Sonu Nigam: ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಸೋನು ನಿಗಮ್; ಮೇ 15ಕ್ಕೆ ವಿಚಾರಣೆ ಮುಂದೂಡಿಕೆ
Sonu Nigam: ಕನ್ನಡಾಭಿಮಾನವನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ದೂರು ಮತ್ತು ನಂತರ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಗಾಯಕ ಸೋನು ನಿಗಮ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮೇ 15ಕ್ಕೆ ಮುಂದೂಡಿದೆ.


ಬೆಂಗಳೂರು: ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಬಾಲಿವುಡ್ ಗಾಯಕ ಸೋನು ನಿಗಮ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸೋನು ನಿಗಮ್ (Sonu Nigam) ಅರ್ಜಿಯ ವಿಚಾರಣೆ ನಡೆಸಿರುವ ನ್ಯಾ. ಶಿವಶಂಕರ್ ಅಮರಣ್ಣನವರ್ ಅವರಿದ್ದ ರಜಾಕಾಲದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿ ಮುಂದಿನ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿಗೆ ಸಂಬಂಧಿಸಿದಂತೆ ವಾದ ಮಂಡಿಸಲು ಮುಂದಾದರು. ಆಗ ಪೀಠವು ಕಚೇರಿ ಆಕ್ಷೇಪಣೆಗೆ ಸಂಬಂಧಿಸಿದಂತೆ ವಕೀಲೆಯ ವಾದವನ್ನು ದಾಖಲಿಸಿ, ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಿದೆ.
ಸೋನು ನಿಗಮ್ ಅರ್ಜಿಯಲ್ಲಿ ದೂರುದಾರ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ ಎ ಧರ್ಮರಾಜ ಮತ್ತು ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಮೇ 5ರಂದು ಎಫ್‌ಐಆರ್ ಸಂಬಂಧ ತನಿಖೆಗೆ ಹಾಜರಾಗುವಂತೆ ಗಾಯಕ ಸೋನು ನಿಗಮ್‌ಗೆ ಅವಲಹಳ್ಳಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೋನು ನಿಗಮ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಏಪ್ರಿಲ್ 25 ಮತ್ತು 26ರಂದು ಸೋನು ನಿಗಮ್ ಅವರು ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಮತ್ತು ಕನ್ನಡಿಗರ ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಾರೆ ಎಂದು ಮೇ 2ರಂದು ದೂರು ನೀಡಲಾಗಿತ್ತು. ಇದನ್ನು ಆಧರಿಸಿ ಪೊಲೀಸರು ಮೇ 3ರಂದು ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 351 (2) (ಕ್ರಿಮಿನಲ್ ಬೆದರಿಕೆ), 353 (ಸಾರ್ವಜನಿಕವಾಗಿ ಕಿರಿಕಿರಿ ಉಂಟು ಮಾಡುವ ಹೇಳಿಕೆ), 352(1) (ಉದ್ದೇಶಪೂರ್ವಕವಾಗಿ ಅವಮಾನ) ಅಡಿ ಧರ್ಮರಾಜ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ.
ವ್ಹೀಲಿಂಗ್ ಮಾಡುವವರೇ ಎಚ್ಚರಿಕೆ, ನಿಮಗೆ ಜಾಮೀನು ಕೂಡ ಸಿಗೊಲ್ಲ!
ಬೆಂಗಳೂರು: ಶೋಕಿಗಾಗಿ, ಏರಿಯಾದಲ್ಲಿ ಹವಾ ಮೇಂಟೇನ್ ಮಾಡುವುದಕ್ಕಾಗಿ ವ್ಹೀಲಿಂಗ್ ಮಾಡುವುದನ್ನು ಮುಂದುವರಿಸಿರುವ ಪಡ್ಡೆಗಳು ಈ ನ್ಯೂಸನ್ನು ಗಮನವಿಟ್ಟು ಓದಬೇಕು. ಸಿಕ್ಕಿಬಿದ್ದರೆ ನಿಮಗೆ ಜಾಮೀನು ಕೂಡ ಸಿಗಲಾರದು. ʼಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಹೆಚ್ಚುತ್ತಿರುವ ವ್ಹೀಲಿಂಗ್‌ನಂಥ ಅಪಾಯಕಾರಿ ಚಟುವಟಿಕೆಗಳನ್ನು ನಿಗ್ರಹಿಸಲು ಕಾನೂನು ತಿದ್ದುಪಡಿ ಅಗತ್ಯವಿದೆʼ ಎಂದು ಹೇಳಿರುವ ಹೈಕೋರ್ಟ್, ಪದೇಪದೆ ವ್ಹೀಲಿಂಗ್ ಮಾಡಿ ಜನತೆಗೆ ಕಿರುಕುಳ ನೀಡುತ್ತಿದ್ದ ಗಂಗಾವತಿಯ ಆರೋಪಿಯೊಬ್ಬನಿಗೆ ಜಾಮೀನು ನಿರಾಕರಿಸಿದೆ.
ವ್ಹೀಲಿಂಗ್ ಆರೋಪಿ, ಕೊಪ್ಪಳ ಜಿಲ್ಲೆಯ ಗಂಗಾವತಿಯ ಅರ್ಬಾಜ್ ಖಾನ್ ಅಲಿಯಾಸ್ ಅರ್ಬಾಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. "ರಾಜ್ಯ ಸರಕಾರವು ಭಾರತೀಯ ನಾಗರಿಕ ಸಂಹಿತೆ (ಬಿಎನ್‌ಎಸ್) ಮತ್ತು ಭಾರತೀಯ ಮೋಟಾರು ವಾಹನ ಕಾಯಿದೆಗೆ ಕಠಿಣ ನಿಬಂಧನೆ ಸೇರ್ಪಡೆ ಮಾಡುವ ಮೂಲಕ ಅಗತ್ಯ ತಿದ್ದುಪಡಿ ಮಾಡಬೇಕು" ಎಂದು ಹೈಕೋರ್ಟ್‌ನ ಧಾರವಾಡ ಪೀಠ ಆದೇಶಿಸಿದೆ.
''ವಿವೇಚನಾರಹಿತ ಚಾಲನೆ ನಿಯಂತ್ರಿಸಲು ಹಾಲಿ ಇರುವ ಕಾನೂನಿನ ನಿಬಂಧನೆಗಳು ಸಾಕಾಗುವುದಿಲ್ಲ ಎಂಬುದನ್ನು ಶಾಸಕಾಂಗ ಮನಗಾಣಬೇಕು. ಶಾಸನದ ಕೊರತೆಯನ್ನು ಗಮನಿಸಿ ಹೊಂದಿಕೆಯಾಗುವ ಮತ್ತು ಕಠಿಣ ನಿಬಂಧನೆ ಒಳಗೊಂಡಂತೆ ಬಿಎನ್‌ಎಸ್ ಮತ್ತು ಮೋಟಾರು ವಾಹನಗಳ ಕಾಯಿದೆಗೆ ಸೂಕ್ತ ತಿದ್ದುಪಡಿ ಮಾಡಬೇಕು,'' ಎಂದು ನ್ಯಾಯಪೀಠ ಹೇಳಿದೆ.
''ನ್ಯಾಯಾಲಯವು ತನ್ನ ಅಧಿಕಾರ ಚಲಾಯಿಸುವಾಗ ಏರುಗತಿಯಲ್ಲಿರುವ ಅಪಾಯಕಾರಿಯಾದ ವ್ಹೀಲಿಂಗ್‌ನಂತಹ ದುಸ್ಸಾಹಸ ಚಟುವಟಿಕೆಗಳನ್ನು ಹತ್ತಿಕ್ಕುವುದನ್ನು ಪರಿಗಣಿಸಬೇಕಿದ್ದು, ಸಮಾಜದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿ ಆ ಮೂಲಕ ಸಾರ್ವಜನಿಕ ಸುವ್ಯವಸ್ಥೆ ಮತ್ತು ಜನರ ರಕ್ಷಣೆ, ಭದ್ರತೆಯ ಮೇಲೆ ಪರಿಣಾಮ ಉಂಟು ಮಾಡುವ ಕೆಲವು ನಿರ್ಲಜ್ಜ ಶಕ್ತಿಗಳ ಹುಟ್ಟಡಗಿಸಬೇಕಿದೆ. ಹಾಲಿ ಪ್ರಕರಣದಲ್ಲಿ ಅರ್ಜಿದಾರನ ವಿರುದ್ಧದ ಆರೋಪಗಳು ಜಾಮೀನು ಸಹಿತವಾಗಿವೆ. ಆದರೆ, ಆತ ಪದೇ ಪದೆ ಅಂತಹ ತಪ್ಪೆಸಗಿದ್ದಾನೆ. ಆರೋಪಿ ವಿರುದ್ಧ ಸಕ್ಷಮ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದ ಮಾತ್ರಕ್ಕೆ ಜಾಮೀನು ನೀಡಬೇಕು ಎಂದೇನೂ ಇಲ್ಲ,'' ಎಂದು ನ್ಯಾಯಾಲಯ ಹೇಳಿದೆ.
ಈ ಸುದ್ದಿಯನ್ನೂ ಓದಿ | provocative video: "ಮೋದಿ ಮನೆ ಮೇಲೆ ಬಾಂಬ್ ಹಾಕಿ" ಎಂದು ವಿಡಿಯೋ ಮಾಡಿದ ನವಾಜ್ ಬಂಧನ
''ಮೊದಲಿಗೆ ವ್ಹೀಲಿಂಗ್ ಬೃಹತ್ ನಗರ ಪ್ರದೇಶಗಳ ಹೆದ್ದಾರಿಗಳಿಗೆ ಸೀಮಿತವಾಗಿತ್ತು. ಇತ್ತೀಚಿನ ದಿನಗಳಲ್ಲಿ ಅಂತಹ ಅಪಾಯಕಾರಿ ಚಟುವಟಿಕೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆಯಾಗುತ್ತಿದೆ. ಯುವ ಸಮುದಾಯವು ವ್ಹೀಲಿಂಗ್ ಎದೆಗಾರಿಕೆ ಎಂದು ನಂಬಿದ್ದು, ಇಂತಹ ಚಟುವಟಿಕೆಯಿಂದ ಆಗಬಹುದಾದ ಗಂಭೀರ ಹಾನಿಯ ಬಗ್ಗೆ ಅರಿವಿಲ್ಲ. ವ್ಹೀಲಿಂಗ್ ದ್ವಿಚಕ್ರ ವಾಹನ ಚಾಲಕ, ಹಿಂಬದಿಯ ಸವಾರ ಮಾತ್ರವಲ್ಲದೇ ಸಾಮಾನ್ಯ ಜನರಿಗೂ ಗಂಭೀರ ಬೆದರಿಕೆಯಾಗಿದೆ. ಈ ಕೃತ್ಯದಲ್ಲಿ ತೊಡಗುವ ವಿವೇಚನಾರಹಿತ ಕೆಲವು ಯುವಕರು ನಿಸ್ಸಂಶಯವಾಗಿ ಸಮಾಜದ ಸ್ವಾಸ್ಥ್ಯ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದಾರೆ," ಎಂದು ನ್ಯಾಯಾಲಯ ಹೇಳಿದೆ.