Roopa Gururaj Column: ಹುಟ್ತಾ ಅಣ್ಣ-ತಮ್ಮಂದಿರು, ಬೆಳೀತಾ ದಾಯಾದಿಗಳು
ಹಣ್ಣು ಬೀಳತೊಡಗಿದಾಗ ಇಬ್ಬರ ನಡುವೆಯೂ ಅದಕ್ಕಾಗಿ ವಾದ-ವಿವಾದ ಶುರುವಾಯಿತು. ಮರದ ಬೇರು ನನ್ನ ಹೊಲದಲ್ಲಿ ಇರುವುದರಿಂದ ಅದು ನನ್ನದೇ ಮರ, ಆ ಹಣ್ಣು-ಕಾಯಿಗಳೆಲ್ಲ ನನಗೆ ಸೇರಿದ್ದು ಎಂದು ಅಣ್ಣ ಹೇಳಿದರೆ, ಅದರ ರೆಂಬೆ-ಕೊಂಬೆ, ನನ್ನ ಪಾಲಿನ ಹೊಲದಲ್ಲಿ ಇರು ವುದರಿಂದ ಹಣ್ಣು-ಕಾಯಿಗಳೆಲ್ಲಾ ನನ್ನವೇ ಎಂಬುದು ತಮ್ಮನ ವಾದ. ಇಬ್ಬರೂ ಜಗಳ ವಾಡಿ ಪ್ರಕರಣ ಕೋರ್ಟ್, ಕಚೇರಿ ತನಕ ಹೋಯಿತು.


ಒಂದೊಳ್ಳೆ ಮಾತು
rgururaj628@gmail.com
ಗಂಡ-ಹೆಂಡತಿ ಸುಖದಿಂದ ಜೀವನ ನಡೆಸುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ಇದ್ದ ಸ್ವಲ್ಪ ಹೊಲದಲ್ಲಿ ಕಷ್ಟ ಪಟ್ಟು ಕೆಲಸ ಮಾಡಿ, ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಮಕ್ಕಳು ಬೆಳೆದು ದೊಡ್ಡವರಾದ ನಂತರ, ತಂದೆ ಅದನ್ನು ಇಬ್ಬರು ಮಕ್ಕಳಿಗೂ ಸಮಪಾಲು ಮಾಡಿ ಕೊಟ್ಟ. ಸ್ವಲ್ಪ ಸಮಯದಲ್ಲೇ ತಂದೆ ಸಾವನ್ನಪ್ಪಿದ, ಸ್ವಲ್ಪ ದಿನಗಳಲ್ಲೇ ತಾಯಿಯೂ ತೀರಿಕೊಂಡಳು.
ನಂತರ ಮಕ್ಕಳಿಬ್ಬರೂ ಬೇರೆ ಬೇರೆಯಾದರು. ಹೊಲದ ಒಂದು ಬದಿಯಲ್ಲಿ ಒಂದು ಮಾವಿನ ಗಿಡ ಇತ್ತು. ಅದು ದೊಡ್ಡದಾಗಿ ಬೆಳೆದು ಮರವಾಗಿ ಹಣ್ಣುಗಳನ್ನು ಬಿಡತೊಡಗಿತು. ಮರದ ಬೇರು, ಕಾಂಡ ಅಣ್ಣನ ಪಾಲಿನ ಹೊಲದಲ್ಲಿ ಇತ್ತು. ಅದರ ರಂಬೆ-ಕೊಂಬೆಗಳು ಬಾಗಿ, ಹಣ್ಣು-ಕಾಯಿಗಳು ತಮ್ಮನ ಪಾಲಿನ ಹೊಲದತ್ತ ಬೀಳುತ್ತಿದ್ದವು.
ಹಣ್ಣು ಬೀಳತೊಡಗಿದಾಗ ಇಬ್ಬರ ನಡುವೆಯೂ ಅದಕ್ಕಾಗಿ ವಾದ-ವಿವಾದ ಶುರುವಾಯಿತು. ಮರದ ಬೇರು ನನ್ನ ಹೊಲದಲ್ಲಿ ಇರುವುದರಿಂದ ಅದು ನನ್ನದೇ ಮರ, ಆ ಹಣ್ಣು-ಕಾಯಿಗಳೆಲ್ಲ ನನಗೆ ಸೇರಿದ್ದು ಎಂದು ಅಣ್ಣ ಹೇಳಿದರೆ, ಅದರ ರೆಂಬೆ-ಕೊಂಬೆ, ನನ್ನ ಪಾಲಿನ ಹೊಲದಲ್ಲಿ ಇರು ವುದರಿಂದ ಹಣ್ಣು-ಕಾಯಿಗಳೆಲ್ಲಾ ನನ್ನವೇ ಎಂಬುದು ತಮ್ಮನ ವಾದ. ಇಬ್ಬರೂ ಜಗಳ ವಾಡಿ ಪ್ರಕರಣ ಕೋರ್ಟ್, ಕಚೇರಿ ತನಕ ಹೋಯಿತು.
ಇದನ್ನೂ ಓದಿ: Roopa Gururaj Column: ಪ್ರಾಮಾಣಿಕವಾಗಿ ಬದುಕುವುದು ದೊಡ್ಡ ಸಂಸ್ಕಾರ
ಕೋರ್ಟ್ ತಮ್ಮನ ಪರ ತೀರ್ಪು ನೀಡಿತು. ತಾನು ಕೋರ್ಟಿನಲ್ಲಿ ಗೆದ್ದೆ ಎಂಬ ಸಂತೋಷದಿಂದ ತಮ್ಮ, ಊರಿಗೆಲ್ಲಾ ಊಟ ಹಾಕಿಸಿದ. ಮಾರನೇ ದಿನ ಬೆಳಗ್ಗೆ ಬಂದು ನೋಡಿದರೆ, ಮಾವಿನ ಮರದ ಬುಡವನ್ನೇ ಯಾರೊ ಕಡಿದು ಹಾಕಿದ್ದರು. ಕೋರ್ಟಿನಲ್ಲಿ ಕೇಸು ತಮ್ಮನ ಪರವೇನೋ ಆಗಿತ್ತು. ಆದರೆ ಮಾವಿನ ಮರವೇ ಮುರಿದು ಬಿದ್ದಿತ್ತು.
ಒಟ್ಟಿಗೆ ಹುಟ್ಟಿ ಬೆಳೆದ ಅಣ್ಣ-ತಮ್ಮಂದಿರ, ಸಂಬಂಧವು ಒಂದು ಮಾವಿನ ಮರದ ಆಸೆಗಾಗಿ ಕಳಚಿಕೊಂಡಿತು, ಜೊತೆಗೆ ಒಳ್ಳೆಯ ಹಣ್ಣು ಬಿಡುತ್ತಿದ್ದ ಮಾವಿನ ಮರವೂ ಉರುಳಿತು. ಅದಕ್ಕೇ ಗಾದೆ ಇರುವುದು, ‘ಹುಟ್ಟುತ್ತ ಅಣ್ಣ- ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು’ ಎಂಬುದು.
ತಂದೆ-ತಾಯಿ ಇರುವ ತನಕ ಚೆನ್ನಾಗಿದ್ದ ಸಂಬಂಧ ಅವರ ನಂತರ, ಚೂರು ಆಸ್ತಿಗಾಗಿ ಹೀಗೆ ಒಡೆದು ಹೋಗುತ್ತದೆ. ಆಸ್ತಿಗಿಂತ ಸಂಬಂಧ ಮುಖ್ಯ ಎಂಬ ಅರಿವು ಇಬ್ಬರಲ್ಲಿ ಒಬ್ಬರಿಗಾದರೂ ಇದ್ದಿದ್ದರೆ, ಈ ರೀತಿ ಸಂಬಂಧ ಮುರಿದು ಬೀಳುತ್ತಿರಲಿಲ್ಲ. ಎಷ್ಟೊ ಸಂಬಂಧಗಳಲ್ಲಿ ಈಗ ಆಗುತ್ತಿರುವುದು ಹೀಗೆಯೇ.
ತಂದೆ-ತಾಯಿ ನಮಗೆ ವಿದ್ಯೆ ಕೊಟ್ಟಿರುತ್ತಾರೆ, ಬುದ್ಧಿ ಕಲಿಸಿರುತ್ತಾರೆ, ಬದುಕುವ ದಾರಿಯನ್ನೂ ಹೇಳಿ ಕೊಟ್ಟಿರುತ್ತಾರೆ, ಇದೆಲ್ಲದರಿಂದ ನಾವು ಪರಿಶ್ರಮಪಟ್ಟು ನಮ್ಮ ಜೀವನವನ್ನು ಚಂದ ವಾಗಿಸಿ ಕೊಳ್ಳಬಹುದು. ಯಾರ ಸಹಾನುಭೂತಿ, ಸಹಾಯದ ಅಗತ್ಯವೂ ನಮಗಿರುವುದಿಲ್ಲ. ಆದರೆ ಮತ್ತಷ್ಟು ಹಣ, ಒಂದಿಷ್ಟು ಆಸ್ತಿ ಸುಲಭವಾಗಿ ಕಷ್ಟವಿಲ್ಲದೆ ಸಿಗುತ್ತದೆ ಎಂದರೆ ತಕ್ಷಣ ಧರ್ಮ-ಕರ್ಮ ಎಲ್ಲ ಮರೆತು ಅದನ್ನು ಹೇಗೆ ಪಡೆದುಕೊಳ್ಳುವುದು ಎಂದು ಲೆಕ್ಕಾಚಾರ ಹಾಕಲು ಪ್ರಾರಂಭಿಸಿ ಬಿಡುತ್ತೇವೆ.
ಕೆಲವೊಮ್ಮೆ ವಾಮಮಾರ್ಗದಿಂದ ಆದರೂ ಸರಿ, ಮುಂದೆ ನಮ್ಮ ಮಕ್ಕಳು ಸುಖವಾಗಿರಬಹುದು ಎನ್ನುವ ದುರಾಸೆ. ಮತ್ತೊಬ್ಬರಿಗೆ ಸೇರಿದ್ದನ್ನು ನಾವು ಅನ್ಯಾಯವಾಗಿ ಪಡೆದುಕೊಂಡಾಗ ಆ ಅನ್ಯಾಯದ ಗಳಿಕೆಯಿಂದ ನಮ್ಮ ಮಕ್ಕಳು ಹೇಗೆ ಸುಖವಾಗಿರಲು ಸಾಧ್ಯ? ಆ ಕರ್ಮ ಅವರನ್ನು ಕಾಡದೆ ಬಿಡುವುದೇ? ಇಂದಿಗೆ ಎಲ್ಲಾ ಚೆನ್ನಾಗಿ ಇರಬಹುದು, ಭವಿಷ್ಯವನ್ನು ಕಂಡವರಾರು? ಹಣ, ಅಂತಸ್ತು, ಆಸ್ತಿ ಎಲ್ಲವನ್ನು ದಕ್ಕಿಸಿಕೊಂಡು ಅದರ ಪ್ರತಿ-ಲವಾಗಿ, ದೇವರು ಆರೋಗ್ಯ ವನ್ನೇ ಕಿತ್ತುಕೊಂಡುಬಿಟ್ಟರೆ ಅನುಭವಿಸುವವರು ಯಾರು? ಆಗ ಇರುವ ಹಣ, ಆಸ್ತಿಯನ್ನೆಲ್ಲ ಮಾರಿ ಆಸ್ಪತ್ರೆಯಲ್ಲಿ ಆರೋಗ್ಯಕ್ಕಾಗಿ ಮೊರೆ ಇಡುತ್ತೇವೆ. ಅದರ ಬದಲು, ಮತ್ತೊಬ್ಬರ ಆಸ್ತಿಗೆ ಆಸೆ ಪಡದೆ ಇರುವಷ್ಟರಲ್ಲೇ ಸಂತೃಪ್ತಿ ಯಿಂದ ನೆಮ್ಮದಿಯಿಂದ ಬದುಕಿದಾಗ ಬದುಕು ವರವಾಗಿರುತ್ತದೆ.