Dr Sadhanashree Column: ಆಯುರ್ವೇದವು ಮಾಂಸಾಹಾರದ ವಿರೋಧಿಯೇ ?
ಆಯುರ್ವೇದವೆಂಬ ಜೀವ ವಿಜ್ಞಾನ ಮತ್ತು ಜೀವನ ಜ್ಞಾನದ ಕುರಿತಾಗಿ ಜನರಲ್ಲಿ ಜ್ಞಾನಕ್ಕಿಂತ ಹೆಚ್ಚಾಗಿ ಅಜ್ಞಾವೇ ತುಂಬಿಹೋಗಿದೆ. ತಮಗಿರುವ ಅಲ್ಪಸ್ವಲ್ಪ ತಿಳಿವಳಿಕೆ ಮತ್ತು ಕಲ್ಪನೆಯ ಆಧಾರದ ಮೇಲೆಯೇ ಆಯುರ್ವೇದವನ್ನು ಅಳೆದು ತೂಗುವ ಸಂದರ್ಭಗಳನ್ನು ನಾನು ಎಷ್ಟೋ ಬಾರಿ ನೋಡಿದ್ದೇನೆ. ಅರ್ಧ ಬೆಂದ ಅರಿವಿನ ಸಹಾಯದಿಂದ, ಆಧಾರವಿಲ್ಲದೆ ಇಲ್ಲಸಲ್ಲದ ಆರೋಪಗಳನ್ನು ಎಸೆಯುವ ಜನರ ಸಾಹಸವು ಸೋಶಿಯಲ್ ಮೀಡಿಯಾದಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಡಾ.ಸಾಧನಶ್ರೀ
ಆಯುರ್ವೇದವೆಂಬ ಜೀವ ವಿಜ್ಞಾನ ಮತ್ತು ಜೀವನ ಜ್ಞಾನದ ಕುರಿತಾಗಿ ಜನರಲ್ಲಿ ಜ್ಞಾನ ಕ್ಕಿಂತ ಹೆಚ್ಚಾಗಿ ಅಜ್ಞಾವೇ ತುಂಬಿಹೋಗಿದೆ. ತಮಗಿರುವ ಅಲ್ಪಸ್ವಲ್ಪ ತಿಳಿವಳಿಕೆ ಮತ್ತು ಕಲ್ಪನೆಯ ಆಧಾರದ ಮೇಲೆಯೇ ಆಯುರ್ವೇದವನ್ನು ಅಳೆದು ತೂಗುವ ಸಂದರ್ಭ ಗಳನ್ನು ನಾನು ಎಷ್ಟೋ ಬಾರಿ ನೋಡಿದ್ದೇನೆ. ಅರ್ಧ ಬೆಂದ ಅರಿವಿನ ಸಹಾಯದಿಂದ, ಆಧಾರವಿಲ್ಲದೆ ಇಲ್ಲಸಲ್ಲದ ಆರೋಪಗಳನ್ನು ಎಸೆಯುವ ಜನರ ಸಾಹಸವು ಸೋಶಿಯಲ್ ಮೀಡಿಯಾದಲ್ಲಿಸರ್ವೇಸಾಮಾನ್ಯವಾಗಿ ಬಿಟ್ಟಿದೆ.
ಇಂಥ ಸಂದರ್ಭಗಳನ್ನು ನೋಡಿದಾಗ ನನಗೆ ‘ನಾಲ್ಕು ಅಂಧರು ಮತ್ತು ಆನೆ’ ಎಂಬ ಕಥೆಯ ನೆನಪಾಗುತ್ತದೆ.‘ಆನೆ’ ಎಂಬ ವಿಚಿತ್ರ ಪ್ರಾಣಿಯನ್ನು ಊರಿಗೆ ಕರೆತರಲಾಗಿದೆ ಎಂಬ ಸುದ್ದಿಯು ಕುರುಡರ ಗುಂಪಿಗೆ ಕೇಳಿಬಂತು.ಆದರೆ, ಅವರಲ್ಲಿ ಯಾರಿಗೂ ಅನೆಯೆಂಬ ಪ್ರಾಣಿಯ ಆಕಾರ ಮತ್ತು ರೂಪದ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ, ಬಹಳ ಕುತೂಹಲದಿಂದ, “ನಾವು ಅದನ್ನು ಸ್ಪರ್ಶದಿಂದ ಪರೀಕ್ಷಿಸಬೇಕು ಮತ್ತು ಅದರ ಬಗ್ಗೆ ಸಂಪೂರ್ಣವಾಗಿ ತಿಳಿದು ಕೊಳ್ಳಬೇಕು" ಎಂದು ಹೇಳಿದರು. ಎಲ್ಲರೂ ಆನೆಯ ಬಳಿ ಹೋದರು.
ಆನೆಯನ್ನು ಮುಟ್ಟಿ ಪರೀಕ್ಷಿಸತೊಡಗಿದರು. ಮೊದಲನೆಯ ಕುರುಡನು ಆನೆಯ ಸೊಂಡಿಲನ್ನು ಮುಟ್ಟಿ “ಈ ಜೀವಿ ದಪ್ಪ ಹಾವಿನಂತಿದೆ" ಎಂದು ಹೇಳಿದ. ಆನೆಯ ಕಿವಿಗೆ ಕೈ ಹಾಕಿದ ಇನ್ನೊಬ್ಬನಿಗೆ ಅದು ಒಂದು ರೀತಿಯ ಚಾಮರ ದಂತೆ ಅನಿಸಿತು. ಕಾಲಿನ ಮೇಲೆ ಕೈಯಿಟ್ಟ ಮತ್ತೊಬ್ಬ ಕುರುಡನು ಆನೆಯು ಮರದ ಕಾಂಡದಂಥ ಕಂಬವಾಗಿದೆ ಎಂದು ಭಾವಿಸಿದ. ಅದರ ಪಾರ್ಶ್ವದಲ್ಲಿ ತನ್ನ ಕೈಯನ್ನು ಇರಿಸಿದ ಮತ್ತೊಬ್ಬ ಕುರುಡನು “ಆನೆಯು ಒಂದು ಗೋಡೆ" ಎಂದ.
ಅದರ ಬಾಲವನ್ನು ಹಿಡಿದ ಇನ್ನೊಬ್ಬನು ಅದನ್ನು ‘ಹಗ್ಗ’ ಎಂದು ಬಣ್ಣಿಸಿದ. ಆನೆಯ ದಂತವನ್ನು ಮುಟ್ಟಿದ ಕುರುಡನು, “ಆನೆಯು ಗಟ್ಟಿಯಾದ, ನಯವಾದ ಈಟಿಯಂತಿದೆ" ಎಂದು ಹೇಳಿದ. ಆದರೆ ಒಬ್ಬ ಕುರುಡನಿಗೂ ಆನೆಯ ಸಂಪೂರ್ಣ ಪರಿಚಯವಾಗಲೇ ಇಲ್ಲ. ಆಯುರ್ವೇದದ ಬಗ್ಗೆ ನಮಗಿರುವ ಚಿತ್ರಣವು ಸಹ ಇದೆ ರೀತಿ ಯಾದದ್ದು!
ಆಯುರ್ವೇದದ ಯಾವುದೋ ಒಂದು ಸಣ್ಣ ಅಂಶವನ್ನು ಅಥವಾ ತಪ್ಪು ಅಂಶವನ್ನು ತಿಳಿದುಕೊಂಡು ಇಡೀ ಆಯುರ್ವೇದ ಅದಷ್ಟೇ ಎಂಬ ಭಾವನೆಯಲ್ಲಿ ಇರುತ್ತೇವೆ . ಉದಾಹರಣೆಗೆ, ಸುಮಾರು ಜನರಿಗೆ ಆಯುರ್ವೇದ ವೆಂದರೆ ಕೇವಲ ಬಾಡಿ ಮಸಾಜ್. ಇನ್ನು ಕೆಲವರಿಗೆ ಕಹಿ ಔಷಧಗಳಷ್ಟೇ ಆಯುರ್ವೇದದ ವಿಷಯ. ಇತರರಿಗೆ, ಆಯುರ್ವೇದವೆಂದರೆ ಕೇವಲ ಆಹಾರದ ಪಥ್ಯಗಳು. ಇನ್ನು ಕೆಲವರಿಗಂತೂ ಆಯುರ್ವೇದವೆಂದರೆ ಕೇವಲ ಪೈಲ್ಸ ಮತ್ತು ಫಿಸ್ಟುಲಾಗಳನ್ನು ಸರಿಮಾಡುವ ಪದ್ಧತಿ ಎಂಬ ಭಾವನೆ. ಒಟ್ಟಾರೆ, 99 ಪ್ರತಿಶತ ಭಾರತೀಯರಿಗೆ ನಿಜವಾದ ಆಯುರ್ವೇದವೆಂದರೆ ಏನು ಎಂಬ ಅರಿವಿಲ್ಲ.
ಹಾಗೆಯೇ, ತಿಳಿದುಕೊಳ್ಳುವ ಕಾಳಜಿಯೂ ಇಲ್ಲವೆಂಬುದು ಅತ್ಯಂತ ದುಃಖಕರ ಸಂಗತಿ. ಆದ್ದರಿಂದ, ಆಯುರ್ವೇದ ವೈದ್ಯರಾದ ನಾವು ಈ ಆಯುರ್ವೇದದ ಬಗೆಗೆ ಇರುವ ಅಪೂರ್ಣ ಅರಿವು, ತಪ್ಪು ಅರಿವು, ಆಧಾರವಿಲ್ಲದ ಅರಿವನ್ನು ಬದಲಾಯಿಸಿ ಆಯುರ್ವೇದವೆಂಬ ಮಹಾಸಾಗರದ ಆಳ ಅಗಲಗಳನ್ನು ಸ್ವಲ್ಪ ಮಟ್ಟಿಗಾದರೂ ಜನರಿಗೆ ತಲುಪಿಸುವ ಕೈಂಕರ್ಯವನ್ನು ತೆಗೆದುಕೊಂಡಿದ್ದೇವೆ. ಇಂದು ಸಹ, ಇಂಥ ಒಂದು ವಿಷಯದ ಬಗ್ಗೆ ಸರಿಯಾದ ಮಾಹಿತಿಯನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡುತ್ತಿದ್ದೇನೆ. ವಿಷಯ ವೇನೆಂದರೆ, ಆಯುರ್ವೇದವು ಮಾಂಸಾಹಾರದ ವಿರೋಧಿಯೇ? ನನ್ನ ಕ್ಲಿನಿಕ್ಕಿಗೆ ಬರುವ ಬಹಳಷ್ಟು ಜನರು ಆಯುರ್ವೇದವು ಕೇವಲ ಶಾಕಾಹಾರಿಗಳಿಗೆ ಮಾತ್ರ, ಆಯುರ್ವೇದದ ಔಷಧಿಗಳನ್ನ ಸೇವಿಸುವಾಗ ಮಾಂಸವನ್ನು ವರ್ಜಿಸಬೇಕು. ಮಾಂಸಾಹಾರಿಗಳಿಗೆ ಆಯುರ್ವೇದ ದಕ್ಕುವುದಿಲ್ಲ ಎನ್ನುವ ಭಾವನೆಯಲ್ಲಿ ಬರುತ್ತಾರೆ.
ನಿಮ್ಮ ಆಹಾರದ ಬಗ್ಗೆ ಸ್ವಲ್ಪ ತಿಳಿಸಿ ಎಂದು ನಾನು ಕೇಳಿದಾಗ, ತಾವು ಸೇವಿಸುವ ಮಾಂಸಾಹಾರದ ವಿಷಯವನ್ನುಹಂಚಿಕೊಳ್ಳಲು ಬಹಳ ಮುಜುಗರ ಪಡುತ್ತಾರೆ. ಆಯು ರ್ವೇದಕ್ಕೆ ಬಂದರೆ ಮಾಂಸಹಾರವನ್ನು ಬಿಡಬೇಕೆಂಬ ಭಯದಿಂದಲೂ ಹಲವಾರು ಜನ ಆಯುರ್ವೇದಕ್ಕೆ ಬರದೆ ಹಿಂದುಳಿಯುತ್ತಾರೆ. ಹಾಗಾದರೆ, ಈ ಅಭಿಪ್ರಾಯ ನಿಜವೇ?ಆಯುರ್ವೇದವು ಮಾಂಸಾಹಾರದ ವಿರೋಧಿಯೇ? ಎಂಬ ವಿಷಯವನ್ನು ಈ ಲೇಖನದಲ್ಲಿ ಅರ್ಥೈಸಿಕೊಳ್ಳೋಣ.ಮೊಟ್ಟ ಮೊದಲನೆಯದಾಗಿ, ಆಯುರ್ವೇದವು ಮಾಂಸಾಹಾರದ ವಿರೋಧಿಯಲ್ಲ.
ಹೌದು! ಆಯುರ್ವೇದದ ವಿಶೇಷವೇನೆಂದರೆ, ಅದು ಯಾವ ವಸ್ತುವಿನ ಬಳಕೆಯನ್ನೂ ನಿಷೇಧಿಸುವುದಿಲ್ಲ. ಮಾಂಸ, ಮದ್ಯ, ಮೈಥುನ ಇವೆಲ್ಲದರ ವಿಷಯಗಳನ್ನು ನಮಗೆ ಬಿಡಿಬಿಡಿಯಾಗಿ ತಿಳಿಸಿ ಹೇಳಿದೆ. ಯಾಕೆಂದರೆ, ಆಯುರ್ವೇ ದವು ಸರಿ ಮತ್ತು ತಪ್ಪುಗಳ ವಿವೇಚನೆಯನ್ನು ನೀಡುವ eನದ ಹರಿವು. ಜಗತ್ತಿನಲ್ಲಿ ಇರುವ ಯಾವುದೇ ವಸ್ತು ವನ್ನಾಗಲಿ ವಿಷಯವನ್ನಾಗಲಿ, ಇದು ತುಂಬಾ ಒಳ್ಳೆಯದು ಅಥವಾ ಇದು ಕೆಟ್ಟದ್ದು ಅಂತ ವಿಂಗಡಿಸಲು ಸಾಧ್ಯವಿಲ್ಲ.
ಯಾಕೆಂದರೆ ಅದರ ಪರಿಣಾಮ ಅಥವಾ ದುಷ್ಪರಿಣಾಮವು ಅದನ್ನು ಬಳಸುವ ವ್ಯಕ್ತಿ ಮತ್ತು ವಿಧಾನದ ಮೇಲೆ ನಿರ್ಧಾರವಾಗುತ್ತದೆ. ಆಯುರ್ವೇದವು, ಯಾವುದೇ ವಸ್ತುವಾಗಲಿ ಅದನ್ನು ಅದರ ಗುಣ ಕರ್ಮಗಳನ್ನು ವಿವರಿಸಿ,ಅದನ್ನು ತೆಗೆದುಕೊಂಡಾಗ ಆಗುವ ಅನುಕೂಲ ಮತ್ತು ಅನಾನುಕೂಲಗಳನ್ನು ತಿಳಿಸಿಕೊಡುತ್ತದೆ. ಅದನ್ನು ಉಪಯೋಗಿಸು ವುದು ಬಿಡುವುದು ವ್ಯಕ್ತಿಯ ವಿವೇಚನೆಗೆ ಬಿಟ್ಟಿದ್ದು.
ಇದೇ ನಿಯಮವು ಮಾಂಸಾಹಾರಕ್ಕೂ ಅನ್ವಯಿಸುತ್ತದೆ. ವಸ್ತುತಃ, ಮಾಂಸಾಹಾರವು ಜೀರ್ಣಕ್ಕೆ ಜಡವಾಗಿದ್ದುಮಾನಸಿಕ ಸ್ತರದಲ್ಲಿ ಇದು ತಮಸ್ಸು ಮತ್ತು ರಜಸ್ಸನ್ನು ಹೆಚ್ಚಿಸು ತ್ತದೆ. ಹಾಗಾಗಿ, ನಿಮಗೆ ಸಾತ್ವಿಕ ಬದುಕನ್ನು ನಡೆಸುವ ಚಿಂತನೆ ಇದ್ದರೆ ಮಾಂಸ ಸೇವನೆ ಪೂರಕವಲ್ಲ. ಅದೇ ರೀತಿ ಇದು ದೇಹಕ್ಕೆ ಪುಷ್ಟಿ ನೀಡುತ್ತದೆ. ದೇಹಕ್ಕೆ ಹೆಚ್ಚು ಶ್ರಮವಾಗು ವಂಥ ಕೆಲಸವನ್ನು ಮಾಡುವವರಿಗೆ ಉತ್ತಮ ಆಹಾರ.
ಒಟ್ಟಿನಲ್ಲಿ ನಿಮ್ಮ ಜೀವನದ ಗುರಿ, ಮಾನಸಿಕ ಸ್ಥಿತಿ ಹಾಗೂ ದೈಹಿಕ ಅವಶ್ಯಕತೆಗಳನ್ನು ನೋಡಿ ನಿಮಗೆ ಮಾಂಸಾ ಹಾರ ಸೂಕ್ತವೋ ಇಲ್ಲವೋ ಎಂದು ನಿರ್ಧರಿಸುವ ಸ್ವಾತಂತ್ರ ವನ್ನು ಆಯುರ್ವೇದ ನಿಮಗೆ ನೀಡಿದೆ. ಹಾಗಾಗಿ ನೆನಪಿರಲಿ, ಆಯುರ್ವೇದವು ಎಲ್ಲೂ ಮಾಂಸಾಹಾರದ ಬಗ್ಗೆ ನಿಷೇಧವನ್ನು ಸಾಮಾನ್ಯವಾಗಿ ಹೇಳಿಲ್ಲ. ಸೇವನೆ ಯನ್ನು ಮಾಡುವಾಗ ಅಥವಾ ಮಾಡಲು ನಿರ್ಧರಿಸುವ ಮುನ್ನ ನಮಗೆ ಗಮನದಲ್ಲಿ ಇರಬೇಕಾದ ಕೆಲವು ವಿಷಯ ಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ನಾನು ಆಗಲೇ ಹೇಳಿದ ಹಾಗೆ, ದೈಹಿಕ ಶ್ರಮವಿರುವವರು ಮಾಂಸಾ ಹಾರವನ್ನು ಯಥೇಚ್ಛವಾಗಿ ಸೇವಿಸಬಹುದು. ಆದರೆ, ದಿನಪೂರ್ತಿ ಮೈಬಗ್ಗಿಸಿ ಕೆಲಸ ಮಾಡ್ತಾರೆ ಅಂತ ಎಷ್ಟು ಬೇಕಾದರೂ/ಹೇಗೆ ಬೇಕಾದರೂ ತಿನ್ನಬಹುದು ಎಂದರ್ಥವಲ್ಲ. ಮಾಂಸ ಸೇವನೆಯ ಪ್ರಮಾಣವನ್ನು ನಿರ್ಧರಿಸುವ ಮೊದಲು ನಮ್ಮ ಜೀರ್ಣಶಕ್ತಿಯ ಅರಿವು ನಮಗೆ ಪೂರ್ಣವಾಗಿರಬೇಕು.
ಅದು ಉತ್ತಮವಾಗಿದ್ದು, ಸಕಾಲಕ್ಕೆ ಹಸಿವೆ ಯಾಗಿ, ಮಲಮೂತ್ರದ ಪ್ರವೃತ್ತಿ ಆರೋಗ್ಯಕರ ವಾಗಿದ್ದಾಗ ಮಾತ್ರ ಮಾಂಸವನ್ನು ಸೇವಿಸುವುದು ಉತ್ತಮ. ಅದೇ ರೀತಿಯಾಗಿ ಮಾಂಸವು ಜೀರ್ಣಕ್ಕೆ ಜಡವಾಗಿರುವ ಕಾರಣ ಸದಾ ಬೆಳಗ್ಗೆ ಅಥವಾ ಮಧ್ಯಾಹ್ನದ ಊಟದ ಜತೆ ಇದನ್ನು ಸೇವಿಸುವುದು ಒಳ್ಳೆಯದು. ಏಕೆಂದರೆ, ದಿನದಲ್ಲಿ ದೇಹದಚಟುವಟಿಕೆಯು ಹೆಚ್ಚಾಗಿರುವುದರಿಂದ ಮಾಂಸವು ಸುಲಭವಾಗಿ ಜೀರ್ಣವಾಗುತ್ತದೆ. ಆದರೆ, ರಾತ್ರಿಯ ಊಟಕ್ಕೆಇದನ್ನು ಪದೇಪದೆ ಸೇವಿಸುವುದರಿಂದ ಅನೇಕ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಮಾಂಸ ಸೇವಿಸುವಾಗ ನೆನಪಿಡಬೇಕಾದ ಮತ್ತೊಂದು ಮುಖ್ಯವಾದ ವಿಷಯವೆಂದರೆ ಮಾಂಸಾಹಾರದ ಸರಿಯಾದಸಂಯೋಜನೆ. “ಮಾಂಸವನ್ನು ನೀವು ಹೇಗೆ ಸ್ವೀಕರಿಸ್ತೀರಾ?" ಅಂತ ರೋಗಿಗಳನ್ನು ಕೇಳಿದಾಗ, ಆಹಾರದಲ್ಲಿ ಪ್ರಧಾನವಾಗಿ ಅವರು ಮಾಂಸವನ್ನೇ ಸೇವಿಸುತ್ತಿರುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ, ಆಯು ರ್ವೇದ ಹೇಳುವುದೇನೆಂದರೆ, ನಾವು ಸೇವಿಸುವ ಆಹಾರವು ಸಂಪೂರ್ಣವಾಗಬೇಕಾದರೆ, ಆಹಾರದ ಬಹುಮುಖ್ಯ ಭಾಗವು ಏಕದಳ ಧಾನ್ಯಗಳಾಗಿರಬೇಕು.
ಉದಾಹರಣೆಗೆ, ರಾಗಿ, ಜೋಳ, ಅಕ್ಕಿ, ಗೋಧಿ ಮುಂತಾದವು. ಹಾಗೆಯೇ, ಅದಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಷ್ಟು ದ್ವಿದಳ ಧಾನ್ಯಗಳಿರಬೇಕು. ಅಂದರೆ ಬೇಳೆಕಾಳುಗಳು. ಉದಾ ಹರಣೆಗೆ ಹೆಸರುಬೇಳೆ, ತೊಗರಿಬೇಳೆ, ಹುರುಳಿ ಇತ್ಯಾದಿ. ಮತ್ತೆ, ಇದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳಿರಬೇಕು. ಈ ಪ್ರಮಾಣದ ಪ್ರಕಾರ, ಮಾಂಸ ವನ್ನು ನಾವು ಬೇಳೆ-ತರಕಾರಿಗಳ ಬದಲಾಗಿ ಉಪಯೋಸಬಹುದು. ಮಾಂಸಹಾರವನ್ನು ಸೇವಿಸುವಾಗ ಏಕದಳ ದಿಂದ ತಯಾರಿಸಿದ ಪದಾರ್ಥಗಳ ಜತೆಗೆ ಸೇವಿಸಬೇಕು.
ಉದಾಹರಣೆಗೆ, ಅನ್ನ, ರೊಟ್ಟಿ, ಮುದ್ದೆ, ಚಪಾತಿಗಳ ಜತೆಗೆ ತೆಗೆದುಕೊಳ್ಳಬೇಕೇ ಹೊರತು ಕೇವಲ ಮಾಂಸ ಖಾದ್ಯ ಗಳನ್ನು ಸೇವಿಸುವುದು ಸಂಪೂರ್ಣ ಆಹಾರವಾಗುವುದಿಲ್ಲ. ಇನ್ನು ಮಾಂಸ ಖಾದ್ಯಗಳನ್ನು ತಯಾರಿಸುವಾಗ ಆಯುರ್ವೇದ ಹೇಳುತ್ತದೆ- ಅದರಲ್ಲಿ ಹೆಚ್ಚಾಗಿ ಶುಂಠಿ, ಕಾಳು ಮೆಣಸು, ಜೀರಿಗೆ ಮತ್ತು ಬೆಳ್ಳುಳ್ಳಿಯನ್ನು ಕಡ್ಡಾಯ ವಾಗಿ ಬಳಸಲೇಬೇಕು. ಯಾಕೆಂದರೆ, ಮಾಂಸವು ಜೀರ್ಣಕ್ಕೆ ಜಡವಾಗಿರುವುದರಿಂದ ಮೇಲೆ ಹೇಳಿದ ದ್ರವ್ಯಗಳು ಅದನ್ನು ಸಂಪೂರ್ಣವಾಗಿ ಜೀರ್ಣ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಆಯುರ್ವೇದ ನಮಗೆ ತಿಳಿಸಿಕೊಡುವ ಮತ್ತೊಂದು ವಿಷಯವೇನೆಂದರೆ ಮಾಂಸವು ಆಹಾರ ಪದಾರ್ಥವೇ ಆಗಿದ್ದರೂ ಎಲ್ಲರಿಗೂ ದಿನನಿತ್ಯ ಸೂಕ್ತವಲ್ಲ.
ಯಾರಿಗೆ ಮಾಂಸಾಹಾರ ಸಾತ್ಮ್ಯವಾಗಿರುತ್ತದೆಯೋ ಅವರು ಜಾಂಗಲ ಮಾಂಸ- ಅಂದರೆ ಒಣಭೂಮಿಯ ಪ್ರಾಣಿಯಮಾಂಸವನ್ನು ಮಾತ್ರ ಯಥೇಚ್ಛವಾಗಿ ಬಳಸಬಹುದು. ಆದರೆ, ಯಾರಿಗೆ ಸಸ್ಯಜನ್ಯ ಆಹಾರದ ಬಳಕೆ ಹೆಚ್ಚು ದೇಹಕ್ಕೆಒಗ್ಗಿದೆಯೋ ಅವರು ಮಾಂಸಾಹಾರ ವನ್ನು ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿಯಂತೆ ಆಹಾರದಲ್ಲಿ, ಅದೂ ಮಧ್ಯಾಹ್ನದಲ್ಲಿ ಬಳಸುವುದು ಉತ್ತಮ.
ಈಗಿನ ಆಹಾರಪದ್ಧತಿಯ ಬಗ್ಗೆ ಚರ್ಚೆ ಮಾಡುವುದಾದರೆ, ಎಷ್ಟೋ ದಿನದ ಹಿಂದೆ ಕತ್ತರಿಸಿದ ಮಾಂಸವನ್ನು ಫ್ರೀಜರ್‌ನಲ್ಲಿ ಇಟ್ಟು ಸೇವಿಸುವುದನ್ನು ನಾವು ನೋಡಬಹುದು. ಆದರೆ, ಆಯುರ್ವೇದದ ಪ್ರಕಾರ ಈ ಅಭ್ಯಾಸವು ಅನಾರೋಗ್ಯಕರ.
ಶಾಸ್ತ್ರ ಹೇಳುತ್ತದೆ- ಸೇವಿಸಲು ಯೋಗ್ಯವಾದ ಮಾಂಸವೆಂದರೆ, ಆಗ ತಾನೇ ಕತ್ತರಿಸಿದ, ಶುದ್ಧವಾದ, ಮಧ್ಯಮ ವಯಸ್ಸಿನ ಪ್ರಾಣಿಯ ಮಾಂಸ. ಅತಿ ಎಳೆಯದಾದ ಮತ್ತು ಅತಿ ವಯಸ್ಸಾದ ಪ್ರಾಣಿಗಳ ಮಾಂಸ ವರ್ಜ್ಯ. ಅಂತೆಯೇ,ಸಹಜವಾಗಿ ಮರಣ ಹೊಂದಿದ ಪ್ರಾಣಿಯ ಮಾಂಸವನ್ನು ಸೇವಿಸುವುದು ಆರೋಗ್ಯಕ್ಕೆ ಕೆಟ್ಟದ್ದು. ಹಾಗೆಯೇ, ಒಣಗಿದ ಮಾಂಸ, ಕೊಳೆತ ಮಾಂಸ, ಅತಿಯಾಗಿ ಕೊಬ್ಬಿದ ಪ್ರಾಣಿಯ ಮಾಂಸ ಸೇವಿಸಲು ಯೋಗ್ಯವಲ್ಲ. ನಿಮಗೆ ಮಾಂಸವನ್ನು ಸೇವಿಸಬೇಕಾದಾಗ, ಮಾರುಕಟ್ಟೆಗೆ ಹೋಗಿ ಖರೀದಿಸುವಾಗ, ಸ್ವತಃ ನೀವೇ ಆ ಪ್ರಾಣಿಯನ್ನು ಪರೀಕ್ಷಿಸಿ ಆರೋಗ್ಯವಾಗಿರುವುದನ್ನು ಕಂಡು, ನಮ್ಮೆದುರೇ ಅದನ್ನು ಬಳಸಲು ಯೋಗ್ಯವಾಗುವ ರೀತಿ ಸಂಸ್ಕರಿಸಿ ಕೊಡಲು ಹೇಳುವುದು ಉತ್ತಮ.
ಒಟ್ಟಾರೆ ಹೇಳಬೇಕಾದರೆ ಆಯುರ್ವೇದದಲ್ಲಿ ಮಾಂಸವು ಖಂಡಿತ ನಿಷೇಧವಾಗಿರುವ ವಸ್ತುವಲ್ಲ. ಅನೇಕಆಯುರ್ವೇದೀಯ ಔಷಧಿಗಳಲ್ಲಿ ಮತ್ತು ಪಥ್ಯದಲ್ಲಿ ಮಾಂಸದ ಬಳಕೆಯನ್ನು ನಾವು ಹೇರಳವಾಗಿ ಕಾಣಬಹುದು.ಆಯುರ್ವೇದ ಗ್ರಂಥಗಳಲ್ಲೂ ಮಾಂಸದಿಂದ ತಯಾರಿಸುವ ಅನೇಕ ಖಾದ್ಯಗಳ ಉಲ್ಲೇಖವಿದೆ. ಹಾಗಾಗಿ, ಮಾಂಸವನ್ನು ಬಳಸುವವರಿಗೆ ಆಯುರ್ವೇದ ಸೂಕ್ತವಲ್ಲ ಎಂಬ ತಪ್ಪು ಕಲ್ಪನೆಯನ್ನು ಬದಲಾಯಿಸಿಕೊಳ್ಳ ಬೇಕಾದ ಸಮಯ ವಿದು.
ಆದರೆ, ಬಳಸುವ ಮುಂಚೆ ಅದರ ಗುಣಕರ್ಮಗಳ ಅರಿವು ನಮಗಿರಲಿ. ನಮ್ಮ ದೇಹದ ಬಲದ ಜ್ಞಾನವಿರಲಿ. ನಮ್ಮ ಅಗ್ನಿಯ ಕ್ಷಮತೆಯ ಅನುಭವ ನಮಗಿರಲಿ. ನಮ್ಮ ದೈಹಿಕ ಶ್ರಮದ ಮಾಪನೆಯಿರಲಿ. ಇದರ ಜತೆಗೆ, ಇದು ಯಾವಕಾಲ, ಕಾಲಕ್ಕೆ ತಕ್ಕಂತೆ ನಾನು ಎಷ್ಟು ಸೇವಿಸಬೇಕು ಎಂಬ ವಿವೇಚನೆ ಇಟ್ಟುಕೊಂಡು ನಾವು ಮಾಂಸವನ್ನು ಬಳಸಿದಾಗ, ಅದು ನಮ್ಮ ಆರೋಗ್ಯವನ್ನು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಮಾತ್ರವಲ್ಲ, ನನ್ನ ಜೀವನದ ಉದ್ದೇಶಕ್ಕೆ ಮಾಂಸದ ಬಳಕೆ ಪೂರಕವೋ ಅಥವಾ ಮಾರಕವೋ ಎಂಬ ಚಿಂತನೆಯನ್ನು ಮಾಡಿ ಮಾಂಸವನ್ನು ಹಿತಮಿತವಾಗಿ ಬಳಸಿದಾಗ ಅದು ಆಯುರ್ವೇದ ತೋರಿದ ಪಥವೇ ಆಗಿಬಿಡುತ್ತದೆ!
ಇದನ್ನೂ ಓದಿ: Dr Sadhanasree Column: ಪ್ರಾಣಾಯಾಮವೆಂಬ ಪಯಣದ ಪ್ರಾರಂಭ