IND vs ENG: ಭಾರತ ಟೆಸ್ಟ್ ತಂಡಕ್ಕೆ ಶುಭಮನ್ ಗಿಲ್ ನಾಯಕನಾಗುವ ಸಾಧ್ಯತೆ!
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬುಧವಾರ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ಹಠಾತ್ ವಿದಾಯ ಹೇಳಿದ್ದರು. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ರೋಹಿತ್ ಶರ್ಮಾ ಈ ಮಾಹಿತಿಯನ್ನು ಹಂಚಿಕೊಂಡಿದ್ದರು.ಇದಾದ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಮುಂದಿನ ನಾಯಕ ಯಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಶುಭಮನ್ ಗಿಲ್‌ಗೆ ನಾಯಕತ್ವ ನೀಡಬಹುದೆಂದು ವರದಿಯಾಗಿದೆ.

ಭಾರತ ಟೆಸ್ಟ್ ತಂಡಕ್ಕೆ ಶುಭಮನ್ ಗಿಲ್ ನಾಯಕನಾಗುವ ಸಾಧ್ಯತೆ!

ನವದೆಹಲಿ: ಭಾರತ ಏಕದಿನ ತಂಡದ ನಾಯಕ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma) ಮೇ 7 ರಂದು ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ (Rohit Sharma Test Retirement) ಹಠಾತ್ ವಿದಾಯ ಹೇಳಿದರು. ಆ ಮೂಲಕ ತಮ್ಮ 15 ವರ್ಷಗಳ ಟೆಸ್ಟ್ ವೃತ್ತಿ ಬದುಕವನ್ನು ಮುಗಿಸಿದರು. ಇಂಗ್ಲೆಂಡ್ ವಿರುದ್ದದ ಮುಂಬರುವ ಟೆಸ್ಟ್ ಸರಣಿಗೂ (IND vs ENG) ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗೆ ಇಳಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಇದರ ಬೆನ್ನಲ್ಲೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು ಹಾಗೂ ಏಕದಿನ ತಂಡದಲ್ಲಿ ಮುಂದುವರಿಯುವುದಾಗಿ ತಿಳಿಸಿದರು. ಇದೀಗ ಭಾರತ ಟೆಸ್ಟ್ ತಂಡಕ್ಕೆ ಮುಂದಿನ ನಾಯಕ ಯಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶುಭಮನ್ ಗಿಲ್‌ಗೆ ನಾಯಕತ್ವ ನೀಡಬಹುದೆಂದು ಹೇಳಲಾಗುತ್ತಿದೆ.
"ಭಾರತ ಟೆಸ್ಟ್ ತಂಡದ ನಾಯಕತ್ವದ ರೇಸ್‌ನಲ್ಲಿ ಶುಭಮನ್ ಗಿಲ್ ಅವರು ಮುಂಚೂಣಿಯಲ್ಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅತಿ ಶೀಘ್ರದಲ್ಲಿಯೇ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಲು ಬಿಸಿಸಿಐ ಎದುರು ನೋಡುತ್ತಿದೆ," ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದನ್ನು ಎನ್‌ಡಿಟಿವಿ ವರದಿ ಮಾಡಿದೆ.
Rohit sharma Test Retirement: ರೋಹಿತ್ ಶರ್ಮಾರ ಟೆಸ್ಟ್ ಕ್ರಿಕೆಟ್ ದಾಖಲೆಗಳು!
ಇದಕ್ಕೂ ಮುನ್ನ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ರೋಹಿತ್ ಶರ್ಮಾ ಅವರನ್ನು ವಜಾಗೊಳಿಸುವ ಆಯ್ಕೆದಾರರ ನಿರ್ಧಾರ (ಅವರು ನಿವೃತ್ತಿ ಘೋಷಿಸುವ ಮುನ್ನ) ತಂಡದಿಂದ ವಯಸ್ಸಾದ ಆಟಗಾರರನ್ನು ತೆಗೆದುಹಾಕುವ ಕರೆಗೆ, ಪರಿವರ್ತನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿತ್ತು. ಆದರೆ, ರೆಡ್-ಬಾಲ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಧಾರದ ಮೇಲೆ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಅದರಂತೆ ರೋಹಿತ್ ಶರ್ಮಾ ಏಕದಿನ ಸ್ವರೂಪದಲ್ಲಿ ತಂಡವನ್ನು ಮುನ್ನಡೆಸುವುದನ್ನು ಮುಂದುವರಿಸುತ್ತಾರೆ ಎಂದು ಹೇಳಿದೆ.

ರೋಹಿತ್ ಶರ್ಮಾ ಭಾವನಾತ್ಮಕ ವಿದಾಯ
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಸ್ಟೋರಿ ಹಂಚಿಕೊಳ್ಳುವ ಮೂಲಕ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. "ಎಲ್ಲರಿಗೂ ನಮಸ್ಕಾರ, ನಾನು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆಂದು ನಿಮ್ಮ ಬಳಿ ಹೇಳಲು ಬಯಸುತ್ತಿದ್ದೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವುದು ದೊಡ್ಡ ಗೌರವವಾಗಿದೆ. ಕಳೆದ ವರ್ಷಗಳಲ್ಲಿ ನನಗೆ ಪ್ರೀತಿ ಹಾಗೂ ಬೆಂಬಲ ನೀಡಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ಮುಂದುವರಿಯುತ್ತೇನೆ,"ಎಂದು ಹೇಳುವ ಮೂಲಕ ರೋಹಿತ್ ಶರ್ಮಾ ಟೆಸ್ಟ್ ಕ್ಯಾಪ್ ಅನ್ನು ಹಂಚಿಕೊಂಡಿದ್ದಾರೆ.