Reserve Bank of India: ಹೊಸ 20 ರೂ. ಮುಖಬೆಲೆಯ ನೋಟು ಶೀಘ್ರದಲ್ಲಿಯೇ ಬಿಡುಗಡೆ: ಆರ್‌ಬಿಐ ಘೋಷಣೆ
RBI: ಶೀಘ್ರದಲ್ಲಿಯೇ 20 ರೂ. ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಈ ಹೊಸ ನೋಟಿನಲ್ಲಿ ಈಗಿನ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿ ಇರಲಿದೆ. ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಶೀಘ್ರದಲ್ಲಿಯೇ 20 ರೂ. ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ತಿಳಿಸಿದೆ. ಈ ಹೊಸ ನೋಟಿನಲ್ಲಿ ಈಗಿನ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (Sanjay Malhotra) ಅವರ ಸಹಿ ಇರಲಿದೆ. ಬಿಡುಗಡೆಯಾಗಲಿರುವ ಹೊಸ ನೋಟು ನೂತನ ಗವರ್ನರ್ ಅವರ ಸಹಿಯನ್ನು ಹೊರತುಪಡಿಸಿ ದೇಶದಲ್ಲಿ ಈಗ ಚಲಾವಣೆಯಲ್ಲಿರುವ ನೋಟುಗಳ ವಿನ್ಯಾಸದಂತೆಯೇ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.
"ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ 20 ರೂ. ಮುಖಬೆಲೆಯ ನೋಟುಗಳನ್ನು ಮಹಾತ್ಮಾ ಗಾಂಧಿ ಭಾವಚಿತ್ರವಿರುವ ಸರಣಿಯಲ್ಲಿಯೇ ಬಿಡುಗಡೆ ಮಾಡಲಿದೆ. ಅದರಲ್ಲಿ ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿ ಇರಲಿದೆ. ಈ ನೋಟುಗಳ ವಿನ್ಯಾಸವು ಈಗಿನ ನೋಟಿನಂತೆಯೇ ಇರಲಿದೆʼʼ ಎಂದು ಆರ್‌ಬಿಐ ತಿಳಿಸಿದೆ.
ಆರ್‌ಬಿಐ ಪ್ರಕಟಣೆ:
Reserve Bank of India (RBI) will shortly issue Rs 20 denomination Banknotes in Mahatma Gandhi (New) Series bearing the signature of Sanjay Malhotra, Governor. The design of these notes is similar in all respects to Rs 20 banknotes in Mahatma Gandhi (New) Series. All banknotes in… pic.twitter.com/8goR8NwySJ
— ANI (@ANI) May 17, 2025
ಈ ಹಿಂದೆ ಆರ್‌ಬಿಐ ಹೊರಡಿಸಿದ 20 ರೂ. ಮುಖಬೆಲೆಯ ಎಲ್ಲ ನೋಟುಗಳ ಕಾನೂನುಬದ್ಧ ಚಲಾವಣೆ ಮುಂದುವರಿಯಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಘೋಷಿಸಲಾಗಿದೆ. ಆ ಮೂಲಕ ಆರ್‌ಬಿಐ ಗೊಂದಲಕ್ಕೆ ತೆರೆ ಎಳೆದಿದೆ. ಆರ್‌ಬಿಐಯ ಅಧಿಕೃತ ವೆಬ್‌ಸೈಟ್ ಪ್ರಕಾರ 20 ರೂ. ಮುಖಬೆಲೆಯ ಮಹಾತ್ಮಾ ಗಾಂಧಿ ಭಾವಚಿತ್ರವಿರುವ ನೋಟುಗಳು 63 ಎಂಎಂ x 129 ಎಂಎಂ ಗಾತ್ರವನ್ನು ಹೊಂದಿದ್ದು, ಹಸಿರು ಹಳದಿ ಬಣ್ಣದಲ್ಲಿರಲಿವೆ. ಈಗಿನಂತೆಯೇ ನೋಟಿನ ಹಿಂಭಾಗದಲ್ಲಿ ಎಲ್ಲೋರಾ ಗುಹೆಗಳ ಚಿತ್ರಣವಿರಲಿದೆ. ಒಟ್ಟಿನಲ್ಲಿ ಮೊದಲೇ ಹೇಳಿದಂತೆ ಗವರ್ನರ್ ಅವರ ಸಹಿಯೊಂದು ಬಿಟ್ಟು ಉಳಿದವೆಲ್ಲ ಅದೇ ರೀತಿಯಲ್ಲಿ ಇರಲಿದೆ ಎಂದು ಆರ್‌ಬಿಐ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Repo Rate: ಆರ್‌ಬಿಐ ರೆಪೋ ದರ ಕಡಿತ: ಗೃಹ ಸಾಲಗಾರರಿಗೆ EMIನಲ್ಲಿ ಉಳಿತಾಯ ಎಷ್ಟು? ಇಲ್ಲಿದೆ ಲೆಕ್ಕಚಾರ
20 ರೂ. ಮುಖಬೆಲೆಯ ನೋಟಿನ ವೈಶಿಷ್ಟ್ಯ
- ನೋಟಿನ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ₹20 ಎಂದು ಬರೆದಿರುತ್ತದೆ.
- ನೋಟಿನ ಮಧ್ಯಭಾಗದಲ್ಲಿ ಮಹಾತ್ಮಾ ಗಾಂಧಿ ಅವರ ಭಾವಚಿತ್ರವಿರುತ್ತದೆ.
- ಗಾಂಧೀಜಿ ಭಾವಚಿತ್ರದ ಸಮೀಪ ಮೈಕ್ರೋಲೆಟರ್‌ನಲ್ಲಿ ಹಿಂದಿಯಲ್ಲಿ ʼಭಾರತ್ʼ ಮತ್ತು ಇಂಗ್ಲಿಷ್‌ನಲ್ಲಿ ʼಇಂಡಿಯಾʼ ಎಂದು ಬರೆದಿರುತ್ತದೆ.
- ಆರ್‌ಬಿಐ ಗವರ್ನರ್ ಅವರ ಸಹಿ ಇರುತ್ತದೆ.
- ಬಲಭಾಗದಲ್ಲಿ ಅಶೋಕ ಸ್ಥಂಭದ ಲಾಂಛನವಿರುತ್ತದೆ.
- ನೋಟಿನ ಹಿಂಭಾಗದ ಎಡಬದಿಯಲ್ಲಿ ಪ್ರಿಂಟ್ ಆದ ಇಸವಿಯನ್ನು ಉಲ್ಲೇಖಿಸಲಾಗುತ್ತದೆ.
- ಹಿಂಭಾಗದಲ್ಲಿ ವಿವಿಧ ಭಾಷೆಗಳಲ್ಲಿ 20 ರೂ. ಎಂದು ಅಕ್ಷರಗಳಲ್ಲಿ ಬರೆದಿರುತ್ತದೆ.
- ಹಿಂಭಾಗದ ಎಡಬದಿಯಲ್ಲಿ ಸ್ವಚ್ಛ ಭಾರತ್ ಅಭಿಯಾನದ ಲೋಗೊ ಇರುತ್ತದೆ.
3 ವರ್ಷ ಸಂಜಯ್ ಮಲ್ಹೋತ್ರಾ ಆರ್‌ಬಿಐ ಗವರ್ನರ್
ಶಕ್ತಿಕಾಂತ್ ದಾಸ್ ಅವರ ಅಧಿಕಾರಾವಧಿ ಪೂರ್ಣಗೊಂಡ ಹೆನ್ನೆಲೆಯಲ್ಲಿ 2024ರ ಡಿಸೆಂಬರ್‌ನಲ್ಲಿ ಸಂಜಯ್ ಮಲ್ಹೋತ್ರಾ ಆರ್‌ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದರು. ಅವರು ಅಧಿಕಾರಕ್ಕೆ ಬಂದ ನಂತರ ಚಲಾವಣೆಗೆ ಬರಲಿರುವ ಮೊದಲ ನೋಟು ಇದಾಗಿರಲಿದೆ. ಸಂಜಯ್ ಮಲ್ಹೋತ್ರಾ ಮುಂದಿನ 3 ವರ್ಷಗಳ ಅವಧಿಗೆ ಆರ್‌ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಸಂಜಯ್ ಮಲ್ಹೋತ್ರಾ ಆರ್‌ಬಿಐಯ 26ನೇ ಗವರ್ನರ್ ಎನಿಸಿಕೊಂಡಿದ್ದಾರೆ.
ಯಾರು ಈ ಸಂಜಯ್ ಮಲ್ಹೋತ್ರಾ?
ಸಂಜಯ್ ಮಲ್ಹೋತ್ರಾ ರಾಜಸ್ಥಾನ ಮೂಲದ 1990ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಕಾನ್ಪುರದ ಐಐಟಿಯಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಗಳಿಸಿದ್ದಾರೆ. ಅಮೆರಿಕದಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿದ್ದಾರೆ. ಐಎಎಸ್ ಅಧಿಕಾರಿಯಾಗಿ ಸಂಜಯ್ ಮಲ್ಹೋತ್ರಾ ವಿದ್ಯುತ್, ಹಣಕಾಸು, ತೆರಿಗೆ, ಮಾಹಿತಿ ತಂತ್ರಜ್ಞಾನ, ಗಣಿಗಾರಿಕೆ ಇತ್ಯಾದಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗುವುದಕ್ಕೆ ಮುನ್ನ ಹಣಕಾಸು ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ರಾಜ್ಯ ಮತ್ತು ಕೇಂದ್ರದಲ್ಲಿ ಹಣಕಾಸು ಮತ್ತು ತೆರಿಗೆ ಆಡಳಿತದಲ್ಲಿ ಅನುಭವವನ್ನು ಹೊಂದಿದ್ದಾರೆ. ನೇರ ಮತ್ತು ಪರೋಕ್ಷ ತೆರಿಗೆಗೆಳ ಸುಧಾರಣೆಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ.