Ramayana Movie: ರಾವಣನಾಗಿ ಅಬ್ಬರಿಸಲು ರಾಕಿ ಭಾಯ್ ರೆಡಿ; 'ರಾಮಾಯಣ' ಶೂಟಿಂಗ್ ಆರಂಭಕ್ಕೂ ಮುನ್ನ ಯಶ್ ಉಜ್ಜೈನಿ ದೇವಸ್ಥಾನಕ್ಕೆ ಭೇಟಿ
Actor Yash: ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ಗ್ಲೋಬಲ್ ಸ್ಟಾರ್ ಆಗಿ ಬದಲಾದ ಯಶ್ ಸದ್ಯ ಬಹು ನಿರೀಕ್ಷಿತ ʼಟಾಕ್ಸಿಕ್ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಇದರ ಚಿತ್ರೀಕರಣ ಪೂರ್ಣವಾಗಲಿದ್ದು, ಮುಂದಿನ ವಾರ ಅವರು ʼರಾಮಾಯಣʼ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಶ್ ಮತ್ತು ರಣಬೀರ್ ಕಪೂರ್.

ಮುಂಬೈ: ಬಾಕ್ಸ್ ಆಫೀಸ್‌ನಲ್ಲಿ ನೂತನ ಭಾಷ್ಯ ಬರೆದ, ಕಮರ್ಷಿಯಲ್ ಚಿತ್ರಕ್ಕೆ ಹೊಸದೊಂದು ಆಯಾಮ ತಂದುಕೊಟ್ಟ ಸ್ಯಾಂಡಲವುಡ್‌ನ ಹೆಮ್ಮೆಯ ಕೆಜಿಎಫ್ (KGF) ಚಿತ್ರದಲ್ಲಿ ಚಿನ್ನದ ಸಾಮ್ರಾಜ್ಯ ಕಟ್ಟಿದ್ದ ರಾಕಿ ಭಾಯ್ ಯಶ್ (Actor Yash) ಇದೀಗ ಬಾಲಿವುಡ್‌ನ 'ರಾಮಾಯಣ' (Ramayana)ದಲ್ಲಿ ರಾವಣನಾಗಿ ಲಂಕಾವನ್ನು ಆಳಲು ಹೊರಟಿದ್ದಾರೆ. ಹಿಂದಿಯ ಜನಪ್ರಿಯ ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಆ್ಯಕ್ಷನ್ ಕಟ್ ಹೇಳುತ್ತಿರುವ 'ರಾಮಾಯಣ' ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಯಶ್ ಸದ್ಯದಲ್ಲೇ ಶೂಟಿಂಗ್ ಸೆಟ್‌ಗೆ ಹಾಜರಾಗಲಿದ್ದಾರೆ. ಮುಂದಿನ ವಾರ ಮುಂಬೈಯಲ್ಲಿ ಯಶ್ ಅಭಿನಯದ ಭಾಗವನ್ನು ಸೆರೆಹಿಡಿಯಲು ಚಿತ್ರತಂಡ ಯೋಜನೆ ರೂಪಿಸಿದೆ. ಚಿತ್ರೀಕರಣದಲ್ಲಿ ಭಾಗಿಯಾಗುವ ಮುನ್ನ ಯಶ್ ಮಧ್ಯ ಪ್ರದೇಶದ ಉಜ್ಜೈನಿ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ (Shree Mahakaleshwar Temple in Ujjain) ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ʼರಾಮಾಯಣʼ ಚಿತ್ರದಲ್ಲಿ ಯಶ್ ನಟಿಸುವುದಷ್ಟೇ ಅಲ್ಲದೆ ಸಹ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಏಪ್ರಿಲ್ ಕೊನೆಗೆ ಯಶ್ ತಮ್ಮ ಭಾಗದ ಶೂಟಿಂಗ್ ಆರಂಭಿಸಲಿದ್ದಾರೆ ಎಂದು ವರದಿಯೊಂದು ಹೇಳಿದೆ. ʼರಾಮಾಯಣʼ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಿದ್ದಾರೆ. 2 ಭಾಗಗಳಲ್ಲಿ ತೆರೆಗೆ ಬರಲಿರುವ ಇದು ಅದ್ಧೂರಿಯಾಗಿ ನಿರ್ಮಾಣಗೊಳ್ಳಲಿದೆ.
ಈ ಸುದ್ದಿಯನ್ನೂ ಓದಿ: Actor Yash: ಮತ್ತೆ ಮುಂಬೈಗೆ ಬಂದಿಳಿದ ಯಶ್; ರಾಕಿ ಭಾಯ್ ನ್ಯೂ ಲುಕ್‌ಗೆ ಫ್ಯಾನ್ಸ್ ಫಿದಾ
ಸದ್ಯ ಯಶ್ ಬಹು ನಿರೀಕ್ಷಿತ ʼಟಾಕ್ಸಿಕ್ʼ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಚಿತ್ರೀಕರಣ ಪೂರ್ತಿಯಾಗಿದ್ದು, ಸಣ್ಣ ಬ್ರೇಕ್ ಪಡೆದ ನಂತರ ಯಶ್ ʼರಾಮಾಯಣʼದ ಶೂಟಿಂಗ್‌ನಲ್ಲಿ ಸಕ್ರಿಯರಾಗಲಿದ್ದಾರೆ. ʼರಾಮಾಯಣʼ ಯಶ್ ಅಭಿನಯದ ಮೊದಲ ಹಿಂದಿ ಮತ್ತು ಮೊದಲ ಪೌರಾಣಿಕ ಚಿತ್ರವಾಗಿದ್ದು ಅದಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದಾರೆ. ಪ್ರತಿ ಚಿತ್ರದ ಆರಂಭಕ್ಕೂ ಮುನ್ನ ಯಶ್ ದೇವಸ್ಥಾನಕ್ಕೆ ಭೇಟಿ ನೀಡುವುದು ವಾಡಿಕೆ. ಅದರಂತೆ ಈ ಬಾರಿ ಉಜ್ಜೈನಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ʼʼಮೊದಲಿಗೆ ಯಶ್ ಒಬ್ಬರೇ ಇರುವ ಭಾಗದ ಚಿತ್ರೀಕರಣವನ್ನು ನಡೆಸಲಾಗುತ್ತದೆ. ಮುಂಬೈಯಲ್ಲಿ ಇದಕ್ಕಾಗಿ ವಿಶೇಷ ರೀತಿಯಲ್ಲಿ ಸೆಟ್ ಹಾಕಲಾಗಿದೆ. ಉತ್ಕೃಷ್ಟ ಗುಣಮಟ್ಟದ ಕ್ಯಾಮೆರಾ ಮತ್ತು ವಿಎಫ್‌ಎಕ್ಸ್ ಬಳಸಿ ಚಿತ್ರವನ್ನು ಕಟ್ಟಿ ಕೊಡಲಾಗುತ್ತದೆ. ಹಿಂದೆಂದೂ ನೋಡಿರದ ದೃಶ್ಯ ವೈಭವ, ಯುದ್ಧದ ದೃಶ್ಯ ಇದರಲ್ಲಿರಲಿದೆ. ಪರದೆ ಮೇಲೆ ಹೊಸದೊಂದು ಜಗತ್ತು ಅನಾವರಣಗೊಳ್ಳಲಿದೆʼʼ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ʼರಾಮಾಯಣʼ 2 ಭಾಗಗಳಲ್ಲಿ 2026 ಮತ್ತು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಹನುಮಂತನ ಪಾತ್ರಕ್ಕೆ ಸನ್ನಿ ಡಿಯೋಲ್ ಆಯ್ಕೆಯಾಗಿದ್ದು, ಅವರು ಜೂನ್‌ನಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ʼʼಯಶ್ ಚಿತ್ರದ ಪ್ರತಿಯೊಂದು ಹಂತದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಥೆಯನ್ನು ಹೇಗೆ ಪರಿಣಾಮಕಾರಿಗೆ ತೆರೆ ಮೇಲೆ ತರಬಹುದು ಎನ್ನುವ ಬಗ್ಗೆ ಅವರಿಗೆ ಉತ್ತಮ ಕಲ್ಪನೆ ಇದೆʼʼ ಎಂದು ಮೂಲಗಳು ಹೇಳಿವೆ.
ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಜತೆಗೆ ಯಶ್ ಅವರ ಪ್ರೊಡಕ್ಷನ್ ಹೌಸ್ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ʼರಾಮಾಯಣʼ ಸಿನಿಮಾ ನಿರ್ಮಾಣಕ್ಕೆ ಕೈಜೋಡಿಸಿದೆ. ಹಾಲಿವುಡ್ ಶೈಲಿಯಲ್ಲಿ ನಿರ್ಮಾಣವಾಗುತ್ತಿರುವ ಇದು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯಲಿದೆ ಎಂದೇ ಬಾಲಿವುಡ್ ಪಂಡಿತರು ಈಗಾಗಲೇ ಭವಿಷ್ಯ ನುಡಿದಿದ್ದಾರೆ.