R T Vittalmurthy Column: ಹನುಮಂತ ಹಗ್ಗ ತಿನ್ನುವಾಗ ಪೂಜಾರಿಗೆಲ್ಲಿ ಶಾವಿಗೆ ?
ರಾಜ್ಯ ಬಿಜೆಪಿಯ ಗೊಂದಲ ಪರಿಹರಿಸಬೇಕಾದ ಮೋದಿ- ಅಮಿತ್ ಶಾ ಜೋಡಿಯೇ ಗೊಂದಲದಲ್ಲಿದೆ. ಅರ್ಥಾತ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರು ಬರಬೇಕು? ಎಂಬ ವಿಷಯದಲ್ಲಿ ಮೋದಿ-ಅಮಿತ್ ಶಾ ಒಂದು ಹೇಳಿದರೆ ಆರೆಸ್ಸೆಸ್ ವರಿಷ್ಠರು ಮತ್ತೊಂದು ಹೇಳುತ್ತಾ ಆ ಸಂಬಂಧದ ಎಪಿ ಸೋಡೇ ಕಲಸು ಮೇಲೋಗರವಾಗಿ ಹೋಗಿದೆ. ಈಗ ಕರ್ನಾಟಕದ ಬಿಜೆಪಿ ಭಿನ್ನರಿಗೆ ಸಿಕ್ಕ ಮಾಹಿತಿಯ ಪ್ರಕಾರ, ಮೋದಿ-ಅಮಿತ್ ಶಾ ಜೋಡಿಗೆ ತಮ್ಮ ಆಪ್ತರಾದ ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಲಿ ಎಂಬ ಮನಸ್ಸಿದೆ


ಮೂರ್ತಿಪೂಜೆ
ರಾಜ್ಯ ಬಿಜೆಪಿಯಲ್ಲಿರುವ ವಿಜಯೇಂದ್ರ ವಿರೋಧಿ ಪಡೆ ಮೌನಕ್ಕೆ ಜಾರಿದೆ. ಪಕ್ಷ ವಿರೋಧಿ ಚಟುವಟಿಕೆಯ ಹೆಸರಿನಲ್ಲಿ ಯತ್ನಾಳ್ ಅವರನ್ನು ವರಿಷ್ಠರು ಉಚ್ಚಾಟಿಸಿದ ನಂತರ ಅದು ಕುದಿಯುತ್ತಿದೆಯಾದರೂ ಮುಂದೇನು ಮಾಡಬೇಕು ಅಂತ ಅದಕ್ಕೆ ತೋಚುತ್ತಿಲ್ಲ. ಹಾಗಂತ ವಿಜಯೇಂದ್ರ ಅವರ ವಿರುದ್ಧ ಹೋರಾಡುವ ವಿಷಯದಲ್ಲಿ ಅದಕ್ಕೆ ಪ್ಲಾನುಗಳು ಇಲ್ಲವೆಂತಲ್ಲ. ವಸ್ತುಸ್ಥಿತಿ ಎಂದರೆ ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಶಿವರಾಜ್ ಸಿಂಗ್ ಚೌಹಾಣ್ ಕರ್ನಾಟಕಕ್ಕೆ ಬಂದರೆ ವಿಜಯೇಂದ್ರ ವಿರುದ್ಧ ಹಲವು ದೂರುಗಳನ್ನು ಕೊಡಲು ಅದು ಸಜ್ಜಾಗಿ ನಿಂತಿದೆ.
ಮೊದಲನೆಯದಾಗಿ, ವಿಜಯೇಂದ್ರ ನಾಯಕತ್ವವನ್ನು ಸೀನಿಯರ್ ಲೀಡರುಗಳು ಒಪ್ಪುವುದಿಲ್ಲ. ಹೀಗಾಗಿ ಆಗ ವೇಳೆಗೆ ಅವರ ಅಧ್ಯಕ್ಷಾವಧಿ ಮುಗಿಯುವುದರಿಂದ ಅವರ ಜಾಗಕ್ಕೆ ಬೇರೊಬ್ಬರನ್ನು ತರಬೇಕು ಎಂಬುದು ಭಿನ್ನರ ಮೊದಲ ವಾದ. ಇದೇ ರೀತಿ ಪಕ್ಷ ವಿರೋಧಿ ಚಟುವಟಿಕೆಯ ಹೆಸರಿ ನಲ್ಲಿ ಯತ್ನಾಳ್ ಅವರನ್ನೇನೋ ಉಚ್ಚಾಟನೆ ಮಾಡಿದಿರಿ. ಆದರೆ ವಿಜಯೇಂದ್ರ ಪರ ನಿಲ್ಲುವ ಭರದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕೂಡಾ ಪಕ್ಷದ ಶಿಸ್ತನ್ನು ಉಲ್ಲಂಘಿಸಿದರು.
ಹೀಗಾಗಿ ಅವರನ್ನೂ ಉಚ್ಚಾಟನೆ ಮಾಡಿ ಎಂಬುದು ಭಿನ್ನರ ಮತ್ತೊಂದು ಅಹವಾಲು. ಹಾಗಂತಲೇ ಏಪ್ರಿಲ್ 9ರಂದು ಶಿವರಾಜ್ ಸಿಂಗ್ ಚೌಹಾಣ್ ಕರ್ನಾಟಕಕ್ಕೆ ಬರುತ್ತಾರೆ ಅಂತ ದಿಲ್ಲಿಯಿಂದ ಸುದ್ದಿ ಬಂದಾಗ ಈ ಪಡೆ ಕಂಪ್ಲೇಂಟು ಮತ್ತು ಡಿಮಾಂಡುಗಳ ಪಟ್ಟಿ ರೆಡಿ ಮಾಡಿ ಕುಳಿತಿತ್ತು. ಆದರೆ ಏಪ್ರಿಲ್ 9ರಂದು ಶಿವರಾಜ್ ಸಿಂಗ್ ಚೌಹಾಣ್ ಬರಲೇ ಇಲ್ಲ. ಚೆಕ್ ಮಾಡಿ ನೋಡಿದರೆ ಅವರು ಸದ್ಯಕ್ಕೆ ಬರುವ ಸೂಚನೆಗಳೂ ಕಾಣುತ್ತಿಲ್ಲ.
ಇದನ್ನೂ ಓದಿ: R T Vittalmurthy Column: ಇತಿಹಾಸ ಮರೆಯದ ಕೌತುಕದ ಕ್ಷಣಗಳು...
ಕಾರಣ? ರಾಜ್ಯ ಬಿಜೆಪಿಯ ಗೊಂದಲ ಪರಿಹರಿಸಬೇಕಾದ ಮೋದಿ- ಅಮಿತ್ ಶಾ ಜೋಡಿಯೇ ಗೊಂದಲದಲ್ಲಿದೆ. ಅರ್ಥಾತ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರು ಬರಬೇಕು? ಎಂಬ ವಿಷಯದಲ್ಲಿ ಮೋದಿ-ಅಮಿತ್ ಶಾ ಒಂದು ಹೇಳಿದರೆ ಆರೆಸ್ಸೆಸ್ ವರಿಷ್ಠರು ಮತ್ತೊಂದು ಹೇಳುತ್ತಾ ಆ ಸಂಬಂಧದ ಎಪಿಸೋಡೇ ಕಲಸು ಮೇಲೋಗರವಾಗಿ ಹೋಗಿದೆ. ಈಗ ಕರ್ನಾಟಕದ ಬಿಜೆಪಿ ಭಿನ್ನರಿಗೆ ಸಿಕ್ಕ ಮಾಹಿತಿಯ ಪ್ರಕಾರ, ಮೋದಿ-ಅಮಿತ್ ಶಾ ಜೋಡಿಗೆ ತಮ್ಮ ಆಪ್ತರಾದ ಧರ್ಮೇಂದ್ರ ಪ್ರಧಾನ್ ಇಲ್ಲವೇ ಭೂಪೇಂದ್ರ ಯಾದವ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಲಿ ಎಂಬ ಮನಸ್ಸಿದೆ.
ಆದರೆ ಆರೆಸ್ಸೆಸ್ ವರಿಷ್ಠರಿಗೆ ತಮ್ಮ ಪರಿವಾರದ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷರಾಗಲಿ ಎಂಬ ಬಯಕೆ ಇದೆ. ಆರೆಸ್ಸೆಸ್ನ ಈ ಲೆಕ್ಕಾಚಾರಕ್ಕೆ ಬಹುಮುಖ್ಯ ಕಾರಣವೆಂದರೆ ಸೂಕ್ತ ಕಾಲದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ದಿಲ್ಲಿ ಗದ್ದುಗೆಯ ಮೇಲೆ ನೋಡುವ ಬಯಕೆ. ಮುಂದೆ ಅಂಥ ಪ್ರಕ್ರಿಯೆ ಶುರುವಾಗುವ ಕಾಲದಲ್ಲಿ ಪರಿವಾರಕ್ಕೆ ನಿಷ್ಠರಾದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರಬೇಕು ಎಂಬುದು ಈ ಬಯಕೆಯ ಹಿಂದಿರುವ ಲಾಜಿಕ್ಕು.

ಆದರೆ ಮೋದಿ-ಅಮಿತ್ ಶಾ ಜೋಡಿಗೆ ಭವಿಷ್ಯದ ಯಾವುದೇ ಬೆಳವಣಿಗೆಗಳು ತಮ್ಮಿಚ್ಛೆಯಂತೆ ನಡೆಯಬೇಕು ಮತ್ತು ಈ ಕಾರಣಕ್ಕಾಗಿ ತಾವು ಬಯಸಿದ ಧರ್ಮೇಂದ್ರ ಪ್ರಧಾನ್ ಅಥವಾ ಭೂಪೇಂದ್ರ ಯಾದವ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿರಬೇಕು ಎಂಬ ಲೆಕ್ಕಾಚಾರವಿದೆ. ಕುತೂಹಲದ ಸಂಗತಿ ಎಂದರೆ ಇಂಥದೇ ಕಾರಣಗಳಿಗಾಗಿ ದಿಲ್ಲಿಯಲ್ಲಿ ಸೆಟ್ಲಾಗಿರುವ ಆರೆಸ್ಸೆಸ್ ನಾಯಕ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೂಡಾ ಇಲ್ಲೇ ಇರಲಿ ಅಂತ ಅಮಿತ್ ಶಾ ಬಯಸುತ್ತಿದ್ದಾರೆ. ಆದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತಾವು ಬಯಸಿದವರು ಕೂರಬೇಕು ಮತ್ತು ದಿಲ್ಲಿಯಲ್ಲಿ ಸೆಟ್ಲಾಗಿ ಅಮಿತ್ ಶಾ ಅವರಿಗೆ ಹತ್ತಿರ ವಾಗಿರುವ ಬಿ.ಎಲ್.ಸಂತೋಷ್ ಅವರನ್ನು ವಾಪಸ್ಸು ಕರೆಸಿಕೊಂಡು, ಆ ಜಾಗಕ್ಕೆ ಬೇರೆಯವರನ್ನು ತಂದು ಕೂರಿಸಬೇಕು ಅಂತ ಆರೆಸ್ಸೆಸ್ ಬಯಸಿದೆ.
ಆದರೆ ರಾಷ್ಟ್ರ ರಾಜಕಾರಣ ವಿದ್ಯಮಾನಗಳ ನಡುವೆ ಈ ಪ್ರಕ್ರಿಯೆ ಮುಗಿಯುತ್ತಿಲ್ಲ. ಹೀಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಯದ ಕಾರಣಕ್ಕಾಗಿ ಕರ್ನಾಟಕದ ಕಡೆ ಗಮನ ಹರಿಸುವ ಸ್ಥಿತಿಯೂ ಇಲ್ಲ. ಹೀಗಾಗಿ ಮುಂದೇನು ಮಾಡಬೇಕು ಅಂತ ತೋಚದೆ ಭಿನ್ನರ ಪಡೆ ಮೌನವಾಗಿದೆ. ಹನುಮಂತನೇ ಹಗ್ಗ ತಿನ್ನುವಾಗ ಪೂಜಾರಿಗೆಲ್ಲಿ ಶಾವಿಗೆ? ಅನ್ನುವುದು ಅವರ ಪರಿಸ್ಥಿತಿ. ಮುಂದೇನು ಕತೆಯೋ ಕಾದು ನೋಡಬೇಕು.
ಬಿಜೆಪಿಯಲ್ಲಿ ಈಗ ಲೆಟರ್ ವಾರ್
ಇನ್ನು ರಾಜ್ಯ ಬಿಜೆಪಿಯಲ್ಲೀಗ ವಿಜಯೇಂದ್ರ ವರ್ಸಸ್ ಅಶೋಕ್ ನಡುವಿನ ಸಮರದ್ದೇ ದೊಡ್ಡ ಸುದ್ದಿ. ಯತ್ನಾಳ್ ಆಂಡ್ ಗ್ಯಾಂಗು ತಮ್ಮ ವಿರುದ್ಧ ಹೋರಾಡುತ್ತಿದ್ದ ಕಾಲದಲ್ಲಿ ಅಶೋಕ್ ತಮ್ಮ ಪರವಾಗಿ ನಿಲ್ಲಲಿಲ್ಲ ಎಂಬುದು ವಿಜಯೇಂದ್ರ ಅವರ ಸಿಟ್ಟಾದರೆ, ಪ್ರತಿಪಕ್ಷ ನಾಯಕರಾಗಿ ತಾವು ಎಫೆಕ್ಟಿವ್ ಆಗಿ ಕೆಲಸ ಮಾಡುತ್ತಿಲ್ಲ ಅಂತ ವಿಜಯೇಂದ್ರ ವರಿಷ್ಠರಿಗೆ ಹೇಳಿದ್ದಾರೆ ಎಂಬುದು ಅಶೋಕ್ ಸಿಟ್ಟು.
ಹೀಗೆ ಉಭಯ ನಾಯಕರ ಮಧ್ಯೆ ಶುರುವಾದ ಕದನ ಈಗ ಟಾಪ್ ಲೆವೆಲ್ಲಿಗೆ ಬಂದಿದೆ. ಇದರ ಭಾಗವಾಗಿ ವಿಜಯೇಂದ್ರ ಅವರ ಜನಾಕ್ರೋಶ ಯಾತ್ರೆಯ ಬಗ್ಗೆ ಅಶೋಕ್ ನಿರಾಸಕ್ತಿ ತೋರುತ್ತಿದ್ದರೆ, ಅಶೋಕ್ ಪ್ರತಿಪಕ್ಷ ನಾಯಕರಾಗಿ ಫೇಲ್ ಆಗಿದ್ದಾರೆ ಅಂತ ವಿಜಯೇಂದ್ರ ಗ್ಯಾಂಗು ಪತ್ರ ಚಳವಳಿ ಆರಂಭಿಸಿದೆ. ಈ ಚಳವಳಿಗೆ ಪೂರಕವಾಗಿ ಬೆಂಗಳೂರು ಮಹಾನಗರಪಾಲಿಕೆ ಎಪಿಸೋಡನ್ನು ಹಿಡಿದುಕೊಂಡಿರುವ ವಿಜಯೇಂದ್ರ ಗ್ಯಾಂಗು, ‘ಪಾಲಿಕೆಯನ್ನು ಐದು ಹೋಳುಗಳನ್ನಾಗಿ ಮಾಡುವ ರಾಜ್ಯ ಸರಕಾರದ ವಿರುದ್ಧ ಅಶೋಕ್ ಎಫೆಕ್ಟಿವ್ ಆಗಿ ಹೋರಾಡುತ್ತಿಲ್ಲ’ ಅಂತ ಪಕ್ಷದ ವರಿಷ್ಠರಿಗೆ ದೂರು ರವಾನಿಸುತ್ತಿದೆ.
ದೆಹಲಿಯಲ್ಲಿ ಪಾಲಿಕೆಯನ್ನು ವಿಭಜನೆ ಮಾಡಿದ ಕ್ರಮದಿಂದ ಆದ ಹಾನಿ ಏನು ಮತ್ತು ಆ ತಪ್ಪನ್ನು ಹೇಗೆ ಸರಿಪಡಿಸಲಾಯಿತು ಅನ್ನುವುದನ್ನು ಮುಖ್ಯವಾಗಿಟ್ಟುಕೊಂಡು ಅದೇ ಮಾದರಿ ಯಲ್ಲಿ ಅಶೋಕ್ ಹೋರಾಡಬೇಕಿತ್ತು. ರಾಜ್ಯಪಾಲರಿಗೆ ಕನ್ವಿ ಮಾಡಬೇಕಿತ್ತು. ಆದರೆ ಅಶೋಕ್ ಆ ಕೆಲಸ ಮಾಡುವ ಬದಲು ರಾಜ್ಯ ಸರಕಾರಕ್ಕೆ ಅನುಕೂಲವಾಗುವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ಈ ಪತ್ರಗಳ ಸಾರ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ವಿಜಯೇಂದ್ರ ಅವರ ಪರವಾಗಿ ಧ್ವನಿ ಎತ್ತುವ ವಾಟ್ಸ್ಯಾಪ್ ಗ್ರೂಪುಗಳು ಜನಾಕ್ರೋಶ ಯಾತ್ರೆಯ ಬಗ್ಗೆ ನಿರಾಸಕ್ತಿ ತೋರಿ ಸುತ್ತಿದ್ದಾರೆ ಅಂತ ಅಶೋಕ್ ವಿರುದ್ಧ ಲಕ್ಷ ಕುಂಕುಮಾರ್ಚನೆ ಮಾಡುತ್ತಾ ಕುಳಿತಿವೆ.
ಸಿದ್ದು ಸಂಪುಟಕ್ಕೆ ಮೈನರ್ ಸರ್ಜರಿ
ಈ ಮಧ್ಯೆ ಸಿದ್ದರಾಮಯ್ಯ ಸಂಪುಟಕ್ಕೆ ಮೈನರ್ ಸರ್ಜರಿಯಾಗುವ ಲಕ್ಷಣಗಳಿವೆ. ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಭರ್ತಿಯಾಗುತ್ತಿರುವಾಗ ಇಂಥ ಸರ್ಜರಿ ನಡೆದರೆ ಪಕ್ಷ ಮತ್ತು ಸರಕಾರದಲ್ಲಿ ಉತ್ಸಾಹ ಕಂಡು ಬರುತ್ತದೆ ಎಂಬುದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ. ಹಾಗಂತಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನಿಸಿರುವ ವರಿಷ್ಠರು, ‘ಸಂಪುಟಕ್ಕೆ ಮೈನರ್ ಸರ್ಜರಿ ಮಾಡಲು ರೆಡಿಯಾಗಿ’ ಎಂದಿದ್ದಾರೆ.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಸಂಪುಟದ ನಾಲ್ಕು ಅಥವಾ ಐದು ಮಂದಿ ಮಂತ್ರಿಗಿರಿ ಕಳೆದುಕೊಳ್ಳಲಿದ್ದು, ಐದಾರು ಮಂದಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಇದೇ ರೀತಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಈಗಾಗಲೇ ಸರಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದು, ಇದಕ್ಕೆ ತಿರುಗೇಟು ನೀಡಲು ನಾವು ಸಜ್ಜಾಗಬೇಕು ಎಂಬುದು ಸುರ್ಜೇವಾಲಾ ತಂದ ಮತ್ತೊಂದು ಸಂದೇಶ. ಅಂದ ಹಾಗೆ, ಮೇ 20ರಂದು ಹೊಸಪೇಟೆಯಲ್ಲಿ ಅದ್ದೂರಿ ಸಾಧನಾ ಸಮಾವೇಶವನ್ನು ನಡೆಸ ಲಿರುವ ಕಾಂಗ್ರೆಸ್, ಇದಾದ ನಂತರ ರಾಜ್ಯದ ವಿವಿಧೆಡೆ ಇಂಥ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿದೆ.
ರಾಹುಲ್ಗೇಕೆ ಗಣತಿ ಬೇಕು?
ಇನ್ನು ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾಗಿರುವ ಸಾಮಾಜಿಕ, ಶೈಕ್ಷಣಿಕ ಗಣತಿ ಕೆಲ ಸಚಿವರಿಗೆ ಇರುಸು ಮರಿಸು ಉಂಟು ಮಾಡಿರುವುದೇನೋ ನಿಜ. ಆದರೆ ಇದನ್ನವರು ವಿರೋಧಿಸುವ ಸ್ಥಿತಿಯಲ್ಲೂ ಇಲ್ಲ. ಕಾರಣ? ಮಂಡನೆಯಾಗಿರುವ ವರದಿ ರಾಜ್ಯದಲ್ಲಿ ಯಾವ ಜಾತಿ- ಜನಾಂಗ ದವರ ಸಂಖ್ಯೆ ಎಷ್ಟು ಅಂತ ಹೇಳಿರುವುದು. ಹೀಗೆ ಜಾತಿವಾರು ಜನರ ಪ್ರಮಾಣವನ್ನು ಹೇಳಿರುವಾಗ ತಾವು ಅದನ್ನು ವಿರೋಧಿಸಿದರೆ ಹಲವು ಜಾತಿಗಳ ಮತದಾರರು ತಮಗೆ ಉಲ್ಟಾ ಹೊಡೆಯಬಹುದು ಎಂಬುದು ಅವರ ಆತಂಕ. ಹೀಗಾಗಿ ವರದಿಯಲ್ಲಿ ಇಂಥ ಜಾತಿಗಳ ಜನಸಂಖ್ಯೆ ಪ್ರಮಾಣ ನಿಖರವಾಗಿ ನಮೂದಾಗಿಲ್ಲ ಎಂಬುದನ್ನೇ ಅವರು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ಇದು ಒಂದು ಕಡೆಗಾದರೆ ಮತ್ತೊಂದು ಕಡೆ ರಾಹುಲ್ ಗಾಂಧಿ ಅವರ ಆಸಕ್ತಿಯೇ ಈ ಸಚಿವರ ಪಾಲಿಗೆ ತಲೆನೋವಾಗಿದೆ. ಯಾಕೆಂದರೆ ಸಚಿವ ಸಂಪುಟದಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗು ತ್ತಿವೆ ಎಂದರೂ ರಾಹುಲ್ ಗಾಂಧಿ ಕೇರ್ ಮಾಡುತ್ತಿಲ್ಲ. ಬದಲಿಗೆ ಸಣ್ಣ ಪುಟ್ಟ ಲೋಪಗಳಿದ್ದರೆ ಚರ್ಚಿಸಿ ಸರಿ ಮಾಡಿ. ಅದರೆ ಗಣತಿ ಮಾತ್ರ ಅಂಗೀಕಾರವಾಗಲೇಬೇಕು ಎಂಬುದು ರಾಹುಲ್ ಗಾಂಧಿ ಮೆಸೇಜು. ಅಂದ ಹಾಗೆ, ಈ ವರದಿ ಅಂಗೀಕಾರವಾಗಬೇಕು ಅಂತ ರಾಹುಲ್ ಗಾಂಧಿ ಪಟ್ಟು ಹಿಡಿದಿರುವುದಕ್ಕೆ ಮತ್ತೊಂದು ಕಾರಣವಿದೆ. ಅದೆಂದರೆ ಇದು ಅಂಗೀಕಾರವಾದರೆ ಕರ್ನಾಟಕದ ಅಹಿಂದ ವರ್ಗಗಳಲ್ಲಿ ರಾಜಕೀಯ ಪ್ರಜ್ಞೆ ದಟ್ಟವಾಗುತ್ತದಲ್ಲದೆ, ತಮ್ಮಲ್ಲಿ ಇಂಥ ಪ್ರಜ್ಞೆ ಮೂಡಿಸಿದ ಕಾಂಗ್ರೆಸ್ ಪರವಾಗಿ ಅವರು ನಿಲ್ಲುತ್ತಾರೆ.
ನಮ್ಮ ಜಾತಿಯ ಜನಸಂಖ್ಯೆ ಎಷ್ಟು ಎಂಬುದು ಅವರಿಗೆ ನಿಖರವಾಗಿ ಗೊತ್ತಾಗುವುದರಿಂದ ವ್ಯವಸ್ಥೆ ಯಲ್ಲಿ ತಮಗೆ ದಕ್ಕಬೇಕಾದ ಪಾಲೆಷ್ಟು ಎಂಬುದು ಅವರಿಗೆ ಮನದಟ್ಟಾಗುತ್ತದೆ ಮತ್ತು ಅದಕ್ಕಾಗಿ ಹೋರಾಡುವ ಗುಣ ಅವರಲ್ಲಿ ಬರುತ್ತದೆ. ಇದೇ ರಾಜಕೀಯ ಪ್ರಜ್ಞೆ. ಇಂಥ ಪ್ರeಯನ್ನು ಮೂಡಿಸಿದ ಕಾರಣಕ್ಕಾಗಿ ಅಹಿಂದ ವರ್ಗಗಳ ಮೇಜರ್ ಷೇರು ಕಾಂಗ್ರೆಸ್ ಪಕ್ಷದ ಜತೆ ನಿಲ್ಲುತ್ತವೆ. ಈ ಹಿಂದೆ ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಹಲವು ಕಾರ್ಯಕ್ರಮಗಳು ಅಹಿಂದ ವರ್ಗಗಳಲ್ಲಿ ಒಂದು ಮಟ್ಟದ ಜಾಗೃತಿ ಮೂಡಿಸಿದ್ದಲ್ಲದೆ, ಕಾಂಗ್ರೆಸ್ಸಿನ ಮೂಲ ಮತಬ್ಯಾಂಕ್ ಆಗಿ ನೆಲೆಯಾದವು.
ಇದರ ಪರಿಣಾಮವಾಗಿಯೇ ಕಾಂಗ್ರೆಸ್ ರಾಜ್ಯದಲ್ಲಿ ಮೂಲ ಮತಬ್ಯಾಂಕ್ನ ಶಕ್ತಿಯೊಂದಿಗೆ ಹೋರಾಡುತ್ತಾ ಬರಲು ಸಾಧ್ಯವಾಯಿತು. ಈಗ ಸಿದ್ದರಾಮಯ್ಯ ಮಂಡಿಸಿರುವ ಸಾಮಾಜಿಕ, ಶೈಕ್ಷಣಿಕ ಗಣತಿಯ ವರದಿಯೂ ಅಂಥದ್ದೇ ಪರಿಣಾಮವನ್ನುಂಟುಮಾಡುತ್ತದೆ ಎಂಬುದು ರಾಹುಲ್ ಗಾಂಧಿಯವರ ಯೋಚನೆ. ಅವರ ಈ ಯೋಚನೆ ಸಿದ್ದು ಸಂಪುಟದ ಕೆಲ ಸಚಿವರಿಗೆ ನುಂಗಲಾರದ ತುತ್ತಾಗಿದ್ದರೆ, ಇನ್ನು ಹಲವರಿಗೆ ಸಮಾಧಾನ ತಂದಿದೆ.