Hamdan Ballal: ಇಸ್ರೇಲ್ ದಾಳಿಯ ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಆಸ್ಕರ್ ವಿಜೇತ ಹಮ್ದಾನ್ ಬಲ್ಲಾಲ್
ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ‘ನೋ ಅದರ್ ಲ್ಯಾಂಡ್’ನ ಸಹ-ನಿರ್ದೇಶಕ ಹಮ್ದಾನ್ ಬಲ್ಲಾಲ್, ಇಸ್ರೇಲಿ ವಸಾಹತುದಾರರಿಂದ ದಾಳಿಗೊಳಗಾಗಿ ಬಂಧನಕ್ಕೊಳಗಾದ ತಮ್ಮ ದುಃಖದಾಯಕ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಹಮ್ದಾನ್ ಬಲ್ಲಾಲ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಹಮ್ದಾನ್ ಬಲ್ಲಾಲ್

ನವದೆಹಲಿ: ಆಸ್ಕರ್ ಪ್ರಶಸ್ತಿ ವಿಜೇತ (Oscar-Winning) ಚಿತ್ರ ‘ನೋ ಅದರ್ ಲ್ಯಾಂಡ್’ನ (No Other Land) ಸಹ-ನಿರ್ದೇಶಕ ಹಮ್ದಾನ್ ಬಲ್ಲಾಲ್ (Hamdan Ballal), ಇಸ್ರೇಲಿ ವಸಾಹತುದಾರರಿಂದ (Israeli Settlers) ದಾಳಿಗೊಳಗಾಗಿ ಬಂಧನಕ್ಕೊಳಗಾದ ತಮ್ಮ ದುಃಖದಾಯಕ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯ ಸಂದರ್ಭದಲ್ಲಿ ಅವರು ತಮ್ಮ ಆಸ್ಕರ್ ಗೆಲುವಿನ ಬಗ್ಗೆ ಗೇಲಿ ಮಾಡಿದ್ದರು ಎಂದು ಬಲ್ಲಾಲ್ ಬಹಿರಂಗಪಡಿಸಿದ್ದಾರೆ.
ಹಮ್ದಾನ್ ಬಲ್ಲಾಲ್ ಈ ಭೀಕರ ಘಟನೆಯನ್ನು “ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣ” ಎಂದು ವಿವರಿಸಿದ್ದಾರೆ. ಪ್ಯಾಲಸ್ತೀನ್ ಮತ್ತು ಅಲ್ಲಿನ ಜನರು “ಪ್ರತಿದಿನವೂ ಎದುರಿಸುತ್ತಿರುವ ಹಿಂಸಾತ್ಮಕ ಘಟನೆಗಳ” ಕಡೆಗೆ ವಿಶ್ವದ ಗಮನವನ್ನು ಸೆಳೆಯುವಂತೆ ಅವರು ಮನವಿ ಮಾಡಿದ್ದಾರೆ. ಈ ದಾಳಿಯು ಮಾರ್ಚ್ ಅಂತ್ಯದಲ್ಲಿ “ಸಾಮಾನ್ಯ ರಂಜಾನ್ ಸಂಜೆ”ಯಂದು ಸಂಭವಿಸಿತು. ನೆರೆಹೊರೆಯವರೊಬ್ಬರು ವಸಾಹತುಗಾರರ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದಾಗ, ಬಲ್ಲಾಲ್ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಧಾವಿಸಿದರು. ಆದರೆ, ಗುಂಪು ದೊಡ್ಡದಾದಂತೆ ಮತ್ತು ಕುಟುಂಬದ ಸುರಕ್ಷತೆಯ ಆತಂಕ ಹೆಚ್ಚಾದಾಗ ಅವರು ಹಿಂದೆ ಸರಿಯಬೇಕಾಯಿತು.
ಕೆಲವು ಪರಿಚಿತ ಸೈನಿಕರು ಸಮೀಪಿಸುತ್ತಿದ್ದಂತೆ, ಬಲ್ಲಾಲ್ ತಮ್ಮ ಪತ್ನಿ ಮತ್ತು ಮೂವರು ಚಿಕ್ಕ ಮಕ್ಕಳನ್ನು ತಕ್ಷಣ ಮನೆಯೊಳಗೆ ಕರೆದೊಯ್ದರು. ಯಾವುದೇ ಕಾರಣಕ್ಕೂ ಬಾಗಿಲು ತೆರೆಯದಂತೆ ಪತ್ನಿಗೆ ಕಟ್ಟುನಿಟ್ಟಾಗಿ ಸೂಚಿಸಿದರು. “ಅವರು ನನ್ನ ಮನೆಯ ಬಾಗಿಲ ಬಳಿ ಎದುರಾಗಿ, ನನ್ನನ್ನು ಹೊಡೆಯಲು ಮತ್ತು ಶಪಿಸಲು ಆರಂಭಿಸಿದರು. ‘ಆಸ್ಕರ್ ವಿಜೇತ ಚಲನಚಿತ್ರೋದ್ಯಮಿ ’ ಎಂದು ಗೇಲಿ ಮಾಡಿದರು. ತುಪಾಕಿಗಳಿಂದ ನನ್ನ ಪಕ್ಕೆಲುಬುಗಳಿಗೆ ಗುದ್ದಿದರು. ಯಾರೋ ಹಿಂದಿನಿಂದ ನನ್ನ ತಲೆಗೆ ಗುದ್ದಿದರು. ನಾನು ನೆಲಕ್ಕೆ ಬಿದ್ದೆ. ನನ್ನನ್ನು ಒದ್ದು, ಉಗಿದರು. ತೀವ್ರ ನೋವು ಮತ್ತು ಭಯವನ್ನು ಅನುಭವಿಸಿದೆ. ನನ್ನ ಪತ್ನಿ ಮತ್ತು ಮಕ್ಕಳು ಕಿರುಚುತ್ತಾ, ಅಳುತ್ತಾ, ನನ್ನನ್ನು ಕರೆಯುತ್ತಾ, ಆ ಗುಂಪನ್ನು ದೂರವಿರಲು ಹೇಳುವ ಶಬ್ದ ಕೇಳಿಸಿತು. ಅದು ನನ್ನ ಜೀವನದ ಅತ್ಯಂತ ಭಯಾನಕ ಕ್ಷಣವಾಗಿತ್ತು. ನಾನು ಮತ್ತು ನನ್ನ ಪತ್ನಿ, ನನ್ನನ್ನು ಕೊಂದರೆ ಎಂದು ಭಾವಿಸಿದೆವು. ನಾನು ಸತ್ತರೆ ನನ್ನ ಕುಟುಂಬಕ್ಕೆ ಏನಾಗುತ್ತದೆ ಎಂಬ ಭಯವಿತ್ತು” ಎಂದು ಬಲ್ಲಾಲ್ ಹೇಳಿದ್ದಾರೆ
ಈ ಸುದ್ದಿಯನ್ನು ಓದಿ: Viral Video: ಮೆಟ್ರೋದೊಳಗೆ ಊಟ ಮಾಡಿದ ಮಹಿಳೆಗೆ ಬಿತ್ತು ಭಾರೀ ದಂಡ; ಏನಿದು ಘಟನೆ?
ಬಲ್ಲಾಲ್‌ರ ಬಂಧನವನ್ನು ಮೊದಲು ಸಾರ್ವಜನಿಕಗೊಳಿಸಿದ್ದು ಅವರ ಸಹ-ನಿರ್ದೇಶಕ ಮತ್ತು ‘ನೋ ಅದರ್ ಲ್ಯಾಂಡ್’ ಚಿತ್ರದ ಸಹನಿರ್ಮಾಪಕ ಅಬ್ರಹಾಂ. ಅಬ್ರಹಾಂ ಅಕಾಡೆಮಿಯ ದುರ್ಬಲ ಪ್ರತಿಕ್ರಿಯೆಯನ್ನು ಟೀಕಿಸಿದ್ದರು, ಈ ಸಂಸ್ಥೆಯು ಹಿಂಸಾತ್ಮಕ ಘಟನೆಯನ್ನು ಸ್ಪಷ್ಟವಾಗಿ ಖಂಡಿಸಲು ವಿಫಲವಾಗಿದೆ ಎಂದು ದೂರಿದ್ದರು.
ಅಕಾಡೆಮಿಯ ಆರಂಭಿಕ ಹೇಳಿಕೆಯು ಬಲ್ಲಾಲ್‌ರ ಹೆಸರನ್ನೂ ಉಲ್ಲೇಖಿಸದೆ ಅಸ್ಪಷ್ಟವಾಗಿತ್ತು. 900ಕ್ಕೂ ಹೆಚ್ಚು ಪ್ರಮುಖ ಅಕಾಡೆಮಿ ಸದಸ್ಯರು ಈ ದುರ್ಬಲ ಪ್ರತಿಕ್ರಿಯೆಯನ್ನು ಖಂಡಿಸಿ, ಬಲ್ಲಾಲ್‌ಗೆ ಬಲವಾದ ಬೆಂಬಲವನ್ನು ತೋರಬೇಕೆಂದು ಒತ್ತಾಯಿಸಿದ ನಂತರ, ಅಕಾಡೆಮಿಯು ಕ್ಷಮೆಯಾಚಿಸಿತು.