Pahalgam Attack: ಸ್ಟೂಡೆಂಟ್ ವೀಸಾ ಮೂಲಕ ಪಾಕ್‌ಗೆ ಹೋದವ ಉಗ್ರರ ಜೊತೆ ಭಾರತಕ್ಕೆ ರೀ ಎಂಟ್ರಿ!
Pakistan Student Visa: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾದ ಗುರ್ರೆ ಗ್ರಾಮದ ಮೂಲದ ಆದಿಲ್ ಅಹ್ಮದ್ ಥೋಕರ್, ಪಹಲ್ಗಾಮ್‌ನ ಬೈಸರನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ರೂವಾರಿಗಳಲ್ಲಿ ಒಬ್ಬ. ಈತ ವಿದ್ಯಾರ್ಥಿ ವೀಸಾದ ಮೂಲಕ ಪಾಕಿಸ್ತಾನಕ್ಕೆ ಈ ತೆರಳಿದ್ದ ಎಂಬ ಸಂಗತಿ ಇದೀಗ ತನಿಖೆ ವೇಳೆ ಬಯಲಾಗಿದೆ.


ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್(Pahalgam Terror Attack) ಉಗ್ರರ ದಾಳಿಯ ನಡೆಸಿರುವ ಭಯೋತ್ಪಾದಕರ ಬಗ್ಗೆ ತನಿಖೆ ವೇಳೆ ಹತ್ತು ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಈ ಘನಘೋರ ಕೃತ್ಯದ ಹಿಂದಿರುವ ಪ್ರಮುಖ ರೂವಾರಿಗಳಲ್ಲಿ ಒಬ್ಬನಾದ ಆದಿಲ್ ಅಹ್ಮದ್ ಥೋಕರ್ ಪಾಕಿಸ್ತಾನದ ವಿದ್ಯಾರ್ಥಿ ವೀಸಾದ ಮೂಲಕ 2018ರಲ್ಲಿ ಅಲ್ಲಿಗೆ ತೆರಳಿದ್ದು, ಆರು ವರ್ಷಗಳ ನಂತರ ಮೂರರಿಂದ ನಾಲ್ಕು ಭಯೋತ್ಪಾದಕರೊಂದಿಗೆ ತನ್ನ ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾದಲ್ಲಿರುವ ಗುರ್ರೆ ಎಂಬ ತನ್ನ ಗ್ರಾಮಕ್ಕೆ ಮರಳಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಕಣಿವೆ ರಾಜ್ಯದಿಂದ ಪಾಕಿಸ್ತಾನದತ್ತ
2018 ರಲ್ಲಿ, ಆದಿಲ್ ಅಹ್ಮದ್ ಥೋಕರ್ ಗುರ್ರೆಯಲ್ಲಿರುವ ತನ್ನ ಮನೆಯನ್ನು ತೊರೆದು ವಿದ್ಯಾರ್ಥಿ ವೀಸಾದಲ್ಲಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ. ಗುಪ್ತಚರ ಅಧಿಕಾರಿಗಳ ಪ್ರಕಾರ, ಥೋಕರ್ ಆರಂಭದಲ್ಲೇ ಇಸ್ಲಾಂ ಮೂಲಭೂತವಾದಿಯಾಗಿದ್ದ. ಭಾರತವನ್ನು ತೊರೆಯುವ ಮೊದಲೇ ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿರುವ ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಎಂದು ಗುಪ್ತಚರ ಮೂಲಗಳು ಹೇಳುತ್ತವೆ. ಪಾಕಿಸ್ತಾನಕ್ಕೆ ಬಂದ ನಂತರ, ಥೋಕರ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಿಧಾನವಾಗಿ ಅವನು ತನ್ನ ಕುಟುಂಬದೊಂದಿಗೆ ಸಂಪರ್ಕ ಕಡಿದುಕೊಂಡಿದ್ದ. ಸುಮಾರು ಎಂಟು ತಿಂಗಳವರೆಗೆ ಅವನು ಬದುಕಿದ್ದಾನೆ ಎಂಬುದಕ್ಕೆ ಯಾವುದೇ ರೀತಿಯ ಕುರುಹು ಇರಲಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಆತ ಆಕ್ಟೀವ್ ಆಗಿರಲಿಲ್ಲ. ಅದಾಗ್ಯೂ ಎನ್‌ಐಎ ಈತನ ಮೇಲೆ ಕಣ್ಣಿಡುವ ಪ್ರಯತ್ನವನ್ನು ನಡೆಸುತ್ತಲೇ ಇತ್ತು.
2024 ರಲ್ಲಿ ರೀ ಎಂಟ್ರಿ
2024 ರ ಅಂತ್ಯದ ವೇಳೆಗೆ, ಆದಿಲ್ ಅಹ್ಮದ್ ಥೋಕರ್ ಭಾರತಕ್ಕೆ ರೀ ಎಂಟ್ರಿ ಕೊಟ್ಟಿದ್ದ. ಪೂಂಚ್-ರಾಜೌರಿ ವಲಯದ ಮೂಲಕ ನಿಯಂತ್ರಣ ರೇಖೆಯನ್ನು (LoC) ದಾಟಿ ಭಾರತಕ್ಕೆ ಬಂದಿದ್ದ ಆತ ತನ್ನ ಜೊತೆ ಸುಮಾರು ನಾಲ್ಕು ಉಗ್ರರನ್ನೂ ಕರೆ ತಂದಿದ್ದ. ಅವರಲ್ಲಿ ಒಬ್ಬ ಪಾಕಿಸ್ತಾನಿ ಪ್ರಜೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮತ್ತೊಬ್ಬ ಪ್ರಮುಖ ಆರೋಪಿ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಎಂದು ಗುರುತಿಸಲಾಗಿದೆ. ಅನಂತ್‌ನಾಗ್‌ಗೆ ಒಮ್ಮೆ ಬಂದ ನಂತರ, ಥೋಕರ್ ಭೂಗತನಾಗಿದ್ದ. ಈತ ಪಾಕ್ ಮೂಲದ ಶಂಕಿತ ಉಗ್ರರಿಗೆ ಆಶ್ರಯ ನೀಡುತ್ತಾ ಭಯೋತ್ಪದಕಾ ಕೃತ್ಯದಲ್ಲಿ ಸಕ್ರಿಯನಾಗಿದ್ದಾನೆ ಎನ್ನಲಾಗಿದೆ. ನಿನ್ನೆಯಷ್ಟೇ ಅನಂತನಾಗ್‌ನಲ್ಲಿರುವ ಆತನ ಮನೆಯನ್ನು ಧ್ವಂಸ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Pahalgam terror Attack: ಪಹಲ್ಗಾಂ ದಾಳಿ ಸಮರ್ಥಿಸಿಕೊಂಡ ಮಂಗಳೂರಿನ ವ್ಯಕ್ತಿಯ ಬಂಧನ
ಬರೋಬ್ಬರಿ 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ, ಉಗ್ರರ ಬೇಟೆಗಿಳಿದಿರುವ ಭಾರತೀಯ ಸೇನೆ, ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಸೇರಿದಂತೆ ಐದು ಭಯೋತ್ಪಾದಕರ ಮನೆಗಳನ್ನು ಪುಡಿಗಟ್ಟಿದೆ. ಅಧಿಕಾರಿಗಳ ಪ್ರಕಾರ, ಶೋಪಿಯಾನ್, ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಎಲ್‌ಇಟಿ ಕಾರ್ಯಕರ್ತರು ಮತ್ತು ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ಶಂಕಿತರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿವೆ. ನಿನ್ನೆ ಥೋಕರ್ ಮತ್ತು ಇನ್ನೊಬ್ಬ ಉಗ್ರನ ಮನೆಯನ್ನು ಸೇನೆ ಧ್ವಂಸ ಮಾಡಲಾಗಿತ್ತು. ಇದಾದ ಬಳಿಕ ಶೋಪಿಯಾನ್‌ನ ಚೋಟಿಪೋರಾ ಗ್ರಾಮದಲ್ಲಿ, ಎಲ್‌ಇಟಿ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆಯ ಮನೆಯನ್ನು ನೆಲಸಮ ಮಾಡಲಾಗಿದೆ. ಕುಟ್ಟೆ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ ಮತ್ತು ರಾಷ್ಟ್ರವಿರೋಧಿ ಕಾರ್ಯಾಚರಣೆಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಲ್ಗಾಮ್‌ನ ಮಾತಲಂ ಪ್ರದೇಶದಲ್ಲಿ ಸಕ್ರಿಯ ಭಯೋತ್ಪಾದಕ ಜಾಹಿದ್ ಅಹ್ಮದ್ ಮತ್ತೊಂದು ಮನೆಯನ್ನು ಕೆಡವಲಾಯಿತು. ಪುಲ್ವಾಮಾದ ಮುರ್ರಾನ್ ಪ್ರದೇಶದಲ್ಲಿ, ಭಯೋತ್ಪಾದಕ ಅಹ್ಸಾನ್ ಉಲ್ ಹಕ್ ಮನೆಯನ್ನು ಸ್ಫೋಟಗೊಳಿಸಿ ನೆಲಸಮ ಮಾಡಲಾಯಿತು. 2018 ರಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನಾ ತರಬೇತಿ ಪಡೆದಿದ್ದ ಅಹ್ಸಾನ್ ಇತ್ತೀಚೆಗೆ ಕಣಿವೆಗೆ ಮತ್ತೆ ಎಂಟ್ರಿ ಕೊಟ್ಟು ಸಕ್ರಿಯನಾಗಿದ್ದ ಎನ್ನಲಾಗಿದೆ. ಜೂನ್ 2023 ರಿಂದ ಸಕ್ರಿಯವಾಗಿರುವ ಎಲ್‌ಇಟಿ ಭಯೋತ್ಪಾದಕ ಎಹ್ಸಾನ್ ಅಹ್ಮದ್ ಶೇಖ್‌ನ ಮತ್ತೊಂದು ಎರಡು ಅಂತಸ್ತಿನ ಮನೆಯನ್ನು ಕೆಡವಲಾಯಿತು. ಪುಲ್ವಾಮಾದ ಕಚಿಪೋರಾ ಪ್ರದೇಶದಲ್ಲಿ ನಡೆದ ಸ್ಫೋಟದಲ್ಲಿ 2023 ರಿಂದ ಸಕ್ರಿಯವಾಗಿರುವ ಐದನೇ ಭಯೋತ್ಪಾದಕ ಹರಿಸ್ ಅಹ್ಮದ್‌ನ ನಿವಾಸವನ್ನು ಧ್ವಂಸಗೊಳಿಸಲಾಯಿತು. ಎಲ್ಲಾ ಭಯೋತ್ಪಾದಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.