Pope Francis Passes away: ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್ ವಿಧಿವಶ
Pope Francis: ನಿನ್ನೆಯಷ್ಟೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪೋಪ್ ಫ್ರಾನ್ಸಿಸ್ ಇಂದು ವಿಧಿವಶರಾಗಿದ್ದಾರೆ. ಈ ಬಗ್ಗೆ ವ್ಯಾಟಿಕನ್‌ನ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ವ್ಯಾಟಿಕನ್‌ನಲ್ಲಿರುವ ತಮ್ಮ ಕಾಸಾ ಸ್ಯಾಂಟ ಮಾರ್ಥ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 88ವರ್ಷ ವಯಸ್ಸಾಗಿತ್ತು ಎಂದಿದ್ದಾರೆ.


ವ್ಯಾಟಿಕನ್ ಸಿಟಿ: ವಿಶ್ವಾದ್ಯಂತ ಕ್ಯಾಥೋಲಿಕ್ ಚರ್ಚ್‌ಗಳ ಮುಖ್ಯಸ್ಥ, ಧರ್ಮಗುರು ಪೋಪ್ ಫ್ರಾನ್ಸಿಸ್(Pope Francis) ಇಂದು ವಿಧಿವಶರಾಗದ್ದಾರೆ. ಈ ಬಗ್ಗೆ ವ್ಯಾಟಿಕನ್‌ನ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ವ್ಯಾಟಿಕನ್‌ನಲ್ಲಿರುವ ತಮ್ಮ ಕಾಸಾ ಸ್ಯಾಂಟ ಮಾರ್ಥ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 88ವರ್ಷ ವಯಸ್ಸಾಗಿತ್ತು ಎಂದಿದ್ದಾರೆ. ಇನ್ನು ವಿಧಿವಶರಾಗುವ ಕೆಲವೇ ಕೆಲವು ಗಂಟೆಗಳಿಗೆ ಮುನ್ನ ಅವರು ಈಸ್ಟರ್ ಶುಭಾಶಯ ಕೋರಿದ್ದರು. ಪೋಪ್ ಫ್ರಾನ್ಸಿಸ್ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದರು. ನಿನ್ನೆಯಷ್ಟೇ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು.
ಅರ್ಜೆಂಟೀನಾದಲ್ಲಿ ಜಾರ್ಜ್ ಮಾರಿಯೋ ಬರ್ಗೊಗ್ಲಿಯೊ ಎಂದು ಜನಿಸಿದ ಫ್ರಾನ್ಸಿಸ್, ಅಮೆರಿಕ ಮೂಲದ ಮೊದಲ ಪೋಪ್ ಆಗಿದ್ದರು. ಅವರು ಮಾರ್ಚ್ 13, 2013 ರಂದು ತಮ್ಮ 76 ನೇ ವಯಸ್ಸಿನಲ್ಲಿ ಪೋಪ್ ಆಗಿ ಆಯ್ಕೆಯಾದರು. ಇವರು ಬಡವರ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿದ್ದ ಜನಮನ್ನಣೆ ಗಳಿಸಿದ್ದ ಪೋಪ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಆದರೆ ಅವರ ಪೋಪ್ ಅಧಿಕಾರ ಮುಂದುವರೆದಂತೆ, ಅವರು ಸಂಪ್ರದಾಯವಾದಿಗಳಿಂದ ತೀವ್ರ ಟೀಕೆಗಳನ್ನು ಎದುರಿಸಿದ್ದರು. ಅವರು ಪಾಲಿಸಬೇಕಾದ ಸಂಪ್ರದಾಯಗಳನ್ನು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಮತ್ತೊಂದೆಡೆ 2,000 ವರ್ಷಗಳಷ್ಟು ಹಳೆಯದಾದ ಚರ್ಚ್ ಅನ್ನು ಮರುರೂಪಿಸಲು ಅವರು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿತ್ತು ಎಂದು ಭಾವಿಸಿದ ಪ್ರಗತಿಪರರ ಕೋಪಕ್ಕೂ ಗುರಿಯಾಗಿದ್ದರು. ಅವರು ಆಂತರಿಕ ಭಿನ್ನಾಭಿಪ್ರಾಯದೊಂದಿಗೆ ಹೋರಾಟ ನಡುವೆಯೇ ಫ್ರಾನ್ಸಿಸ್ ಜಾಗತಿಕ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದವರು. ವಲಸಿಗ ಪರ ಧ್ವನಿ, ಅಂತರ್ಧರ್ಮೀಯ ಸಂವಾದ ಮತ್ತು ದಣಿವರಿಯಿಲ್ಲದೆ ಶಾಂತಿಯನ್ನು ಉತ್ತೇಜಿಸುವ ಮೂಲಕ ಅವರು ಅಪಾರ ಜನಸಮೂಹವನ್ನು ಸೆಳೆಯುತ್ತಿದ್ದರು.
ತಮ್ಮ ಅಧಿಕಾರಾವಧಿಯಲ್ಲಿ, ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್‌ನಲ್ಲಿ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಮತ್ತು ಪಾದ್ರಿಗಳ ನಿಂದನೆಯನ್ನು ಪರಿಹರಿಸುವ ಪ್ರಯತ್ನಗಳನ್ನು ಒಳಗೊಂಡಂತೆ ಗಮನಾರ್ಹ ಸುಧಾರಣೆಗಳನ್ನು ಕೈಗೊಂಡರು. ಪರಿಸರ ಕಾಳಜಿಯನ್ನೂ ಹೊಂದಿದ್ದ ಅವರು,ಲೌಡಾಟೊ ಸಿ' ಎಂಬ ವಿಶ್ವಕೋಶದ ಮೂಲಕ ವಿಶೇಷವಾಗಿ ಹವಾಮಾನ ಬದಲಾವಣೆಯ ಮೇಲೆ ಜಾಗತಿಕ ಕ್ರಮಕ್ಕಾಗಿ ಕರೆ ನೀಡಿದ್ದರು.
ಇತ್ತೀಚಿನ ವರ್ಷಗಳಲ್ಲಿ ಪೋಪ್ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಈ ವರ್ಷದ ಆರಂಭದಲ್ಲಿ ಡಬಲ್ ನ್ಯುಮೋನಿಯಾ ಸೇರಿದಂತೆ ಉಸಿರಾಟದ ಸಮಸ್ಯೆಗಳಿಂದಾಗಿ ಅವರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಅನಾರೋಗ್ಯದ ಹೊರತಾಗಿಯೂ, ಅವರು ತಮ್ಮ ಕರ್ತವ್ಯಗಳಲ್ಲಿ ಸಕ್ರಿಯರಾಗಿದ್ದರು, ಆಗಾಗ್ಗೆ ಸಾವು ಮತ್ತು ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಅಗತ್ಯತೆ ಬಗ್ಗೆ ಮಾತನಾಡುತ್ತಿದ್ದರು.