Dr S Shishupala Column: ಹಾಲು ಉತ್ಪಾದಿಸುವ ಹಕ್ಕಿಗಳು
ಹೆಚ್ಚಿನ ಹಕ್ಕಿಗಳಲ್ಲಿ ಗಂಡು ವೈವಿಧ್ಯಮಯ ವರ್ಣಗಳಿಂದ ಕೂಡಿದ್ದು ವಿಶೇಷವಾಗಿ ತನ್ನ ಸಂಗಾತಿ ಯನ್ನು ಆಕರ್ಷಿಸಲು ಸಹಕಾರಿಯಾಗಿವೆ. ಕೆಲವು ಪಕ್ಷಿ ಪ್ರಭೇದಗಳಲ್ಲಿ ಗಂಡು-ಹೆಣ್ಣುಗಳ ವರ್ಣ ಸಂಯೋಜನೆಯಲ್ಲಿ ವ್ಯತ್ಯಾಸ ಕಾಣಿಸದು. ಬಿಳಿ, ಕಪ್ಪು, ಕೆಂಪು, ಹಳದಿ, ನೀಲಿ, ಹಸಿರು ಮುಂತಾದ ಬಣ್ಣ ಗಳ ವಿಶಿಷ್ಟ ಮಿಶ್ರಣ ಹಕ್ಕಿಗಳಲ್ಲಿ ಕಾಣಬಹುದು.


ಡಾ.ಎಸ್.ಶಿಶುಪಾಲ
ವಿಶ್ವ ಜೀವರಾಶಿಗಳ ವರ್ಣ ವೈವಿಧ್ಯದಲ್ಲಿ ಪಕ್ಷಿಗಳು ಮತ್ತು ಚಿಟ್ಟೆಗಳು ಬಹು ಮುಖ್ಯ ಸ್ಥಾನ ಪಡೆದಿವೆ. ಪಕ್ಷಿಗಳ ವರ್ಣಸಂಯೋಜನೆ ಯಂತೂ ನಿಸರ್ಗದ ಮೂಸೆಯಲ್ಲಿ ಮೂಡಿ ಬಂದ ಸೋಜಿಗ. ಹಲವಾರು ವರ್ಣರಂಜಿತ ಪಕ್ಷಿ ಪ್ರಭೇದಗಳು ವಿವಿಧ ಬಣ್ಣದ ಕೊಕ್ಕು, ರೆಕ್ಕೆ ಮತ್ತು ಪುಕ್ಕಗಳನ್ನು ಹೊಂದಿವೆ. ಹೆಚ್ಚಿನ ಹಕ್ಕಿಗಳಲ್ಲಿ ಗಂಡು ವೈವಿಧ್ಯಮಯ ವರ್ಣಗಳಿಂದ ಕೂಡಿದ್ದು ವಿಶೇಷವಾಗಿ ತನ್ನ ಸಂಗಾತಿಯನ್ನು ಆಕರ್ಷಿಸಲು ಸಹಕಾರಿಯಾಗಿವೆ. ಕೆಲವು ಪಕ್ಷಿ ಪ್ರಭೇದಗಳಲ್ಲಿ ಗಂಡು-ಹೆಣ್ಣುಗಳ ವರ್ಣಸಂಯೋಜನೆಯಲ್ಲಿ ವ್ಯತ್ಯಾಸ ಕಾಣಿಸದು. ಬಿಳಿ, ಕಪ್ಪು, ಕೆಂಪು, ಹಳದಿ, ನೀಲಿ, ಹಸಿರು ಮುಂತಾದ ಬಣ್ಣಗಳ ವಿಶಿಷ್ಟ ಮಿಶ್ರಣ ಹಕ್ಕಿಗಳಲ್ಲಿ ಕಾಣಬಹುದು.
ಸಾಮಾನ್ಯವಾಗಿ ಹಕ್ಕಿಗಳ ವರ್ಣ ವಿಶೇಷವನ್ನು ಅವುಗಳ ದೇಹದಲ್ಲಿ ತಯಾರಾಗುವ ರಾಸಾಯನಿಕ ವಸ್ತುಗಳ ಮೇಲೆ ಅವಲಂಬಿತ ವಾಗಿರುತ್ತದೆ. ಆ ರೀತಿ ವರ್ಣದ್ರವ್ಯಗಳನ್ನು ಉತ್ಪಾದಿಸಲು ಅಗತ್ಯ ಗುಣಾಣುಗಳು ಮತ್ತು ಚಯಾಪಚಯ ಕ್ರಿಯೆಗಳು ಹಕ್ಕಿಗಳಲ್ಲಿರುತ್ತವೆ. ಇದು ಅವುಗಳಿಗೆ ವಂಶಪಾ ರ್ಯಪರ‍್ಯವಾಗಿ ಬರುವ ಗುಣ.
ವರ್ಣಸಂಯೋಜನೆಯಲ್ಲಿ ವಿಶಿಷ್ಟ ಸ್ಥಾನ ಪಡೆದ ರಾಜಹಂಸಗಳು ಪಕ್ಷಿಲೋಕದ ಅಧ್ಬುತಗಳು. ವೈಜ್ಞಾನಿಕ ಸಂಶೋಧನೆ ಪ್ರಕಾರ ಇವುಗಳಲ್ಲಿ ವಿಶೇಷ ಜೀರ್ಣಾಂಗ ವ್ಯವಸ್ಥೆ ಇದ್ದು ತಮ್ಮ ದೇಹದ ಬಣ್ಣವನ್ನು ತಾವು ತಿನ್ನುವ ಆಹಾರದಿಂದ ಪಡೆಯುತ್ತವೆ! ಹಾಗೆಯೇ ಕೆಂಪು ಹಾಲನ್ನು ಉತ್ಪಾದನೆ ಮಾಡಿ ಮರಿಗಳಿಗೆ ಕುಡಿಸುತ್ತವೆ. ಈ ಹಕ್ಕಿಗಳನ್ನು ಆಂಗ್ಲ ಭಾಷೆಯಲ್ಲಿ ಗ್ರೇಟರ್ ಫ್ಲೆಮಿಂಗೊ ಎನ್ನುವರು.
ಇದನ್ನೂ ಓದಿ: Hari Paraak Column: ಹನಿ ಹನಿ 'ಫ್ರೇಮ್' ಕಹಾನಿ
ನಸುಗೆಂಪು ಬಣ್ಣದ ಉದ್ದಕಾಲುಗಳಿಂದಾಗಿ ಸುಮಾರು ನಾಲ್ಕು ಅಡಿಗಳಷ್ಟೆತ್ತರದ ನಿಲುವು (90ರಿಂದ 150 ಸೆಂ.ಮೀ). ಬಾಗುವ ನೀಳ ಕತ್ತಿನ ನಸುಗೆಂಪು-ಬಿಳಿಯ ಬಣ್ಣದ ಹಕ್ಕಿಗಳು. ನಸು ಗುಲಾಬಿ ಬಣ್ಣದ ದೊಡ್ಡ ಕೊಕ್ಕು ಸ್ವಲ್ಪ ಬಾಗಿ ದಂತಿದ್ದು ತುದಿ ಕಪ್ಪಾಗಿರುತ್ತದೆ. ನೋಡುವಾಗ ಬಾಹ್ಯ ರಚನೆಯಲ್ಲಿ ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸ ಕಾಣದು. ಮಿಶ್ರಾಹಾರಿ ಯಾಗಿದ್ದು ಮಣ್ಣಿನ ಲ್ಲಿರುವ ಹುಳುಗಳು, ಏಡಿ, ಸೀಗಡಿ, ಮೃದ್ವಂಗಿಗಳು, ಸಂಧಿಪದಿಗಳು, ಜಲಕೀಟಗಳು, ಮತ್ತು ಕೆಲ ವೊಮ್ಮೆ ಸಣ್ಣ ಮೀನುಗಳನ್ನು ತಿನ್ನುತ್ತವೆ. ನೀರಿನ ಸಸ್ಯಗಳ ಬೀಜಗಳು, ಚಿಗುರು ಗಳು ಮತ್ತು ಪಾಚಿಗಳನ್ನು ಸಹಾ ತಿನ್ನುತ್ತವೆ.
ನೀರನ್ನು ಸೋಸಿ ಆಹಾರವನ್ನು ತೆಗೆದುಕೊಳ್ಳಲು ಅನುಕೂಲವಾಗುವಂತಹ ಕೊಕ್ಕನ್ನು ಹೊಂದಿವೆ. ಸಮುದ್ರ ತಟ, ನದಿ ಹಿನ್ನೀರು, ಅಳಿವೆಗಳ ಅಂಚು ಮುಂತಾದ ಕಡೆ ನೆಲೆ ನಿಲ್ಲುತ್ತವೆ. ಕರ್ನಾಟಕದ ರಾಯಚೂರು, ಬಾಗಲಕೋಟೆ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಚಳಿಗಾಲದಲ್ಲಿ ಕಾಣ ಸಿಗುತ್ತವೆ.

ಸಂತಾನೋತ್ಪತ್ತಿ: ಒಂದು ಸಂತಾನಾಭಿವೃದ್ಧಿ ಆವಧಿಗೆ ಸೂಕ್ತ ಜೊತೆಗಾರ/ತಿಯನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಅದ್ಭುತವಾದ ಪ್ರಣಯದಾಟದಲ್ಲಿ ಗರಿಗಳನ್ನು ಒಪ್ಪ ಮಾಡಿಕೊಳ್ಳುವುದು, ಜೊತೆ-ಜೊತೆಯಾಗಿ ರೆಕ್ಕೆ ಎತ್ತರಿಸುವುದು, ತಲೆ-ತಲೆ ತಾಗಿಸುವುದು ಮತ್ತು ಬದಿಯಿಂದ ಕುತ್ತಿಗೆ ಮತ್ತು ಕೊಕ್ಕನ್ನು ತಾಗಿಸುತ್ತಾ ಮುತ್ತಿಟ್ಟಂತೆ ಭಾಸವಾಗುವುದು ಪ್ರಮುಖವಾದ ಲೈಂಗಿಕ ನಡವಳಿಕೆ ಗಳು. ನೆಲದಿಂದ ಸ್ವಲ್ಪ ಎತ್ತರಕ್ಕೆ ಹಸಿ ಮಣ್ಣನ್ನು ಕಾಲು ಮತ್ತು ಕೊಕ್ಕಿನಿಂದ ಒತ್ತಿ-ಮೆತ್ತಿ ಬಾಣಲೆ ಆಕಾರದ ಮಾಡಿರುವ ಗೂಡಿನ ಮಧ್ಯದ ಕುಣಿಯಲ್ಲಿ ಮೊಟ್ಟೆಯನ್ನಿಡುತ್ತದೆ. ಗಂಡು ಹೆಣ್ಣು ಎರಡೂ ಸರದಿಯಲ್ಲಿ ಮೊಟ್ಟೆಗಳಿಗೆ ೨೭ ರಿಂದ ೩೧ ದಿನಗಳವರೆಗೆ ಕಾವು ಕೊಡುತ್ತವೆ. ಮರಿಗಳಿಗೆ 65 ರಿಂದ 90 ದಿನಗಳವರೆಗೆ ತಂದೆ-ತಾಯಿ ಇಬ್ಬರೂ ಆಹಾರ ನೀಡುತ್ತವೆ.
ವಿಶೇಷತೆ: ಮರಿಗಳು ಬಿಳಿ ಬಣ್ಣವಿದ್ದು ಅಲ್ಲಲ್ಲಿ ಕಪ್ಪು ಮಸಿ ಹಚ್ಚಿದ ಹಾಗೇ ಇರುತ್ತವೆ. ಮೂರು ವರ್ಷಗಳವರೆಗೆ ಅವುಗಳಿಗೆ ಬಣ್ಣ ಬರುವುದಿಲ್ಲ. ಆದರೆ ಯೌವ್ವನಕ್ಕೆ ಬರುತ್ತಿದ್ದಂತೆ ಆಹಾರದ ಮೂಲಕ ಮೈಗೆ ಸೇರಿಕೊಂಡ ವರ್ಣದ್ರವ್ಯಗಳು ಅಲ್ಲಲ್ಲಿ ನಸು ಕೆಂಪು ಮಿಶ್ರಿತ ಗುಲಾಬಿ ಬಣ್ಣದಿಂದ ಬಹು ಆಕರ್ಷಕವಾಗಿ ಕಾಣುತ್ತವೆ. ವಿಶೇಷವೆಂದರೆ ಇವುಗಳ ರೆಕ್ಕೆಪುಕ್ಕಗಳ ತಿಳಿಗುಲಾಬಿ ಬಣ್ಣ ಇವು ತಿನ್ನುವ ಪಾಚಿ ಮತ್ತು ಸೀಗಡಿಗಳಿಂದ ಸಂಗ್ರಹವಾದ ಬಿಟಾ- ಕೆರೋಟಿನ್ ಎಂಬ ವರ್ಣದ್ರವ್ಯ ಗಳೆಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಮರಿಗಳಿಗಾಗಿ ಕೆಂಪು ಹಾಲು
ರಾಜಹಂಸ ಪೋಷಕರು ತಯಾರು ಮಾಡಿ ಮರಿಗಳಿಗೆ ಉಣಬಡಿಸುವ ಕೆಂಪು ಹಾಲು ಒಂದು ಅತ್ಯು ನ್ನತ ಪೌಷ್ಠಿಕ ಆಹಾರ. ಇದರ ತಯಾರಿಕೆಯೆ ವಿಧಾನವೊಂದು ವೈಜ್ಞಾನಿಕ ಸೋಜಿಗ. ಕುತೂಹಲ ಕಾರಿ ಅಂಶವೆಂದರೆ ಈ ಹಾಲು ಪೋಷಕಾಂಶ ಗಳನ್ನೊಳಗೊಂಡ ರಾಜಹಂಸಗಳ ಜೀರ್ಣಾಂಗ ವ್ಯವಸ್ಥೆಯ ಗಂಟಲಿನಲ್ಲಿರುವ ಅನ್ನನಾಳದ ಭಾಗವಾಗಿರುವ ಕ್ರಾಪ್ ಎಂಬ ಚೀಲದಲ್ಲಿ ಉತ್ಪಾ ದನೆಯಾಗುವ ಕಡು ಕೆಂಪು ದ್ರವ. ರಕ್ತದಂತೆ ಕಂಡರೂ ಇದರಲ್ಲಿ ಕೆಂಪು ರಕ್ತ ಕಣಗಳಿರುವುದಿಲ್ಲ. ಇದರಲ್ಲಿ ಪ್ರೋಟಿನ್, ಕೊಬ್ಬು ಮತ್ತು ಪೋಷಕಾಂಶಗಳೂ ಇವೆ.
ಪೋಷಕ ರಾಜಹಂಸಗಳು ತಮ್ಮ ಮರಿಗಳಿಗೆ ಮೊದಲಿಗೆ ನೀಡುವ ಜೀವ ದ್ರವವಿದು. ಬೆಳೆಯುವ ಮರಿಗಳಿಗೆ ಅಗತ್ಯವಾದ ಪೋಷಕಾಂಶವನ್ನು ಕೊಡುವ ಅದ್ಭುತ ಆಹಾರ. ತಂದೆ-ತಾಯಿಯಿ ಬ್ಬರೂ ಈ ಕೆಂಪು ಹಾಲನ್ನು ಉತ್ಪಾದಿಸುತ್ತವೆ. ಇದು ಸ್ತನಿಗಳಲ್ಲಿ ಹಾಲು ಉತ್ಪಾದನೆಗೆ ಸಮನಾದ ಕ್ರಿಯೆ. ಆದರೆ ಸ್ತನಿಗಳಲ್ಲಿ ಹೆಣ್ಣು ಮಾತ್ರ ಎದೆಹಾಲು ನೀಡಬಲ್ಲದು. ರಾಜಹಂಸಗಳು ಈ ಕೆಂಪು ಹಾಲನ್ನು ಮರಿಗಳಿಗೆ ಆರು ತಿಂಗಳ ತನಕ ನೀಡಬಲ್ಲವು. ಕಾಲ ಕ್ರಮೇಣ ಕೆಂಪು ಹಾಲಿನ ಬಣ್ಣ ಸಹ ಕಡಿಮೆಯಾಗುತ್ತಾ ಕ್ರಮೇಣ ಇದರ ಉತ್ಪಾದನೆ ಸಹ ನಿಲ್ಲುವುದು. ಆ ಸಮಯದಲ್ಲಿ ಪೋಷಕರ ದೇಹದ ಬಣ್ಣವೂ ಕಡಿಮೆ ಆಗುತ್ತದೆ ಎಂಬ ಆಶ್ಚರ್ಯಕರವಾದ ಅಂಶವನ್ನು ದಾಖಲಿಸಲಾಗಿದೆ. ಅಷ್ಟು ಹೊತ್ತಿಗೆ ಮರಿಗಳು ಸ್ವತಂತ್ರವಾಗಿ ತಮ್ಮ ಆಹಾರವನ್ನು ತಾವೇ ಹುಡುಕಿ ತಿನ್ನುವ ಹಂತಕ್ಕೆ ಬಂದಿರುತ್ತವೆ.
ಮುಂದಿನ ಸಂತಾನಾಭಿವೃದ್ಧಿ ಸಮಯದಲ್ಲಿ ಪೋಷಕರಲ್ಲಿ ಕೆಂಪು ಹಾಲಿನ ಉತ್ಪಾದನೆ ಮತ್ತೆ ಫ್ರಾಂ ಭವಾಗುವುದು. ಇಂತಹ ಪೋಷಕ ವಿಜ್ಞಾನ ಪಕ್ಷಿ ಲೋಕದ ಸೋಜಿಗಗಳಲ್ಲೊಂದು. ಎಲ್ಲಾ ಪ್ರಾಣಿಗಳಲ್ಲಿ ತಿನ್ನುವ ಆಹಾರದಿಂದ ಪಡೆದ ಪೋಷಕಾಂಶ ಗಳನ್ನು ಜೀವಿಸಲು ಅಗತ್ಯವಾದ ಇಂಧನ ತಯಾರಿಸಲು ಬಳಕೆಯಾದರೆ ರಾಜಹಂಸಗಳಲ್ಲಿ ಅದರ ಜೊತೆಗೆ ಆಹಾರದಲ್ಲಿನ ವರ್ಣ ದ್ರವ್ಯಗಳನ್ನು ದೇಹಕ್ಕೆ ಸೇರಿಸುವ ಮತ್ತು ಮರಿಗಳಿಗೆ ಅಗತ್ಯವಾದ ಕೆಂಪು ಹಾಲಿಗೆ ಸೇರಿಸುವ ಚಯಾಪಚಯ ಕ್ರಿಯೆ ಒಂದು ವಿಸ್ಮಯವೇ ಸರಿ. ಇದರ ಬಗೆಗಿನ ಸಂಶೋಧನಾ ಮಾಹಿತಿ ಹಲ ವಾರು ವಿಷಯಗಳ ಅರಿವಿಗೆ ಉತ್ತೇಜನ ನೀಡುವುದು.
ಜೀವ ಜಗತ್ತಿನ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ವೈಜ್ಞಾನಿಕ ಸಂಶೋಧನೆ ಸಹಕಾರಿ ಯಾಗುವುದು. ವಿಜ್ಞಾನ ಸತ್ಯಾನೇಷ್ವಣೆಯ ಮಾರ್ಗವೂ ಹೌದು. (ಚಿತ್ರಗಳು ಲೇಖಕರದ್ದು)(ಮರಿಗೆ ಹಾಲು ಕುಡಿಸುವ ಚಿತ್ರ ಕೃಪೆ: ಬರ್ಡ್ ಫ್ಯಾಕ್ಟ್)
ಕಾಣಸಿಗುವ ತಾಣಗಳು
ರಾನ್ ಆಫ್ ಕಚ್, ಗುಜರಾತ್: ಈ ಭಾಗದಲ್ಲಿ ವಿಶಾಲವಾದ ಜೌಗು ಪ್ರದೇಶ ಮತ್ತು ಸ್ವಲ್ಪವೇ ನೀರಿ ರುವ ವಿಶಾಲ ಜಾಗವಿದೆ. ಚಳಿಗಾಲದಲ್ಲಿ ಇಲ್ಲಿ ಸಾವಿರಾರು ರಾಜಹಂಸಗಳನ್ನು ನೋಡ ಬಹುದು. ಇಲ್ಲಿನ ಜೌಗು ಪ್ರದೇಶದ ನೆಲದ ಮೇಲೆ ಇವು ಗೂಡು ನಿರ್ಮಿಸಿ, ಮರಿ ಮಾಡುವುದುಂಟು. ಚಿಲ್ಕಾ ಸರೋವರ, ಒಡಿಶಾ: ನಮ್ಮ ದೇಶದ ಅತಿ ದೊಡ್ಡ ಸರೋವರ ಎನಿಸಿರುವ ಚಿಲ್ಕಾ ಸರೋವರದಲ್ಲಿ ಸಾವಿರಾರು ರಾಜಹಂಸಗಳನ್ನು ನೋಡಬಹುದು.
ಗ್ರೇಟರ್ ಮತ್ತು ಲೆಸ್ಸರ್ ಫ್ಲೆಮಿಂಗೋ ಎಂಬ ಎರಡೂ ಪ್ರಭೇದಗಳು ಇಲ್ಲಿ ನವೆಂಬರ್ ಮತ್ತು ಫೆಬ್ರ ವರಿಯ ನಡುವೆ ಕಾಣಸಿಗುತ್ತವೆ. ಮುಂಬಯಿ ನಗರದ ಸರಹದ್ದಿನಲ್ಲಿರುವ ಜೌಗು ಪ್ರದೇಶದಲ್ಲಿ, ಚಳಿಗಾಲದಲ್ಲಿ ರಾಜಹಂಸಗಳನ್ನು ನೋಡಬಹುದು. ಮಹಾರಾಷ್ಟ್ರದ ಉಜಾನಿ ಹಿನ್ನೀರಿನಲೂ ಇವು ಕಾಣಸಿಗುತ್ತವೆ. ಚಳಿಗಾಲದಲ್ಲಿ ಕರ್ನಾಟಕದಲ್ಲೂ ರಾಜಹಂಸಗಳನ್ನು ಕಾಣಬಹುದು. ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿ ಪ್ರದೇಶದಲ್ಲಿರುವ ಪುಲಿಕಟ್ ಕೆರೆಯಲ್ಲೂ ರಾಜಹಂಸ ಗಳನ್ನು ನೋಡಬಹುದು.