ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Australia Election Result: ಆಸ್ಟ್ರೇಲಿಯಾ ಪ್ರಧಾನಿಯಾಗಿ ಸತತ 2ನೇ ಬಾರಿಗೆ ಆಂಥೋನಿ ಅಲ್ಬನೀಸ್‌ ಆಯ್ಕೆ; ಮೋದಿ ಅಭಿನಂದನೆ

Anthony Albanese: 3 ವರ್ಷಗಳಿಗೊಮ್ಮೆ ಸಾರ್ವತ್ರಿಕ ಚುನಾವಣೆ ನಡೆಯುವ ಆಸ್ಟ್ರೇಲಿಯಾದಲ್ಲಿ ಪ್ರಧಾನ ಮಂತ್ರಿಯಾಗಿ ಲೇಬರ್‌ ಪಾರ್ಟಿಯ ಆಂಥೋನಿ ಅಲ್ಬನೀಸ್‌ ಸತತ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 150 ಸ್ಥಾನಗಳನ್ನು ಹೊಂದಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪ್ರಧಾನಿ ಅಲ್ಬನೀಸ್ ನೇತೃತ್ವದ ಆಡಳಿತಾರೂಢ ಸೆಂಟರ್-ಲೆಫ್ಟ್‌ ಲೇಬರ್ ಪಾರ್ಟಿ 70 ಸ್ಥಾನಗಳು ಮತ್ತು ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರ ಕನ್ಸರ್ವೇಟಿವ್ ಲಿಬರಲ್ ಪಾರ್ಟಿ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟ 24 ಸ್ಥಾನಗಳನ್ನು ಗೆದ್ದಿದೆ.

ಆಸ್ಟ್ರೇಲಿಯಾ ಪ್ರಧಾನಿಯಾಗಿ ಆಂಥೋನಿ ಅಲ್ಬನೀಸ್‌ ಆಯ್ಕೆ

ಅಂಥೋನಿ ಅಲ್ಬನೀಸ್‌.

Profile Ramesh B May 3, 2025 8:11 PM

ಕ್ಯಾನ್‌ಬೆರ‍್ರಾ: 3 ವರ್ಷಗಳಿಗೊಮ್ಮೆ ಸಾರ್ವತ್ರಿಕ ಚುನಾವಣೆ ನಡೆಯುವ ಆಸ್ಟ್ರೇಲಿಯಾದಲ್ಲಿ ಪ್ರಧಾನ ಮಂತ್ರಿಯಾಗಿ ಲೇಬರ್‌ ಪಾರ್ಟಿಯ (Labor Party) ಆಂಥೋನಿ ಅಲ್ಬನೀಸ್‌ (Anthony Albanese) ಸತತ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ (Australia Election Result). 2022ರಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿದ್ದ 62 ವರ್ಷದ ಅಂಥೋನಿ ಅಲ್ಬನೀಸ್‌ ಕಳೆದ 21 ವರ್ಷಗಳಲ್ಲಿ ಸತತ 2ನೇ ಬಾರಿ ಈ ಪಟ್ಟಕ್ಕೇರಿದ ಮೊದಲ ರಾಜಕಾರಣಿ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಬಲಪಂಥೀಯ ವಿರೋಧ ಪಕ್ಷ ನಾಯಕ ಪೀಟರ್ ಡಟ್ಟನ್ (Peter Dutton) ಚುನಾವಣೆಯಲ್ಲಿನ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ ಮತ್ತು ಎಡಪಕ್ಷದ ನಾಯಕ ಆಂಥೋನಿ ಅಲ್ಬನೀಸ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

"ಈ ಚುನಾವಣೆಯ ಅಭಿಯಾನದ ವೇಳೆ ನಾವು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ ಎನ್ನುವುದು ಈ ಫಲಿತಾಂಶದ ಮೂಲಕ ಸ್ಪಷ್ಟವಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ" ಎಂದು ಡಟ್ಟನ್ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Canada Election 2025: ಕೆನಡಾದಲ್ಲಿ ಲಿಬರಲ್ ಪಕ್ಷಕ್ಕೆ ಜಯ; ಪ್ರಧಾನಿ ಮೋದಿ ಅಭಿನಂದನೆ

"ಪ್ರಧಾನಿ ಆಂಥೋನಿ ಅಲ್ಬನೀಸ್‌ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಇದು ಲೇಬರ್ ಪಕ್ಷದ ಐತಿಹಾಸಿಕ ಗೆಲುವಾಗಿದ್ದು, ಅದನ್ನು ಗುರುತಿಸುತ್ತೇವೆ" ಎಂದು ಅವರು ತಿಳಿಸಿದ್ದಾರೆ. ಡಟ್ಟನ್ ಅವರಿಗೆ ಧನ್ಯವಾದ ತಿಳಿಸಿದ ಅಲ್ಬನೀಸ್, ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಆಸ್ಟ್ರೇಲಿಯಾದ ಮತದಾರರು ಆಶಾವಾದವನ್ನು ಆಯ್ಕೆ ಮಾಡಿದ್ದಾರೆ ಎಂದು ಬಣ್ಣಿಸಿದ್ದಾರೆ. ಒತ್ತಡದಲ್ಲಿರುವ ಜನರಿಗೆ ಸಹಾಯ ಮಾಡಲು ಶ್ರಮಿಸುವುದಾಗಿ ಅವರು ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.



ಆಸ್ಟ್ರೇಲಿಯಾ ಸಾರ್ವತ್ರಿಕ ಚುನಾವಣೆ

ಆಸ್ಟ್ರೇಲಿಯಾ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 150 ಸ್ಥಾನಗಳನ್ನು ಹೊಂದಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪ್ರಧಾನಿ ಅಲ್ಬನೀಸ್ ನೇತೃತ್ವದ ಆಡಳಿತಾರೂಢ ಸೆಂಟರ್-ಲೆಫ್ಟ್‌ ಲೇಬರ್ ಪಾರ್ಟಿ 70 ಸ್ಥಾನಗಳು ಮತ್ತು ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್ ಅವರ ಕನ್ಸರ್ವೇಟಿವ್ ಲಿಬರಲ್ ಪಾರ್ಟಿ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟ 24 ಸ್ಥಾನಗಳನ್ನು ಗೆದ್ದಿದೆ. ಅಲಿಪ್ತ ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು 13 ಸ್ಥಾನಗಳನ್ನು ಗೆದ್ದಿದ್ದಾರೆ.

ಏರುತ್ತಿರುವ ಹಣದುಬ್ಬರ, ಹೆಚ್ಚಿನ ಬಡ್ಡಿದರಗಳು, ವಸತಿ ಕೊರತೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿ ಸೃಷ್ಟಿಯಾದ ಜಾಗತಿಕ ಆರ್ಥಿಕ ಅನಿಶ್ಚಿತತೆ ಸಾರ್ವತ್ರಿಕ ಚುನಾವಣೆಯ ಪ್ರಚಾರದಲ್ಲಿ ಬಹು ಚರ್ಚಿತ ವಿಷಯವಾಗಿತ್ತು. ಸಮೀಕ್ಷೆಗಳು ಪೀಟರ್ ಡಟ್ಟನ್ ಅವರ ಸೋಲಿನ ಭವಿಷ್ಯ ನುಡಿದಿದ್ದವು.

ಅಭಿನಂದನೆ ಸಲ್ಲಿಸಿದ ಮೋದಿ

ಸತತ 2ನೇ ಬಾರಿಗೆ ಜಯಗಳಿಸಿದ ಆಂಥೋನಿ ಅಲ್ಬನೀಸ್‌ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. "ಆಸ್ಟ್ರೇಲಿಯಾದ ಪ್ರಧಾನಿಯಾಗಿ ಅಲ್ಬನೀಸ್‌ ಅದ್ಭುತ ಗೆಲುವು ಸಾಧಿಸಿದ್ದಾರೆ. ಅವರ ಮರು ಆಯ್ಕೆಗಾಗಿ ಅಭಿನಂದನೆಗಳು. ಈ ಬಲವಾದ ಜನಾದೇಶವು ನಿಮ್ಮ ನಾಯಕತ್ವದ ಮೇಲೆ ಆಸ್ಟ್ರೇಲಿಯಾದ ಜನರು ಇಟ್ಟ ನಿರಂತರ ನಂಬಿಕೆಯನ್ನು ಸೂಚಿಸುತ್ತದೆ" ಎಂದು ಮೋದಿ ಹೇಳಿದ್ದಾರೆ.

"ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಉತ್ತಮಗೊಳಿಸಲು ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ" ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.