GT vs LSG: ಮಿಚೆಲ್ ಮಾರ್ಷ್ ಶತಕ, ಗುಜರಾತ್ ಟೈಟನ್ಸ್ಗೆ ಶಾಕ್ ನೀಡಿದ ಲಖನೌ ಸೂಪರ್ ಜಯಂಟ್ಸ್!
GT vs LSG Match Highlights: ಮಿಚೆಲ್ ಮಾರ್ಷ್ ಭರ್ಜರಿ ಶತಕ ಹಾಗೂ ವಿಲಿಯಮ್ ರೌರ್ಕಿ ಶಿಸ್ತುಬದ್ದ ಬೌಲಿಂಗ್ ದಾಳಿಯ ಸಹಾಯದಿಂದ ಲಖನೌ ಸೂಪರ್ ಜಯಂಟ್ಸ್ ತಂಡ, ಗುಜರಾತ್ ಟೈಟನ್ಸ್ ವಿರುದ್ಧ 33 ರನ್ಗಳಿಂದ ಗೆಲುವು ಪಡೆಯಿತು. ಆ ಮೂಲಕ 2025ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಎಲ್ಎಸ್ಜಿ ಆರನೇ ಗೆಲುವು ದಾಖಲಿಸಿತು.



ಲಖನೌ ಸೂಪರ್ ಜಯಂಟ್ಸ್ಗೆ 33 ರನ್ ಜಯ
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಂಗಣದಲ್ಲಿ ಗುರುವಾರ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 64ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ಲಖನೌ ಸೂಪರ್ ಜಯಂಟ್ಸ್ 33 ರನ್ಗಳಿಂದ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ಆರನೇ ಗೆಲುವು ದಾಖಲಿಸಿತು.

ಗುಜರಾತ್ ಟೈಟನ್ಸ್: 202-9
236 ರನ್ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್ ಟೈಟನ್ಸ್ ತಂಡ, ತನ್ನ ಪಾಲಿನ 20 ಓವರ್ಗಳನ್ನು ಪೂರ್ಣಗೊಳಿಸಿದರೂ 9 ವಿಕೆಟ್ಗಳ ನಷ್ಟಕ್ಕೆ 202 ರನ್ಗಳಿಗೆ ಸೀಮಿತವಾಯಿತು. ಆ ಮೂಲಕ 33 ರನ್ಗಳಿಂದ ಸೋಲು ಒಪ್ಪಿಕೊಂಡಿತು. ಗುಜರಾತ್ ಟೈಟನ್ಸ್ ಪರ ಶಾರೂಖ್ ಖಾನ್ 57 ರನ್ ಗಳಿಸಿದರು.

ಶಾರುಖ್ ಖಾನ್ 57 ರನ್
ಗುಜರಾತ್ ಟೈಟನ್ಸ್ ಪರ ಶುಭಮನ್ ಗಿಲ್ (35), ಜೋಸ್ ಬಟ್ಲರ್ (33) ಹಾಗೂ ಶೆರ್ಫೆನ್ ಋದರ್ಫೋರ್ಡ್ (38) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಆದರೆ, ಕೊನೆಯಲ್ಲಿ 29 ಎಸೆತಗಳಲ್ಲಿ 57 ರನ್ ಗಳಿಸಿದರೂ ಶಾರುಖ್ ಖಾನ್ ಗುಜರಾತ್ಗೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ವಿಲಿಯಮ್ ರೌರ್ಕಿಗೆ 3 ವಿಕೆಟ್
ಲಖನೌ ಸೂಪರ್ ಜಯಂಟ್ಸ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ವಿಲಿಯಮ್ ರೌರ್ಕಿ 4 ಓವರ್ಗಳಿಗೆ 27 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತರು. ಆಯುಷ್ ಬದೋನಿ ಹಾಗೂ ಆವೇಶ್ ಖಾನ್ ತಲಾ ಎರಡೆರಡು ವಿಕೆಟ್ ಕಿತ್ತರು.

235 ರನ್ ಕಲೆ ಹಾಕಿದ ಲಖನೌ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಲಖನೌ ಸೂಪರ್ ಜಯಂಟ್ಸ್ ತಂಡ, ತನ್ನ ಪಾಲಿನ 20 ಓವರ್ಗಳಿಗೆ 2 ವಿಕೆಟ್ ನಷ್ಟಕ್ಕೆ 235 ರನ್ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಗುಜರಾತ್ ಟೈಟನ್ಸ್ಗೆ 236 ರನ್ಗಳ ಗುರಿಯನ್ನು ನೀಡಿತ್ತು.

ಮಿಚೆಲ್ ಮಾರ್ಷ್ ಭರ್ಜರಿ ಶತಕ
ಲಖನೌ ಸೂಪರ್ ಜಯಂಟ್ಸ್ ತಂಡದ ಪರ ಬ್ಯಾಟಿಂಗ್ನಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದು ಮಿಚೆಲ್ ಮಾರ್ಷ್! ಅವರು ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ, 64 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 117 ರನ್ಗಳನ್ನು ಬಾರಿಸಿದರು. ಇವರಿಗೆ ಸಾಥ್ ನೀಡಿದ್ದ ನಿಕೋಲಸ್ ಪೂರನ್ 27 ಎಸೆತಗಳಲ್ಲಿ ಅಜೇಯ ಅಜೇಯ 56 ರನ್ ಗಳಿಸಿದರು. ಇದಕ್ಕೂ ಮುನ್ನ ಏಡೆನ್ ಮಾರ್ಕ್ರಮ್ 36 ರನ್ ಸಿಡಿಸಿದ್ದರು.