ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rahul Gandhi: ಇಂಗ್ಲೆಂಡ್‌ನಲ್ಲಿ ಗಾಂಧೀಜಿಯನ್ನು ರೈಲಿನಿಂದ ಹೊರ ದಬ್ಬಲಾಯಿತು ಎಂದ ರಾಹುಲ್‌ ಗಾಂಧಿ; ಇತಿಹಾಸ ಮರೆತ ಕಾಂಗ್ರೆಸ್‌ ನಾಯಕ

ಇತಿಹಾಸವನ್ನು ತಪ್ಪಾಗಿ ವ್ಯಾಖ್ಯಾನಿಸುವ ಮೂಲಕ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಮತ್ತೊಮ್ಮೆ ಟ್ರೋಲಿಗೆ ಗುರಿಯಾಗಿದ್ದಾರೆ. ಮಹಾತ್ಮಾ ಗಾಂಧೀಜಿ ಅವರನ್ನು ಇಂಗ್ಲೆಂಡ್‌ನಲ್ಲಿ ರೈಲಿನಿಂದ ಹೊರದಬ್ಬಲಾಯಿತು ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದು, ಇದನ್ನು ಬಿಜೆಪಿ ನಾಯಕ ಲಹರ್‌ ಸಿಂಗ್‌ ಸಿರೋಯಾ ಟೀಕಿಸಿದ್ದಾರೆ.

ರಾಹುಲ್‌ ಗಾಂಧಿ ಅವರಿಂದ ಇತಿಹಾಸ ಕಲಿಯಬೇಡಿ ಎಂದ ಬಿಜೆಪಿ ನಾಯಕ

ರಾಹುಲ್‌ ಗಾಂಧಿ.

Profile Ramesh B Apr 20, 2025 5:02 PM

ಹೊಸದಿಲ್ಲಿ: 1893ರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ (Mahatma Gandhi) ಅವರನ್ನು ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಹೊರ ದಬ್ಬಿರುವ ಘಟನೆ ಎಲ್ಲರಿಗೂ ಗೊತ್ತಿದೆ. ಆದರೆ ಇತ್ತೀಚೆಗೆ ಸಂದೀಪ್‌ ದೀಕ್ಷಿತ್‌ (Sandeep Dikshit) ಅವರೊಂದಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ (Rahul Gandhi) ಈ ಇತಿಹಾಸವನ್ನು ತಪ್ಪಾಗಿ ಹೇಳುವ ಮೂಲಕ ಟ್ರೋಲಿಗೆ ಗುರಿಯಾಗಿದ್ದಾರೆ. ಗಾಂಧೀಜಿ ಅವರನ್ನು ಇಂಗ್ಲೆಂಡ್‌ನಲ್ಲಿ ರೈಲಿನಿಂದ ಹೊರದಬ್ಬಲಾಯಿತು. ಅದಾದ ಬಳಿಕ ತಮ್ಮ ಮುತ್ತಜ್ಜ ನೆಹರೂ ಮತ್ತು ಅವರ ಕಸಿನ್​ಗಳು ಸೇಡು ತೀರಿಸಿಕೊಂಡರು ಎಂದು ಹೇಳಿದ್ದಾರೆ. ರಾಹುಲ್‌ ಗಾಂಧಿ ಇತಿಹಾಸವನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಕ್ಕೆ ಬಿಜೆಪಿ ಸಂಸದ ಲಹರ್‌ ಸಿಂಗ್‌ ಸಿರೋಯಾ (Lahar Singh Siroya) ಟೀಕಿಸಿದ್ದಾರೆ. ಜತೆಗೆ ಯಾರೂ ರಾಹುಲ್‌ ಗಾಂಧಿ ಅವರಿಂದ ಇತಿಹಾಸ ಕಲಿಯಬೇಡಿ ಎಂದು ಕರೆ ನೀಡಿದ್ದಾರೆ.

ತಮ್ಮದೇ ಕುಟುಂಬದ ಇತಿಹಾಸ ಮತ್ತು ಬ್ರಿಟಿಷ್‌ ಆಡಳಿತದ ವಿರುದ್ದ ನಡೆದ ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ತಪ್ಪಾಗಿ ವಿವರಿಸಿದ ರಾಹುಲ್‌ ಗಾಂಧಿ ಅವರನ್ನು ಲಹರ್‌ ಸಿಂಗ್‌ ಸೋಶಿಯಲ್‌ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. 92 ಲಕ್ಷ ಚಂದಾದಾರರನ್ನು ಹೊಂದಿರುವ ರಾಹುಲ್ ಗಾಂಧಿ ಅವರ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ ನಡೆಸಲಾದ ಸಂದರ್ಶನದಲ್ಲಿ ಅವರು ಹೇಳಿದ ತಪ್ಪಾದ ಇತಿಹಾಸ ಇದೀಗ ವೈರಲ್‌ ಆಗುತ್ತಿದೆ.

ಬಿಜೆಪಿ ಸಂಸದ ಲಹರ್‌ ಸಿಂಗ್‌ ಸಿರೋಯಾ ಹಂಚಿಕೊಂಡ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Rahul Gandhi: ಸಂಸತ್‌ನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ; ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ

ರಾಹುಲ್‌ ಗಾಂಧಿ ಹೇಳಿದ್ದೇನು?

ವಸಾಹತುಶಾಹಿ ಶಕ್ತಿಯ ವಿರುದ್ಧ ಮಹಾತ್ಮ ಗಾಂಧಿ ಅವರ ಹೋರಾಟ ಹೇಗೆ ಪ್ರಾರಂಭವಾಯಿತು ಎಂಬುದನ್ನು ವಿವರಿಸಿದ ರಾಹುಲ್ ಗಾಂಧಿ “ಮಹಾತ್ಮಾ ಗಾಂಧಿಯನ್ನುಇಂಗ್ಲೆಂಡ್‌ನಲ್ಲಿ ರೈಲಿನಿಂದ ಹೊರಗೆಸೆಯಲಾಯಿತು. ಅದಾದ ನಂತರ ನನ್ನ ಮುತ್ತಜ್ಜ ನೆಹರೂ ಮತ್ತು ಅವರ ಕಸಿನ್​ಗಳು ಸೇಡು ತೀರಿಸಿಕೊಂಡರು” ಎಂದು ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಹರ್‌ ಸಿಂಗ್‌, ರಾಹುಲ್‌ ಗಾಂಧಿ ಅವರ ತಪ್ಪು ಮಾಹಿತಿಯನ್ನು ಎತ್ತಿ ತೋರಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಗಾಂಧೀಜಿ ಅವರನ್ನು ರೈಲಿನಿಂದ ಎಂದಿಗೂ ಹೊರ ದಬ್ಬಿರಲಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ʼʼರಾಹುಲ್‌ ಗಾಂಧಿ ಅವರು ತಮ್ಮ ಮುತ್ತಜ್ಜ ನೆಹರೂ ಬಗ್ಗೆ ಮಾತನಾಡುತ್ತಿರುವುದು ಗೊತ್ತಾಗಿ ಕತೂಹಲದಿಂದ ಸಂದರ್ಶನವನ್ನು ವೀಕ್ಷಿಸಿದೆ. ಅದಾಗ್ಯೂ ರಾಹುಲ್‌ ಗಾಂಧಿ ಹೇಳಿದ್ದ ಗಾಂಧಿ ಅವರನ್ನು ಇಂಗ್ಲೆಂಡ್‌ನಲ್ಲಿ ರೈಲಿನಿಂದ ಹೊರದಬ್ಬಲಾಯಿತು (2 ನಿಮಿಷ 40 ಸೆಕೆಂಡ್‌) ಎನ್ನುವ ವಿಚಾರ ತಿಳಿದು ನಿರಾಸೆಯಾಯ್ತುʼʼ ಎಂದು ವಿವರಿಸಿದ್ದಾರೆ.

ʼʼಈ ವಿಡಿಯೊವನ್ನು ಎಡಿಟ್‌ ಮಾಡಿಕೊಳ್ಳಬಹುದು ಎನ್ನುವ ಕಾರಣಕ್ಕೆ ಮತ್ತೊಂದು ಫೋನ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದೇನೆ. ಯಾರೊಬ್ಬರೂ ಇತಿಹಾಸವನ್ನು ರಾಹುಲ್‌ ಗಾಂಧಿಯಿಂದ ಕಲಿಯಬಾರದು. ಹೆಚ್ಚು ಶಿಕ್ಷಣ ಪಡೆಯದ ನನ್ನಂತಹ ವ್ಯಕ್ತಿಗೂ ಗಾಂಧಿ ಅವರನ್ನು ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಹೊರಗೆಸೆಯಲಾಗಿತ್ತು ಎಂದು ತಿಳಿದಿದೆʼʼ ಎಂದು ಬಿಜೆಪಿ ಸಂಸದ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ನಟಾಲ್‌ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದಾಗ ಮಹಾತ್ಮ ಗಾಂಧಿಯವರು 1893ರ ಜೂ. 7ರಂದು ಡರ್ಬನ್‌ನಿಂದ ಪ್ರಿಟೋರಿಯಾಕ್ಕೆ ಪ್ರಯಾಣಿಸುತ್ತಿದ್ದಾಗ ರೈಲಿನಿಂದ ಹೊರ ಹಾಕಲಾಗಿತ್ತು.

"ಗಾಂಧೀಜಿ ಅವರಿಗಾದ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ನಮ್ಮ ಮುತ್ತಜ್ಜ ನೆಹರೂ ಮತ್ತು ಅವರ ಸೋದರ ಸಂಬಂಧಿಗಳು ಅಲಹಾಬಾದ್ ರೈಲ್ವೆ ನಿಲ್ದಾಣಕ್ಕೆ ಹೋಗಿ ಕೆಲವು ಬ್ರಿಟಿಷರನ್ನು ಪ್ರಥಮ ದರ್ಜೆ ಬೋಗಿಗಳಿಂದ ಹೊರಹಾಕಿದರು ಎಂದು ರಾಹುಲ್ ವಿಡಿಯೊದಲ್ಲಿ ಹೇಳಿದ್ದಾರೆ. 1893ರ ಜೂನ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರನ್ನು ರೈಲಿನಿಂದ ಹೊರಗೆಸೆದಾಗ ನೆಹರೂ ಅವರಿಗೆ ಕೇವಲ 4 ವರ್ಷ. 4 ವರ್ಷದ ಮಗು ಅಲಹಾಬಾದ್‌ನ ರೈಲ್ವೆ ನಿಲ್ದಾಣಕ್ಕೆ ಹೋಗಿ ಪ್ರತಿಭಟನೆ ನಡೆಸಲು ಸಾಧ್ಯವೇ?ʼʼ ಲೆಹರ್‌ ಸಿಂಗ್‌ ಪ್ರಶ್ನಿಸಿದ್ದಾರೆ.