ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

JD Vance India Visit: ದ್ವಿಪಕ್ಷೀಯ ಮಾತುಕತೆಗಾಗಿ ಭಾರತಕ್ಕೆ ಬಂದಿಳಿದ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್

JD Vance: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ 4 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ಸೋಮವಾರ (ಏ. 21) ಬೆಳಗ್ಗೆ ಪತ್ನಿ ಉಷಾ ವ್ಯಾನ್ಸ್ ಜತೆಗೆ ದಿಲ್ಲಿಗೆ ಬಂದಿಳಿದರು. ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ವ್ಯಾನ್ಸ್ ಅವರ ಮೊದಲ ಭಾರತ ಭೇಟಿ ಇದಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಸ್ವಾಗತಿಸಿದರು.

ಭಾರತೀಯ ಮೂಲದ ಪತ್ನಿಯೊಂದಿಗೆ ದಿಲ್ಲಿಗೆ ಆಗಮಿಸಿದ ಅಮೆರಿಕ ಉಪಾಧ್ಯಕ್ಷ

Profile Ramesh B Apr 21, 2025 11:13 AM

ಹೊಸದಿಲ್ಲಿ: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (JD Vance) 4 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ಸೋಮವಾರ (ಏ. 21) ಬೆಳಗ್ಗೆ ಪತ್ನಿ ಉಷಾ ವ್ಯಾನ್ಸ್ ಜತೆಗೆ ದಿಲ್ಲಿಗೆ ಬಂದಿಳಿದರು. ಪಾಲಮ್‌ ವಿಮಾನ ನಿಲ್ದಾನಕ್ಕೆ ಬಂದಿಳಿದ ಜೆ.ಡಿ. ವಾನ್ಸ್ ದಂಪತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಸ್ವಾಗತಿಸಿದರು. ''ಅಮೆರಿಕ ಉಪಾಧ್ಯಕ್ಷರಿದ್ದ ವಿಮಾನವು ಹೊಸದಿಲ್ಲಿಯ ಪಾಲಂ ತಾಂತ್ರಿಕ ಪ್ರದೇಶದಲ್ಲಿ ಬಂದಿಳಿಯಿತು. ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಲಿದ್ದು, ಭಾರತ-ಅಮೆರಿಕ ಸಂಬಂಧಗಳನ್ನು ಇನ್ನಷ್ಟು ಉತ್ತಮಪಡಿಸುವ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆಯಿದೆʼʼ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಚರ್ಚೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ವ್ಯಾನ್ಸ್ ಅವರ ಮೊದಲ ಭಾರತ ಭೇಟಿ ಇದಾಗಿದೆ. ಅವರೊಂದಿಗೆ ಪೆಂಟಗನ್ ಮತ್ತು ವಿದೇಶಾಂಗ ಇಲಾಖೆಯ ಪ್ರತಿನಿಧಿಗಳು ಸೇರಿದಂತೆ ಐದು ಸದಸ್ಯರ ನಿಯೋಗವಿದೆ.

ದಿಲ್ಲಿಗೆ ಬಂದಿಳಿದ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್:



ಈ ಸುದ್ದಿಯನ್ನೂ ಓದಿ: JD Vance: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇಂದು ಭಾರತಕ್ಕೆ ಭೇಟಿ-ದೆಹಲಿಯಲ್ಲಿ ಹೈ ಸೆಕ್ಯೂರಿಟಿ

"ಈ ಭೇಟಿಯು ಎರಡು ದೇಶಗಳ ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಲು ನೆರವಾಗಲಿದೆ. ಜತೆಗೆ ಫೆ. 13ರಂದು ಪ್ರಧಾನಿ ಮೋದಿ ಅಮೆರಿಕ ಭೇಟಿಯ ಸಮಯದಲ್ಲಿ ಹೊರಡಿಸಲಾದ ಭಾರತ-ಅಮೆರಿಕ ಜಂಟಿ ಹೇಳಿಕೆಯ ಅನುಷ್ಠಾನವನ್ನು ಪರಿಶೀಲಿಸಲಾಗುತ್ತದೆ. ಎರಡೂ ಕಡೆಯವರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆʼʼ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಧಾನಿ ಮೋದಿ ಅವರ ಭೇಟಿಯಾದ ನಂತರ, ವ್ಯಾನ್ಸ್ ದಂಪತಿ ರಾಜಸ್ಥಾನದ ಜೈಪುರ ಮತ್ತು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ. ಮಂಗಳವಾರ ಅವರು ಜೈಪುರದಲ್ಲಿರುವ ಅಮೆರ್ ಅರಮನೆಯನ್ನು ವೀಕ್ಷಿಸಲಿದ್ದಾರೆ. ನಂತರ ವ್ಯಾನ್ಸ್ ರಾಜಸ್ಥಾನ ಇಂಟರ್‌ನ್ಯಾಶನಲ್‌ ಸೆಂಟರ್‌ನಲ್ಲಿ ನಡೆಯುವ ಅಮೆರಿಕ-ಭಾರತ ಬಿಸಿನೆಸ್ ಶೃಂಗಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಇದರಲ್ಲಿ ಭಾರತ ಮತ್ತು ಅಮೆರಿಕದ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದು, ವ್ಯಾನ್ಸ್ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ.

ಬುಧವಾರ ಅಮೆರಿಕ ಉಪಾಧ್ಯಕ್ಷ ತಾಜ್ ಮಹಲ್ ಭೇಟಿಗಾಗಿ ಆಗ್ರಾಕ್ಕೆ ಪ್ರಯಾಣಿಸಲಿದ್ದಾರೆ. ಇಲ್ಲಿ ಸುಮಾರು 3 ಗಂಟೆಗಳ ಕಾಲ ಅವರು ಇರಲಿದ್ದು, ಅಂದೇ ಮಧ್ಯಾಹ್ನ ಜೈಪುರಕ್ಕೆ ಮರಳಲಿದ್ದಾರೆ. ಜತೆಗೆ ಜೈಪುರ ಸಿಟಿ ಪ್ಯಾಲೇಸ್‌ಗೆ ಭೇಟಿ ನೀಡಲಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಭೇಟಿ

ವ್ಯಾನ್ಸ್ ಮಂಗಳವಾರ ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಮತ್ತು ರಾಜ್ಯಪಾಲ ಹರಿಭಾವು ಬಗಾಡೆ ಅವರನ್ನು ಭೇಟಿಯಾಗಲಿದ್ದಾರೆ. ಏ. 24 ಅಮೆರಿಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

"ಅಮೆರಿಕ ಉಪಾಧ್ಯಕ್ಷರ ಉನ್ನತ ಮಟ್ಟದ ಭೇಟಿ ಹಿನ್ನೆಲೆಯಲ್ಲಿ ದಿಲ್ಲಿಯ ವಿವಿಧ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದೇವೆʼʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.