Indian Air Force: ವಾಯುಪಡೆ ವಿಮಾನದಿಂದ ಲೋಹದ ವಸ್ತು ಬಿದ್ದು ಮನೆಗೆ ಹಾನಿ
ಭಾರತೀಯ ವಾಯುಪಡೆಯ (Indian Air Force) ವಿಮಾನದಿಂದ ಲೋಹದ ವಸ್ತುವೊಂದು ಆಕಾಶದಿಂದ ಕೆಳಗೆ ಬಿದ್ದಿದ್ದು, ಇದರಿಂದ ಮನೆಯೊಂದಕ್ಕೆ ಹಾನಿಯಾಗಿರುವ ಘಟನೆ ಶುಕ್ರವಾರ ಮಧ್ಯಪ್ರದೇಶದ (Madhya pradesh) ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯೊಂದಕ್ಕೆ ಬಹುತೇಕ ಹಾನಿಯಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಇದೊಂದು ಆಕಸ್ಮಿಕ ಘಟನೆಯಾಗಿದೆ. ಈ ಕುರಿತು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿರುವ ಭಾರತೀಯ ವಾಯುಪಡೆ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ತಿಳಿಸಿದೆ.


ಭೋಪಾಲ್: ಭಾರತೀಯ ವಾಯುಪಡೆಯ ವಿಮಾನದಿಂದ ಲೋಹದ ವಸ್ತುವೊಂದು ಆಕಾಶದಿಂದ ಕೆಳಗೆ ಬಿದ್ದಿದ್ದು, ಇದರಿಂದ ಮನೆಯೊಂದಕ್ಕೆ ಹಾನಿಯಾಗಿರುವ ಘಟನೆ ಶುಕ್ರವಾರ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯೊಂದಕ್ಕೆ ಬಹುತೇಕ ಹಾನಿಯಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಶಿಕ್ಷಕ ಮನೋಜ್ ಸಾಗರ್ ಎಂಬವರ ಮನೆಯ ಮೇಲೆ ವಿಮಾನದಿಂದ ಲೋಹದ ವಸ್ತು ಬಿದ್ದಿದೆ. ಇದೊಂದು ಆಕಸ್ಮಿಕ ಘಟನೆಯಾಗಿದೆ. ಈ ಕುರಿತು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿರುವ ಭಾರತೀಯ ವಾಯುಪಡೆ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ತಿಳಿಸಿದೆ.
ಘಟನೆಯ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಐಎಎಫ್, ವಿಮಾನದಿಂದ ಸ್ಫೋಟಕವಲ್ಲದ ಲೋಹದ ವಸ್ತುವೊಂದು ಆಕಸ್ಮಿಕವಾಗಿ ಕೆಳಗೆ ಬಿದ್ದಿದೆ. ಇದರಿಂದ ಶಿವಪುರಿ ಬಳಿಯ ನೆಲದ ಮೇಲಿನ ಆಸ್ತಿಗೆ ಉಂಟಾದ ಹಾನಿಗೆ ಐಎಎಫ್ ವಿಷಾದ ವ್ಯಕ್ತಪಡಿಸುತ್ತದೆ ಮತ್ತು ಘಟನೆಯ ಬಗ್ಗೆ ಈಗಾಗಲೇ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದೆ.
ಶಿಕ್ಷಕ ಮನೋಜ್ ಸಾಗರ್ ಅವರ ಮನೆಯ ಛಾವಣಿಯ ಮೇಲೆ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಭಾರವಾದ ವಸ್ತು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಶಿವಪುರಿಯ ಪಿಚೋರ್ ಪಟ್ಟಣದಲ್ಲಿರುವ ಶಿಕ್ಷಕ ಮನೋಜ್ ಸಾಗರ್ ಅವರ ಮನೆಯ ಎರಡು ಕೊಠಡಿಗಳಿಗೆ ಸಂಪೂರ್ಣ ಹಾನಿಯಾಗಿದೆ. ಮನೆಯ ಅವಶೇಷಗಳು ಹತ್ತಿರದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿದ್ದರಿಂದ ಕಾರಿಗೂ ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಗರ್ ಅವರು ತಮ್ಮ ಮಕ್ಕಳೊಂದಿಗೆ ಮನೆಯೊಳಗೆ ಕುಳಿತು ಆಹಾರ ಸೇವಿಸುತ್ತಿದ್ದಾಗ ಈ ಘಟನೆ ನಡೆದಿದೆ. ಅವರ ಪತ್ನಿ ಅಡುಗೆಮನೆಯಲ್ಲಿದ್ದರು. ಛಾವಣಿಯ ಮೇಲೆ ವಸ್ತುವೊಂದು ಬಡಿದು ಜೋರಾದ ಸ್ಫೋಟದ ಸದ್ದು ಕೇಳಿದೆ. ಇದರಿಂದ ಸಂಪೂರ್ಣ ಛಾವಣಿ ತೆರೆದುಕೊಂಡಿತು ಮತ್ತು ಅಂಗಳದಲ್ಲಿ ಸುಮಾರು ಎಂಟರಿಂದ ಹತ್ತು ಅಡಿ ಆಳದ ಹೊಂಡ ಉಂಟಾಗಿದೆ.
ಇದನ್ನೂ ಓದಿ: Pahalgam Terror Attack: 'ಮಕ್ಕಳ ಚಿಕಿತ್ಸೆಗೆ ಅವಕಾಶ ಕೊಡಿ'; ಕಣ್ಣೀರು ಹಾಕ್ತಾ ಬೇಡಿಕೊಂಡ ಪಾಕ್ ವ್ಯಕ್ತಿ
ಸ್ಫೋಟದಿಂದ ಉಂಟಾದ ಕಂಪನಗಳು ನೆರೆಮನೆಯವರ ಅನುಭವಕ್ಕೂ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು. ವಾಯುಪಡೆಯ ಜೆಟ್ ಆಕಾಶದಲ್ಲಿ ಹಾರುತ್ತಿದ್ದಾಗ ಭಾರವಾದ ಲೋಹದ ವಸ್ತು ಮನೋಜ್ ಸಾಗರ್ ಅವರ ಮನೆಯ ಮೇಲೆ ಬಿದ್ದಿತು. ಇದರಿಂದಾಗಿ ಅವರ ಮನೆಯ ಎರಡು ಹೊರಗಿನ ಕೊಠಡಿಗಳು ಹಾನಿಗೊಳಗಾಗಿವೆ. ಮನೆಯಲ್ಲಿ ನಾಲ್ವರು ಸದಸ್ಯರಿದ್ದರು. ಎಲ್ಲರೂ ಸುರಕ್ಷಿತರಾಗಿದ್ದಾರೆ. ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳ ತಂಡ ಸ್ಥಳದಲ್ಲಿದೆ ಎಂದು ಶಿವಪುರಿಯ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ಘಟನೆಯ ಕುರಿತು ವಾಯುಪಡೆ ಮತ್ತು ಇತರ ಸಂಸ್ಥೆಗಳ ಸಮನ್ವಯದೊಂದಿಗೆ ತನಿಖೆ ನಡೆಸಲಾಗುತ್ತಿದೆ. ಸಂಪೂರ್ಣ ತನಿಖೆಯ ಬಳಿಕವೇ ಅದು ಏನು, ಎಲ್ಲಿಂದ ಬಂತು ಎಂದು ತಿಳಿದುಕೊಳ್ಳಬಹುದು. ಈ ಬಗ್ಗೆ ಗ್ವಾಲಿಯರ್ ವಾಯುನೆಲೆಯನ್ನು ಸಂಪರ್ಕಿಸಲಾಗಿದೆ. ಅಲ್ಲಿಂದ ತಜ್ಞರ ತಂಡ ಬಂದ ಬಳಿಕವೇ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಪ್ರಶಾಂತ್ ಶರ್ಮಾ ತಿಳಿಸಿದ್ದಾರೆ.