ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜನಿವಾರ, ಮಾಂಗಲ್ಯ ಸೂತ್ರ ಧರಿಸಿ ಪರೀಕ್ಷೆ ಬರೆಯಬಹುದು; ರೈಲ್ವೆ ಇಲಾಖೆಯಿಂದ ಅಧಿಕೃತ ಆದೇಶ

Railway Recruitment Board: ರೈಲ್ವೆ ನೇಮಕಾತಿ ಪರೀಕ್ಷೆ ವೇಳೆ ಜನಿವಾರ, ಮಾಂಗಲ್ಯ, ಬಳೆ ತೆಗೆಯುವ ಆದೇಶವನ್ನು ವಾಪಸ್‌ ಪಡೆಯಲಾಗಿದೆ. ಇವುಗಳನ್ನು ಧರಿಸಿಯೇ ಪರೀಕ್ಷೆ ಬರೆಯಬಹುದು ಎಂದು ರೈಲ್ವೆ ನೇಮಕಾತಿ ಮಂಡಳಿ ಅಧಿಕೃತವಾಗಿ ಆದೇಶ ಹೊರಡಿಸಿದೆ. ಈ ಮೂಲಕ ಹಲವರ ಹೋರಾಟಕ್ಕೆ ಜಯ ಸಿಕ್ಕಿದೆ.

ಜನಿವಾರ, ಮಾಂಗಲ್ಯ ಸೂತ್ರ ಧರಿಸಿ ಪರೀಕ್ಷೆ ಬರೆಯಬಹುದು

Profile Ramesh B Apr 28, 2025 10:08 PM

ಹೊಸದಿಲ್ಲಿ: ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಸಿಇಟಿ ಪರೀಕ್ಷೆ ವೇಳೆ ಅಭ್ಯರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಭಾರಿ ವಿವಾದ ಸೃಷ್ಟಿಸಿತ್ತು. ದೇಶಾದ್ಯಂತ ಈ ಪ್ರಕರಣ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ರೈಲ್ವೆ ನೇಮಕಾತಿ ಪರೀಕ್ಷೆ ವೇಳೆ ಜನಿವಾರ, ಮಾಂಗಲ್ಯ, ಬಳೆ ತೆಗೆಯುವ ಆದೇಶವನ್ನು ವಾಪಸ್‌ ಪಡೆಯಲಾಗಿದೆ. ಇವುಗಳನ್ನು ಧರಿಸಿಯೇ ಪರೀಕ್ಷೆ ಬರೆಯಬಹುದು ಎಂದು ರೈಲ್ವೆ ನೇಮಕಾತಿ ಮಂಡಳಿ (Railway Recruitment Board) ಅಧಿಕೃತವಾಗಿ ಆದೇಶ ಹೊರಡಿಸಿದೆ. ಈ ಮೂಲಕ ಹಲವರ ಹೋರಾಟಕ್ಕೆ ಜಯ ಸಿಕ್ಕಿದೆ.

ಈ ಬಗ್ಗೆ ಸಚಿವ ವಿ.ಸೋಮಣ್ಣ ಅವರು ಕೇಂದ್ರದ ಗಮನ ಸೆಳೆದಿದ್ದರು. ಈ ಬಗ್ಗೆ ಅವರು ಎಕ್ಸ್‌ನಲ್ಲಿ ಮಾಹಿತಿ ನೀಡಿ ಜನಿವಾರ, ಮಾಂಗಲ್ಯ ಧರಿಸಿ ಪರೀಕ್ಷೆ ಬರೆಯಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಸಂಸದ ಬ್ರಿಜೇಶ್ ಚೌಟ‌ ಅವರ ಎಕ್ಸ್‌ ಪೋಸ್ಟ್‌:



ʼʼ2025ರ ಏಪ್ರಿಲ್‌ 28, 29 ಮತ್ತು 30ರಂದು ರೈಲ್ವೆ ಇಲಾಖೆಯಲ್ಲಿ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿದೆ. ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂಬ ವಿಷಯವನ್ನು ಪರೀಕ್ಷಾ ನಿಯಮದಲ್ಲಿ ಉಲ್ಲೇಖಿಸಲಾಗಿದೆಯೆಂಬ ದೂರುಗಳು ನನಗೆ ಬಂದಿದೆ. ಈ ಬಗ್ಗೆ, ಸಂಸದರು, ಶಾಸಕರು ಇದನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವಿವಿಧ ಸಂಘಟನೆಗಳು ಈ ಬಗ್ಗೆ ನನ್ನ ಗಮನವನ್ನು ಸೆಳೆದಿದ್ದಾರೆʼʼ.

ʼʼಈ ವಿಷಯದ ಬಗ್ಗೆ ಇಂದು ನಾನು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಈ ಗೊಂದಲ ನಿವಾರಿಸಲಾಗಿದೆ. ಜನಿವಾರ, ಮಾಂಗಲ್ಯ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ವಸ್ತುವನ್ನು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆʼʼ.

ʼʼಇತರ ಎಲ್ಲ ಪರೀಕ್ಷಾ ನಿಯಮವನ್ನು ಪಾಲಿಸಿ, ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಸೂಚಿಸಲಾಗಿದೆ. ಪರೀಕ್ಷಾ ಅಭ್ಯರ್ಥಿಗಳು ಸಹ ನಿಯಮಾನುಸಾರ ಪರೀಕ್ಷೆ ಬರೆಯುವಂತೆ ಮನವಿ ಮಾಡುತ್ತೇನೆ. ಅಭ್ಯರ್ಥಿಗಳು ಗೊಂದಲಕ್ಕೀಡಾಗಬಾರದುʼʼ ಎಂದು ಮನವಿ ಮಾಡಿದ್ದಾರೆ.

ವಿ.ಸೋಮಣ್ಣ ಅವರ ಎಕ್ಸ್‌ ಪೋಸ್ಟ್‌:



ಆರಂಭದಲ್ಲಿ ನಿಷೇಧಿತ ಪಟ್ಟಿಯಲ್ಲಿ ಆಭರಣಗಳು, ಬಳೆಗಳು, ಪವಿತ್ರ ದಾರಗಳು, ಮಂಗಳಸೂತ್ರಗಳು ಮತ್ತು ಮೊಬೈಲ್ ಫೋನ್‌, ವಾಚ್‌, ಬ್ಲೂಟೂತ್ ಉಪಕರಣಗಳು ಮತ್ತು ಕ್ಯಾಲ್ಕುಲೇಟರ್‌, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಸೇರಿದ್ದವು. ಇದೀಗ ಈ ಪಟ್ಟಿಯಿಂದ ಧಾರ್ಮಿಕತೆಗೆ ಸಂಬಂಧಿಸಿದ ವಸ್ತುಗಳನ್ನು ಹಿಂಪಡೆಯಲಾಗಿದೆ.

ಗಮನ ಸೆಳೆದಿದ್ದ ಸಂಸದ ಬ್ರಿಜೇಶ್ ಚೌಟ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬ್ರಿಜೇಶ್ ಚೌಟ ಅವರು ಈ ವಿಚಾರದ ಬಗ್ಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಗಮನ ಸೆಳೆದಿದ್ದರು. ಇದೀಗ ಈ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ʼʼರೈಲ್ವೆ ನೇಮಕಾತಿ ಮಂಡಳಿ (RRB) ನಡೆಸುವ ಪರೀಕ್ಷೆಗಳು ಕೆಲವು ನಿಬಂಧನೆಗಳನ್ನು ಹೊಂದಿದ್ದು, ಈ ಹಿಂದಿನ ನಿರ್ಧಾರದಂತೆ ಪರೀಕ್ಷಾ ಕೇಂದ್ರಗಳಿಗೆ ಕೆಲವು ವಸ್ತುಗಳನ್ನು ಕೊಂಡೊಯ್ಯುವುದರ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತುʼʼ.

ನನ್ನ ಮನವಿಯ ಮೇರೆಗೆ ಸಚಿವರು ಬೆಳಗ್ಗೆ ಮೌಖಿಕವಾಗಿ ಆದೇಶ ನೀಡಿ ಇಂದು ಅಧಿಕಾರಿಗಳ ಸಭೆಯನ್ನು ನಡೆಸಿ ಧಾರ್ಮಿಕ ಭಾವನೆಗಳಿಗೆ ನೋವುಂಟಾಗದಂತೆ ಮಂಡಳಿಯು ಕೆಲವು ನಿರ್ಧಾರಗಳನ್ನು ಕೈಗೊಂಡು ಪ್ಯಾರಾಗ್ರಾಫ್ 7 ಅನ್ನು ಮಾರ್ಪಡಿಸಿ ಆದೇಶ ಹೊರಡಿಸಿದೆ. ಈ ಸೂಕ್ಷ್ಮ ವಿಚಾರದ ಬಗ್ಗೆ ಗಮನದಲ್ಲಿಟ್ಟುಕೊಂಡು ಕ್ರಮಕೈಗೊಂಡ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆಯ ರಾಜ್ಯ ಸಚಿವ ಶ್ರೀ ವಿ.ಸೋಮಣ್ಣ ಅವರಿಗೆ ಹೃದಯಸ್ಪರ್ಶಿ ಧನ್ಯವಾದಗಳುʼʼ ಎಂದು ಅವರು ಬರೆದುಕೊಂಡಿದ್ದಾರೆ.