Kheal Das Kohistani: ಪಾಕಿಸ್ತಾನದಲ್ಲಿ ಹಿಂದೂ ಸಚಿವ ಖೇಲ್ ದಾಸ್ ಕೊಹಿಸ್ತಾನಿ ಮೇಲೆ ದಾಳಿ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸರ್ಕಾರದ ನೀರಾವರಿ ಕಾಲುವೆ ಯೋಜನೆಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರು ಹಿಂದೂ ಸಚಿವ ಖೇಲ್ ದಾಸ್ ಕೊಹಿಸ್ತಾನಿ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆಗೆ ಆಘಾತ ವ್ಯಕ್ತಪಡಿಸಿದ ಪ್ರಧಾನಿ ಶೆಹಬಾಜ್ ಶರೀಫ್ ಈ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.

ಖೇಲ್ ದಾಸ್ ಕೊಹಿಸ್ತಾನಿ.

ಇಸ್ಲಾಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸರ್ಕಾರದ ನೀರಾವರಿ ಕಾಲುವೆ ಯೋಜನೆಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರು ಹಿಂದೂ ಸಚಿವ ಖೇಲ್ ದಾಸ್ ಕೊಹಿಸ್ತಾನಿ (Kheal Das Kohistani) ಮೇಲೆ ದಾಳಿ ನಡೆಸಿದ್ದಾರೆ. ಧಾರ್ಮಿಕ ವ್ಯವಹಾರಗಳ ರಾಜ್ಯ ಸಚಿವ ಖೇಲ್ ದಾಸ್ ಕೊಹಿಸ್ತಾನಿ ವಾಹನದಲ್ಲಿ ತೆರಳುತ್ತಿದ್ದಾಗ ಪ್ರತಿಭಟನಾಕಾರರು ಅವರ ಮೇಲೆ ಆಲೂಗಡ್ಡೆ ಮತ್ತು ಟೊಮೆಟೊಗಳನ್ನು ಎಸೆದ್ದಾರೆ ಎಂದು ಮೂಲಗಳು ತಿಳಿಸಿವೆ. ಅದೃಷ್ಟವಶಾತ್ ಖೇಲ್ ದಾಸ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif) ಈ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.
ಪ್ರಧಾನಿ ಶೆಹಬಾಜ್ ಅವರು ಕೊಹಿಸ್ತಾನಿ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸಿ ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. "ಜನಪ್ರತಿನಿಧಿಗಳ ಮೇಲಿನ ದಾಳಿ ಖಂಡನೀಯ. ಘಟನೆಯಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆ ನೀಡಲಾಗುವುದುʼʼ ಎಂದು ಅವರು ಹೇಳಿದ್ದಾರೆ.
ಖೇಲ್ ದಾಸ್ ಕೊಹಿಸ್ತಾನಿ ಅವರ ವಾಹನದ ಮೇಲೆ ನಡೆದ ದಾಳಿ:
وفاقی وزیر @KesooMalKheealD پر حملے کی شدید ترین مذمت کرتے ہیں۔ pic.twitter.com/SdA25fqRyx
— Resham Saleem🇵🇰🐅 (@ReshamSaleem3) April 20, 2025
ಈ ಸುದ್ದಿಯನ್ನೂ ಓದಿ: Asim Munir: ಕಾಶ್ಮೀರವನ್ನು ಪಾಕಿಸ್ತಾನದಿಂದ ದೂರ ಮಾಡಲು ಸಾಧ್ಯವಿಲ್ಲ ; ವಿವಾದದ ಕಿಡಿ ಹೊತ್ತಿಸಿದ ಪಾಕ್ ಸೇನಾ ಮುಖ್ಯಸ್ಥ
ಕೊಹಿಸ್ತಾನಿ ಆಡಳಿತರೂಢ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (Pakistan Muslim League-Nawaz (PML-N) ಸದಸ್ಯ. ಪ್ರತಿಭಟನಾಕಾರರು ಪಕ್ಷದ ಫೆಡರಲ್ ಸರ್ಕಾರದ ವಿರುದ್ಧ ಹೋರಾಟ ಆಯೋಜಿಸಿದ್ದ ವೇಳೆ ಈ ಘಟನೆ ನಡೆದಿದೆ.
ಫೆಡರಲ್ ಸರ್ಕಾರದ ಮತ್ತೋರ್ವ ಸಚಿವ ಅಟ್ಟಾ ತರಾರ್ ಕೂಡ ಈ ಘಟನೆಯನ್ನು ಖಂಡಿಸಿದ್ದು, ಸಿಂಧ್ ಇನ್ಸ್‌ಪೆಕ್ಟರ್ ಜನರಲ್ ಪೊಲೀಸ್ (IGP) ಗುಲಾಮ್ ನಬಿ ಮೆಮನ್ ಅವರಿಂದ ಘಟನೆಯ ವಿವರಗಳನ್ನು ಮತ್ತು ಫೆಡರಲ್ ಆಂತರಿಕ ಕಾರ್ಯದರ್ಶಿಯಿಂದ ವರದಿಯನ್ನು ಕೋರಿದ್ದಾರೆ.
ಸಿಂಧ್ ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಶಾ ಕೂಡ ಈ ಕೃತ್ಯವನ್ನು ಬಲವಾಗಿ ಖಂಡಿಸಿದ್ದು, ಕಾನೂನನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಅವರು ಹೇಳಿದ್ದಾರೆ. ದಾಳಿಯಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ವರದಿ ಸಲ್ಲಿಸುವಂತೆ ಅವರು ಹೈದರಾಬಾದ್ ಪ್ರದೇಶದ ಪೊಲೀಸ್ ಉಪ ಇನ್ಸ್‌ಪೆಕ್ಟರ್ ಜನರಲ್‌ಗೆ ನಿರ್ದೇಶನ ನೀಡಿದ್ದಾರೆ.
ಯಾರು ಈ ಕೊಹಿಸ್ತಾನಿ?
ಕೊಹಿಸ್ತಾನಿ ಅವರು ಸಿಂಧ್‌ನ ಜಮ್ಶೊರೊ ಜಿಲ್ಲೆಯವರಾಗಿದ್ದು, ಪಿಎಂಎಲ್-ಎನ್ ಟಿಕೆಟ್‌ನಲ್ಲಿ 2018ರಲ್ಲಿ ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಪೂರ್ಣ 5 ವರ್ಷಗಳ ಸೇವೆ ಸಲ್ಲಿಸಿದ ನಂತರ ಅವರು 2024ರಲ್ಲಿ ಮರು ಆಯ್ಕೆಯಾದರು ಮತ್ತು ರಾಜ್ಯದ ಸಚಿವರಾಗಿ ಬಡ್ತಿ ಪಡೆದರು.
ಏನಿದು ವಿವಾದ?
ಗ್ರೀನ್ ಪಾಕಿಸ್ತಾನ್ ಇನಿಶಿಯೇಟಿವ್ ಯೋಜನೆ ಅಡಿಯಲ್ಲಿ ಚೋಲಿಸ್ತಾನ್ ಪ್ರದೇಶದ ಭೂಮಿಗೆ ನೀರಾವರಿ ಒದಗಿಸಲು ಪಂಜಾಬ್ ಪ್ರಾಂತ್ಯದಲ್ಲಿ 6 ಕಾಲುವೆಗಳನ್ನು ನಿರ್ಮಿಸುವ ಫೆಡರಲ್ ಸರ್ಕಾರ ಮುಂದಾಗಿದೆ. ಆದರೆ ಸಿಂಧ್‌ನ ವಿವಿಧ ಪಕ್ಷಗಳು ಮತ್ತು ರಾಷ್ಟ್ರೀಯವಾದಿ ಗುಂಪುಗಳು ಕಾಲುವೆ ನಿರ್ಮಾಣದಿಂದ ನೀರಿನ ಹರಿವು ಕಡಿಮೆಯಾಗುತ್ತದೆ ಮತ್ತು ಪ್ರಾಂತ್ಯದ ನೀರಾವರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಆರೋಪಿಸಿ ಪ್ರತಿಭಟನೆ ನಡೆಸುತ್ತಿವೆ. ದಾಳಿ ವೇಳೆ ಸಚಿವ ಖೇಲ್ ದಾಸ್ ಕೊಹಿಸ್ತಾನಿ ಪ್ರತಿಭಟನೆ ನಡೆಯುತ್ತಿದ್ದ ಪ್ರದೇಶದಲ್ಲಿ ಹಾದು ಹೋಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ.