ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೆಸ್ಟ್‌ಗೆ ವಿದಾಯ ಹೇಳಿದ ರೋಹಿತ್‌ ಶರ್ಮಾಗೆ ವಿಶೇಷ ಸಂದೇಶ ರವಾನಿಸಿದ ಕ್ರಿಕೆಟ್‌ ದೇವರು!

ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿಜೀವನವನ್ನು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್ ಶ್ಲಾಘಿಸಿದ್ದಾರೆ. 2013ರಲ್ಲಿ ರೋಹಿತ್‌ ಶರ್ಮಾಗೆ ಚೊಚ್ಚಲ ಟೆಸ್ಟ್ ಕ್ಯಾಪ್ ನೀಡಿದ್ದನ್ನು ಕ್ರಿಕೆಟ್‌ ದೇವರು ನೆನಪಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ತಮ್ಮ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ರೋಹಿತ್‌ ಶರ್ಮಾಗೆ ಸಚಿನ್‌ ತೆಂಡೂಲ್ಕರ್‌ ವಿಶೇಷ ಸಂದೇಶ!

ರೋಹಿತ್‌ ಶರ್ಮಾಗೆ ಸಚಿನ್‌ ತೆಂಡೂಲ್ಕರ್‌ ವಿಶೇಷ ಸಂದೇಶ.

Profile Ramesh Kote May 8, 2025 9:11 PM

ನವದೆಹಲಿ: ರೋಹಿತ್ ಶರ್ಮಾ(Rohit Sharma) ಅವರ ಅದ್ಭುತ ಟೆಸ್ಟ್ ವೃತ್ತಿಜೀವನವನ್ನು ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಹಾಗೂ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. 2013ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ರೋಹಿತ್‌ ಶರ್ಮಾಗೆ 280ನೇ ಸಂಖ್ಯೆ ಟೆಸ್ಟ್‌ ಕ್ಯಾಪ್‌ ಅನ್ನು ನೀಡಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ರೋಹಿತ್ ತಮ್ಮ ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿ 177 ರನ್ ಗಳಿಸಿದ್ದರು ಹಾಗೂ ನಂತರ ಸರಣಿಯ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅಜೇಯ 111 ರನ್ ಬಾರಿಸಿದ್ದರು. ಭಾರತ ಎರಡೂ ಪಂದ್ಯಗಳನ್ನು ಇನಿಂಗ್ಸ್‌ ಅಂತರದಲ್ಲಿ ಗೆದ್ದಿತ್ತು. ಆ ಮೂಲಕ ರೋಹಿತ್‌ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ, ಸಚಿನ್‌ ತೆಂಡೂಲ್ಕರ್‌ ಅವರ ಕೊನೆಯ ಟೆಸ್ಟ್‌ ಇದಾಗಿತ್ತು.

"2013 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ನಿಮಗೆ ಟೆಸ್ಟ್ ಕ್ಯಾಪ್ ನೀಡಿದ್ದನ್ನು ಹಾಗೂ ಮತ್ತೊಂದು ದಿನ ಮುಂಬೈನ ವಾಂಖೆಡೆ ಕ್ರೀಡಾಂಗಣದ ಬಾಲ್ಕನಿಯಲ್ಲಿ ನಿಮ್ಮೊಂದಿಗೆ ನಿಂತಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ - ನಿಮ್ಮ ಪ್ರಯಾಣ ಅದ್ಭುತವಾಗಿದೆ. ಅಂದಿನಿಂದ ಇಲ್ಲಿಯವರೆಗೆ ನೀವು ಒಬ್ಬ ಆಟಗಾರನಾಗಿ ಮತ್ತು ನಾಯಕನಾಗಿ ಭಾರತೀಯ ಕ್ರಿಕೆಟ್‌ಗೆ ನೀವು ಅತ್ಯುತ್ತಮ ಕೊಡುಗೆಯನ್ನು ನೀಡಿದ್ದೀರಿ. ವೆಲ್‌ ಡನ್‌ ರೋಹಿತ್, ನಿಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಅಭಿನಂದನೆಗಳು ಮತ್ತು ನಿಮ್ಮ ಭವಿಷ್ಯಕ್ಕೆ ಶುಭವಾಗಲಿ," ಎಂದು ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿದ್ದಾರೆ.

Rohit sharma Retirement: ಟೆಸ್ಟ್‌ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳಿದ ರೋಹಿತ್‌ ಶರ್ಮಾ!

ರೋಹಿತ್ ಶರ್ಮಾ ಬುಧವಾರ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೋರಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೊಂದುವ ಬಗ್ಗೆ ಪ್ರಕಟಿಸಿದ್ದರು. ಆದಾಗ್ಯೂ, ಅವರು ಏಕದಿನ ಕ್ರಿಕೆಟ್ ಆಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ಆದರೆ, ಇಂಗ್ಲೆಂಡ್‌ ಪ್ರವಾಸದ ಟೆಸ್ಟ್ ಸರಣಿಗೂ ಮುನ್ನ ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಜೂನ್‌ 20ರಂದು ಇಂಗ್ಲೆಂಡ್‌ನಲ್ಲಿ ಭಾರತ ತಂಡದ ಟೆಸ್ಟ್‌ ಸರಣಿ ಆರಂಭವಾಗಲಿದ್ದು, ಇಲ್ಲಿ ಐದು ಪಂದ್ಯಗಳಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ.



ರೋಹಿತ್‌ ಶರ್ಮಾ ಟೆಸ್ಟ್‌ ಅಂಕಿಅಂಶಗಳು

ರೋಹಿತ್‌ ಶರ್ಮಾ ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ ಆಡಿದ 67 ಪಂದ್ಯಗಳಲ್ಲಿ 40.57ರ ಸರಾಸರಿಯಲ್ಲಿ 4,301 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ತಮ್ಮ 11 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ 12 ಶತಕಗಳು ಮತ್ತು 18 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು ಅಕ್ಟೋಬರ್ 2019 ರಲ್ಲಿ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 212 ರನ್‌ಗಳನ್ನು ಗಳಿಸಿದ್ದರು. ಇದು ಇವರ ಟೆಸ್ಟ್‌ ವೃತ್ತಿಜೀವನದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಭಾರತ ಟೆಸ್ಟ್‌ ತಂಡದಲ್ಲಿ ರೋಹಿತ್‌ ಶರ್ಮಾ ಸ್ಥಾನ ತುಂಬಬಲ್ಲ ಟಾಪ್‌ 5 ಆಟಗಾರರು!

ಕಳೆದ ವರ್ಷ ಟಿ20ಐನಿಂದ ನಿವೃತ್ತಿ

ಕಳೆದ ವರ್ಷ ಟಿ20 ವಿಶ್ವಕಪ್ ಗೆಲುವಿನ ನಂತರ ಬಲಗೈ ಬ್ಯಾಟ್ಸ್‌ಮನ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರ ನಾಯಕತ್ವದಲ್ಲಿ ಭಾರತ ತಂಡ, ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಮಣಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಇದು ಭಾರತದ ಪಾಲಿಗೆ ಮೂರನೇ ಚಾಂಪಿಯನ್ಸ್‌ ಟ್ರೋಫಿಯಾಗಿತ್ತು.

2022 ರಿಂದ ರೋಹಿತ್ ಶರ್ಮಾ 24 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ ಮತ್ತು 12 ಗೆಲುವುಗಳನ್ನು ಪಡೆದಿದ್ದಾರೆ. ಅವರ ದಶಕದ ವೃತ್ತಿಜೀವನದಲ್ಲಿ ಎರಡು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗಳಲ್ಲಿ ಕಾಣಿಸಿಕೊಂಡಿರುವುದು ಮತ್ತು 2020/21ರ ಸಾಲಿನಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ಅವರು ಕೂಡ ಪಾತ್ರರಾಗಿದ್ದರು.