Raj Kumar Birthday: ಕರುನಾಡ ಕಣ್ಮಣಿ, ವರನಟ ಡಾ. ರಾಜ್ ಜನ್ಮದಿನ- ʻಬಂಗಾರದ ಮನುಷ್ಯʼನಿಗೆ ಅಭಿಮಾನಿಗಳಿಂದ ಗೌರವ ನಮನ
Dr. Raj Kumar Birthday today: ಕನ್ನಡ ಬೆಳ್ಳಿತೆರೆ ನಟಸಾರ್ವಭೌಮ, ಗಾನ ಗಂಧರ್ವ, ರಣಧೀರ ಕಂಠೀರವ ಡಾ. ರಾಜ್ಕುಮಾರ್ ಅವರ ಜನ್ಮ ದಿನಾಚರಣೆ. ಮೇರುನಟ 96ನೇ ಬರ್ತ್ಡೇಯನ್ನು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ.



ಇಂದು ವರನಟ ಡಾ. ರಾಜ್ಕುಮಾರ್ 96ನೇ ಹುಟ್ಟುಹಬ್ಬ. ಡಾ.ರಾಜ್ ನಮ್ಮನ್ನು ಅಗಲಿ ಹಲವು ವರ್ಷಗಳು ಕಳೆದರೂ ಅಭಿಮಾನಿಗಳ ಹೃದಯದಲ್ಲಿ ಇಂದೂ ಅಜರಾಮರಾಗಿದ್ದಾರೆ. ಡಾ.ರಾಜ್ ಕುಮಾರ್ ಹುಟ್ಟಿದ್ದು 1929, ಏಪ್ರಿಲ್ 24ರಂದು. ಪುಟ್ಟಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿ ಹಿರಿಮಗ ಈ ‘ಗಾಜನೂರು ಗಂಡು’. ಬಡತನ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದ ಡಾ.ರಾಜ್, ಓದಿದ್ದು ನಾಲ್ಕನೇ ಕ್ಲಾಸ್.

ಗುಬ್ಬಿ ವೀರಣ್ಣನವರ ಗುಬ್ಬಿ ನಾಟಕ ಕಂಪನಿಯಲ್ಲಿ ನಾಟಕಕಾರನಾಗಿ ದೀರ್ಘ ಕಾಲ ಕೆಲಸ ಮಾಡಿದ ನಂತರ ರಾಜ್ಕುಮಾರ್ ಚಿತ್ರರಂಗಕ್ಕೆ ಪ್ರವೇಶಿಸಿದರು , ನಂತರ ಅವರು ತಮ್ಮ ಎಂಟನೇ ವಯಸ್ಸಿನಲ್ಲಿ ಆ ಕಂಪನಿಯನ್ನು ಸೇರಿಕೊಂಡರು. ನಂತರ 1954 ರಲ್ಲಿ ಬಿಡುಗಡೆಯಾದ ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ಮೊದಲ ಅವಕಾಶ ಪಡೆದರು .

ಅವರು 205 ಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಭಕ್ತ ಕನಕದಾಸ (1960), ರಣಧೀರ ಕಂಠೀರವ (1960), ಸತ್ಯ ಹರಿಶ್ಚಂದ್ರ (1965), ಇಮ್ಮಡಿ ಪುಲಿಕೇಶಿ (1967), ಶ್ರೀ ಕೃಷ್ಣದೇವರಾಯ (1970), ಭಕ್ತ ಕುಂಬಾರ (1974) , ಮಯೂರ (1975) , ಬಬ್ರುವಾಹನ (1977) ಮತ್ತು ಭಕ್ತ ಪ್ರಹ್ಲಾದ (1983) ನಂತಹ ಚಲನಚಿತ್ರಗಳಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳನ್ನು ನಿರ್ವಹಿಸುವಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು.

1954 ರಿಂದ 1968 ರವರೆಗಿನ 15 ವರ್ಷಗಳ ಅವಧಿಯಲ್ಲಿ ಅವರ 13 ಚಲನಚಿತ್ರಗಳು ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (ರಜತ್ ಕಮಲ) ಪಡೆದಿವೆ. ಅವರ 17 ಚಲನಚಿತ್ರಗಳು ಐದು ವಿಭಿನ್ನ ವಿಭಾಗಗಳಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿವೆ.

ಸಿನಿಮಾಗಳ ಮೂಲಕ ಮನರಂಜನೆ ಒದಗಿಸಿದ್ದು ಮಾತ್ರವಲ್ಲದೇ, ನಾಡಿನ ನೆಲ ಜಲ ಭಾಷೆ ವಿಷಯ ಬಂದಾಗ ಹೋರಾಟದ ಹಾದಿಯನ್ನೂ ಹಿಡಿಯುತ್ತಿದ್ದರು. ನಾಡಿನ ಸಂರಕ್ಷಣೆ ವಿಷಯದಲ್ಲಿ ಸದಾ ಮುಂದಿರುತ್ತಿದ್ದರು. ಜೊತೆಗೆ ರಾಜಕೀಯದಿಂದ ದೂರವೇ ಉಳಿದರು. ನಟಸಾರ್ವಭೌಮ ಅಂದು ಮನಸ್ಸು ಮಾಡಿದ್ದರೆ ರಾಜಕಾಕೀಯಕ್ಕಿಳಿಯಬಹುದಿತ್ತು. ಅವಕಾಶ, ಅರ್ಹತೆ ಎಲ್ಲವೂ ಇದ್ದರೂ ಅಣ್ಣಾವ್ರು ರಾಜಕೀಯಕ್ಕೆ ಬರಲಿಲ್ಲ. ಉಸಿರಿರುವವರೆಗೂ ಕಲಾ ಸೇವೆಗೆ ತಮ್ಮನ್ನು ಸಮರ್ಪಿಸಿದ್ದರು.

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಕರ್ನಾಟಕ ರತ್ನ, ಅತ್ಯುತ್ತಮ ಗಾಯಕ ರಾಷ್ಟ್ರ ಪ್ರಶಸ್ತಿ, ಅಮೆರಿಕಾದ ಕೆಂಟಕಿ ಕರ್ನಲ್ ಪ್ರಶಸ್ತಿ, ನಾಡೋಜ, ಗೌರವ ಡಾಕ್ಟರೇಟ್ ಸೇರಿದಂತೆ ರಾಜ್ಯ, ದೇಶ, ವಿದೇಶದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಪ್ರಶಸ್ತಿ ಈ ವಿಜಯನಗರದ ವೀರಪುತ್ರನ ಕೀರ್ತಿ ಕಿರೀಟ ಸೇರಿದೆ.

ಡಾ.ರಾಜ್ ಬರೀ ನಟರೊಂದೇ ಅಲ್ಲ, ಗಾಯಕರಾಗಿಯೂ ಪ್ರಸಿದ್ಧರು. ತಮ್ಮ ಗಾಯನಕ್ಕಾಗೇ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಡಾ.ರಾಜ್. ‘ಸಂಪತ್ತಿಗೆ ಸವಾಲ್’ ಸಿನಿಮಾದ ಹಾಡಿನಿಂದ ಶುರುವಾದ ರಾಜ್ ಗಾಯನಯಾತ್ರೆ ಕೊನೆಯವರೆಗೂ ಸಾಗುತ್ತಲೇ ಇತ್ತು.

ನಟ ಡಾ.ರಾಜ್ ಕುಮಾರ್ ಅವರು 2006ರ ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಅಂದು ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಆದ್ರೆ ಅವರ ನೆನಪು ಪ್ರತೀ ಕನ್ನಡಿಗರೆದೆಯಲ್ಲಿ ಅಚ್ಚಳಿಯದೇ ಉಳಿದಿದೆ. ಇಂದಿಗೂ ಕನ್ನಡ ಚಿತ್ರರಂಗದ ಕೀರ್ತಿಯಾಗಿ ಅವರ ನಟಸಾರ್ವಭೌಮನ ಸ್ಮರಣೆಯಾಗುತ್ತಿದೆ.