Samantha Ruth Prabhu: ಸಮಂತಾ ಸಿನಿ ಪಯಣಕ್ಕೆ 15 ವರ್ಷ; ಸ್ಯಾಮ್ ನಟನೆಯ ಟಾಪ್ 5 ಚಿತ್ರಗಳ ಪಟ್ಟಿ ಇಲ್ಲಿದೆ
2010ರಲ್ಲಿ ತೆರೆಕಂಡ ತೆಲುಗಿನ ʼಏ ಮಾಯ ಚೇಸಾವೆʼ (Ye Maaya Cheesave) ಚಿತ್ರದ ಮೂಲ ಬಣ್ಣದ ಲೋಕಕ್ಕೆ ಕಾಲಿಟ್ಟ ಸಮಂತಾ ರುತ್ ಪ್ರಭು ಇದೀಗ ಬಹುಭಾಷಾ ನಟಿಯಾಗಿ ಗಮನ ಸೆಳೆದಿದ್ದಾರೆ. ಇದೀಗ ಅವರು ಚಿತ್ರರಂಗದಲ್ಲಿ ಯಶಸ್ವಿ 15 ವರ್ಷ ಪೂರೈಸಿದ್ದಾರೆ. ಸಿನಿ ಜೀವನದುದ್ದಕ್ಕೂ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡುವ ಅವರು ಗ್ಲ್ಯಾಮರ್ ಜತೆಗೆ ಅಭಿನಯಕ್ಕೆ ಒತ್ತು ಇರುವ ಪಾತ್ರದಲ್ಲಿಯೂ ನಟಿಸಿದ್ದಾರೆ. ಸಿನಿರಂಗದಲ್ಲಿ 15 ವರ್ಷ ಪೂರೈಸಿ ಹೊಸ ಮೈಲಿಗಲ್ಲು ನೆಟ್ಟಿರುವ ಅವರಿಗೆ ಇತ್ತೀಚೆಗೆ ಝೀ ತೆಲುಗು ಅವಾರ್ಡ್ (Zee Telugu Awards) ನೀಡಲಾಯಿತು.

ಸಮಂತಾ ರುತ್ ಪ್ರಭು (ಇನ್ಸ್ಟಾಗ್ರಾಮ್ ಚಿತ್ರ).


ʼಏ ಮಾಯ ಚೇಸಾವೆʼ
ಪ್ರತಿ ಮೊದಲ ಅನುಭವ ಎಂದಿಗೂ ವಿಶೇಷ ಎನ್ನುವ ಮಾತಿದೆ. ಇದು ಸಮಂತಾ ವಿಷಯದಲ್ಲಿ ನಿಜವಾಗಿದೆ. 2010ರಲ್ಲಿ ತೆರೆಕಂಡ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ʼಏ ಮಾಯ ಚೇಸಾವೆʼ ಸಮಂತಾ ಅಭಿನಯದ ಮೊದಲ ಚಿತ್ರ. ಮಾಜಿ ಪತಿ ನಾಗ ಚೈತನ್ಯ ಜತೆ ತೆರೆ ಹಂಚಿಕೊಳ್ಳುವ ಮೂಲಕ ಅವರು ಸಿನಿ ಜರ್ನಿ ಆರಂಭಿಸಿದರು. ವಿಶೇಷ ಎಂದರೆ ಮೊದಲ ಚಿತ್ರದಲ್ಲೇ ವೀಕ್ಷಕರ ಜತೆಗೆ ವಿಮರ್ಷಕರ ಗಮನ ಸೆಳೆದ ಸಮಂತಾ ನಂದಿ ಅವಾರ್ಡ್ ಕೂಡ ಮುಡಿಗೇರಿಸಿಕೊಂಡರು. ಈ ಚಿತ್ರದಲ್ಲಿ ಸಮಂತಾ ಜೆಸ್ಸಿ ಪಾತ್ರದಲ್ಲಿ ಕಾಣಿಸಿಕೊಂಡರು. ಕೇರಳ ಮೂಲದ ಕ್ರಿಶ್ಚಿಯನ್ ಯುವತಿಯಾಗಿ ಮೋಡಿ ಮಾಡಿದರು. ಕಾರ್ತಿಕ್ ಪಾತ್ರದಲ್ಲಿ ನಾಗ ಚೈತನ್ಯ ಅಭಿನಯಿಸಿದರು.

ʼಈಗʼ
ಸಮಂತಾ ಸಿನಿ ಜೀವನಕ್ಕೆ ತಿರುವು ಕೊಟ್ಟ ಚಿತ್ರ 2012ರಲ್ಲಿ ತೆರೆಕಂಡ ʼಈಗʼ (Eega). ಟಾಲಿವುಡ್ನ ಯಶಸ್ವಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ ಸಿನಿಮಾ ಇದಾಗಿದ್ದು, ಸ್ಯಾಂಡಲ್ವುಡ್ ನಟ ಸುದೀಪ್ ಮತ್ತು ನಾನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಒಬ್ಬ ಸಾಮಾನ್ಯ ಯುವಕ (ನಾನಿ) ಶ್ರೀಮಂತ ಉದ್ಯಮಿಯಿಂದ (ಸುದೀಪ್) ಕೊಲೆಯಾಗಿ ನೊಣದ ರೂಪದಲ್ಲಿ ಪ್ರತೀಕಾರ ತೆಗೆದುಕೊಳ್ಳುವ ಕಥೆ ಇದರಲ್ಲಿದೆ. ನಾನಿಯ ಪ್ರೇಯಸಿ ಪಾತ್ರದಲ್ಲಿ ಸಮಂತಾ ಅಭಿನಯಿಸಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಎನಿಸಿಕೊಂಡಿದೆ. ತೆಲುಗು ಜತೆಗೆ ತಮಿಳಿನಲ್ಲೂ ಈ ಸಿನಿಮಾ ತೆರೆಕಂಡಿದೆ.

ʼಮಹಾನಟಿʼ
ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಟಾಲಿವುಡ್ ಚಿತ್ರ ʼಮಹಾನಟಿʼ. 2018ರಲ್ಲಿ ತೆರೆಕಂಡ ಈ ಚಿತ್ರ ಹಿರಿಯ ನಟಿ ಸಾವಿತ್ರಿ ಜೀವವನ್ನು ಆಧರಿಸಿ ತಯಾರಾಗಿದೆ. ಈ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಪತ್ರಕರ್ತೆಯಾಗಿ ಮಿಂಚಿದ್ದಾರೆ. ದುಲ್ಖರ್ ಸಲ್ಮಾನ್ ಮತ್ತು ವಿಜಯ್ ದೇವರಕೊಂಡ ಮತ್ತಿತರರು ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾವಿದು.

ʼಸೂಪರ್ ಡೀಲಕ್ಸ್ʼ
2019ರಲ್ಲಿ ತೆರೆಕಂಡ ತಿಯಾಗರಾಜನ್ ಕುಮಾರರಾಜ ನಿರ್ದೇಶನದ ತಮಿಳು ಚಿತ್ರ ʼಸೂಪರ್ ಡೀಲಕ್ಸ್ʼ. ಈ ಸಿನಿಮಾದಲ್ಲಿ ಸಮಂತಾ ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡಿದ್ದಾರೆ. ಸಮಾಜದ ನಿರೀಕ್ಷೆಗಳು, ವ್ಯಯಕ್ತಿಕ ಬದಲಾವಣೆಗಳು, ನವಜೋಡಿಯ ಜೀವನ, ತಂದೆ-ಮಗನ ಸಂಬಂಧ ಹೀಗೆ ಹಲವು ಆಯಾಮಗಳನ್ನು ಈ ಚಿತ್ರ ತೆರೆದಿಟ್ಟಿದೆ. ವಿಜಯ್ ಸೇತುಪತಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಈ ಸಿನಿಮಾದಲ್ಲಿ ಸಮಂತಾ ಜತೆ ಫಹಾದ್ ಫಾಸಿಲ್, ರಮ್ಯಾ ಕೃಷ್ಣನ್ ಮತ್ತಿತರರು ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

ʼಓ! ಬೇಬಿʼ
ʼಓ! ಬೇಬಿʼ ಹಾಸ್ಯ ಚಿತ್ರವು 2014ರ ಸೌತ್ ಕೋರಿಯಾ ಮೂಲದ ʼಮಿಸ್ ಗ್ರಾನಿʼಯ ರಿಮೇಕ್. ಕಾರ್ನಿವಲ್ ಪಿಕ್ಚರ್ ಸ್ಟುಡಿಯೋದಲ್ಲಿ ನಡೆದ ಅನಿರೀಕ್ಷಿತ ಘಟನೆಯಿಂದಾಗಿ 70ರ ವಯಸ್ಸಿನ ವೃದ್ಧೆ 24 ವರ್ಷದ ಯುವತಿಯಾಗಿ ಬದಲಾಗುತ್ತಾಳೆ. ಜೀವನದಲ್ಲಿ ದೊರೆತ 2ನೇ ಅವಕಾಶವನ್ನು ಸದುಪಯೋಗಿಸಿಕೊಳ್ಳುವ ಅವಳು ತಾನು ಆಸೆ ಪಟ್ಟಂತೆ ಯಶಸ್ವಿ ಗಾಯಕಿಯಾಗುವ ಕಥೆಯನ್ನು ಇದು ಒಳಗೊಂಡಿದೆ. 2019ರಲ್ಲಿ ರಿಲೀಸ್ ಆದ ಈ ಸಿನಿಮಾವನ್ನು ಬಿ.ವಿ.ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ. ಸಮಂತಾ ಜತೆಗೆ ಬಹುಭಾಷಾ ನಟಿ ಲಕ್ಷ್ಮೀ, ರಾಜೇಂದ್ರ ಪ್ರಸಾದ್, ನಾಗ ಶೌರ್ಯ, ರಾವ್ ಮಹೇಶ್ ಮತ್ತಿತರರು ನಟಿಸಿದ್ದಾರೆ.