Pahalgam Terror Attack: ಭಾರತದಲ್ಲಿ ನೆಲೆಯಾಗುವ ಕನಸಿನೊಂದಿಗೆ ಬಂದಿದ್ದ ಪಾಕ್ ಹಿಂದೂ ಕುಟುಂಬಗಳು ಈಗ ಅತಂತ್ರ
ಪಹಲ್ಗಾಮ್‌ನಲ್ಲಿ (Pahalgam Terror Attack) ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಬಳಿಕ ಕೇಂದ್ರ ಸರ್ಕಾರ ಗುರುವಾರ ಪಾಕಿಸ್ತಾನಿ ಪ್ರಜೆಗಳಿಗೆ ಎಲ್ಲಾ ರೀತಿಯ ವೀಸಾಗಳನ್ನು ರದ್ದು ಮಾಡಿ ದೇಶ ತೊರೆಯುವಂತೆ ಆದೇಶಿಸಿತ್ತು. ಮಾತ್ರವಲ್ಲದೆ ಅವರಿಗೆ ದೇಶ ತೊರೆಯಲು 48 ಗಂಟೆಗಳ ಕಾಲಾವಕಾಶ ನೀಡಿತ್ತು. ಆದರೆ ಕೆಲವು ದಿನಗಳ ಹಿಂದೆಯಷ್ಟೇ ದೆಹಲಿಗೆ ಬಂದು ವಾಸವಾಗಿರುವ ಅನೇಕ ಪಾಕಿಸ್ತಾನಿ ಹಿಂದೂಗಳ ಭವಿಷ್ಯ ಈಗ ಅತಂತ್ರವಾಗಿದೆ.


ನವದೆಹಲಿ: ಪಹಲ್ಗಾಮ್ ದಾಳಿಯ (Pahalgam Terror Attack) ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನಿಯರಿಗೆ (Pakistan) ಭಾರತ ತೊರೆಯಲು 48 ಗಂಟೆಗಳ ಕಾಲಾವಕಾಶ ನೀಡಿದೆ. ಇದರಿಂದಾಗಿ ಇತ್ತೀಚೆಗೆ ಭಾರತದಲ್ಲಿ ನೆಲೆಯಾಗುವ ಕನಸಿನೊಂದಿಗೆ ಬಂದಿರುವ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸತ್ರಮ್ ಕುಮಾರ್ ಮತ್ತು ಅವರ ಕುಟುಂಬದ ಒಂಬತ್ತು ಮಂದಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್‌ನಿಂದ 20 ದಿನಗಳ ಹಿಂದೆಯಷ್ಟೇ ದೆಹಲಿಗೆ ಆಗಮಿಸಿತ್ತು. ಕಳೆದ ಮೂರು ವರ್ಷಗಳಿಂದ ಸತ್ರಮ್ ಕುಮಾರ್ ಕುಟುಂಬ ಭಾರತಕ್ಕೆ ಬರಲು ಕಾಯುತ್ತಿತ್ತು. ಅಂತಿಮವಾಗಿ ಅದು ಈ ವರ್ಷ ಈಡೇರಿದ್ದರೂ ಈಗ ಅವರ ಭವಿಷ್ಯ ಅತಂತ್ರವಾಗಿದೆ. ಕಳೆದ ತಿಂಗಳು 45 ದಿನಗಳ ಸಂದರ್ಶಕ ವೀಸಾ ಪಡೆದಿರುವ ಸತ್ರಮ್ ಕುಮಾರ್ ತಮ್ಮ ಕುಟುಂಬದೊಂದಿಗೆ 20 ದಿನಗಳ ಹಿಂದೆಯಷ್ಟೇ ಭಾರತಕ್ಕೆ ಬಂದಿದ್ದಾರೆ.
ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಬಳಿಕ ಕೇಂದ್ರ ಸರ್ಕಾರ ಗುರುವಾರ ಪಾಕಿಸ್ತಾನಿ ಪ್ರಜೆಗಳಿಗೆ ಎಲ್ಲಾ ರೀತಿಯ ವೀಸಾಗಳನ್ನು ಸ್ಥಗಿತಗೊಳಿಸಿ ಆದೇಶಿಸಿತ್ತು. ಮಾತ್ರವಲ್ಲದೆ ಅವರಿಗೆ ದೇಶ ತೊರೆಯಲು 48 ಗಂಟೆಗಳ ಕಾಲಾವಕಾಶ ನೀಡಿತ್ತು. ಅನಂತರ ವಿದೇಶಾಂಗ ಸಚಿವಾಲಯವು ಹಿಂದೂ ಪಾಕಿಸ್ತಾನಿ ಪ್ರಜೆಗಳಿಗೆ ಈಗಾಗಲೇ ನೀಡಲಾದ ದೀರ್ಘಾವಧಿಯ ವೀಸಾಗಳು ಮಾನ್ಯವಾಗಿರುತ್ತವೆ ಎಂದು ಸ್ಪಷ್ಟಪಡಿಸಿತು. ಆದರೆ ದೆಹಲಿಯ ಮಜ್ನು ಕಾ ತಿಲಾ ಮತ್ತು ಸಿಗ್ನೇಚರ್ ಬ್ರಿಡ್ಜ್ ಪ್ರದೇಶಗಳಿಗೆ ಕೆಲವು ದಿನಗಳ ಹಿಂದೆಯಷ್ಟೇ ಬಂದಿರುವ ಸತ್ರಮ್ ಕುಮಾರ್ ಅವರಂತಹ ಅನೇಕ ಪಾಕಿಸ್ತಾನಿ ಹಿಂದೂಗಳ ಭವಿಷ್ಯ ಈಗ ಅತಂತ್ರವಾಗಿದೆ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿರುವ ಸತ್ರಮ್ ಕುಮಾರ್, ನಮ್ಮ ನೆರೆಹೊರೆಯವರು ಮತ್ತು ಸಂಬಂಧಿಕರು ಕೆಲವು ವರ್ಷಗಳಿಂದ ಇಲ್ಲಿಗೆ ಬಂದು ನೆಲೆಸುತ್ತಿದ್ದಾರೆ. ನಾವು ಪಾಕಿಸ್ತಾನದಲ್ಲಿ ಅಸುರಕ್ಷಿತರಾಗಿದ್ದೇವೆ. ಅದಕ್ಕಾಗಿ ವೀಸಾ ಪಡೆಯಲು ಮತ್ತು ಕುಟುಂಬದೊಂದಿಗೆ ಇಲ್ಲಿಗೆ ಬಂದು ವಾಸವಾಗಲು ಹಲವು ವರ್ಷಗಳಿಂದ ದುಡಿದು ಹಣ ಕೂಡಿಟ್ಟಿದ್ದೆವು. ಈಗ ನಾವು ಇಲ್ಲಿ ಇರಬಹುದೇ ಅಥವಾ ನಮ್ಮನ್ನು ದೇಶ ಬಿಡಲು ಹೇಳಲಾಗುತ್ತದೆಯೋ ಗೊತ್ತಿಲ್ಲ. ಹೆಂಡತಿ, ಸೊಸೆಯಂದಿರು ಮತ್ತು ಮಕ್ಕಳು ಬಂದಿದ್ದಾರೆ ಮತ್ತು ಎಲ್ಲರೂ ಭಯಭೀತರಾಗಿದ್ದಾರೆ ಎಂದು ಹೇಳಿದರು.
ಪೂರ್ವ ದೆಹಲಿಯ ಸಿಗ್ನೇಚರ್ ಸೇತುವೆ ಬಳಿ ತಾತ್ಕಾಲಿಕ ಶಿಬಿರದಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿ ಹೇಗೆ ಹಣಗಳಿಸುವುದು, ಕುಟುಂಬವನ್ನು ಪೋಷಿಸುವುದು ಎಂಬುದು ಗೊತ್ತಿಲ್ಲದಿದ್ದರೂ ಸದ್ಯ ನಾವಿಲ್ಲಿ ಸಂತೋಷವಾಗಿದ್ದೇವೆ ಮತ್ತು ಸುರಕ್ಷಿತ ಭಾವನೆ ಹೊಂದಿದ್ದೇವೆ ಎಂದು ಕುಮಾರ್ ತಿಳಿಸಿದರು. ಪಾಕಿಸ್ತಾನದಿಂದ ಕಳೆದ ಕೆಲವು ತಿಂಗಳಲ್ಲಿ ಅನೇಕ ಕುಟುಂಬಗಳು ದೆಹಲಿಗೆ ಬಂದಿವೆ. ಇವರು ಇನ್ನೂ ಇಲ್ಲಿನ ಪೌರತ್ವ ಅಥವಾ ಗುರುತಿನ ಪುರಾವೆಯನ್ನು ಪಡೆದಿಲ್ಲ. ಮಜ್ನು ಕಾ ತಿಲಾ ಬಳಿ ಸುಮಾರು 900 ಮತ್ತು ಸಿಗ್ನೇಚರ್ ಸೇತುವೆ ಬಳಿ ಸುಮಾರು 700 ಮಂದಿ ವಾಸಿಸುತ್ತಿದ್ದಾರೆ. ಇದರಲ್ಲಿ ಕೇವಲ 300 ಮಂದಿಗೆ ಮಾತ್ರ ಪೌರತ್ವ ಪ್ರಮಾಣಪತ್ರಗಳು ಸಿಕ್ಕಿವೆ.
2019ರಲ್ಲಿ ಭಾರತ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಘೋಷಿಸಿದ ಅನಂತರ ತಮ್ಮ ಮೊಮ್ಮಗಳಿಗೆ "ನಾಗರಿಕ್ತ" ಎಂದು ಹೆಸರಿಟ್ಟ ಪಾಕಿಸ್ತಾನಿ ಹಿಂದೂ ದಯಾಳ್ ದಾಸ್ ಮಾತನಾಡಿ, ಕಳೆದ 15 ವರ್ಷಗಳಿಂದ ಸಾಕಷ್ಟು ಜನರು ಪಾಕಿಸ್ತಾನದಿಂದ ಇಲ್ಲಿಗೆ ನೆಲೆಯಾಗುವ ಉದ್ದೇಶದಿಂದ ಬರುತ್ತಿದ್ದಾರೆ. ಪ್ರತಿ ತಿಂಗಳು ಕನಿಷ್ಠ ಒಂದು ಕುಟುಂಬ ಇಲ್ಲಿಗೆ ಬರುತ್ತಿದೆ. ಇನ್ನು ಕೆಲವು ಕುಟುಂಬಗಳು ವೀಸಾ ಅನುಮೋದನೆ ಪಡೆದಿವೆ. ಆದರೆ ಹೊಸ ನಿರ್ಬಂಧಗಳಿಂದಾಗಿ ಇವರಿಗೆ ಬರುವುದು ಸಾಧ್ಯವಿಲ್ಲ ಎಂದು ಹೇಳಿದರು.
ಇಲ್ಲಿನ ಶಿಬಿರಗಳಲ್ಲಿ ಕುಟುಂಬಗಳು ಸುರಕ್ಷಿತವಾಗಿವೆ. ಸ್ಥಳೀಯ ಪೊಲೀಸರು ಭರವಸೆ ಎಲ್ಲರಿಗೂ ನೀಡಿದ್ದಾರೆ. ಇಲ್ಲಿ ವಾಸಿಸುವ ಜನರು ಮತ್ತು ಕುಟುಂಬಗಳ ಸಂಖ್ಯೆಯ ವಿವರಗಳನ್ನು ಶನಿವಾರದೊಳಗೆ ಸಲ್ಲಿಸುವಂತೆ ತಿಳಿಸಿದ್ದಾರೆ ಎಂದು ದಾಸ್ ತಿಳಿಸಿದರು. ಈ ನಡುವೆ ಸುಮಾರು ಒಂಬತ್ತು ತಿಂಗಳ ಹಿಂದೆ ಪಾಕಿಸ್ತಾನದಿಂದ ಭಾರತಕ್ಕೆ ಬಂದು ಹರಿಯಾಣದ ಹಿಸಾರ್‌ನಲ್ಲಿರುವ ಬಾಲ್ಸಮಂಡ್ ಗ್ರಾಮದಲ್ಲಿ ಅನಧಿಕೃತವಾಗಿ ನೆಲೆಯಾಗಿದ್ದ 15 ಜನರ ಕುಟುಂಬವನ್ನು ಮಜ್ನು ಕಾ ತಿಲಾ ಶಿಬಿರಕ್ಕೆ ಕಳುಹಿಸಲಾಗಿದೆ. ಭದ್ರತೆ ಕಾರಣಕ್ಕಾಗಿ ಅವರನ್ನು ಹರಿಯಾಣ ಪೊಲೀಸರು ದೆಹಲಿಗೆ ಕಳುಹಿಸಿದ್ದಾರೆ ಎಂದು ಬಾಲ್ಸಮಂಡ್ ಪೊಲೀಸ್ ಪೋಸ್ಟ್ ಇನ್‌ಚಾರ್ಜ್ ಶೇಶ್ ಕರಣ್ ತಿಳಿಸಿದ್ದಾರೆ.
ಪಾಕಿಸ್ತಾನಿ ಹಿಂದೂ ಸೋಭೋ ಮತ್ತು ಅವರ ಕುಟುಂಬದ 14 ಮಂದಿ 2024ರಲ್ಲಿ ಭಾರತಕ್ಕೆ ಬಂದಿದ್ದು, ಅವರ ವೀಸಾವನ್ನು ಒಮ್ಮೆ ನವೀಕರಿಸಲಾಯಿತು. ಈ ವರ್ಷದ ಜನವರಿಯಲ್ಲಿ ಪಾಕಿಸ್ತಾನಿ ರಾಯಭಾರಿ ಕಚೇರಿಯು ಅವರ ಅವಧಿ ಮುಗಿದ ಪಾಸ್‌ಪೋರ್ಟ್‌ಗಳನ್ನು ಮರು ವಿತರಿಸಿತು.
ಇದನ್ನೂ ಓದಿ: Viral Video: ಕೋಣೆಯಲ್ಲಿ ಪಟಾಕಿ ಸಿಡಿಸಿ ಫುಟ್ಬಾಲ್ ಆಡಿದ ಹುಡುಗರು; ಮುಂದೇನಾಯ್ತು ವಿಡಿಯೊ ನೋಡಿ
ನಾವಿಲ್ಲಿ ಬಾಡಿಗೆ ಭೂಮಿ ಪಡೆದು ಕೃಷಿ ಮಾಡಿದ್ದೇವೆ. ಪಾಕಿಸ್ತಾನದಿಂದ ಬಂದಿರುವುದರಿಂದ ಇಲ್ಲಿನ ಜನರಿಗೆ ನಮ್ಮ ಮೇಲೆ ವಿಶ್ವಾಸ ಬರಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಹಿಸಾರ್‌ನಿಂದ ಎಲ್ಲವನ್ನೂ ಬಿಟ್ಟು ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಎಷ್ಟು ಸಮಯ ಇರುತ್ತೇವೆ ಮತ್ತು ಏನು ಮಾಡುತ್ತೇವೆ ಗೊತ್ತಿಲ್ಲ ಎಂದು ಸೋಭೋ ಅವರ ಹಿರಿಯ ಮಗ ಕುನ್ವರ್ ಹೇಳಿದರು. ಇದೇ ರೀತಿ ಇನ್ನೂ ಅನೇಕ ಕುಟುಂಬಗಳು ಅತಂತ್ರವಾಗಿವೆ. ಮುಂದೇನು ಎಂದು ತಿಳಿಯದೆ ದೆಹಲಿ ಶಿಬಿರಗಳಲ್ಲಿ ಅನೇಕರು ಕಾಯುತ್ತಿದ್ದಾರೆ. ಇಲ್ಲಿ ನಾವು ಸುರಕ್ಷಿತವಾಗಿದ್ದೇವೆ. ಆದರೆ ಪಹಲ್ಗಾಮ್ ದಾಳಿಯಿಂದಾಗಿ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದೇವೆ ಎನ್ನುತ್ತಾರೆ.