Bengaluru Rain: ಬೆಂಗಳೂರಿನಲ್ಲಿ ಮಳೆ ಅಬ್ಬರ; ಸಾಯಿ ಲೇಔಟ್ ಮತ್ತೆ ಜಲಾವೃತ, ಜನ ಜೀವನ ಅಸ್ತವ್ಯಸ್ತ
Bengaluru Rain: ನೆನ್ನೆ ಸುರಿದ ಬಾರಿ ಮಳೆಯಿಂದ ಸಮಸ್ಯೆಯಾದ ಸಾಯಿ ಲೇಔಟ್, ಮಾನ್ಯತಾ ಟೆಕ್ ಪಾರ್ಕ್ ಹಾಗೂ ನಾಗವಾರ ಜಂಕ್ಷನ್ ಪ್ರದೇಶಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಬೆಂಗಳೂರು: ರಾಜಧಾನಿಯಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಶನಿವಾರ ರಾತ್ರಿ ಸುರಿದ ಬಿರುಸಿನ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ. ಧಾರಾಕಾರ ಮಳೆಯಿದ ನಗರದ ಹೊರಮಾವು ವಾರ್ಡ್‌ನ ಸಾಯಿ ಲೇಔಟ್ಗೆ ಜಲ ಕಂಟಕ ಎದುರಾಗಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಈ ವರ್ಷದಲ್ಲಿ 2ನೇ ಬಾರಿ ಸಾಯಿ ಲೇಔಟ್ ಜಲಾವೃತಗೊಂಡಿದ್ದು, ಜನರು ಮನೆಗಳಿಂದ ಹೊರಗೆ ಬಾರದೆ ಸಂಕಷ್ಟ ಅನುಭವಿಸುವಂತಾಗಿದೆ.
ಇನ್ನು ನೆನ್ನೆ ಸುರಿದ ಬಾರಿ ಮಳೆಯಿಂದ ಸಮಸ್ಯೆಯಾದ ಸಾಯಿ ಲೇಔಟ್, ಮಾನ್ಯತಾ ಟೆಕ್ ಪಾರ್ಕ್ ಹಾಗೂ ನಾಗವಾರ ಜಂಕ್ಷನ್ ಪ್ರದೇಶಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಲ್ಲೆಲ್ಲಿ ನೀರು ನಿಂತಿದೆ ಅದನ್ನೆಲ್ಲಾ ಪಂಪ್‌ಗಳ ಮೂಲಕ ತ್ವರಿತವಾಗಿ ನೀರು ಹೊರ ಹಾಕುವ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಬಿಬಿಎಂಪಿ ವ್ಯಾಪ್ತಿಯ ಸಾಯಿ ಲೇಔಟ್ ಜಲಾವೃತವಾಗದಂತೆ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಪರಿಶೀಲನೆಯ ವೇಳೆ ಮಹದೇವಪುರ ವಲಯ ಆಯುಕ್ತರಾದ ರಮೇಶ್, ಯಲಹಂಕ ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿಮ್, ಕಾರ್ಯಪಾಕಲಕ ಅಭಿಯಂತರು, ಪಾಲಿಕೆ ಹಾಗೂ ಮೆಟ್ರೋ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರಿ ಮಳೆಯಿಂದ ಹಲೆವೆಡೆ ಅವಾಂತರ
ಮಳೆಯಿಂದ ಶನಿವಾರ ರಾತ್ರಿ ನಗರದ ವಿವಿಧೆಡೆ ಭಾರಿ ಅವಾಂತರ ಸೃಷ್ಟಿಯಾಗಿತ್ತು. ಬನ್ನೇರುಘಟ್ಟ ಮುಖ್ಯರಸ್ತೆ ಮಳೆಯಿಂದ ಜಲಾವೃತಗೊಂಡಿದ್ದರಿಂದ ಅರ್ಧ ಕಾರು ಮುಳುಗುವಷ್ಟರಮಟ್ಟಿಗೆ ರಸ್ತೆಯಲ್ಲಿ ನೀರು ನಿಂತಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು. ಪಣತ್ತೂರು, ಕೋರಮಂಗಲ ರಸ್ತೆಯಲ್ಲೂ ನೀರು ನಿಂತು ಅವಾಂತರ ಸೃಷ್ಟಿಯಾಯಿತು.
ಇನ್ನು ನಾಗವಾರದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಡಿದರು. ಮನೆಯಲ್ಲಿದ್ದ ವಸ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿದ್ದವು. ಮಳೆ ನಿಂತ ಬಳಿಕ ಮಳೆ ನೀರನ್ನು ಹೊರಹಾಕಿದರು.
ಈ ಸುದ್ದಿಯನ್ನೂ ಓದಿ | Karnataka Weather: ಯೆಲ್ಲೋ ಅಲರ್ಟ್; ಇಂದು ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ
ಎಚ್‌ಬಿಆರ್ ಲೇಔಟ್‌ನ ತಗ್ಗುಪ್ರದೇಶಗಳಲ್ಲೂ ಮನೆಗಳಿಗೆ ಮಳೆ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಯಿತು. ಮತ್ತೊಂದೆಡೆ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತು ವಾಹನಗಳು ಮುಳುಗಡೆಯಾಗಿದ್ದವು. ಶ್ರೀರಾಂಪುರದಲ್ಲಿ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬವೊಂದು ಆಟೋ ಮೇಲೆ ಉರುಳಿಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಬೈಕ್ ಚಾಲಕರೊಬ್ಬರು ಗಾಯಗೊಂಡಿದ್ದಾರೆ.