Operation Sindoor: ಭಾರತ ವಿರುದ್ಧ ಯುದ್ಧಕ್ಕೆ ಮದರಸ ವಿದ್ಯಾರ್ಥಿಗಳು? ಸುಳಿವು ನೀಡಿದ ಪಾಕ್ ರಕ್ಷಣಾ ಸಚಿವ
ಮದರಸಾ ವಿದ್ಯಾರ್ಥಿಗಳು ನಮ್ಮ ಎರಡನೇ ರಕ್ಷಣಾ ಸಾಲು ಆಗಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮದರಸದಲ್ಲಿ ಅಧ್ಯಯನ ಮಾಡುವ ಯುವಕರು ಧರ್ಮದೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಅವರನ್ನು ಇತರ ಅಗತ್ಯಗಳಿಗಾಗಿ 100% ಬಳಸಬಹುದು ಎಂದು ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದರು.

ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್

ನವದೆಹಲಿ: ತಮ್ಮ ವಿಚಿತ್ರ ಹೇಳಿಕೆಗಳಿಗೆ ಹೆಸರಾಗಿರುವ ಹಾಗೂ ಹಾಸ್ಯಾಸ್ಪದರಾಗುತ್ತಿರುವ ಪಾಕಿಸ್ತಾನದ (Pakistan) ರಕ್ಷಣಾ ಸಚಿವ ಖ್ವಾಜಾ ಆಸಿಫ್ ಇನ್ನೊಂದು ವಿಚಿತ್ರ ಹೇಳಿಕೆ ನೀಡಿದ್ದಾರೆ. ಭಾರತದೊಂದಿಗೆ ಯುದ್ಧ (India pakistan war news) ಭುಗಿಲೆದ್ದರೆ, ಪಾಕಿಸ್ತಾನದ ಎರಡನೇ ಸಾಲಿನ ರಕ್ಷಣಾ ವ್ಯವಸ್ಥೆ ಬಳಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. "ಮದರಸಾ ವಿದ್ಯಾರ್ಥಿಗಳು ನಮ್ಮ ಎರಡನೇ ರಕ್ಷಣಾ ಸಾಲು ಆಗಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅಗತ್ಯವಿದ್ದಾಗ ಮದರಸಾ ವಿದ್ಯಾರ್ಥಿಗಳನ್ನು (madarsa students) ನಿಯೋಜಿಸಲಾಗುವುದು (Operation sindoor) ಎಂದು ಸಂಸತ್ತಿನಲ್ಲಿ ಮಾತನಾಡಿದ ಆಸಿಫ್ ಹೇಳಿದರು.
ಮದರಸದಲ್ಲಿ ಅಧ್ಯಯನ ಮಾಡುವ ಯುವಕರು ಧರ್ಮದೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಅವರನ್ನು ಇತರ ಅಗತ್ಯಗಳಿಗಾಗಿ 100% ಬಳಸಬಹುದು ಎಂದು ಅವರು ಹೇಳಿದರು. ಪಾಕಿಸ್ತಾನದ ಸಶಸ್ತ್ರ ಪಡೆಗಳು ಭಾರತೀಯ ಡ್ರೋನ್‌ಗಳನ್ನು ತಡೆಯುವಲ್ಲಿ ವಿಫಲವಾಗಿವೆ ಎಂಬ ಆರೋಪಕ್ಕೆ ಹಾಸ್ಯಾಸ್ಪದ ಉತ್ತರ ನೀಡಿದ ಒಂದು ದಿನದ ನಂತರ ಈ ಹೇಳಿಕೆ ಬಂದಿದೆ. ಶತ್ರುಗಳಿಗೆ ನಮ್ಮ ಮಿಲಿಟರಿ ಕಾರ್ಯತಂತ್ರದ ನೆಲೆಗಳನ್ನು ಬಹಿರಂಗಪಡಿಸುವುದನ್ನು ತಡೆಯಲು ಪಾಕಿಸ್ತಾನ ಪಡೆಗಳು ತೊಡಗಿಸಿಕೊಳ್ಳುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿವೆ ಎಂದು ಅವರು ಹೇಳಿದ್ದರು.
"ನಿನ್ನೆ ನಡೆದ ಡ್ರೋನ್ ದಾಳಿಯನ್ನು ಮೂಲತಃ ನಮ್ಮ ನೆಲೆಗಳನ್ನು ಪತ್ತೆಹಚ್ಚಲು ನಡೆಸಲಾಯಿತು. ಇದು ತಾಂತ್ರಿಕ ವಿಷಯ. ಅದನ್ನು ನಾನು ವಿವರವಾಗಿ ವಿವರಿಸುವುದಿಲ್ಲ. ಅದಕ್ಕಾಗಿಯೇ ಅವುಗಳನ್ನು ನಾವು ತಡೆಹಿಡಿಯಲಿಲ್ಲ. ಆದ್ದರಿಂದ ನಮ್ಮ ರಹಸ್ಯ ಸ್ಥಳಗಳು ಸೋರಿಕೆಯಾಗಿಲ್ಲ" ಎಂದು ಅವರು ಹೇಳಿದ್ದರು.
ಇದಕ್ಕೂ ಮೊದಲು, ಭಾರತದ ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನ ಐದು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂಬ ತಮ್ಮ ಹೇಳಿಕೆಯನ್ನು ಬೆಂಬಲಿಸುವ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಲು ಆಸಿಫ್ ವಿಫಲರಾಗಿ, ಅದಕ್ಕೆ ಟೀಕೆಗಳನ್ನು ಎದುರಿಸಿದ್ದರು. ಸಂದರ್ಶನದ ಸಮಯದಲ್ಲಿ ಈ ಕುರಿತ ವಿವರಗಳಿಗಾಗಿ ಒತ್ತಾಯಿಸಿದಾಗ, ಆಸಿಫ್ "ಸಾಮಾಜಿಕ ಮಾಧ್ಯಮ"ವನ್ನು ತಮ್ಮ ಮೂಲವಾಗಿ ಉಲ್ಲೇಖಿಸಿದ್ದರು. ಸಿಎನ್‌ಎನ್ ನಿರೂಪಕರಿಂದ ತೀಕ್ಷ್ಣವಾದ ಛೀಮಾರಿಗೆ ಒಳಗಾಗಿದ್ದರು.
"ಅದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಇದೆ- ನಮ್ಮ ಸಾಮಾಜಿಕ ಮಾಧ್ಯಮದಲ್ಲಿ ಅಲ್ಲ, ಭಾರತೀಯ ಸಾಮಾಜಿಕ ಮಾಧ್ಯಮದಲ್ಲಿ. ಆ ಜೆಟ್‌ಗಳ ಅವಶೇಷಗಳು ಕಾಶ್ಮೀರಕ್ಕೆ ಬಿದ್ದವು" ಎಂದು ಆಸಿಫ್ ಪ್ರತಿಪಾದಿಸಿದ್ದರು. ಆ ವಿಮಾನಗಳನ್ನು ಹೊಡೆದುರುಳಿಸಲು ಬಳಸಲಾಗಿದೆ ಎನ್ನಲಾದ ಮಿಲಿಟರಿ ವ್ಯವಸ್ಥೆಗಳ ಬಗ್ಗೆ ಮತ್ತಷ್ಟು ಪ್ರಶ್ನಿಸಿದಾಗ, ಆಸಿಫ್ ಜೆಎಫ್ -17 ಮತ್ತು ಜೆಎಫ್ -10 ಜೆಟ್‌ಗಳು ಸೇರಿದಂತೆ ಚೀನಾ ನಿರ್ಮಿತ ವಿಮಾನಗಳ ಫ್ಲೀಟ್ ಅನ್ನು ಉಲ್ಲೇಖಿಸಿದ್ದರು.
"ನಮ್ಮಲ್ಲಿ ಚೀನಾದ ವಿಮಾನಗಳಿವೆ - ಜೆಎಫ್ -17 ಮತ್ತು ಜೆಎಫ್ -10. ಅವು ಚೀನಾದ ವಿಮಾನಗಳು. ಆದರೆ ಈಗ ಅವುಗಳನ್ನು ಪಾಕಿಸ್ತಾನದಲ್ಲಿ ಜೋಡಿಸಿ ತಯಾರಿಸಲಾಗುತ್ತದೆ. ಅದಕ್ಕಾಗಿ ನಾವು ಇಸ್ಲಾಮಾಬಾದ್ ಬಳಿ ಒಂದು ನೆಲೆಯನ್ನು ಹೊಂದಿದ್ದೇವೆ. ಭಾರತ ಫ್ರಾನ್ಸ್‌ನಿಂದ ವಿಮಾನಗಳನ್ನು ಖರೀದಿಸಿ ಬಳಸಲು ಸಾಧ್ಯವಾದರೆ, ನಾವು ಚೀನಾ, ರಷ್ಯಾ, ಯುನೈಟೆಡ್ ಸ್ಟೇಟ್ಸ್ ಅಥವಾ ಯುಕೆಯಿಂದ ವಿಮಾನಗಳನ್ನು ಖರೀದಿಸಿ ಬಳಸಬಹುದು" ಎಂದು ಅವರು ಹೇಳಿದ್ದರು.
ಇಸ್ಲಾಮಾಬಾದ್ ಭಾರತೀಯ ವಾಯುನೆಲೆಗಳ ಮೇಲೆ ಹಲವಾರು ಹೈಸ್ಪೀಡ್ ಕ್ಷಿಪಣಿಗಳನ್ನು ಶುಕ್ರವಾರ ಹಾರಿಸಿದೆ. ಭಾರತ ಪಾಕಿಸ್ತಾನದಲ್ಲಿನ ಮಿಲಿಟರಿ ಗುರಿಗಳ ಮೇಲೆ ಪ್ರತೀಕಾರದ ನಿಖರ ದಾಳಿಗಳನ್ನು ನಡೆಸಿತು. ಜಮ್ಮು ಸೆಕ್ಟರ್‌ನಲ್ಲಿ ಬಿಎಸ್‌ಎಫ್ ಪೋಸ್ಟ್‌ಗಳ ಮೇಲೆ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಭಾರತದ ಗಡಿ ಭದ್ರತಾ ಪಡೆ ಸಿಯಾಲ್‌ಕೋಟ್‌ನ ಲೂನಿಯಲ್ಲಿನ ಭಯೋತ್ಪಾದಕ ಉಡಾವಣಾ ತಾಣವನ್ನು ನಾಶಪಡಿಸಿತು.
ಇದನ್ನೂ ಓದಿ: Operation Sindoor: ಭಾರತದ ಕ್ಷಿಪಣಿ ದಾಳಿ ಏಕೆ ತಡೆಯಲಿಲ್ಲ? ಪಾಕ್ ರಕ್ಷಣಾ ಮಂತ್ರಿ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ