ ಪರಸ್ಪರ ಕಬ್ಬಿಣದ ರಾಡ್‍ಗಳಿಂದ ಹೊಡೆದಾಡಿದ್ದಾರೆ. ಪರಿಣಾಮವಾಗಿ ಇಬ್ಬರೂ ಸಾವನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ.

ಲಖನೌ: ಮದುವೆಯ ಸಮಾರಂಭದಲ್ಲಿ ಅನೇಕ ಕಾರಣಗಳಿಂದ ಜಗಳ ನಡೆದು ಮದುವೆ ಮನೆ ರಣರಂಗವಾದ ಪ್ರಕರಣಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಮದುವೆ ಸಮಾರಂಭದಲ್ಲಿ ನಡೆದ ಕ್ಷುಲಕ ಕಾರಣಕ್ಕೆ ಇಬ್ಬರು ಹದಿಹರೆಯದವರು ತಮ್ಮ ತಮ್ಮೊಳಗೆ ಕಿತ್ತಾಡಿಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಅಮೇಥಿಯಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದ್ದು, ಹಳ್ಳಿಯೊಂದರಲ್ಲಿ ನಡೆದ ಮದುವೆಯಲ್ಲಿ ಇಬ್ಬರು ಅತಿಥಿಗಳಾದ ರವಿಕುಮಾರ್ ಅಲಿಯಾಸ್ ಕಲ್ಲು ಎಂಬ 18 ವರ್ಷದ ಯುವಕ ಮತ್ತು 17 ವರ್ಷದ ಆಶಿಶ್ ನಡುವೆ ತಂದೂರಿ ರೊಟ್ಟಿ ಯಾರು ಮೊದಲು ತೆಗೆದುಕೊಂಡಿದ್ದಾರೆ ಎಂಬ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದ್ದು, ಇಬ್ಬರೂ ಪರಸ್ಪರ ಕಬ್ಬಿಣದ ರಾಡ್‍ಗಳಿಂದ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಇಬ್ಬರಿಗೂ ತೀವ್ರ ಗಾಯಗಳಾಗಿವೆ. ಅಪ್ರಾಪ್ತ ಬಾಲಕ ಸ್ಥಳದಲ್ಲೇ ಮೃತಪಟ್ಟರೆ, ರವಿಯನ್ನು ಚಿಕಿತ್ಸೆಗಾಗಿ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಮೃತರ ಕುಟುಂಬದವರ ದೂರಿನ ಆಧಾರದ ಮೇಲೆ 13 ಜನರ ವಿರುದ್ಧ ಕೊಲೆ ಮತ್ತು ಗಲಭೆ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಶವಗಳನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಿರಿಗಂಜ್ ವೃತ್ತದ ಮುಖ್ಯ ಅಧಿಕಾರಿ (ಸಿಒ) ಅಖಿಲೇಶ್ ವರ್ಮಾ ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಆಶಿಶ್ ಮತ್ತು ರವಿ ಸೋದರ ಸಂಬಂಧಿಗಳಾಗಿದ್ದು, ವಾಗ್ವಾದದ ನಂತರ, ಇಬ್ಬರು ತಮ್ಮ ಇತರ ಸ್ನೇಹಿತರೊಂದಿಗೆ ಮದುವೆಯ ಸ್ಥಳದಿಂದ ಹೊರಟು ಹೋಗಿದ್ದಾರೆ. ಆದರೆ ರವಿ ಮತ್ತು ಅವನ ಸ್ನೇಹಿತರು ಕಬ್ಬಿಣದ ರಾಡ್‍ಳೊಂದಿಗೆ ಆಶಿಶ್ ಹಾಗೂ ಆತನ ಸ್ನೇಹಿತರನ್ನು ಹಿಂಬಾಲಿಸಿದ್ದಾರೆ. ಕೊನೆಗೆ ರವಿ ಹಾಗೂ ಆಶಿಶ್ ಕಬ್ಬಿಣದ ರಾಡ್‌ಗಳಿಂದ ಹೊಡೆದಾಡಿಕೊಂಡು ಸಾವನ್ನಪ್ಪಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಶಾಲೆಯಲ್ಲಿ ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಪ್ರಿನ್ಸಿಪಾಲ್-ಲೈಬ್ರೆರಿಯನ್; ಶಾಕಿಂಗ್ ವಿಡಿಯೊ ಇಲ್ಲಿದೆ
ಇತ್ತೀಚೆಗಷ್ಟೇ ಮಹಾರಾಷ್ಟ್ರದ ಪಿಂಪಲ್‍ಗಾಂವ್‍ನಲ್ಲಿ ಇದೇ ರೀತಿಯ ಭಯಾನಕ ಘಟನೆಯೊಂದು ನಡೆದಿತ್ತು. ಯವತ್ಮಾಲ್ ಪಟ್ಟಣದ ರಸ್ತೆಯ ಮಧ್ಯದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬ ತನ್ನ ಹಿರಿಯ ಸಹೋದರನನ್ನು ಕಬ್ಬಿಣದ ರಾಡ್‍ನಿಂದ ಹೊಡೆದು ಕ್ರೂರವಾಗಿ ಕೊಂದಿದ್ದ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವೈರಲ್ ಆದ ವಿಡಿಯೊದಲ್ಲಿ ಆರೋಪಿಯು ಕಬ್ಬಿಣದ ರಾಡ್ ಹಿಡಿದು ತನ್ನ ಸಹೋದರನನ್ನು ಹೊಡೆಯುವುದು ರೆಕಾರ್ಡ್ ಆಗಿದೆ. ಆದರೆ ರಸ್ತೆಯಲ್ಲಿ ಇಂತಹ ಘೋರ ಕೃತ್ಯ ನಡೆಯುತ್ತಿದ್ದರೂ ದಾರಿಹೋಕರು ಯಾರೂ ಕೂಡ ಈ ಕೃತ್ಯವನ್ನು ತಡೆಯಲು ಮುಂದೆ ಬರಲಿಲ್ಲ ಎನ್ನುವುದು ವಿಪರ್ಯಾಸ.