ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಅತಿ ಕೆಲಸ ತರುವ ಕುತ್ತು

ಜಪಾನಿ ಮೂಲದ ಈ ಪದವನ್ನು ಇಂಗ್ಲಿಷಿನಲ್ಲೂ ಬಳಸಲಾರಂಭಿಸಿದರು. 1991ರಲ್ಲಿ ಮಾತ್ಸುಶಿತಾ ಕಂಪನಿಯ ಯುವ ಉದ್ಯೋಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. 24 ವರ್ಷದ ಯುವತಿ, ಆತ್ಮ ಹತ್ಯೆಗೆ ಶರಣಾದಾಗ, ಆಕೆ ವಾರದಲ್ಲಿ 90 ಗಂಟೆಗಳಷ್ಟು ಕೆಲಸ ಮಾಡುತ್ತಿರುವುದೇ ಕಾರಣ ಎಂಬುದು ಗೊತ್ತಾಯಿತು. ಇದಾದ ಬಳಿಕ ಅತಿಯಾದ ಕೆಲಸದ ಒತ್ತಡ ಒಂದು ರಾಷ್ಟ್ರೀಯ ಸಮಸ್ಯೆ ಎಂಬಂತೆ ಬಿಂಬಿತವಾಯಿತು

ಅತಿ ಕೆಲಸ ತರುವ ಕುತ್ತು

ಸಂಪಾದಕರ ಸದ್ಯಶೋಧನೆ

ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನೆಯೊಂದಕ್ಕೆ, ‘ನಮ್ಮ ದೇಶದಲ್ಲಿ ಕರೋಶಿ ಪದ್ಧತಿಯನ್ನು ಜಾರಿಗೆ ತರುವುದಿಲ್ಲ. ಯಾರು, ಎಷ್ಟು ಹೊತ್ತು ಕೆಲಸ ಮಾಡಬೇಕು ಎಂಬುದು ಕಂಪನಿಗೆ ಅಥವಾ ಉದ್ಯೋಗಿಗೆ ಸಂಬಂಧಪಟ್ಟಿದ್ದು’ ಎಂದು ಉತ್ತರಿಸಿಬಿಟ್ಟರು. ‘ಕರೋಶಿ’ ಪದದ ಅರ್ಥ ಪತ್ರಿಕಾಗೋಷ್ಠಿಯಲ್ಲಿದ್ದ ಎಲ್ಲರಿಗೂ ಅರ್ಥವಾಯಿತಾ, ಇಲ್ಲವಾ ಗೊತ್ತಾಗಲಿಲ್ಲ. ನಾನೂ ಆ ಪದವನ್ನು ಕೇಳಿರಲಿಲ್ಲ. ‌ನಂತರ ಇದು ಮೂಲತಃ ಜಪಾನಿ ಮೂಲದ್ದು ಎಂದು ಗೊತ್ತಾದ ಬಳಿಕ, ಜಪಾನಿನಲ್ಲಿರುವ ನನ್ನ ಸ್ನೇಹಿತರೊಬ್ಬರನ್ನು ಕೇಳಿದೆ. ಅವರು ಆ ಪದದ ಅರ್ಥ ಹೇಳಿದಾಗಲೇ, ಅದೊಂದು ಜಾಗತಿಕ ಪಿಡುಗು ಎಂದು ಗೊತ್ತಾಗಿದ್ದು. ‘ಕರೋಶಿ’ ಅಂದ್ರೆ’ ಅತಿಯಾದ ಕೆಲಸ ಮಾಡಿ ಸಾಯುವುದು’ ಎಂದರ್ಥ. 1970ರ ದಶಕದಲ್ಲಿ ಈ ಪದ ಜನಪ್ರಿಯವಾಯಿತು, ಆದರೆ 1980ರ ನಂತರದಿಂದ ಇದು ಜಪಾನಿನಲ್ಲಿ ಬಹಳ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಬೆಳೆಯತೊಡಗಿತು.

ಕೆಲವು ಉದ್ಯೋಗಿಗಳು ಆರೋಗ್ಯ ಸಮಸ್ಯೆಗೊಳಗಾಗಿ ಅಥವಾ ಆತ್ಮಹತ್ಯೆ ಮಾಡಿಕೊಂಡು ಸಾವ ನ್ನಪ್ಪಿದ ನಂತರ, ಈ ಪದವನ್ನು ಹೆಚ್ಚು ವ್ಯಾಪಕವಾಗಿ ಬಳಸಲಾಯಿತು. ಈ ಶತಮಾನದ ಆರಂಭ ದಲ್ಲಿ ಅಮೆರಿಕದಲ್ಲಿಯೂ ಅತಿಯಾದ ಕೆಲಸದ ಒತ್ತಡದಿಂದ ಸಾಯಲಾರಂಭಿಸಿದ ಪ್ರಕರಣಗಳು ಜರುಗಿದಾಗ ಈ ಪದ ಮತ್ತಷ್ಟು ಮುನ್ನೆಲೆಗೆ ಬಂದಿತು.

ಇದನ್ನೂ ಓದಿ: Vishweshwar Bhat Column: ವಿಶ್ವದ ಅತ್ಯಂತ ಪುರಾತನ ಹೋಟೆಲ್

ಜಪಾನಿ ಮೂಲದ ಈ ಪದವನ್ನು ಇಂಗ್ಲಿಷಿನಲ್ಲೂ ಬಳಸಲಾರಂಭಿಸಿದರು. 1991ರಲ್ಲಿ ಮಾತ್ಸುಶಿತಾ ಕಂಪನಿಯ ಯುವ ಉದ್ಯೋಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. 24 ವರ್ಷದ ಯುವತಿ, ಆತ್ಮಹತ್ಯೆಗೆ ಶರಣಾದಾಗ, ಆಕೆ ವಾರದಲ್ಲಿ 90 ಗಂಟೆಗಳಷ್ಟು ಕೆಲಸ ಮಾಡುತ್ತಿರುವುದೇ ಕಾರಣ ಎಂಬುದು ಗೊತ್ತಾಯಿತು. ಇದಾದ ಬಳಿಕ ಅತಿಯಾದ ಕೆಲಸದ ಒತ್ತಡ ಒಂದು ರಾಷ್ಟ್ರೀಯ ಸಮಸ್ಯೆ ಎಂಬಂತೆ ಬಿಂಬಿತವಾಯಿತು.

ಈ ಘಟನೆ ಬಳಿಕ ಜಪಾನಿನಲ್ಲಿ ಪ್ರತಿ ಎರಡು ತಿಂಗಳಿಗೆ ಈ ಕಾರಣ ನೀಡಿ ಒಂದಾದರೂ ಆತ್ಮಹತ್ಯೆ ಪ್ರಸಂಗ ಬೆಳಕಿಗೆ ಬರುತ್ತಿರುವುದು ಇದರ ಗಂಭೀರ ಸ್ವರೂಪವನ್ನು ಬಹಿರಂಗಪಡಿಸುತ್ತಲೇ ಇದೆ. ಹತ್ತು ವರ್ಷಗಳ ಹಿಂದೆ ಸಹ (2015ರಲ್ಲಿ) ಜಪಾನಿನ ದೊಡ್ಡ ಜಾಹೀರಾತು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾದ. ಆತ ತಿಂಗಳಿಗೆ 100 ಗಂಟೆ ಗಳಿಗೂ ಅಧಿಕ ಓವರ್‌ಟೈಮ್ ಕೆಲಸ ಮಾಡಿ ಆತ್ಮಹತ್ಯೆ ಮಾಡಿಕೊಂಡ.

ಆತ್ಮಹತ್ಯೆಗೂ ಮುನ್ನ ಕರೋಶಿಯ ಸ್ಥಿತಿಯನ್ನು ಜನರ ಗಮನಕ್ಕೆ ತಂದ. ದೊಡ್ಡ ದೊಡ್ಡ ಕಂಪನಿ ಗಳಲ್ಲಿ ಜನರನ್ನು ಜೀತದಾಳುಗಳಿಗಿಂತ ಕಡೆಯಾಗಿ ಕೆಲಸ ಮಾಡಿಸಿಕೊಳ್ಳುತ್ತಿರುವ ದಾರುಣ ಸ್ಥಿತಿಯ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಿದ. ಜಪಾನಿನ ಉದ್ಯೋಗಿಗಳು ವಾರಕ್ಕೆ ಸರಾಸರಿ 70 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ.

ಕೆಲವೊಮ್ಮೆ ಕೆಲಸದ ಸಮಯ ಮಧ್ಯರಾತ್ರಿಯವರೆಗೂ ಹೋಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕಚೇರಿಯಲ್ಲಿಯೇ ಕಾಲ ಕಳೆಯುವುದು, ಅಲ್ಲಿಯೇ ಮಲಗುವುದು ಸಾಮಾನ್ಯ. ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗಲೇ ಕರೋಶಿಗೆ ಅನುಮತಿ ಪಡೆಯುವುದು ವಾಡಿಕೆ. ಜಪಾನಿನಲ್ಲಿ ಜನ ಉದ್ಯೋಗವನ್ನು ಕಳೆದುಕೊಳ್ಳುವ ಭಯದಿಂದ ಅಥವಾ ಕಂಪನಿಗೆ ನಿಷ್ಠೆ ತೋರಲು ಕೆಲಸದ ಒತ್ತಡವನ್ನು ಸಹಿಸಿಕೊಂಡು ಅವುಡುಗಚ್ಚಿ ಕೆಲಸ ಮಾಡುತ್ತಾರೆ.

ಇದಕ್ಕೆ ಜಪಾನಿನಲ್ಲಿ ‘ಗಾಂಬಾರೆ’ ಮನೋಭಾವನೆ ಅಂತಾರೆ. ‘ಗಾಂಬಾರೆ’ ಅಂದ್ರೆ‘ಪ್ರಯತ್ನಿಸು, ಬಿಡಬೇಡ’ ಎಂದರ್ಥ. ಅಂದರೆ ನಿನಗಿಂತ ನಿನ್ನ ಕೆಲಸವೇ ಹೆಚ್ಚು, ನಿನ್ನ ಸಂಸ್ಥೆಯೇ ಹೆಚ್ಚು ಎಂಬ ಭಾವನೆಯನ್ನು ಸಿಬ್ಬಂದಿಯಲ್ಲಿ ಬಿತ್ತುವುದು. ಇದು ಕೆಲವೊಮ್ಮೆ ಅತಿಯಾದ ನಿರೀಕ್ಷೆ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ. ಅಲ್ಲಿ ಕೆಲಸ ಬಿಡುವುದು ಅಪಮಾನವೆಂದು ಪರಿಗಣಿಸುವ ಮನೋ ಭಾವ ಇದೆ.

ಹೀಗಾಗಿ ಅಲ್ಲಿನ ಸಿಬ್ಬಂದಿ ಅವಮಾನ, ಒತ್ತಡಗಳನ್ನು ನುಂಗಿಕೊಂಡು ಕೆಲಸ ಮಾಡುವುದು ಸಾಮಾನ್ಯ. ದೀರ್ಘಾವಧಿಯ ಒತ್ತಡ, ನಿದ್ರಾಹೀನತೆ, ಆಹಾರ ವ್ಯತ್ಯಾಸದಿಂದ ಹೃದಯಾಘಾತ, ಮಿದುಳಿಗೆ ಸಂಬಂಧಿಸಿದ ಸಮಸ್ಯೆಗಳು, ಕಿಡ್ನಿ ವೈಫಲ್ಯ ಉಂಟಾಗಬಹುದು. ನಿತ್ಯ ಒತ್ತಡದ ಕೆಲಸ ದಿಂದಾಗಿ ಅನೇಕರು ಆತ್ಮಹತ್ಯೆ ಮಾಡುವುದರಲ್ಲಿಯೂ ಕರೋಶಿಯ ಪಾತ್ರವಿದೆ. ಕುಟುಂಬ ದೊಂದಿಗೆ ಸಮಯ ಕಳೆಯಲಾಗದ ಕಾರಣ, ವೈವಾಹಿಕ ಜೀವನ, ಮಕ್ಕಳೊಂದಿಗೆ ಸಂಬಂಧಗಳು ಹಾಳಾಗುತ್ತವೆ. ಅಲ್ಲಿನ ಸರಕಾರ ಈ ಸಮಸ್ಯೆಗೆ ಸುಮ್ಮನೆ ಕುಳಿತಿಲ್ಲ. ‘ಕಾರ್ಯ ವಿಧಾನ ಸುಧಾರಣೆ’ ( Work Style Reform) ಎಂಬ ಹೆಸರಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ.

ಇದರಲ್ಲಿ ಪ್ರತಿನಿತ್ಯ ಕೆಲಸದ ಗಂಟೆಗಳ ಮೇಲಿನ ನಿಯಂತ್ರಣ, ವಾರದಲ್ಲಿ ಕಡ್ಡಾಯ ವಾಗಿ ವಿಶ್ರಾಂತಿ ದಿನ, ಓವರ್‌ಟೈಮ್ ಮಿತಿ ಸೇರಿವೆ. ಆದರೂ ಕರೋಶಿ ಬೇರೆ ಆಯಾಮಗಳಲ್ಲಿ ತನ್ನ ಕರಾಳ ಮುಖವನ್ನು ತೋರುತ್ತಲೇ ಬರುತ್ತಿದೆ.