ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ವಚನಗಳು ಸಾಹಿತ್ಯ ಪ್ರಕಾರವೇ ಹೊರತು ವೀರಶೈವ ಗ್ರಂಥಗಳಲ್ಲ !

ಹನ್ನೊಂದನೇ ಶತಮಾನದ ಜೇಡರ ದಾಸಿಮಯ್ಯರಿಂದ ಹಿಡಿದು ಬಸವಣ್ಣ ಪ್ರಭುದೇವರಲ್ಲದೆ ಹದಿನೇಳನೇ ಶತಮಾನದವರೆಗಿನ ಎಲ್ಲಾ ವಚನಕಾರರೂ ಸಮಾಜದ ವಿವಿಧ ವರ್ಗಗಳಿಂದ ಬಂದವ ರಾಗಿದ್ದು, ಎಲ್ಲರೂ ಸಾಮಾನ್ಯವಾಗಿ ತಮ್ಮ ವಚನಗಳಲ್ಲಿ ಏಕಮೇವ ಪರಮಾತ್ಮನಾದ ಶಿವನ ಭಕ್ತಿ, ಇಷ್ಟಲಿಂಗದ ಪೂಜೆ, ಅಷ್ಟಾವರಣಗಳು ಮತ್ತು ಷಟ್‌ಸ್ಥಳ ಸಿದ್ಧಾಂತದ ಪ್ರತಿಪಾದನೆ ಮಾಡಿರುತ್ತಾರೆ.

ವಚನಗಳು ಸಾಹಿತ್ಯ ಪ್ರಕಾರವೇ ಹೊರತು ವೀರಶೈವ ಗ್ರಂಥಗಳಲ್ಲ !

Profile Ashok Nayak Apr 16, 2025 8:01 AM

ಬಸವ ಮಂಟಪ

ರವಿ ಹಂಜ್

(ಭಾಗ-2)

ವಚನ ಸಾಹಿತ್ಯವು ವೀರಶೈವ ಧರ್ಮದ ಒಂದು ಸಾಹಿತ್ಯ ಪ್ರಕಾರ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ವೀರಶೈವ ಸಮಸಮಾಜದ ಪ್ರತಿಪಾದಕನಾಗಿ ಸರಳ ತತ್ವೋಕ್ತಿಗಳನ್ನು ತನ್ನ ಕಾಯಕದ ಜತೆಜತೆಗೆ ಅನುಸಂಧಾನಗೊಳಿಸಿ ಅಭಿವ್ಯಕ್ತಿಸಬಲ್ಲ ಸಾಹಿತ್ಯಿಕ ಮುಖವಾಣಿ! ಈ ಪ್ರಕಾರವು ಹತ್ತನೇ ಶತಮಾನದ ಓಹಿಲ, ಉದ್ಭಟರಿಂದ ಹನ್ನೊಂದನೇ ಶತಮಾನದ ದಾಸಿಮಯ್ಯನಲ್ಲದೆ ಇತ್ತೀಚಿನ ಆಧುನಿಕ ವಚನಕಾರರವರೆಗೂ ಪ್ರಚಲಿತವಿರುವ ವಿಶೇಷ ಸಾಹಿತ್ಯ ಪ್ರಕಾರವೇ ಹೊರತು ವಚನಗಳ ಕಟ್ಟುಗಳೇ ವೀರಶೈವ ಧರ್ಮಗ್ರಂಥಗಳಲ್ಲ!

ಇನ್ನು, ಪುರಾಣಗಳಾದ ಪಾಶುಪತಾಗಮ, ಸುಪ್ರಭೇದಾ ಗಮ, ವೀರಶೈವಾಚಾರಕೌಸ್ತುಭ, ವೀರಶೈವ‌ ಧರ್ಮ ಸಿಂಧುಗಳು, ವೀರಶೈವತ್ವವು ಅನಾದಿಯಾಗಿದ್ದು ಸೃಷ್ಟಿಯ ಕಾಲದಿಂದಲೂ ಅಸ್ತಿತ್ವ ದಲ್ಲಿದ್ದು, ಪ್ರತಿ ಯುಗದಲ್ಲಿಯೂ ಐವರು ಆಚಾರ್ಯರು ವೀರಶೈವತ್ವದ ಬೋಧನೆ ಮತ್ತು ಪ್ರಚಾರ ಮಾಡಿರುತ್ತಾರೆ ಎನ್ನುತ್ತವೆ. ಇವರನ್ನೇ ಪಂಚಾಚಾರ್ಯರು ಎನ್ನುವುದು! ಕಲಿಯುಗದ ಪಂಚಾ ಚಾರ್ಯರೆಂದರೆ; ರೇವಣ, ಏಕೋರಾಮ, ಮರುಳ, ಪಂಡಿತ ಮತ್ತು ವಿಶ್ವೇಶ್ವರ. ಪಂಚಾ ಚಾರ್ಯರು ಸ್ಥಾಪಿಸಿದ ಐದು ಮಠಗಳು ಎಂದು ಎಲ್ಲರೂ ಬಲ್ಲರು. ವೀರಶೈವ ಲಿಂಗಾಯತರೆಲ್ಲರೂ ತಮ್ಮ ಗೋತ್ರಗಳನ್ನು ಈ ಐವರು ಪಂಚಾಚಾರ್ಯರೊಂದಿಗೆ ಗುರುತಿಸಿಕೊಳ್ಳುತ್ತಾರೆ. ಈ ಗುರುತಿಸುವಿಕೆ ಇಲ್ಲದಂಥ ಲಿಂಗಾಯತರಿಲ್ಲ!

ಹನ್ನೊಂದನೇ ಶತಮಾನದ ಜೇಡರ ದಾಸಿಮಯ್ಯರಿಂದ ಹಿಡಿದು ಬಸವಣ್ಣ ಪ್ರಭುದೇವರಲ್ಲದೆ ಹದಿನೇಳನೇ ಶತಮಾನದವರೆಗಿನ ಎಲ್ಲಾ ವಚನಕಾರರೂ ಸಮಾಜದ ವಿವಿಧ ವರ್ಗಗಳಿಂದ ಬಂದವರಾಗಿದ್ದು, ಎಲ್ಲರೂ ಸಾಮಾನ್ಯವಾಗಿ ತಮ್ಮ ವಚನಗಳಲ್ಲಿ ಏಕಮೇವ ಪರಮಾತ್ಮನಾದ ಶಿವನ ಭಕ್ತಿ, ಇಷ್ಟಲಿಂಗದ ಪೂಜೆ, ಅಷ್ಟಾವರಣಗಳು ಮತ್ತು ಷಟ್‌ಸ್ಥಳ ಸಿದ್ಧಾಂತದ ಪ್ರತಿಪಾದನೆ ಮಾಡಿರುತ್ತಾರೆ.

ಇದನ್ನೂ ಓದಿ: Ravi Hunj Column: ಜಾತಿಪೀಠಿಗಳು ನಾಟಕ ಆಡಿಸುವುದರಲ್ಲಿ ಮಗ್ನರಾಗಿದ್ದಾರೆ !

ವೀರಶೈವ ಸಿದ್ಧಾಂತವು ಏಕಮೇವ ಪರಮಾತ್ಮನಾದ ಪರಶಿವನ ಉಪಾಸನೆಯನ್ನು ಮಾತ್ರ ಪ್ರತಿಪಾದಿಸುತ್ತದೆ. ಅದಕ್ಕೆ ಪೂರಕವಾಗಿ ಬಸವಣ್ಣನವರು, “ಇಬ್ಬರು ಮೂವರು ದೇವರೆಂದು ಉಬ್ಬಿ ಮಾತಾಡಬೇಡ, ದೇವನೊಬ್ಬನೇ ಕಾಣಿರೋ ಇಬ್ಬರೆಂಬುದು ಹುಸಿನೋಡಾ, ಕೂಡಲ ಸಂಗಮ ದೇವನೊಬ್ಬನೇ ಅಲ್ಲದೇ ಇಬ್ಬರಿಲ್ಲವೆಂದಿತ್ತುದಾ ವೇದವು" ಎಂದು ವೇದವನ್ನು ಎತ್ತಿ ಹಿಡಿದಿದ್ದಾರೆ.

ಶರಣರು ಬಹುದೇವತಾ ವಾದವನ್ನು ಒಪ್ಪುವುದಿಲ್ಲವಾದರೂ ಪ್ರತಿ ಶರಣರು ತಮ್ಮ ನದಿಚ್ಛೆಯಂತೆ ಶಿವನನ್ನು ಕಲ್ಪಿಸಿಕೊಂಡಿದ್ದಾರೆ. ಶಿವನ ಅಸಂಖ್ಯಾತ ಪ್ರಕಾರದ ನೃತ್ಯಭಂಗಿಗಳಂತೆಯೇ ಅವನನ್ನು ವಿವಿಧ ರೂಪಗಳಲ್ಲಿ, ಹೆಸರುಗಳಲ್ಲಿ ಬಹುರೂಪಿಯಾಗಿಸಿ ಭಕ್ತರು ಆರಾಧಿಸುತ್ತಾರೆಯೇ ಹೊರತು ಬಹುದೇವತೆಗಳನ್ನಲ್ಲ!

ಆದರೆ ಇವೆಲ್ಲದರ ಮೂಲ, ಬ್ರಹ್ಮಾಂಡದ ಮೂಲಭೂತ ಕಂಪನ ಶೀಲಶಕ್ತಿಯ ಮೂರ್ತಸ್ವರೂಪ ವಾಗಿದೆ. ಸಾಮಾನ್ಯ ಶರಣರು ಪುರಾಣದಲ್ಲಿ ವರ್ಣಿಸಿರುವ ಶಿವನನ್ನು ಕಲ್ಪಿಸಿಕೊಂಡಿದ್ದರೆ, ಅಸಾಮಾನ್ಯರು ಅಮೂರ್ತರೂಪಿಯಾಗಿ ಕಂಡುಕೊಂಡಿದ್ದಾರೆ. ಇದು ಜ್ಞಾತದ ಮೂಲಕ ಅeತದವರೆಗೆ ಪಯಣ ಮಾಡುವ ಸಾಕ್ಷಾತ್ಕಾರ ಸ್ವರೂಪವೇ ಆಗಿದೆ. ಪರಮಾತ್ಮನ ಕಲ್ಪನೆಯಲ್ಲಿ ವೀರಶೈವವು ಇತರೆ ಶೈವಪಂಥಗಳಂತೆಯೇ ಇದ್ದು ತಮಿಳು ಶೈವಸಂತರ ಸೂರ್ತಿ ನಮ್ಮ ಶರಣರ ವಚನಗಳಲ್ಲಿ ಅಲ್ಲಲ್ಲಿ ಕಂಡುಬರುತ್ತದೆ. ಇದನ್ನು ಪುಷ್ಟೀಕರಿಸುವಂತೆ ಮುರುಘಾಮಠದ ಶಾಖಾಮಠಗಳು ಇಂದಿಗೂ ತಮಿಳುನಾಡಿನಲ್ಲಿವೆ!

ಹಾಗಿದ್ದಾಗ ಭಂಜಕರ ಲಿಂಗಾಯತ ಯಾವುದು? ಇಷ್ಟಲಿಂಗ ಕಲ್ಪನೆ ವೀರಶೈವಮತದ ವೈಶಿಷ್ಟ್ಯ ಗಳಂದು; ನಮ್ಮೊಳಗೆ ಚೈತನ್ಯರೂಪದಲ್ಲಿ ವಾಸಿಸಿರುವ ಶಿವನನ್ನೇ ಹೊರತೆಗೆದು, ಗುರುವು ಲಿಂಗರೂಪದಲ್ಲಿ ನಮ್ಮ ಕೈಯಲ್ಲಿ ಕೊಡುವುದೇ ಇಷ್ಟಲಿಂಗ! ಪ್ರಾಚ್ಯಶಾಸ್ತ್ರಜ್ಞರಲ್ಲಿ ಕೆಲವರು ಲಿಂಗ ವನ್ನು ಪುರುಷಜನನಾಂಗದ ರೂಪವೆಂದೂ, ಇನ್ನು ಕೆಲವರು ಅದು ಬೌದ್ಧಸ್ತೂಪದ ಕಿರುಪ್ರತಿಮೆ ಯೆಂದೂ ಕಲ್ಪಿಸುತ್ತಾರೆ. ಇದು ಅವರವರ ಭಾವಕ್ಕೆ ಎನ್ನಬಹುದು.

ಆದರೆ ಧರಿಸುವಂಥ ಇಷ್ಟಲಿಂಗಗಳನ್ನು ಹೋಲುವ ಸಣ್ಣ ಸಣ್ಣ ಲಿಂಗಾಕೃತಿಗಳು ಹರಪ್ಪಾ ಮೊಹೆಂಜೋದಾರೋ ಉತ್ಖನನದಲ್ಲಿ ಸಿಕ್ಕಿದ್ದು ಇವು ಐತಿಹಾಸಿಕ ಪರಂಪರೆಯನ್ನು ಎತ್ತಿ ಹಿಡಿಯುತ್ತವೆ. ಇನ್ನು ವೀರಶೈವದ ಅಷ್ಟಾವರಣಗಳು ಎಂದರೆ ಎಂಟು ಲಾಂಛನಗಳು, ಚಿಹ್ನೆಗಳು, ಅಥವಾ ಆಚರಣೆಗಳು ಎಂದರ್ಥ.

ವೇದಗಳ ಕೊನೆಗೆ ಬರುವ ಬ್ರಾಹ್ಮಣ್ಯಗಳಲ್ಲಿರುವ ಕರ್ಮಕಾಂಡ, ಧಾರ್ಮಿಕವಿಧಿ -ಆಚರಣೆಗಳನ್ನು ವೀರಶೈವತ್ವವು ತಿರಸ್ಕರಿಸಿ ಬದಲಿಗೆ ಅಷ್ಟಾವರಣಗಳನ್ನು ನೀಡುತ್ತದೆ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷ, ಮಂತ್ರ (ಪಂಚಾಕ್ಷರಿ ಹಾಗೂ ಷಡಕ್ಷರಿ ಮಂತ್ರ) ಇವೇ ವೀರಶೈವದ ಅಷ್ಟಾವರಣಗಳು. ಬಸವಣ್ಣನವರು, “ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ, ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎನಗಿದೆ ಮಂತ್ರ, ಇದೇ ಜಪ ಕೂಡಲಸಂಗಮದೇವಾ ನೀನೇ ಬ, ಎಲೆ ಲಿಂಗವೆ" ಎಂದರೆ, ಅಲ್ಲಮಪ್ರಭುದೇವರು, “ಓಂ ನಮಃ ಶಿವಾಯಯೆಂಬುದ ನರಿಯದೆ ಜಗವೆಲ್ಲವು ನಾಯಾ(ಯಿತ್ತು) ತಮ್ಮ ತಾವರಿಯದವರಿಗೆ, ಇನ್ನು ಹೇಳಿ ಕೇಳಿದಂತೆ ಆಚರಿಸದಿರ್ದಡೆ ಆ ನಾಯ ಸಾವು ತಪ್ಪದು. ಇನ್ನೆತ್ತಣ ಮುಕ್ತಿ? ಅವರಿಗೆ ಬೋಧಿಸಿದ್ದಾನಗದು- ಕಾಣಾ ಗುಹೇಶ್ವರಾ" ಎಂದು ಹೇಳಿ ಕೇಳಿದಂತೆ ಆಚರಿಸದವನು ನಾಯಿ ಎಂದು ಮೂದಲಿಸಿದ್ದಾರೆ!

ಹಾಗೆಯೇ ಮುಂದುವರಿದು, “ಓಂ ನಮಃ ಶಿವಾಯ ಎಂಬ ದೇವನಿರಲು ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರೆ. ಶರೀರ, ಶರೀರ ರೂಹಿಸಿದ ರೂಹಿಂಗೆ ಮಾಯದ ಬಲೆಯಲ್ಲಿ ಸಿಲುಕಿ ಅಂಗಸಂಗಿಗಳೆಲ್ಲರು ಮಹಾಘನವನರಿಯದೆ ಹೋದಿರೆ. ಹುಸಿಯನೆ ಕೊಯ್ದು ಹುಸಿಯನೆ ಪೂಜಿಸೆ ನೇಮದೊಳಗಿದು ಸಲ್ಲದು, ಗುಹೇಶ್ವರಾ, ನಿಮ್ಮ ಶರಣರ ಸಂಬಂಧ ತೋರದು ತೋರದು ಬಹುಮುಖಿಗಳಿಗೆ!" ಎಂದಿದ್ದಾರೆ.

ಇವರಂತೆಯೇ ಚೆನ್ನಬಸವಣ್ಣ, ಅಕ್ಕ, ಮತ್ತಿತರೆ ಶರಣರು ‘ಓಂ ನಮಃ ಶಿವಾಯ’ ಎಂಬ ಮಂತ್ರ ವನ್ನು ಪಠಿಸಿದ್ದಾರೆಯೇ ಹೊರತು ಇನ್ಯಾವ ಮಂತ್ರವನ್ನಲ್ಲ. ಆದರೆ ಲಿಂಗಾಹತಿಗಳು ಓಂ ಎನ್ನುವುದೇ ಲಿಂಗಾಯತಕ್ಕೆ ಹೊರಗು ಎನ್ನುತ್ತಾರೆ! ಅಂದರೆ ಇವರು ಹೇಳುವ ಲಿಂಗಾಯತ ಯಾವುದು?! ಅಲ್ಲದೆ ವೀರಶೈವರಲ್ಲಿ ಕಳಸ ಸ್ಥಾಪನೆ, ಲಿಂಗದೀಕ್ಷೆ, ಮದುವೆ ಮತ್ತು ಅಂತ್ಯ ಸಂಸ್ಕಾರದ ವಿಶಿಷ್ಟ ವಿಽವಿಧಾನಗಳಿವೆ.

ಆದರೆ ಇದೆಲ್ಲವೂ ಮೌಢ್ಯ ಎಂದು ಲಿಂಗಾಹತಿಗಳು ಹೇಳುತ್ತಾರೆ! ಶೈವ ಸಿದ್ಧಾಂತ, ಪಂಚರಾತ್ರ ಮುಂತಾದ ಭಾರತೀಯ ದರ್ಶನಗಳಂತೆ ವೀರಶೈವತ್ವವು ಸಹ ಸೃಷ್ಟಿಯಲ್ಲಿ ಶಕ್ತಿಯ ಪಾತ್ರವನ್ನು ಗುರುತಿಸುತ್ತದೆ. ಶಿವನು ತನ್ನ ಲೀಲೆಗಾಗಿ ಸೃಷ್ಟಿಯನ್ನು ರಚಿಸಿದನು, ಶಕ್ತಿಯು ಶಿವನಲ್ಲಿ ಉದ್ಭವಿಸಿ ನಂತರ ಸ್ವಪ್ರೇರಣೆಯಿಂದ ಕಲಾಶಕ್ತಿ ಮತ್ತು ಭಕ್ತಿಶಕ್ತಿ ಎಂಬ ಎರಡವತಾರಗಳನ್ನು ಧರಿಸುತ್ತಾಳೆ. ಕಲಾಶಕ್ತಿಯು ಮಾಯೆಯ ಸ್ವರೂಪಳು ಅವಳೇ ಅವಿದ್ಯೆ; ಅವಿದ್ಯೆಯೇ ಜೀವ ಮತ್ತು ಶಿವನ ನಡುವಿನ ಭೇದಕ್ಕೆ ಕಾರಣ. ಈಗ ವೀರಶೈವ ಲಿಂಗಾಯತ ಬೇರೆ ಎಂದು ಬೇಯುತ್ತಿರುವವರಿಗೆ ಈ ಅವಿದ್ಯೆಯೇ ಕಾರಣ!

ಇರಲಿ, ಭಕ್ತಿಶಕ್ತಿಯು ಸಚ್ಚಿದಾನಂದ ಸ್ವರೂಪಳೂ, ಮೋಕ್ಷಪ್ರದಾಯಿನಿಯೂ, ಈ ಭವದ ಬಂಧನಗಳನ್ನು ಬಿಡಿಸುವವಳೂ ಅವಳೇ ಆಗಿರುವಳು. ಹೀಗೆ ವೀರಶೈವರು ಎರಡು ವಿರುದ್ಧ ದಿಕ್ಕಿಗೆಳೆಯುವ ಶಕ್ತಿಗಳನ್ನು ನಂಬುತ್ತಾರೆ. ಭಕ್ತಿಯಿಂದ ವಾಸನಾ ಮುಕ್ತಿ, ಇದರಿಂದಾಗಿ ನಿವೃತ್ತಿ, ಅಲ್ಲಿಂದ ಮುಂದೆ ಮೋಕ್ಷ, ಹೀಗೆ ಅವಿದ್ಯೆಯ ನಿವಾರಣೆಯಾಗಿ ಜೀವವು ಶಿವನೊಡನೆ ಐಕ್ಯ ವಾಗುತ್ತದೆ.

ಶ್ರೀ ಪ್ರಭುದೇವರ ನಂತರ ವೀರಶೈವರ ನೇತೃತ್ವ ವಹಿಸಿದ ಚೆನ್ನಬಸವಣ್ಣನವರು ವೀರಶೈವದ ವಚನ ಸಾಹಿತ್ಯಕ್ಕೆ ಷಟ್‌ಸ್ಥಳದ ಚೌಕಟ್ಟಿನ ಕೃತಿಯಾದ ಕರಣಹಸುಗೆಯಲ್ಲಿ, ಸೃಷ್ಟಿ-ಸ್ಥಿತಿ-ಲಯದ ಬಗ್ಗೆ ವಿಸ್ತಾರವಾಗಿ ವಿವರಿಸಿದ್ದಾರೆ. ಇದು ಋಗ್ವೇದ, ಛಾಂದೋಗ್ಯೋಪನಿಷತ್, ತೈತ್ತಿರಿಯೋ ಪನಿಷತ್, ಕಠೋಪನಿಷತ್ತು ಗಳ ಜತೆಗೆ ಸಾಮ್ಯತೆಯನ್ನು ಹೊಂದಿದೆ. ಜೀವಿಗಳ ಭೌತಿಕ ದೇಹವಾದ ಪಿಂಡಾಂಡವು, ಬ್ರಹ್ಮಾಂಡದ ಮಾದರಿಯ, 75 ಗುಣ ಹಾಗೂ 25 ತತ್ವಗಳಿಂದ ಮಾಡಲ್ಪಿಟ್ಟಿದೆ.

ಚೆನ್ನಬಸವಣ್ಣನವರು ಸೃಷ್ಟಿ, ಸ್ಥಿತಿ, ಲಯದ ಈ ವ್ಯವಸ್ಥೆಯನ್ನು ಮಾಲಿನಿವಿಜಯ ಭೈರವಿ ತಂತ್ರದಲ್ಲಿ ಆ ಪರಶಿವನೇ ಹೇಳಿದ್ದಾನೆಂದು ಅವರು ಉಲ್ಲೇಖಿಸುತ್ತಾರೆ. ಕರುಣಹಸುಗೆಯಲ್ಲಿ ಚೆನ್ನಬಸವಣ್ಣನವರು ದೇಹರಚನೆ, ಶರೀರದಲ್ಲಿರುವ ಎಲುಬು ಕೀಲು, ಯೋಗಕ್ರಿಯೆ, ಪ್ರಾಣಾ ಯಾಮಗಳ ಬಗ್ಗೆ ವಿವರಿಸಿದ್ದಾರೆ. ಪ್ರಭುದೇವರು ತಮ್ಮ ಸೃಷ್ಟಿಯ ವಚನಗಳಲ್ಲಿ 25 ಅಂಗದ ತತ್ವಗಳು ಮತ್ತು 11 ಲಿಂಗದ ತತ್ವಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಇದು ಶೈವಸಿದ್ಧಾಂತದ 36 ತತ್ವಗಳ ಸಂಖ್ಯೆಯೊಂದಿಗೆ ಹೋಲುತ್ತದಾದರೂ, ಹೆಸರು ಮತ್ತು ಅರ್ಥ ಭಿನ್ನವಾಗಿವೆಯಷ್ಟೇ!

ಷಟ್‌ಸ್ಥಳ ಸಿದ್ಧಾಂತವು ವೀರಶೈವಾಧ್ಯಾತ್ಮಶಾಸದ ಮೂಲಭೂತ ಅಂಶ ಹಾಗೂ ಅದರ ವೈಶಿಷ್ಟ್ಯ ವೂ ಹೌದು. ಜೀವವು (ಅಂಗ) ಶಿವನೆಡೆಗೆ (ಲಿಂಗ) ಮಾಡುವ ಆರುಹಂತಗಳ ಕ್ರಮಬದ್ಧ ಪ್ರಯಾಣವೇ ಈ ಷಟ್‌ಸ್ಥಳ ಸಿದ್ಧಾಂತ. ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬುವವೇ ಷಟ್‌ಸ್ಥಳಗಳು. ಆರು ಸ್ಥಳಗಳಲ್ಲಿ ಮೊದಲೆರಡು ತ್ಯಾಗಾಂಗವೆನಿಸಿ ಭಕ್ತನು ತನ್ನೆಲ್ಲವನ್ನೂ ಲಿಂಗಕ್ಕೆ ತ್ಯಾಗ ಮಾಡುತ್ತಾನೆ.

ಮುಂದಿನ ಎರಡು ಸ್ಥಳಗಳು ಭೋಗಾಂಗವೆನಿಸಿ ಶರಣನು ಲಿಂಗಭೋಗೋಪಯೋಗಿ ಯಾಗುತ್ತಾನೆ. ಮುಂದಿನ ಎರಡು ಸ್ಥಳಗಳು ಜ್ಞಾನಾಂಗಗಳಾಗಿವೆ. ಮೊದಲನೆಯ ಮೂರು ಸ್ಥಳಗಳು ಕ್ರಿಯಾ ಪ್ರಧಾನವಾಗಿದ್ದರೆ ನಂತರದ ಮೂರು ಸ್ಥಳಗಳು ನಿವೃತ್ತಿ ಹಾಗೂ ಜ್ಞಾನ ಪ್ರಧಾನವಾಗಿವೆ. ಪ್ರವೃತ್ತಿ ಯಲ್ಲಿ ಮರೆತು ಬದ್ಧನಾದ ಜೀವಾತ್ಮನಲ್ಲಿ ಪರಮಾತ್ಮನ ಬಗ್ಗೆ ಅರಿವು ಮೂಡಿ ಪರಶಿವನ ಕಾಣುವ ಬಯಕೆ ಮೂಡಿದಾಗ ಈ ಯಾತ್ರೆಯ ಪ್ರಾರಂಭ (ಭಕ್ತಸ್ಥಳ), ಯಾತ್ರೆಯ ಗಮ್ಯವೇ ಪರಶಿವನ ಸಾಕ್ಷಾತ್ಕಾರ (ಐಕ್ಯಸ್ಥಳ). ಶಿವನ ಸಾಕ್ಷಾತ್ಕಾರವನ್ನು, ಬಯಲು, ನಿರ್ಬಯಲು, ಐಕ್ಯ, ಮೋಕ್ಷ ಅಥವಾ ವರ್ಣನೆಗೆ ನಿಲುಕದ ಶೂನ್ಯ ಎಂದು ಶರಣರು ವರ್ಣಿಸಿದ್ದಾರೆ.

ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯವೆಂಬ ಅರಿಷಡ್ವರ್ಗಗಳನ್ನು ತ್ಯಜಿಸಿ ಸದಾಚಾರ, ಸಮಚಿತ್ತತೆ ಮತ್ತು ಪಂಚಾಚಾರಗಳ ಪಾಲನೆಯೇ ವೀರಶೈವರ ವ್ರತ ನಿಯಮ ಗಳಾಗಿರುತ್ತವೆ. ಶಿವನೇ ಪರಮಾತ್ಮ-ಪರಬ್ರಹ್ಮ, ಶಿವನನ್ನು ಇಷ್ಟಲಿಂಗದ ರೂಪದಲ್ಲಿ ತಮ್ಮ ದೇಹದ ಮೇಲೆ ಧರಿಸಿ ಉಪಾಸನೆ ಮಾಡುವುದೇ ವೀರಶೈವ ತತ್ವದ ಮೂಲ ಸಿದ್ಧಾಂತ. ಮಾನವನ ಆಧ್ಯಾತ್ಮಿಕ ಜೀವನದ ಲಕ್ಷ್ಯವೇ ಶಿವನ ಸಾಕ್ಷಾತ್ಕಾರ, ಲಕ್ಷ್ಯದ ಸಾಧನೆಗೆ ಸಹಾಯಮಾಡುವವು ಅಷ್ಟಾವರಣಗಳು ಹಾಗೂ ಪಂಚಾಚಾರ. ಆರು ಸ್ಥಳಗಳ ಕ್ರಮಬದ್ಧ ಯಾತ್ರೆಯಾದ ಷಟ್‌ಸ್ಥಳ ಸಿದ್ಧಾಂತವೇ ವೀರ ಶೈವತ್ವದ ಆಧ್ಯಾತ್ಮದರ್ಶನಶಾಸ್ತ್ರ!

ಮನುಷ್ಯನ ಆಧ್ಯಾತ್ಮಿಕ ಜೀವನವನ್ನು ಲೌಕಿಕ ಜೀವನದ ಜತೆಗೆ ಸಮನ್ವಯಗೊಳಿಸಲು, ವೀರಶೈವ ದಲ್ಲಿ ದಿನನಿತ್ಯದ ಮತ್ತು ವ್ಯಾವಹಾರಿಕ ಚಟುವಟಿಕೆಗಳು ಅಧ್ಯಾತ್ಮ ಸಾಧನೆಯೊಂದಿಗೆ ಹೆಣೆಯ ಲ್ಪಟ್ಟಿವೆ. ವೀರಶೈವ ಆಧ್ಯಾತ್ಮಿಕ ಜೀವನದ ಅಂತಿಮ ಉದ್ದೇಶವೇ ಶಿವನೊಡನೆ ಐಕ್ಯವಾಗುವುದು. ರೇಕಣ್ಣನ ವಚನದಲ್ಲಿ ಹೇಳಿದಂತೆ, “ಕಳಗಣ ಕಿಚ್ಚು ಬೂದಿಯಿಲ್ಲದಿರುವಂತಿರಿಸಯ್ಯಾ ಎನ್ನ ಲಿಂಗದೊಳಗೆ, ಗಾಳಿ ಗಂಧವನ್ನಪ್ಪಿದಂತಿರಿಸಯ್ಯಾ ಎನ್ನಲಿಂಗದೊಳಗೆ, ರೇಕಣ್ಣ ಪ್ರಿಯನಾಗಿನಾಥ ನಿಮ್ಮ ನಿಲುವಿನೊಳಗಣ ನಿಲುವು ಜೋತಿಯ ಬೆಳಗಿನೊಳಗಡಗಿದ ತೈಲದಂತಿರಿಸಯ್ಯ ಎನ್ನ ಲಿಂಗದೊಳಗೆ!" ಆತ್ಮವು ಒಂದು ಬೆಳಕಿನ ರೂಪ!

ಆದ್ದರಿಂದ ಆತ್ಮ ಹಾಗೂ ಪರಮಾತ್ಮರಲ್ಲಿ ಭೇದವಿಲ್ಲ. ಬಸವಣ್ಣನವರ ವಚನದಲ್ಲಿ ಹೇಳುವು ದಾದರೆ, “ಅಯ್ಯಾ ಎನ್ನ ಹೃದಯದಲ್ಲಿ ನ್ಯಸ್ತವಾಗಿರುವ ಪರಮಚ್ಚಿದ್ಬೆಳಗೇ ಹಸ್ತಮಲಕ ಸಂಯೋಗ ದಿಂದ ಒಂದುಗೂಡಿ ಮಹಾಬೆಳಗ ಮಾಡಿದಿರ, ಅಯ್ಯಾ ಎನ್ನ ಆರಾಧ್ಯ ಕೂಡಲ ಸಂಗಮದೇವಾ ಎನ್ನೊಳಗೆ ನಿಮ್ಮಿರವ ಈ ಪರಿಯಲ್ಲಿ ಕಾಣುತ್ತಿರ್ದರ". ಶ್ರೀಪತಿ ಪಂಡಿತಾರಾಧ್ಯರು ತಮ್ಮ ಶ್ರೀಕರಭಾಷ್ಯದಲ್ಲಿ ವೀರಶೈವವನ್ನು ವಿಶಿಷ್ಟಾದ್ವೈತ ಎಂದು ವ್ಯಾಖ್ಯಾನಿಸಿದರೆ ಶಂಕರಾಚಾರ್ಯರು ‘ಚಿದಾನಂದರೂಪಶಿವೋಹಂ’ ಎನ್ನುತ್ತಾರೆ.

ಸಂಸಾರವು ಅಂತಿಮವಾಗಿ ಸತ್ಯವೂ ಅಲ್ಲ, ಅಂತಿಮವಾಗಿ ಅಸತ್ಯವೂ ಅಲ್ಲ, ಪ್ರಾರಂಭದಲ್ಲಿ ಸಂಸಾರವು ನಿಜವೆಂದು ಪ್ರತೀತವಾಗಿ ಈ ಯಾತ್ರೆಯ ಕೊನೆಯ ಹಂತದಲ್ಲಿ ಮಿಥ್ಯೆಯೆಂದು ಅರಿವಾಗುತ್ತದೆ. ಲಿಂಗವು ಈ ಬ್ರಹ್ಮಾಂಡವನ್ನು ವ್ಯಾಪಿಸಿರುವ ಒಂದು ಜ್ವಲಂತ ಬೆಳಕಿನ ಪುಂಜ ವಾಗಿದ್ದು ಸಕಲ ಚರಾಚರಗಳ ಮೂಲತತ್ವವಾಗಿದೆ.

ಅನಾದಿಕಾಲದಿಂದಲೂ ಧರ್ಮಕ್ಕೆ ಧಕ್ಕೆಯುಂಟಾದಾಗ ಅದನ್ನು ಪುನರ್‌ಸ್ಥಾಪಿಸಲು ಶರಣರು ಉದ್ಭವವಾಗುತ್ತಾರೆ. ಇಲ್ಲಿ ಉದ್ಭವವಾಗುತ್ತಾರೆ ಎಂದರೆ ಹುಟ್ಟಿಕೊಳ್ಳುತ್ತಾರೆ ಎಂದರ್ಥ! ಹೀಗೆಯೇ ರೇಣುಕರಾದಿಯಂತೆಯೇ ಬಸವಣ್ಣನನ್ನೂ ನಂದಿಯ ಅವತಾರವಾಗಿ ಧರೆಗಿಳಿದ ಮಹಾಪುರುಷ ಎಂದೇ ಬಸವಪುರಾಣ ಸಹ ಹೇಳುತ್ತದೆ. ಪುರಾಣಗಳಲ್ಲಿರುವ ತಾರ್ಕಿಕ ಅಂಶಗಳನ್ನು ನಾವು ಪರಿಗಣಿಸಬೇಕೇ ಹೊರತು ಅವರದು ಅತಾರ್ಕಿಕ ನಮ್ಮದು ತಾರ್ಕಿಕ ಎಂಬ ದೂಷಣೆಯಲ್ಲಿ ತೊಡಗಬಾರದು.

ಆದರೆ ಇದೆಲ್ಲವನ್ನೂ ಅಲ್ಲಗಳೆದು ಕೆಲವು ಮತಿಹೀನರು ಮಾಕ್ ವಾದದ ಸಮ್ಮೋಹನದಲ್ಲಿ ಸಿಲುಕಿ ಸನಾತನವನ್ನು ಭೋಳೆಯೆಂದು ಇಬ್ಬೇಗುದಿಯ ಬೇಗೆಗೆ ತಕ್ಕಂತೆ ವೀರಶೈವ ಧರ್ಮವನ್ನು ಇಬ್ಬಗೆಯುತ್ತಿದ್ದಾರೆ. ಇಂಥ ಇಬ್ಬಗೆಯ ಮೂರ್ಖರನ್ನು ವೀರಶೈವ ಲಿಂಗವಂತ ಸಮಾಜವು ಎಂದೂ ಒಪ್ಪಬಾರದು. ಮೇಲಾಗಿ ಸತ್ಯವು ತಾನೇ ತಾನಾಗಿ ಪ್ರಜ್ವಲಿಸಿ ಇದನ್ನೆ ಮಂಜಿನಂತೆ ಕರಗಿಸುವುದು. ಅಂಥ ಸತ್ಯವೇ ವಿಶ್ವವಾಣಿಯಾಗಿ ಪ್ರಜ್ವಲಿಸುತ್ತಿರುವುದು.

ಕಲಾಮುಖವು ಹೇಗೆ ಕಾಳಾಮುಖ-ವೀರಶೈವದ ಶಿಲ್ಪ ವಿನ್ಯಾಸ ಪ್ರಕಾರವೋ ಅದೇ ರೀತಿ ವಚನ ಸಾಹಿತ್ಯವು ವೀರಶೈವ ಧರ್ಮದ ಒಂದು ಸಾಹಿತ್ಯ ಪ್ರಕಾರ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ವೀರಶೈವ ಸಮಸಮಾಜದ ಪ್ರತಿಪಾದಕನಾಗಿ ಸರಳ ತತ್ವೋಕ್ತಿಗಳನ್ನು ತನ್ನ ಕಾಯಕದ ಜತೆಜತೆಗೆ ಅನುಸಂಧಾನಗೊಳಿಸಿ ಅಭಿವ್ಯಕ್ತಿಸಬಲ್ಲ ಸಾಹಿತ್ಯಿಕ ಮುಖವಾಣಿ! ಈ ಪ್ರಕಾರವು ಹತ್ತನೇ ಶತಮಾನದ ಓಹಿಲ, ಉದ್ಭಟರಿಂದ ಹನ್ನೊಂದನೇ ಶತಮಾನದ ದಾಸಿಮಯ್ಯನಲ್ಲದೆ ಇತ್ತೀಚಿನ ಆಧುನಿಕ ವಚನಕಾರರವರೆಗೂ ಪ್ರಚಲಿತವಿರುವ ವಿಶೇಷ ಸಾಹಿತ್ಯ ಪ್ರಕಾರವೇ ಹೊರತು ವಚನಗಳ ಕಟ್ಟುಗಳೇ ವೀರಶೈವ ಧರ್ಮಗ್ರಂಥಗಳಲ್ಲ!

ಹಾಗಾಗಿಯೇ ಚೆನ್ನಬಸವಣ್ಣ, ಅಲ್ಲಮಪ್ರಭು, ಮತ್ತು ಅಕ್ಕ ಮಹಾದೇವಿಯವರು ಶಕ್ತಿ ವಿಶಿಷ್ಟಾ ದ್ವೈತ, ಸಿದ್ಧಾಂತ ಶಿಖಾಮಣಿಗಳಿಗೆ ಅನುಗುಣವಾಗಿ ಕರಣಹಸುಗೆ, ಮಂತ್ರಗೋಪ್ಯ, ಯೋಗಾಂಗ ತ್ರಿವಿಧಿ, ಮಿಶ್ರಾರ್ಪಣಗಳನ್ನು ರಚಿಸಿ ಅವುಗಳನ್ನು ನಮ್ಮ ಧರ್ಮಗ್ರಂಥಗಳು ಎಂದಿದ್ದಾರೆ. ಇವುಗಳನ್ನು ಅರ್ಥೈಸಿಕೊಂಡು ಸಮಾಜಕ್ಕೆ ಮಾರ್ಗದರ್ಶನ ನೀಡಲಾಗದ ಕೆಲವು ಸೋಮಾರಿಗಳು ಥಳುಕಿನ ಮಾತು ಕಲಿತು ಒಂದಷ್ಟು ಪಂಚಶೀಲದ ವಚನಗಳನ್ನು ಉದ್ಗರಿಸುತ್ತ ಇಷ್ಟೇ ನಮ್ಮ ಧರ್ಮ ಎಂದು ತಮ್ಮ ಸಂಕುಚಿತತೆಯನ್ನು ಕೇಳುವ ಮುಗ್ಧರಿಗೆ ವಿಸ್ತರಿಸಿ ಮೀಸಲಾತಿಯ ತುಪ್ಪ ಸವರಿ ಮರುಳು ಮಾಡುತ್ತಿದ್ದಾರೆ. ಇಂಥ ಮರುಳಿನ ಉರುಳಿಗೆ ಸಮಾಜ ಬಲಿಯಾಗಬಾರದು.

ಇದು ಪ್ರತಿಯೊಬ್ಬ ವೀರಶೈವಿಗ ಲಿಂಗವಂತರು ಕಂಡುಕೊಳ್ಳಬೇಕಾದ ಸತ್ಯ! ಬಸವ ಮಾರ್ಗ, ಬಸವ ಪೀಠ, ಬಸವ ಮಂಟಪ, ಬಸವ ದಟ್ ಬಸವ ದಿಸ್ ಎನ್ನುವ ಕೋಟಿಲೂಟಿಯ ಬುಲ್ಶಿಟ್ಟಿಗ ಭಂಜಕರ ತಾನಿತಂದಾನವನ್ನಲ್ಲ...

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)