ರಾಜತಾಂತ್ರಿಕ ಬಿಕ್ಕಟ್ಟು; ಹಾಲಿ ವರ್ಷದ ಏಷ್ಯಾಕಪ್ ರದ್ದು?
ಪಹಲ್ಗಾಮ್ ಉಗ್ರರ ದಾಳಿಯ ನಂತರ ಪಾಕಿಸ್ತಾನ ಜತೆಗಿನ ಸಂಬಂಧ ಮತ್ತಷ್ಟು ಹಳಸಿದ್ದು, ಭಾರತ ಸದ್ಯ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ಕ್ರಿಕೆಟ್ ಆಡುವ ಮನಸ್ಥಿತಿಯಲ್ಲಿ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬಿಸಿಸಿಐಗೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆಯೂ ಇಲ್ಲ.


ನವದೆಹಲಿ: ಪಹಲ್ಗಾಮ್ ದಾಳಿಯ(pahalgam attack) ಬಳಿಕ ಪಾಕಿಸ್ತಾನ(India & Pakistan) ಜತೆ ಯಾವುದೇ ಕ್ರಿಕೆಟ್ ಪಂದ್ಯ ಆಡಬಾರದು ಎಂದು ಮಾಜಿ ಆಟಗಾರರು ಒತ್ತಾಯ ಮಾಡುತ್ತಿರುವಾಗಲೇ ಭಾರತದ ಆತಿಥ್ಯದಲ್ಲೇ ನಿಗದಿಯಾಗಿರುವ ಹಾಲಿ ವರ್ಷದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ(Asia Cup 2025) ರದ್ದುಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದಕ್ಕೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಜತೆಗಿನ ಭಾರತದ ರಾಜತಾಂತ್ರಿಕ ಬಿಕ್ಕಟ್ಟು ಕಾರಣ ಎನ್ನಲಾಗಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಪೂರ್ವಸಿದ್ಧತೆಯಾಗಿ ಹಾಲಿ ವರ್ಷದ ಏಷ್ಯಾಕಪ್ ಟೂರ್ನಿ ಸೆಪ್ಟೆಂಬರ್ನಲ್ಲಿ ಚುಟುಕು ಕ್ರಿಕೆಟ್ ಮಾದರಿಯಲ್ಲೇ ನಿಗದಿಯಾಗಿದೆ.
8 ದೇಶಗಳ ಟೂರ್ನಿಯಲ್ಲಿ ಬಾಂಗ್ಲಾ ಜತೆಗೆ ಶ್ರೀಲಂಕಾ, ಅಫಘಾನಿಸ್ತಾನ, ಹಾಂಕಾಂಗ್, ಓಮನ್, ಯುಎಇ ಆಡುವ ಇತರ ದೇಶಗಳಾಗಿವೆ. ಪಹಲ್ಗಾಮ್ ಉಗ್ರರ ದಾಳಿಯ ನಂತರ ಪಾಕಿಸ್ತಾನ ಜತೆಗಿನ ಸಂಬಂಧ ಮತ್ತಷ್ಟು ಹಳಸಿದ್ದು, ಭಾರತ ಸದ್ಯ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ಕ್ರಿಕೆಟ್ ಆಡುವ ಮನಸ್ಥಿತಿಯಲ್ಲಿ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬಿಸಿಸಿಐಗೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆಯೂ ಇಲ್ಲ.
ಇದನ್ನೂ ಓದಿ IPL 2025 Points Table: ಗುಜರಾತ್ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕುಸಿತ ತಂಡ ಆರ್‌ಸಿಬಿ
ಬಾಂಗ್ಲಾ ಪ್ರವಾಸವೂ ಅನುಮಾನ
ಮತ್ತೊಂದೆಡೆ, ಹಿಂದುಗಳ ಮೇಲಿನ ದೌರ್ಜನ್ಯದಿಂದ ಬಾಂಗ್ಲಾದೇಶ ಜತೆಗಿನ ಕ್ರಿಕೆಟ್ ಸಂಬಂಧವೂ ಹಳಸುವ ಸಾಧ್ಯತೆ ಕಾಣಿಸಿದೆ. ಹೀಗಾಗಿ ಆಗಸ್ಟ್ನಲ್ಲಿ ನಿಗದಿಯಾಗಿರುವ ತಲಾ 3 ಏಕದಿನ, ಟಿ20 ಪಂದ್ಯಗಳ ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡವನ್ನು ಬಿಸಿಸಿಐ ಕಳುಹಿಸಿರುವುದು ಅನುಮಾನವೆನಿಸಿದೆ.
ಉದ್ವಿಗ್ನತೆ ಶಮನಕ್ಕೆ ಶೀಘ್ರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿಯ ಕುರಿತು ಚರ್ಚಿಸಲು ಶೀಘ್ರದಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ (ಯುಎನ್‌ಎಸ್‌ಸಿ) ನಡೆಯಲಿದೆ. ಇದು ಉಭಯ ದೇಶಗಳ ಬಿಕ್ಕಟ್ಟಿನ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಉದ್ವಿಗ್ನತೆ ಕಡಿಮೆ ಮಾಡಲು ಒಂದು ಅವಕಾಶವಾಗಿದೆ ಎಂದು ಯುಎನ್‌ಎಸ್‌ಸಿ ಮೇ ತಿಂಗಳ ಅಧ್ಯಕ್ಷ ಇವಾಂಜೆಲೋಸ್ ಸೆಕೆರಿಸ್ ತಿಳಿಸಿದ್ದಾರೆ.