Cat Island: ಮನುಷ್ಯರಿಗಿಂತಲೂ ಬೆಕ್ಕುಗಳೇ ಹೆಚ್ಚು ಈ ದ್ವೀಪದಲ್ಲಿ! ಎಲ್ಲಿದೆ ಇದು?
Aoshima: ವಿಶಿಷ್ಟವಾದ ಸ್ಥಳಕ್ಕೆ ಭೇಟಿ ನೀಡುವ ಆಸೆ ಯಾರಿಗಿರೋದಿಲ್ಲ ಹೇಳಿ. ಅಂತಹ ಪ್ರದೇಶಕ್ಕಾಗಿ ನೀವು ಹುಡುಕಾಡುತ್ತಿದ್ದರೆ ದಕ್ಷಿಣ ಜಪಾನ್ನ ಅಯೋಶಿಮಾ (Aoshima) ದ್ವೀಪಕ್ಕೆ ತಪ್ಪದೇ ಭೇಟಿ ನೀಡಿ. ಇಲ್ಲಿ ಮನುಷ್ಯರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಬೆಕ್ಕುಗಳನ್ನು ಕಾಣ ಸಿಗುತ್ತವೆಂದರೆ ಎನ್ನುವುದು ವಿಶೇಷ. ಇದೇ ಕಾರಣಕ್ಕೆ ಈ ದ್ವೀಪವನ್ನು ಬೆಕ್ಕಿನ ದ್ವೀಪ (Cat Island) ಎಂದು ಕರೆಯಲಾಗುತ್ತದೆ.



ಪ್ರಾಣಿ ಪ್ರಿಯರ ನೆಚ್ಚಿನ ತಾಣ
ಟೋಕಿಯೊ: ಸಾಮಾನ್ಯವಾಗಿ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ದೇಶ ವಿದೇಶಗಳ ಪ್ರವಾಸಿ ತಾಣಗಳಿಗೆ ಭೇಟಿನೀಡುತ್ತೇವೆ. ಆದರೆ ಈ ದೇಶದಲ್ಲಿರುವ ದ್ವೀಪಕ್ಕೆ ಅಲ್ಲಿ ಕಾಣಸಿಗುವ ಬೆಕ್ಕುಗಳನ್ನು ನೋಡುವ ಸಲುವಾಗಿಯೇ ಪ್ರವಾಸಿಗರು ಭೇಟಿ ನೀಡುತ್ತಾರೆಂದರೆ ನಂಬಲೇಬೇಕು. ಮನುಷ್ಯರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬೆಕ್ಕುಗಳು ಕಾಣಸಿಗುತ್ತಿದ್ದು, ಈ ಕ್ಯಾಟ್ ಲ್ಯಾಂಡ್ ಪ್ರಾಣಿ ಪ್ರಿಯರಿಗಂತೂ ಮೆಚ್ಚುಗೆಯ ತಾಣವಾಗಲಿದೆ.

ಬೆಕ್ಕುಗಳ ದ್ವೀಪವಿರುವುದೆಲ್ಲಿ?
ದಕ್ಷಿಣ ಜಪಾನ್ನ ಎಹೈಮ್ ಪ್ರಿಫೆಕ್ಚರ್ನಲ್ಲಿರುವ ಅಯೋಶಿಮಾ ದ್ವೀಪ, ಒಂದು ಶಾಂತ ಮೀನುಗಾರಿಕಾ ಗ್ರಾಮವಾಗಿದ್ದು, ಇದು ಬೆಕ್ಕು ಪ್ರಿಯರಿಗೆ ನೆಚ್ಚಿನ ಸ್ಥಳವಾಗಿದೆ. 1.60 ಕಿ.ಮೀ. ವ್ಯಾಪಿಸಿಕೊಂಡಿರುವ ಈ ದ್ವೀಪದಲ್ಲಿ ಹೋಟೆಲ್ಗಳಾಗಿ ಅಥವಾ ರೆಸ್ಟೋರೆಂಟ್ಗಳೂ ಸಹ ಕಾಣಸಿಗುವುದಿಲ್ಲ. ಆದರೂ ಪ್ರವಾಸಿಗರು ದ್ವೀಪದ ಸೌಂದರ್ಯ ಮತ್ತು ಬೆಕ್ಕುಗಳನ್ನು ನೋಡಲು ಇಲ್ಲಿಗೆ ಬರುತ್ತಾರೆ.

ಅಯೋಶಿಮಾ ದ್ವೀಪದ ಇತಿಹಾಸ
1940ರ ದಶಕದಲ್ಲಿ, ಅಯೋಶಿಮಾ ಸುಮಾರು 900 ಜನರಿಗೆ ನೆಲೆಯಾಗಿತ್ತು. ಅವರಲ್ಲಿ ಹಲವರು ಮೀನುಗಾರಿಕೆಯನ್ನು ಅವಲಂಬಿಸಿದ್ದರು. ಆದರೆ ದೋಣಿಗಳು ಮತ್ತು ಬಂದರುಗಳಲ್ಲಿ ಹೆಚ್ಚುತ್ತಿರುವ ಕೆಲವು ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಬೆಕ್ಕುಗಳನ್ನು ಇಲ್ಲಿಗೆ ತಂದುಕೊಳ್ಳಲಾಯಿತು. ಕಾಲಾನಂತರದಲ್ಲಿ, ದ್ವೀಪದಲ್ಲಿ ಜನಸಂಖ್ಯೆಗಿಂತಲೂ ಹೆಚ್ಚಿಗೆ ಬೆಕ್ಕುಗಳ ಸಂಖ್ಯೆ ಕಂಡು ಬಂತು. ಇಂದು ದ್ವೀಪದಲ್ಲಿ ಕೆಲವೇ ವೃದ್ಧ ನಿವಾಸಿಗಳು ವಾಸಿಸುತ್ತಿದ್ದಾರೆ.

ಬೆಕ್ಕುಗಳ ಸಂಖ್ಯೆ ಏರಿಕೆಯಾಗಲು ಕಾಣವೇನು?
ಅಯೋಶಿಮಾ ದ್ವೀಪದಲ್ಲಿ ನೈಸರ್ಗಿಕ ಪರಭಕ್ಷಕಗಳು ಕಡಿಮೆ ಇದ್ದು, ಮಾನವ ಹಸ್ತಕ್ಷೇಪವು ಅತ್ಯಲ್ಪವಾಗಿರುವುದರಿಂದ ಇಲ್ಲಿ ಬೆಕ್ಕುಗಳ ಸಂಖ್ಯೆ ಏರಿಕೆಯಾಗುತ್ತಲೇ ಹೋಗಿದೆ. ಮಾಧ್ಯಮ ವರದಿಗಳ ಪ್ರಕಾರ, ಪ್ರಸ್ತುತ ದ್ವೀಪದಲ್ಲಿ ಹತ್ತಕ್ಕಿಂತ ಕಡಿಮೆ ಜನರು ವಾಸಿಸುತ್ತಿದ್ದಾರೆ ಮತ್ತು 100ಕ್ಕೂ ಹೆಚ್ಚು ಬೆಕ್ಕುಗಳು ಇಲ್ಲಿ ವಾಸವಾಗಿವೆಯಂತೆ.

ಬೆಕ್ಕು ಪ್ರಿಯರಾಗಿದ್ದರೆ ತಪ್ಪದೇ ಭೇಟಿ ನೀಡಿ
ನೀವು ಬೆಕ್ಕು ಪ್ರಿಯರಾಗಿದ್ದರೆ, ಈ ದ್ವೀಪಕ್ಕೆ ಭೇಟಿ ನೀಡಲೇ ಬೇಕು. ಇಲ್ಲಿಗೆ ತಲುಪುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ವಿವರ. ನಾಗಹಾಮ ಬಂದರಿನಿಂದ ದೋಣಿಯ ಮೂಲಕ ಸುಮಾರು 30 ನಿಮಿಷಗಳ ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಆದರೆ ದಿನಕ್ಕೆ ಎರಡು ಬಾರಿ ಮಾತ್ರ ಇಲ್ಲಿ ದೋಣಿ ಪ್ರಯಾಣ ಸೌಲಭ್ಯವಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.