ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shine Tom Chacko: ಡ್ರಗ್ಸ್‌ ಸೇವಿಸಿ ನಟಿಗೆ ಕಿರುಕುಳ ನೀಡಿ ನಿಜ ಜೀವನದಲ್ಲಿಯೂ ವಿಲನ್‌ ಆದ ಶೈನ್‌ ಟಾಮ್‌ ಚಾಕೊ; ಪೊಲೀಸ್‌ ದಾಳಿ ವೇಳೆ ಪರಾರಿ

Vincy Aloshious: ಬಹುಭಾಷಾ ನಟ, ಮಲಯಾಳಂ ಮೂಲದ ಶೈನ್‌ ಟಾಮ್‌ ಚಾಕೊ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಡ್ರಗ್ಸ್‌ ಸೇವಿಸಿ ಸಹನಟಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಜತೆಗೆ ಪೊಲೀಸರು ಪರಿಶೀಲನೆಗಾಗಿ ಹೋಟೆಲ್‌ಗೆ ಬಂದಾಗ ಪರಾರಿಯಾಗಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಡ್ರಗ್ಸ್‌ ಸೇವಿಸಿ ನಟಿಗೆ ಕಿರುಕುಳ; ಶೈನ್‌ ಟಾಮ್‌ ಚಾಕೊ ವಿರುದ್ಧ ಆರೋಪ

ಶೈನ್‌ ಟಾಮ್‌ ಚಾಕೊ ಮತ್ತು ವಿನ್ಸಿ ಅಲೋಶಿಯಸ್‌.

Profile Ramesh B Apr 17, 2025 5:59 PM

ತಿರುವನಂತಪುರಂ: ಮಲಯಾಳಂನ ಜನಪ್ರಿಯ ನಟ, ಬಹುಭಾಷಾ ಕಲಾವಿದ ಶೈನ್‌ ಟಾಮ್‌ ಚಾಕೊ (Shine Tom Chacko)ತಮ್ಮ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ ವಿನ್ಸಿ ಅಲೋಶಿಯಸ್‌ (Vincy Aloshious) ದೂರು ನೀಡಿದ್ದು, ಮಾಲಿವುಡ್‌ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಮೀ ಟೂ ಪ್ರಕರಣದಿಂದ ಇತ್ತೀಚೆಗೆ ಭಾರಿ ಸದ್ದು ಮಾಡಿದ್ದ ಮಲಯಾಳಂ ಚಿತ್ರರಂಗ ಇದೀಗ ಮತ್ತೊಮ್ಮೆ ಮುಜುಗರಕ್ಕೊಳಗಾಗಿದೆ. ನಟ ಶೈನ್‌ ಡ್ರಗ್ಸ್‌ ಸೇವಿಸಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವಿನ್ಸಿ ಆರೋಪಿಸಿದ್ದಾರೆ. ಈ ಮಧ್ಯೆ ಹೋಟೆಲ್‌ ರೂಮ್‌ನಲ್ಲಿ ಶೈನ್‌ ಡ್ರಗ್ಸ್‌ ಬಳಸುತ್ತಿದ್ದಾರೆ ಎನ್ನುವ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆಗೆ ಬಂದಾಗ ಅವರು ಓಡಿ ಹೋಗಿದ್ದಾರೆ. ಬುಧವಾರ (ಏ. 16) ರಾತ್ರಿ ಶೈನ್‌ ತಂಗಿದ್ದ ಕೊಚ್ಚಿಯ ಖಾಸಗಿ ಹೋಟೆಲ್‌ಗೆ ಪೊಲೀಸರು ಪರಿಶೀಲನೆಗೆ ಬಂದಾಗ ಈ ಘಟನೆ ನಡೆದಿದೆ. ಶೈನ್‌ ಓಡಿ ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶೈನ್‌ ಮತ್ತು ಅವರ ತಂಡ ಹೋಟೆಲ್‌ನಲ್ಲಿ ಡ್ರಗ್ಸ್‌ ಬಳಸುತ್ತಿದ್ದಾರೆ ಎನ್ನುವ ರಹಸ್ಯ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಅಧಿಕಾರಿಗಳು ಆಗಮಿಸಿದ್ದಾರೆ ಎನ್ನುವುದು ತಿಳಿಯುತ್ತಲೇ ಶೈನ್‌ ಹೋಟೆಲ್‌ 3ನೇ ಮಹಡಿಯಿಂದ ಜಿಗಿದು, ಮೆಟ್ಟಿಲು ಬಳಸಿ ಓಡಿ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಶೈನ್‌ ತಲೆ ಮರೆಸಿಕೊಂಡಿದ್ದು, ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಕೊಚ್ಚಿಯ ಕಲೂರಿಯ ಪಿಜಿಎಸ್‌ ವೇದಾಂತ್‌ ಎನ್ನುವ ಹೋಟೆಲ್‌ನಿಂದ ಶೈನ್‌ ಪರಾರಿಯಾಗಿದ್ದು, ಸಿಬ್ಬಂದಿಯೇ ದಾಳಿಯ ವಿವರ ಬಹಿರಂಗಪಡಿಸಿರುವ ಸಾಧ್ಯತೆ ಇದೆ.

ಶೈನ್‌ ಹೋಟೆಲ್‌ನಿಂದ ಪರಾರಿಯಾಗುವ ವಿಡಿಯೊ:



ಈ ಸುದ್ದಿಯನ್ನೂ ಓದಿ: Actress Samantha: ಪಿರಿಯಡ್ಸ್ ಬಗ್ಗೆ ಓಪನ್​ ಆಗಿ ಮಾತನಾಡೋದು ಈಗಲೂ ಮುಜುಗರದ ವಿಚಾರ- ನಟಿ ಸಮಂತಾ ಬೇಸರ!

ಸಿನಿಮಾ ಸೆಟ್‌ನಲ್ಲಿ ಅನುಚಿತ ವರ್ತನೆ

ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತೆ ವಿನ್ಸಿ ಸದ್ಯ ʼಸೂತ್ರವಾಕ್ಯಂʼ ಎನ್ನುವ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರೊಂದಿಗೆ ಶೈನ್‌ ಕೂಡ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರೀಕರಣ ನಡೆಯುತ್ತಿದ್ದ ವೇಳೆ ಶೂಟಿಂಗ್‌ ಸೆಟ್‌ನಲ್ಲಿ ವಿನ್ಸಿಯೊಂದಿಗೆ ಶೈನ್‌ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ʼʼಚಿತ್ರೀಕರಣ ನಡೆಯುತ್ತಿದ್ದ ವೇಳೆ ಧರಿಸಿದ್ದ ಬಟ್ಟೆ ಸ್ವಲ್ಪ ಹರಿದಿತ್ತು. ಅದನ್ನು ಸರಿಪಡಿಸಲು ಹೊರಟಿದ್ದೆ. ಆಗ ಅಲ್ಲೇ ಇದ್ದ ಶೈನ್‌ ನಾನೂ ಜತೆಗೆ ಬರುವುದಾಗಿ ಹೇಳಿದ್ದಾರೆ. ಈ ವೇಳೆ ಅವರು ಡ್ರಗ್ಸ್‌ ಸೇವಿಸಿದ್ದರು. ಇದಲ್ಲದೆ ಶೈನ್‌ ನಿರಂತವಾಗಿ ತೊಂದರೆ ನೀಡುತ್ತಿದ್ದರುʼʼ ಎಂದು ವಿನ್ಸಿ ಫಿಲಂ ಚೇಂಬರ್‌ಗೆ ದೂರು ನೀಡಿದ್ದಾರೆ. ಈ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶೈನ್‌ ತಂಗಿದ್ದ ಹೋಟೆಲ್‌ಗೆ ದಾಳಿ ನಡೆಸಲಾಗಿತ್ತು. ಶೈನ್‌ ವಿರುದ್ಧ ಫಿಲಂ ಚೇಂಬರ್‌ ಕಠಿಣ ಕ್ರಮ ಕೈಗೊಳ್ಳಲಿದ್ದು, ʼಸೂತ್ರವಾಕ್ಯಂʼ ಚಿತ್ರದಿಂದ ಅವರನ್ನು ತೆಗೆದು ಹಾಕುವ ಸಾಧ್ಯತೆ ಇದೆ.

ಯಾರು ಈ ವಿನ್ಸಿ?

ಮಲಯಾಳಂನ ಪ್ರತಿಭಾವಂತ ನಟಿಯರಲ್ಲಿ ವಿನ್ಸಿ ಅಲೋಶಿಯಸ್‌ ಕೂಡ ಒಬ್ಬರು. 2019ರಲ್ಲಿ ತೆರೆಕಂಡ ʼವಿಕೃತಿʼ ಸಿನಿಮಾ ಮೂಲಕ ಮಾಲಿವುಡ್‌ಗೆ ಕಾಲಿಟ್ಟ ಅವರು ಅಭಿನಯಕ್ಕೆ ಪ್ರಾಶಸ್ತ್ಯವಿರುವ ಪಾತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. 2023ರಲ್ಲಿ ರಿಲೀಸ್‌ ಆದ ʼರೇಖಾʼ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ.

ಯಾರು ಈ ಶೈನ್‌?

2011ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ ʼಗದ್ದಾಮʼ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟ ಶೈನ್‌ ವಿಲನ್‌ ಪಾತ್ರಗಳ ಮೂಲಕವೇ ಗಮನ ಸೆಳೆದವರು. ಮಲಯಾಳಂ ಜತೆಗೆ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕಳೆದ ವರ್ಷ ತೆರೆಕಂಡ ತೆಲುಗಿನ ʼದೇವರʼ, ಇತ್ತೀಚೆಗೆ ರಿಲೀಸ್‌ ಆದ, ಅಜಿತ್‌ ನಟನೆಯ ತಮಿಳಿನ ʼಗುಡ್‌ ಬ್ಯಾಡ್‌ ಅಗ್ಲಿʼ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.