Mike Hesson: ಪಾಕಿಸ್ತಾನ ತಂಡಕ್ಕೆ ಕೋಚ್ ಆಗಿ ನೇಮಕಗೊಂಡ ಆರ್‌ಸಿಬಿ ಮಾಜಿ ಡೈರೆಕ್ಟರ್!
ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಡೈರೆಕ್ಟರ್ ಮೈಕ್ ಹೇಸನ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಸೀಮಿತ ಓವರ್‌ಗಳ ಕೋಚ್ ಆಗಿ ನೇಮಿಸಲಾಗಿದೆ. ಆ ಮೂಲಕ ಪಾಕಿಸ್ತಾನ ಕ್ರಿಕೆಟ್ ಅನ್ನು ಬಹು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ಕಿವೀಸ್ ದಿಗ್ಗಜನಿಗೆ ನೀಡಲಾಗಿದೆ.

ಪಾಕಿಸ್ತಾನ ವೈಟ್‌ಬಾಲ್ ತಂಡಕ್ಕೆ ನೂತನ ಕೋಚ್ ಆದ ಮೈಕ್ ಹೇಸನ್.

ನವದೆಹಲಿ: ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕ್ ಹೇಸನ್ (Mike Hesson) ಅವರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಸೀಮಿತ ಓವರ್‌ಗಳ ಕೋಚ್ ಆಗಿ ನೇಮಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮೈಕ್ ಹೇಸನ್ ಹೆಸರನ್ನು ಪ್ರಕಟಿಸಿದೆ. ಮೇ 26 ರಂದು ಪಾಕಿಸ್ತಾನ ಸೂಪರ್ ಲೀಗ್ (PSL 2025) ಫೈನಲ್ ಪಂದ್ಯದ ನಂತರ ಮೈಕ್ ಹೇಸನ್ ಪಾಕ್ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ವರ್ಷದ ಆರಂಭದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ, ಪಿಸಿಬಿ ಹೊಸ ಕೋಚ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು. ಸೀಮಿತ ಓವರ್‌ಗಳ ಕೋಚ್ ಹುದ್ದೆಗೆ ಮೈಕ್ ಹೇಸನ್ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದರು.
ಮೈಕ್ ಹೇಸನ್ ಅವರಿಗೆ ದೀರ್ಘಾವಧಿ ತರಬೇತಿ ನೀಡಿದ ಅನುಭವವಿದೆ. ಪಾಕಿಸ್ತಾನ ತಂಡಕ್ಕೂ ಮೊದಲು, ಅವರು ಭಾರತದಲ್ಲಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೀರ್ಘಕಾಲ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ, ಅವರು ನ್ಯೂಜಿಲೆಂಡ್ ತಂಡದ ತರಬೇತುದಾರರಾಗಿಯೂ ಕೆಲಸ ಮಾಡಿದ ಅನುಭವವನ್ನು ಅವರು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಕ್ ಹೇಸನ್ ಕೋಚ್ ಆಗುವುದರಿಂದ ಪಾಕಿಸ್ತಾನ ಕ್ರಿಕೆಟ್‌ನ ಭವಿಷ್ಯ ಉತ್ತಮವಾಗಬಹುದು ಎಂದು ನಂಬಲಾಗಿದೆ.
PSL 2025: ಪಾಕಿಸ್ತಾನ ಸೂಪರ್ ಲೀಗ್ ತೊರೆಯಲು ಮುಂದಾದ ವಿದೇಶಿ ಆಟಗಾರರು!
ಮೈಕ್ ಹೇಸನ್ ಪ್ರಸ್ತುತ ಪಾಕಿಸ್ತಾನದಲ್ಲಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಮೈಕ್ ಹೇಸನ್ ಅವರ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಅನುಭವವನ್ನು ಪರಿಗಣಿಸಿ ಅವರನ್ನು ಕೋಚ್ ಆಗಿ ನೇಮಿಸಲು ನಿರ್ಧರಿಸಿದ್ದಾರೆ.
ಹೇಸನ್ ಅವರನ್ನು ಕೋಚ್ ಆಗಿ ನೇಮಿಸಿದ ನಂತರ, ನಖ್ವಿ, "ಮೈಕ್ ಹೇಸನ್ ಅವರ ಮಾರ್ಗದರ್ಶನದಲ್ಲಿ ಪಾಕಿಸ್ತಾನ ತಂಡವು ಹೊಸ ದಿಕ್ಕು ಮತ್ತು ಸ್ವರೂಪವನ್ನು ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ತಿಳಿಸಿದ್ದಾರೆ.
Mike Hesson will take charge as Pakistan's new white-ball coach https://t.co/Zhsmx04IuB pic.twitter.com/Rggt5qSRvr
— ESPNcricinfo (@ESPNcricinfo) May 13, 2025
ಕಳೆದ ಎರಡು ವರ್ಷಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ನಾಲ್ಕು ಕೋಚ್‌ಗಳು ಬದಲಾಗಿದ್ದಾರೆ. ಇದೀಗ ಐದನೇ ಕೋಚ್ ಆಗಿ ಮೈಕ್ ಹೇಸನ್ ನೇಮಕಗೊಂಡಿದ್ದಾರೆ. ಮೈಕ್ ಹೇಸನ್‌ಗಿಂತ ಮೊದಲು, ಗ್ರಾಂಟ್ ಬ್ರಾಡ್‌ಬರ್ನ್, ಮಿಕ್ಕಿ ಆರ್ಥರ್, ಸೈಮನ್ ಹೆಲ್ಮ್, ಗ್ಯಾರಿ ಕರ್ಸ್ಟನ್ ಮತ್ತು ಜೇಸನ್ ಗಿಲ್ಲೆಸ್ಪಿ ಅವರನ್ನು ಸಹ ತರಬೇತುದಾರರನ್ನಾಗಿ ನೇಮಿಸಲಾಗಿತ್ತು. ಆದರೆ ಅವರೆಲ್ಲರೂ ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುವ ಮೊದಲೇ ತಮ್ಮ ಹುದ್ದೆಗಳನ್ನು ಕಳೆದುಕೊಂಡರು. ಇದೀಗ ಮೈಕ್ ಹೇಸನ್ ಮಾರ್ಗದರ್ಶನದಲ್ಲಿ ಪಾಕಿಸ್ತಾನ ತಂಡ ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದೆ.