Rohit Sharma: ಏಕದಿನ ನಿವೃತ್ತಿ ಬಗ್ಗೆ ಮೌನ ಮುರಿದ ರೋಹಿತ್
ರೋಹಿತ್ ಶರ್ಮ ಇದುವರೆಗೆ 273 ಏಕದಿನ ಪಂದ್ಯಗಳನ್ನಾಡಿ 11168 ರನ್ ಬಾರಿಸಿದ್ದಾರೆ. ಇದರಲ್ಲಿ 32 ಶತಕ ಮೂರು ದ್ವಿಶತಕ ಮತ್ತು 58 ಅರ್ಧಶತಕ ಒಳಗೊಂಡಿದೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಯೂ ಇವರ ಹೆಸರಿನಲ್ಲಿದೆ.


ಮುಂಬಯಿ: ಭಾರತ ತಂಡದ ಅನುಭವಿ ಆಟಗಾರ ರೋಹಿತ್ ಶರ್ಮಾ(Rohit Sharma) ಅವರು ಕಳೆದ ಬುಧವಾರ (ಮೇ 08) ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದಾದ ಬಳಿಕ ರೋಹಿತ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಂದ ನಿವೃತ್ತಿಯಾಗುವ ಕುರಿತು ಹಲವು ಚರ್ಚೆಗಳು ನಡೆದಿತ್ತು. ಈ ವದಂತಿಗಳ ಬಗ್ಗೆ ಕೊನೆಗೂ ರೋಹಿತ್ ಮೌನ ಮುರಿದಿದ್ದಾರೆ. ನಾನು ಏಕದಿನ ಕ್ರಿಕೆಟ್‍ನಿಂದ ಯಾವಾಗ ನಿವೃತ್ತಿಯಾಗಬೇಕು ಎನ್ನುವ ಬಗ್ಗೆ ನನಗೆ ಸ್ಪಷ್ಟ ಅರಿವು ಇದೆ ಎಂದು ಹೇಳುವ ಮೂಲಕ ನಿವೃತ್ತಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.
"ನಾನು ಬ್ಯಾಟಿಂಗ್ ಮಾಡುವ ರೀತಿಯಲ್ಲೇ ನಾನು ಆಡುತ್ತೇನೆ; ನನ್ನ ಸಮಯವನ್ನು ನಾನು ತೆಗೆದುಕೊಳ್ಳುತ್ತೇನೆ. ಈ ಮೊದಲು ನಾನು ಮೊದಲ 10 ಓವರ್‌ಗಳಲ್ಲಿ 30 ಎಸೆತಗಳನ್ನು ಆಡಿ ಕೇವಲ 10 ರನ್ ಗಳಿಸುತ್ತಿದ್ದೆ. ಆದರೆ ಈಗ ನಾನು 20 ಎಸೆತಗಳನ್ನು ಆಡಿದರೆ 30, 35 ಅಥವಾ 40 ರನ್ ಗಳಿಸುತ್ತಿದ್ದೇನೆ. ನಾನು ಚೆನ್ನಾಗಿ ಆಡುವಾಗ, ರನ್‍ಗೆ ವೇಗ ನೀಡಲು ದೊಡ್ಡ ಹೊಡೆತಗಳ ಮೂಲಕ ಮೊದಲ 10 ಓವರ್ ಗಳಲ್ಲಿ 80 ರನ್ ಗಳಿಸುವುದು ಕೆಟ್ಟದೇನಲ್ಲ. ಸದ್ಯಕ್ಕೆ ನಾನು ಹೀಗೆ ಯೋಚಿಸುತ್ತೇನೆ" ಎಂದು ರೋಹಿತ್ ಹೇಳಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಇನ್ನೂ ಕೆಲ ವರ್ಷ ಮುಂದುವರಿಯುವ ಸುಳಿವು ನೀಡಿದ್ದಾರೆ.
"ನಾನು ಭಿನ್ನ ವಿಧಾನದಲ್ಲಿ ಕ್ರಿಕೆಟ್ ಆಡಲು ಬಯಸಿದ್ದೇನೆ. ಯಾವುದನ್ನೂ ನಾನು ಲಘುವಾಗಿ ಪರಿಗಣಿಸಿಲ್ಲ. ಕೇವಲ 20-30 ರನ್ ಗಳಿಸಿ ಆಡುವುದು ಮುಂದುವರಿಯುತ್ತೇನೆ ಎಂದು ಭಾವಿಸಬೇಡಿ. ನಾನು ಬಯಸಿದಂತೆ ಮೈದಾನದಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಭಾವನೆ ಬಂದ ದಿನ ನಾನು ಆಡುವುದು ನಿಲ್ಲಿಸುತ್ತೇನೆ. ಇದು ಖಚಿತ. ಆದರೆ ಸದ್ಯಕ್ಕೆ ನನ್ನ ಬ್ಯಾಟಿಂಗ್ ತಂಡಕ್ಕೆ ನೆರವಾಗುತ್ತಿದೆ ಎಂಬ ಭಾವನೆ ನನ್ನದು" ಎಂದು ವಿವರಿಸಿದರು.
ಇದನ್ನೂ ಓದಿ ಕುಚುಕು ಗೆಳೆಯ ವಿರಾಟ್ ಕೊಹ್ಲಿಗೆ ಎ ಬಿ ಡಿವಿಲಿಯರ್ಸ್ ವಿಶೇಷ ಸಂದೇಶ!
ರೋಹಿತ್ ಶರ್ಮ ಇದುವರೆಗೆ 273 ಏಕದಿನ ಪಂದ್ಯಗಳನ್ನಾಡಿ 11168 ರನ್ ಬಾರಿಸಿದ್ದಾರೆ. ಇದರಲ್ಲಿ 32 ಶತಕ ಮೂರು ದ್ವಿಶತಕ ಮತ್ತು 58 ಅರ್ಧಶತಕ ಒಳಗೊಂಡಿದೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಯೂ ಇವರ ಹೆಸರಿನಲ್ಲಿದೆ. ವಿಶ್ವಕಪ್‌ನಲ್ಲಿ ಒಟ್ಟು 7 ಶತಕ ಬಾರಿಸಿದ್ದಾರೆ.