ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr. Mahesh joshi: ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ನೀಡಿದ್ದ ಸಚಿವ ದರ್ಜೆ ಸ್ಥಾನಮಾನ ಹಿಂಪಡೆದ ರಾಜ್ಯ ಸರ್ಕಾರ

Dr. Mahesh joshi: ಮಹೇಶ್‌ ಜೋಶಿ ಅವರ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿ ಕೆಲ ಸಾಹಿತಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಅಲ್ಲದೇ ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದರಿಂದ ಕಸಾಪ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಸೂಕ್ತ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಮಹೇಶ್‌ ಜೋಶಿ ಅವರಿಗೆ ನೀಡಿದ್ದ ಸಚಿವ ದರ್ಜೆ ಸ್ಥಾನಮಾನ ಹಿಂಪಡೆಯಲಾಗಿದೆ.

ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ನೀಡಿದ್ದ ಸಚಿವ ದರ್ಜೆ ಸ್ಥಾನಮಾನ ವಾಪಸ್‌

Profile Prabhakara R May 31, 2025 6:12 PM

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ (Dr. Mahesh joshi) ಅವರಿಗೆ ನೀಡಲಾಗಿದ್ದ ರಾಜ್ಯ ಸಚಿವ ಸ್ಥಾನಮಾನ ಹಾಗೂ ರಾಜ್ಯ ಸಚಿವರ ದರ್ಜೆಗೆ ಅನ್ವಯಿಸುವ ಎಲ್ಲಾ ಸೌಲಭ್ಯಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-2 ಬಾಣದರಂಗಯ್ಯ ಎನ್.ಆರ್. ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಡಾ. ಮಹೇಶ್ ಜೋಶಿ ಅವರು ಪ್ರತಿಕ್ರಿಯಿಸಿ, ತಮಗೆ ನೀಡಿರುವ ರಾಜ್ಯ ಸಚಿವ ಸ್ಥಾನಮಾನ ಹಿಂಪಡೆದಿರುವುದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ನಾನು ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಇದು ನನಗೋಸ್ಕರ ಮಾಡಿರುವ ವ್ಯವಸ್ಥೆ ಅಲ್ಲ, 1994ರಲ್ಲಿ 63ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಆಗಿನ ಮುಖ್ಯಮಂತ್ರಿಗಳು ಕಸಾಪ ಅಧ್ಯಕ್ಷರು ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಿಗೆ ಶಿಷ್ಟಾಚಾರದ ಎಲ್ಲಾ ಸೌಲಭ್ಯ ಕಲ್ಪಿಸುತ್ತೇವೆ ಎಂದು ಹೇಳಿದ್ದರು. ಅದರಂತೆ ಸರ್ಕಾರ ಆದೇಶ ಮಾಡಿತ್ತು. ಅದರಲ್ಲಿ ಲಭ್ಯತೆಗೆ ಒಳಪಟ್ಟು ಶಿಷ್ಟಾಚಾರ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿತ್ತು. ಆದರೆ, ʼಲಭ್ಯತೆಗೆ ಒಳಪಟ್ಟುʼ ಎಂಬ ಶಬ್ದ ಖಂಡಿಸಿ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷರಾಗಿದ್ದಾಗ ಅನಂತಮೂರ್ತಿ ನೇತೃತ್ವದ ನಿಯೋಗ ತೆರಳಿ ಸಿಎಂ ಗಮನಕ್ಕೆ ತಂದಿದ್ದರು. ಆಗ ಸಿಎಂ ಅವರು ಇದು ಅಧಿಕಾರಿಗಳು ಬಳಸಿರುವ ಶಬ್ದ ಎಂದು ಖಂಡಿಸಿ, ಸರ್ಕಾರ ಕನ್ನಡದ ಧ್ವನಿಯಾಗಿ ಕಸಾಪ ಅಧ್ಯಕ್ಷರಿಗೆ ಎಲ್ಲ ಸೌಲಭ್ಯ ನೀಡಲಾಗುತ್ತದೆ ಎಂದು ಹೇಳಿದ್ದರು. ಹೀಗಾಗಿ ಈ ಹಿಂದಿನಿಂದಲೇ ನಮಗೆ ಶಿಷ್ಟಾಚಾರ ಸೌಲಭ್ಯ ಸಿಗುತ್ತಿತ್ತು. ಆದರೆ, ಕೆಲವರು ದುರುದ್ದೇಶಪೂರಿತವಾಗಿ ತಮ್ಮ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ದಾಖಲೆ ಸಹಿತವಾದ ಪತ್ರವನ್ನು ಬರೆದು ವಾಸ್ತವಾಂಶಗಳನ್ನು ತೆರೆದಿಡಲಾಗಿದೆ ಎಂದು ತಿಳಿಸಿದ್ದಾರೆ.

ಮಹೇಶ್‌ ಜೋಶಿ ಕಾರ್ಯವೈಖರಿಗೆ ಆಕ್ಷೇಪ

ಮಹೇಶ್‌ ಜೋಶಿ ಅವರ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿ ಕೆಲ ಸಾಹಿತಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಬೈಲಾ ತಿದ್ದುಪಡಿಯಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ್ ಜೋಶಿ ಅವರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಪ್ರೇಮಿಗಳು ಹಾಗೂ ಜನಪರ ಸಂಘಟನೆಗಳ ವೇದಿಕೆ ಸದಸ್ಯರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.

Dr. Mahesh Joshi

ಕನ್ನಡ ಸಾಹಿತ್ಯ ಪರಿಷತ್, ನಾಡು, ನುಡಿ, ಸಂಸ್ಕೃತಿ ಉಳಿಸಲು ಕೆಲಸ ಮಾಡಬೇಕು. ಅಧಿಕಾರದಲ್ಲಿರುವ ಮಹೇಶ್ ಜೋಶಿ ಸರ್ವಾಧಿಕಾರಿ ಧೋರಣೆ, ದಬ್ಬಾಳಿಕೆ ಮೂಲಕ ಆಡಳಿತ ನಡೆಸುತ್ತಿದ್ದಾರೆ. ಪರಿಷತ್ತಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ಸರ್ವಾಧಿಕಾರಿ ಧೋರಣೆ ಹೊಂದಿರುವ ಮಹೇಶ್ ಜೋಶಿ ಅವರನ್ನು ಸರ್ಕಾರ ಕೂಡಲೇ ಅಧಿಕಾರದಿಂದ ಕೆಳಗಿಳಿಸಬೇಕು. ಸೂಕ್ತ ತನಿಖೆ ಕೈಗೊಂಡು, ಅವರಿಗೆ ನೀಡಿರುವ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹಿಂಪಡೆಯಬೇಕು ಎಂದು ಕೆಲ ಸಾಹಿತಿಗಳು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ.

ಈ ಸುದ್ದಿಯನ್ನೂ ಓದಿ | Karnataka Public Schools: ಸಿಎಸ್‌ಆರ್ ನಿಧಿಯಡಿ ಪಬ್ಲಿಕ್ ಶಾಲೆ ನಿರ್ಮಾಣ ಯೋಜನೆ ಜಾರಿಗೆ ನೋಡಲ್ ಅಧಿಕಾರಿಗಳ ನೇಮಕ

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಲಾಗಿತ್ತು. ಈ ಮೊದಲು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಯಾವುದೇ ಸರ್ಕಾರ ಸಚಿವರ ಸ್ಥಾನಮಾನವನ್ನು ನೀಡಿರಲಿಲ್ಲ. ಮೊಟ್ಟಮೊದಲ ಬಾರಿಗೆ ಸರ್ಕಾರ ಕಸಪಾ ಅಧ್ಯಕ್ಷರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಲಾಗಿತ್ತು.