Chikkaballapur News: ರೈತರ ಮೇಲೆ ಹಾರಿದೆ ಗುಂಡಿನ ದಾಳಿ
ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚಿನ ಗಣಿಗಾರಿಕೆ ಚಟುವಟಿ ಕೆಗಳು ನಡೆಯುತ್ತಿದ್ದು ಇವುಗಳ ಕಾರಣವಾಗಿ ಇಲ್ಲಿ ನಿತ್ಯವೂ ಮಾನವ ಹಕ್ಕುಗಳ ಉಲ್ಲಂಘನೆಯಂತಹ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಗಣಿಗಾರಿಕೆಗೆ ಅವಶೇಷಗಳನ್ನು ಸಾಗಿಸಲು ಬಳಕೆಯಾಗುವ ಟಿಪ್ಪರ್‌ಗಳಿಂದಾಗಿ ರಾಷ್ಟೀಯ ಹೆದ್ದಾರಿ ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ನಿತ್ಯವೂ ಒಂದಿಲ್ಲೊಂದು ಅಪಘಾತಗಳು ಘಟಿಸಿ ಅಮಾಯಕರ ಪ್ರಾಣಕ್ಕೆ ಎರವಾಗುತ್ತಿರುವುದು ಸುಳ್ಳಲ್ಲ.ಇದಕ್ಕೆ ಹೊಸ ಸೇರ್ಪಡೆ ಏ.23ರಂದು ಕನಗಾನಕೊಪ್ಪ ಗ್ರಾಮದಲ್ಲಿ ಕ್ವಾರಿಗೆ ರಸ್ತೆ ನಿರ್ಮಾಣ ಮಾಡುವಾಗ ನಡೆದ ಶೂಟೌಟ್ ಘಟನೆಯಾಗಿದೆ


ಪಂಚಗಿರಿಗಳ ನಾಡಿನಲ್ಲಿ ಹಾಡಹಗಲೇ ಕೊಲೆ ಯತ್ನ
ಕಲ್ಲುಕ್ವಾರಿ ಮತ್ತು ಗಣಿಗಾರಿಕೆ ಹೆಸರಿನಲ್ಲಿ ನಡೆದಿದೆ ಪ್ರಾಕೃತಿಕ ಸಂಪನ್ಮೂಲಗಳ ಹರಣ
ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ : ಪಂಚಗಿರಿಗಳ ನಾಡು ಎಂಬ ಖ್ಯಾತಿಯ ಚಿಕ್ಕಬಳ್ಳಾಪುರದಂತೆ ಜಿಲ್ಲೆಯಲ್ಲಿ ಹಬ್ಬಿನಿಂತ ಮಲೆಯ ಸಾಲುಗಳಲ್ಲಿ ಡೈನಮೈಟ್‌ಗಳ ಭೋರ್ಗೆರೆತ,ಜಲ್ಲಿ ಕಲ್ಲುಗಳ ಸಾಗಾಟದ ನಡುವೆ ರೈತಾಪಿ ವರ್ಗದ ಎದೆಗೆ ಗುಂಡು ಹಾರಿಸಲಾಗಿದೆ. ಜಿಲ್ಲೆಯಲ್ಲಿ ಗಣಿಗಾರಿಕೆ ಮತ್ತು ಕಲ್ಲು ಕ್ವಾರಿಗಳ ಹೆಸರಿನಲ್ಲಿ ನಡೆಯುತ್ತಿರುವ ಪ್ರಾಕೃತಿಕ ಸಂಪ ನ್ಮೂಲಗಳ ಹರಣ ನಾಗರೀಕರನ್ನು ದಿಗಿಲುಬೀಳುವಂತೆ ಮಾಡಿರುವುದೇ ಏ28ರ ಮಂಚೇನಹಳ್ಳಿ ಬಂದ್‌ಗೆ ಕಾರಣವಾಗಿದೆ.
ಹೌದು. ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚಿನ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿದ್ದು ಇವುಗಳ ಕಾರಣವಾಗಿ ಇಲ್ಲಿ ನಿತ್ಯವೂ ಮಾನವ ಹಕ್ಕುಗಳ ಉಲ್ಲಂಘನೆಯಂತಹ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಗಣಿಗಾರಿಕೆಗೆ ಅವಶೇಷಗಳನ್ನು ಸಾಗಿಸಲು ಬಳಕೆಯಾಗುವ ಟಿಪ್ಪರ್‌ಗಳಿಂದಾಗಿ ರಾಷ್ಟೀಯ ಹೆದ್ದಾರಿ ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ನಿತ್ಯವೂ ಒಂದಿಲ್ಲೊಂದು ಅಪಘಾತಗಳು ಘಟಿಸಿ ಅಮಾಯಕರ ಪ್ರಾಣಕ್ಕೆ ಎರವಾಗುತ್ತಿರುವುದು ಸುಳ್ಳಲ್ಲ.ಇದಕ್ಕೆ ಹೊಸ ಸೇರ್ಪಡೆ ಏ.23ರಂದು ಕನಗಾನಕೊಪ್ಪ ಗ್ರಾಮದಲ್ಲಿ ಕ್ವಾರಿಗೆ ರಸ್ತೆ ನಿರ್ಮಾಣ ಮಾಡುವಾಗ ನಡೆದ ಶೂಟೌಟ್ ಘಟನೆಯಾಗಿದೆ.
ಫೆಬ್ರವರಿ 2021ರಲ್ಲಿ ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿ ಗ್ರಾಮದ ಬೆಟ್ಟಗುಡ್ಡಗಳಲ್ಲಿ ನಡೆದ ಜಿಲೆಟಿನ್ ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟ ಘಟನೆ ರಾಜ್ಯವೇ ಜಿಲ್ಲೆಯತ್ತ ತಿರುಗಿ ನೋಡು ವಂತೆ ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ.
ಇದನ್ನೂ ಓದಿ: Chikkaballapur News: ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರ: ಎರಡು ಗುಂಪುಗಳ ಮಧ್ಯೆ ಘರ್ಷಣೆ
ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ, ಅಡ್ಡಗಲ್ಲು, ಕಣಿವೆ ನಾರಾಯಣಪುರ, ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಹೋಬಳಿಯಲ್ಲಿ ಕೂಡ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ದೂರಿದೆ. ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಿಣಿಗಳ ಕಣ್ಣಳತೆಯಲ್ಲಿಯೇ ಗಣಿಗಾರಿಕೆ ಹೆಸರಿನಲ್ಲಿ ಅಕ್ರಮಗಳು ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಜಿಲ್ಲೆಯಲ್ಲಿ ಕಟ್ಟಡ ಕಲ್ಲು ಮತ್ತು ಗ್ರಾನೈಟ್ ಗಣಿಗಾರಿಕೆ ನಿರಪೇಕ್ಷಣೆ ಕೋರಿರುವ 690 ಅರ್ಜಿಗಳು ಎರಡೂ ಅರಣ್ಯ ಮತ್ತು ಭೂವಿಜ್ಞಾನ ಇಲಾಖೆಗಳ ಬಳಿ ಬಾಕಿ ಇವೆ ಎಂದು ತಿಳಿದುಬಂದಿದೆ. ಒಂದು ವೇಳೆ ಈ ಅರ್ಜಿಗಳಿಗೆ ಅನುಮತಿ ದೊರೆತರೆ ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ ದೊಡ್ಡ ಮಟ್ಟ ದಲ್ಲಿ ಗಣಿಗಾರಿಕೆ ನಡೆಯಲಿದೆ.
ಬೆಂಗಳೂರಿನ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಜಲ್ಲಿ, ಎಂಸ್ಯಾಂಡ್, ಕಲ್ಲುಗಳನ್ನು ಪೂರೈಸುವ ಜಿಲ್ಲೆಯಾಗಿ ಚಿಕ್ಕಬಳ್ಳಾಪುರ ಗುರುತಿಸಿಕೊಂಡಿದೆ.
ವಿಶ್ವವಿಖ್ಯಾತ ನಂದಿಗಿರಿಧಾಮದ ಸುತ್ತಲೇ ಕಲ್ಲು ಗಣಿಗಾರಿಕೆಗಳು ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ನಂದಿಬೆಟ್ಟದ ಬುಡದಲ್ಲಿರುವ ನಂದಿ ಹೋಬಳಿ ವ್ಯಾಪ್ತಿಯಲ್ಲಿ ೨೦ ಕಲ್ಲು ಕ್ವಾರಿ ಗಳು ಮತ್ತು ೦೭ ಕ್ರಷರ್‌ಗಳು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದು ನಡೆಯುತ್ತಿವೆ. ಹೀಗಾಗಿ ಹೊರಜಿಲ್ಲೆ ಮತ್ತು ಹೊರರಾಜ್ಯದ ಉದ್ಯಮಿಗಳು ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸಲು ಮುಂದಾಗುತ್ತಿರುವುದು ಒಂಡೆಡೆ ಪ್ರಕೃತಿಗೆ ಮತ್ತೊಂದೆಡೆ ರೈತಾಪಿವರ್ಗಕ್ಕೆ ಕಂಠಕವಾಗಿ ಪರಿಣಮಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರ್‌ಟಿಒ ಇಲಾಖೆಯ ನಿಯಮಾವಳಿಯಂತೆ ಜಿಪಿಎಸ್ ಅಳವಡಿಸಿರುವ 1407 ಟಿಪ್ಪರ್‌ಗಳಿದ್ದು, ನಿಯಮಾವಳಿ ಮೀರುತ್ತ ಅಕ್ರಮವಾಗಿ ಸಂಚರಿಸುತ್ತಿರುವ ಟಿಪ್ಪರ್‌ಗಳ ಸಂಖ್ಯೆ ಇವುಗಳ ಎರಡರಷ್ಟಿವೆ ಎನ್ನುವುದು ನಾಗರೀಕರ ಅಳಲಾಗಿದೆ. ಇವುಗಳ ಚಲನ-ವಲನಗಳ ಪರಿಶೀಲನೆ ಮಾಡುವುದು, ನಿಯಮ ಉಲ್ಲಂಘನೆ ಮಾಡುವ ವಾಹನಗಳಿಗೆ ದಂಡವಿಧಿಸುವ ಅಧಿಕಾರವುಳ್ಳ ಆಟ್‌ಟಿಒ ಕಚೇರಿ ಅಧಿಕಾರಿಗಳ ಕಳ್ಳಪೊಲೀಸ್ ಆಟ ಆಡುತ್ತಿರುವುದು ಸುಳ್ಳಲ್ಲ.ಕಣ್ಣ ಮುಂದೆಯೇ ರಸ್ತೆಭಾರಮಿತಿ ಮೀರಿ ಕಲ್ಲು ಕ್ವಾರಿ ಉತ್ವನ್ನಗಳ ಸಾಗಾಟ ನಡೆಯುತ್ತಿದ್ದರೂ ಕ್ರಮ ವಹಿಸಬೇಕಾದ ಅಧಿಕಾರಿಗಳು ಅಪಘಾತಗಳಾದಾಗ ಮಾತ್ರ ಪ್ರತ್ಯಕ್ಷರಾಗುವುದು ನಿಂತಿಲ್ಲ. ಹೀಗಾಗಿ ಆರ್‌ಟಿಒ ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ರೈತಾಪಿವರ್ಗವು ಹಿಡಿಶಾಪ ಹಾಕುವುದು ತಪ್ಪಿಲ್ಲ.
ಒಟ್ಟಾರೆ ಒಂದು ಕಾಲದ ಬಳ್ಳಾರಿಯ ಗಣಿಗಾರಿಕೆ ಮೀರಿಸುವ ಹಾಗೆ ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆ ಯಲ್ಲಿ ಕಲ್ಲು ಕ್ವಾರಿ ಗ್ರಾನೈಟ್ ಎಂ.ಸ್ಯಾಂಡ್ ದಂಧೆ ಎಗ್ಗು-ಸಿಗ್ಗಿಲ್ಲದೆ ನಡೆಯುತ್ತಿದೆ.ಇವುಗಳ ಕಾರಣ ವಾಗಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಪ್ರಾಕೃತಿಕ ಸೌಂದರ್ಯಕ್ಕೆ ಕಲಶವಿಟ್ಟಂತಿದ್ದ ಬೆಟ್ಟಗುಡ್ಡಗಳು ಕಲ್ಲು ಕ್ವಾರಿ ಕ್ರಷರ್ ಗ್ರಾನೈಟ್ ದಂಧೆಯ ಕಾರಣಕ್ಕಾಗಿ ಮಂಗಮಾಯವಾಗುತ್ತಿರುವುದು ನಾಗರೀಕರನ್ನು ಆತಂಕಕ್ಕೆ ನೂಕಿವೆ.
ಹೀಗೆ ಜಿಲ್ಲೆಯಲ್ಲಿ ದೂರದೃಷ್ಟಿಯಿಲ್ಲದ ರಾಜಕಾರಣಿಗಳು,ಜನಪರಬದ್ಧತೆಯಿಲ್ಲದ ಅಧಿಕಾರಿಗಳ ಕಾರಣವಾಗಿ ಅನುಮತಿ ಹೆಸರಿನಲ್ಲಿ ನಡೆದಿರುವ ಗಣಿಗಾರಿಕೆ ಅದರ ನೆರಳಿನಲ್ಲಿ ನಡೆಯುತ್ತಿರುವ ಅಕ್ರಮಗಳಿಂದ ಬೆಟ್ಟಗುಡ್ಡಗಳಷ್ಟೇ ಅಲ್ಲ ಜನಜಾನುವಾರುಗಳು ನಲುಗುತ್ತಿವೆ. ಇದಕ್ಕೆ ತಾಜಾ ಉದಾಹರಣೆಯಾಗಿ ಇತ್ತೀಚೆಗೆ ಮಂಚೇನಹಳ್ಳಿ ತಾಲ್ಲೂಕು ಕನಗಾನಕೊಪ್ಪ ಗ್ರಾಮದಲ್ಲಿ ನಡೆದ ಶೂಟೌಟ್ ಪ್ರಕರಣ ಮತ್ತೊಮ್ಮೆ ಜಿಲ್ಲೆಯ ಮಾನ ಹರಾಜಾಗುವಂತೆ ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರದೀಪ್ ಈಶ್ವರ್ ಮತ್ತು ಸಂಸದ ಡಾ.ಕೆ.ಸುಧಾಕರ್ ನಡುವೆ ಮೂಡಿ ಬಂದಿರುವ ಭಿನ್ನ ಹೇಳಿಕೆಗಳು ಜಿಲ್ಲೆಯ ಜನತೆಯನ್ನು ಮತ್ತಷ್ಟು ಕಂಗಾಲಾಗಿಸಿವೆ. ನನ್ನ ಅವಧಿಯಲ್ಲಿ ಒಂದೇ ಒಂದು ಗಣಿಗಾರಿಕೆಗೂ ಅನುಮತಿ ನೀಡಿಲ್ಲ ಎನ್ನುವುದು ಪ್ರದೀಪ್ ಈಶ್ವರ್ ಅವರ ಪುನರುಚ್ಚಾರವಾದರೆ, 15 ವರ್ಷಗಳ ನನ್ನ ಆಡಳಿತದಲ್ಲಿ ಎಂದೂ ಕೂಡ ಅಧಿಕಾರಿಗಳು ಎಲ್ಲೆ ಮೀರಿ ನಡೆದುಕೊಂಡಿಲ್ಲ, ರೈತರ ಮೇಲೆ ಹಾಡಹಗಲೇ ಗುಂಡೇಟಿನಂತಹ ಘಟನೆಗಳು ನಡೆದಿಲ್ಲ.ಜಿಲ್ಲಾಡಳಿತ ವೈಫಲ್ಯಕ್ಕೆ, ಅಧಿಕಾರಿಗಳ ಲಂಚಭಾಕತನಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?ರಾಜಕೀಯವಾಗಿ ನನಗೆ ಹಿನ್ನಡೆಯಾದರೂ ತಲೆಕೆಡಿಸಿಕೊಳ್ಳದೆ ಕನಗಾನಕೊಪ್ಪದಲ್ಲಿ ಅನುಮತಿ ನೀಡಿರಲಿಲ್ಲ ಎನ್ನುತ್ತಾರೆ. ದುರಂತವೆಂದರೆ 2021ರಲ್ಲಿ ಮಾಜಿ ಶಾಸಕ ವೈ.ಎ.ನಾರಾ ಯಣಸ್ವಾಮಿ ಅವರ ಪತ್ನಿ ಹೆಸರಿಗೆ ಅನುಮತಿ ನೀಡಲಾಗಿದೆ.ಇವರ ಹೇಳಿಕೆಗಳು ಇದ್ದ ಮೂವರಲ್ಲಿ ಕದ್ದವರು ಯಾರು ಎಂಬತ್ತಿವೆ.
ಏನೇ ಆಗಲಿ ಹಣದ ದಾಹಕ್ಕೋ ಅಧಿಕಾರದ ಬಲವರ್ಧನೆಗೋ ಗಣಿಕಾರಿಕೆಗೆ ಅವಕಾಶ ನೀಡುತ್ತಾ ಸಾಗಿದರೆ ಪ್ರಾಕೃತಿಕ ಸಂಪನ್ಮೂಲಗಳು ಕರಗಿ ಮುಂದಿನ ತಲೆಮಾರಿಗೆ ಮರುಭೂಮಿಯನ್ನು ಬಳುವಳಿಯಾಗಿ ನೀಡಬೇಕಾಗುತ್ತದೆ.ಇದನ್ನು ಮನಗಂಡು ನಾಗರೀಕರು ಕೂಡ ತಮ್ಮ ದನಿಯನ್ನು ಎತ್ತಬೇಕು. ಇಲ್ಲವಾದಲ್ಲಿ ನಾಳೆ ಕೆರೆಕುಂಟೆಗಳು ಕೂಡ ನಾಪತ್ತೆಯಾಗುವ ಅಪಾಯವನ್ನು ಅಲ್ಲ ಗಳೆಯುವಂತಿಲ್ಲ ಎನ್ನುವುದು ಪರಸರವಾದಿಗಳ ಮಾತಾಗಿದೆ.
ಜಿಲ್ಲೆಯ ಕ್ವಾರಿ ಮತ್ತು ಕ್ರರ‍್ಸ್ ಗಣಿಗಾರಿಕೆಯ ಮಾಹಿತಿ
ಬಾಗೇಪಲ್ಲಿ ತಾಲ್ಲೂಕಿನಲ್ಲಿ ಒಟ್ಟು ೨೦ ಕ್ವಾರಿಗಳ ಪೈಕಿ ೧೫ ಕ್ರಿಯಾಶೀಲವಾಗಿದ್ದು, ೫ ನಿಷ್ಟ್ರಿಯ ವಾಗಿವೆ. ಅಂತೆಯೇ ಎರಡು ಕ್ರಷರ್‌ಗಳು ಕ್ರಿಯಾಶೀಲವಾಗಿವೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ೨೦೪ ಕ್ವಾರಿ ಮತ್ತು ಕ್ರಷರ್‌ಗಳು ಇದ್ದು, ಈ ಪೈಕಿ ೧೨೭ ಕ್ವಾರಿಗಳು ೫೭ ಕ್ರಷರ್‌ಗಳು ಕ್ರಿಯಾಶೀಲವಾಗಿದ್ದು, ೨೦ ನಿಷ್ಟ್ರಿಯವಾಗಿವೆ. ಚಿಂತಾಮಣಿ ತಾಲ್ಲೂಕಿನಲ್ಲಿ ೧೬ ಕ್ವಾರಿ ಮತ್ತು ಕ್ರಷರ್‌ಗಳು ಇದ್ದು, ೬ ಕ್ವಾರಿಗಳು ಮತ್ತು ೪ ಕ್ರಷರ್‌ಗಳು ಸಕ್ರಿಯವಾಗಿವೆ. ಗೌರಿಬಿದನೂರು ತಾಲ್ಲೂಕಿನಲ್ಲಿ ೦೫ ಕ್ವಾರಿ ಮತ್ತು ಕ್ರಷರ್‌ಗಳು ಇದ್ದು, ಈ ಪೈಕಿ ೨ ಕ್ವಾರಿಗಳು ಮತ್ತು ೨ ಕ್ರಷರ್‌ಗಳು ಸಕ್ರಿಯವಾಗಿವೆ. ಗುಡಿಬಂಡೆ ತಾಲ್ಲೂಕಿನಲ್ಲಿ ೪೪ ಕ್ವಾರಿ ಮತ್ತು ಕ್ರಷರ್‌ಗಳು ಇದ್ದು, ಈ ಪೈಕಿ ೨೨ ಕ್ವಾರಿಗಳು ಮತ್ತು ೧೬ ಕ್ರಷರ್ ಗಳು ಸಕ್ರಿಯವಾಗಿವೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ೦೭ ಕ್ವಾರಿಗಳು ಇದ್ದು, ಈ ಪೈಕಿ ೧ ಸಕ್ರಿಯ ವಾಗಿದ್ದರೆ ೬ ನಿಷ್ಕಿçಯವಾಗಿವೆ. ಹೀಗೆ ಜಿಲ್ಲೆಯಲ್ಲಿ ೬೦ ಅಲಂಕಾರಿಕ ಕಲ್ಲು ಗಣಿಗಾರಿಕೆ ಮತ್ತು ಕಟ್ಟಡ ಕಲ್ಲು ಗಣಿಗಾರಿಕೆ ೧೧೨, ಕಲ್ಲು ಕ್ವಾರಿ ಗಣಿಗಾರಿಕೆ ೧೭೩, ಕ್ರಷರ್‌ಗಳು ೮೧ ನಡೆಯುತ್ತಿವೆ ಎಂದು ಗಣಿ ಮತ್ತುಭೂ ವಿಜ್ಞಾನ ಇಲಾಖೆಯ ನಿದೇಶಕಿ ಪದ್ಮ ತಿಳಿಸಿದ್ದಾರೆ.