Operation Sindoor: "ಇದು ಯುದ್ಧ ಮಾಡುವ ಸಮಯವಲ್ಲ, ಆದರೆ ಭಯೋತ್ಪಾದಕರನ್ನು ಹೊಸಕಿ ಹಾಕುವ ಸಮಯ"; ಜಗತ್ತಿಗೆ ಸಂದೇಶ ಕೊಟ್ಟ ಮೋದಿ
ಆಪರೇಷನ್ ಸಿಂದೂರ್ ಕುರಿತು ಸೋಮವಾರ ರಾತ್ರಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಉಗ್ರರ ಸಂಹಾರ ಮಾಡಿದ್ದಾಗಿ ತಿಳಸಿದ್ದಾರೆ. ವ್ಯಾಪಾರ ಮತ್ತು ಉಗ್ರವಾದ ಜೊತೆಗಿರಲು ಸಾಧ್ಯವಿಲ್ಲ. ಪಾಕಿಸ್ತಾನ ಉಗ್ರರನ್ನು ನಿರ್ಣಾಮ ಮಾಡಲೇಬೇಕು ಎಂದು ಪಾಕ್‌ಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.


ನವದೆಹಲಿ: ಆಪರೇಷನ್ ಸಿಂದೂರ್ ಕುರಿತು ಸೋಮವಾರ ರಾತ್ರಿ ದೇಶದ (Operation Sindoor) ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ (Narendra Modi) ಉಗ್ರರ ಸಂಹಾರ ಮಾಡಿದ್ದಾಗಿ ತಿಳಸಿದ್ದಾರೆ. ಅಷ್ಟೇ ಅಲ್ಲದೆ ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಒಳಗೆ ಭಯೋತ್ಪಾದಕ ಅಡಗುತಾಣಗಳನ್ನು ನಾಶ ಪಡಿಸಿ, ನಮ್ಮ ಹೆಣ್ಣು ಮಕ್ಕಳ ಸಿಂದೂರವನ್ನು ಅಳಿಸಿದವರಿಗೆ ಅದರ ಬೆಲೆ ಏನೆಂದು ಗೊತ್ತು ಮಾಡಿದ್ದೇವೆ ಎಂದು ಹೇಳಿದ್ದಾರೆ. ಭಯೋತ್ಪಾದನೆ ಕುರಿತು ಗುಡುಗಿದ ಮೋದಿ, ಪಾಕಿಸ್ತಾನವನ್ನು ಉಗ್ರ ಪೋಷಕ ರಾಷ್ಟ್ರ ಎಂದು ಹೇಳಿದ್ದಾರೆ.
ಭಾರತ ಪಾಕಿಸ್ತಾನದ ಹೃದಯಭಾಗದ ಮೇಲೆ ದಾಳಿ ಮಾಡಿತು. ಅವರ ವಾಯುನೆಲೆಗಳನ್ನು ನಾಶಮಾಡಿತು, ಪಾಕಿಸ್ತಾನವು ನಮ್ಮ ಕೃತ್ಯಗಳಿಂದ ದಿಗ್ಭ್ರಮೆಗೊಂಡಿದೆ. ಜಗತ್ತಿನ ಎದುರು ಶಾಂತಿಗಾಗಿ ಅಂಗಲಾಚಿದೆ. ಉಗ್ರರ ಬೆಂಬಲಕ್ಕೆ ನಿಂತು ಪಾಕಿಸ್ತಾನ ಯುದ್ಧಕ್ಕೆ ಸನ್ನದ್ಧವಾಗಿತ್ತು. ಆದರೆ ನಾವು ಪಾಕಿಸ್ತಾನಕ್ಕೆ ನುಗ್ಗಿ ಕಾರ್ಯಾಚರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಇದು ಯುದ್ಧ ನಡೆಸುವ ಯುಗವಲ್ಲ. ಆದರೆ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಯುಗ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಉಗ್ರರ ದಾಳಿಗೆ ಯುದ್ಧದ ಮೂಲಕವೇ ಉತ್ತರಿಸಲಾಗುತ್ತದೆ. ಭಯೋತ್ಪಾದನೆ ಸಹಿಸುವ ಮಾತೇ ಇಲ್ಲ. ಉಗ್ರರನ್ನು ಅನ್ನ ಆಹಾರ, ಆಶ್ರಯ ನೀಡಿ ಉಗ್ರರನ್ನು ಪೋಷಣೆ ನೀಡುತ್ತಿರುವ ಪಾಕಿಸ್ತಾನ ಒಂದು ದಿನ ಭಯೋತ್ಪಾದನೆಯಿಂದಲೇ ಸರ್ವನಾಶ ಆಗುತ್ತದೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಭಾರತೀಯ ಶಾಂತಿಯಿಂದ ಬದುಕಲು ಶಕ್ತಿಯ ಉಪಯೋಗವೂ ಮುಖ್ಯ. ನೀರು ಮತ್ತು ರಕ್ತ ಜೊತೆ ಜೊತೆಗೆ ಹರಿಯಲು ಸಾಧ್ಯವಿಲ್ಲ. ಅಂತೆಯೇ ವ್ಯಾಪಾರ ಮತ್ತು ಉಗ್ರವಾದ ಜೊತೆಗಿರಲು ಸಾಧ್ಯವಿಲ್ಲ. ಪಾಕಿಸ್ತಾನ ಉಗ್ರರನ್ನು ನಿರ್ಣಾಮ ಮಾಡಲೇಬೇಕು ಎಂದು ಪಾಕ್‌ಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Operation Sindoor: ನ್ಯೂಕ್ಲಿಯರ್ ದಾಳಿ ಬೆದರಿಕೆಗೆ ಭಾರತ ಹೆದರಲ್ಲ; ಪಾಕಿಸ್ತಾನವನ್ನು ಉಗ್ರ ಪೋಷಕ ಎಂದ ಮೋದಿ
ಮತ್ತೆ ಬಾಲ ಬಿಚ್ಚಿದ ಪಾಕ್
ಇತ್ತ ಮೋದಿ ತಮ್ಮ ಭಾಷಣದಲ್ಲಿ ಪಾಕ್‌ಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಮತ್ತೆ ತನ್ನ ಕುತಂತ್ರಿ ಬುದ್ದಿಯನ್ನು ತೋರಿದೆ. ಪಂಜಾಬ್‌ನ ಜಲಂಧರ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಸಾಂಬ ಪ್ರದೇಶಗಳಲ್ಲಿ ಮತ್ತೆ ಡ್ರೋನ್‌ಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಜಲಂಧರ್‌ನ ಸುರನುಸ್ಸಿ ಪ್ರದೇಶದಲ್ಲಿ ಸೋಮವಾರ ರಾತ್ರಿ 9.30 ರ ಸುಮಾರಿಗೆ ಮತ್ತೆ ಡ್ರೋನ್‌ಗಳು ಕಾಣಿಸಿಕೊಂಡಿದ್ದು, ನಂತರ ಆ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿ ಹಿಮಾಂಶು ಅಗರ್ವಾಲ್ ತಿಳಿಸಿದ್ದಾರೆ. ಡ್ರೋನ್ ಚಟುವಟಿಕೆಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತವು ನಗರದ ಸುರಾನುಸ್ಸಿ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವನ್ನು ವಿಧಿಸಿದೆ. ಈ ಹಿಂದೆ ಅಮೃತಸರ, ಹೋಶಿಯಾರ್‌ಪುರ ಮತ್ತು ದಾಸುಹಾದಲ್ಲಿ ಈಗಾಗಲೇ ವಿದ್ಯುತ್ ಕಡಿತಗೊಳಿಸಲಾಗಿತ್ತು ಮತ್ತು ಇದೀಗ ಜಲಂಧರ್‌ನ ಸುರನುಸ್ಸಿ ಪ್ರದೇಶದಲ್ಲೂ ವಿದ್ಯುತ್ ಕಡಿತಗೊಳಿಸಲಾಗಿದೆ.