India tour of England: ಕಾರ್ಯದೊತ್ತಡ ತಗ್ಗಿಸಲು ಬುಮ್ರಾ ಸೀಮಿತ ಪಂದ್ಯಕ್ಕೆ ಮಾತ್ರ ಲಭ್ಯ; ಖಚಿತಪಡಿಸಿದ ಅಗರ್ಕರ್
ಆಸ್ಟ್ರೇಲಿಯಾ ಪ್ರವಾಸದ 5 ಪಂದ್ಯಗಳಲ್ಲಿ ಆಡಿದ್ದ ಬುಮ್ರಾ ಅತಿಯಾದ ಕ್ರಿಕೆಟ್‌ನಿಂದ ಗಾಯಗೊಂಡಿದ್ದರು. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯರಾಗಿದ್ದರು. ಇನ್ನೊಮ್ಮೆ ಅವರು ಗಾಯಗೊಂಡರೆ ಅವರ ಕ್ರಿಕೆಟ್ ಭವಿಷ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಇದನ್ನು ಮನಗಂಡ ಬಿಸಿಸಿಐ ಇಂಗ್ಲೆಂಡ್ ಸರಣಿಯಲ್ಲಿ ಬುಮ್ರಾ ಕಾರ್ಯದೊತ್ತಡವನ್ನು ಕಡಿಮೆ ಮಾಡಲು ಗಟ್ಟಿ ನಿರ್ಧಾರ ಕೈಗೊಂಡಿದೆ.


ಮುಂಬಯಿ: ಜೂನ್-ಜುಲೈನಲ್ಲಿ ಇಂಗ್ಲೆಂಡ್ನಲ್ಲಿ(India tour of England) ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಸರಣಿ ಶನಿವಾರ ಬಿಸಿಸಿಐ 18 ಸದಸ್ಯರ ಯುವ ಭಾರತ(India Test Squad) ತಂಡವನ್ನು ಪ್ರಕಟಿಸಿದೆ. ಶುಭಮನ್ ಗಿಲ್ ನೂತನ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು, ರಿಷಭ್ ಪಂತ್ ತಂಡದ ಉಪನಾಯಕರಾಗಿದ್ದಾರೆ. ಕಾರ್ಯದೊತ್ತಡವನ್ನು ತಗ್ಗಿಸುವ ಸಲುವಾಗಿ ಇಂಗ್ಲೆಂಡ್ ಪ್ರವಾಸದ ಎಲ್ಲಾ ಐದು ಟೆಸ್ಟ್‌ಗಳಿಗೂ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ(Jasprit Bumrah) ಲಭ್ಯವಿರುವುದಿಲ್ಲ ಎಂದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್(Ajit Agarkar) ತಿಳಿಸಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿಯ ಫಿಸಿಯೋಗಳು ಮತ್ತು ವೈದ್ಯರ ಸಲಹೆಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಗರ್ಕರ್ ತಿಳಿಸಿದರು.
ಆಸ್ಟ್ರೇಲಿಯಾ ಪ್ರವಾಸದ 5 ಪಂದ್ಯಗಳಲ್ಲಿ ಆಡಿದ್ದ ಬುಮ್ರಾ ಅತಿಯಾದ ಕ್ರಿಕೆಟ್‌ನಿಂದ ಗಾಯಗೊಂಡಿದ್ದರು. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಅಲಭ್ಯರಾಗಿದ್ದರು. ಇನ್ನೊಮ್ಮೆ ಅವರು ಗಾಯಗೊಂಡರೆ ಅವರ ಕ್ರಿಕೆಟ್ ಭವಿಷ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಇದನ್ನು ಮನಗಂಡ ಬಿಸಿಸಿಐ ಇಂಗ್ಲೆಂಡ್ ಸರಣಿಯಲ್ಲಿ ಬುಮ್ರಾ ಕಾರ್ಯದೊತ್ತಡವನ್ನು ಕಡಿಮೆ ಮಾಡಲು ಗಟ್ಟಿ ನಿರ್ಧಾರ ಕೈಗೊಂಡಿದೆ.
"ಬುಮ್ರಾ ಇಂಗ್ಲೆಂಡ್ನಲ್ಲಿ ಪ್ರಮುಖ 3 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡಬಹುದು. ಅದು ಕೂಡ ಅವರ ದೇಹ ಹೇಗೆ ಕೆಲಸದ ಹೊರೆಯನ್ನು ನಿಭಾಯಿಸುತ್ತದೆ ಎನ್ನುವುದರ ಮೇಲೆ ಅವಲಂಬಿಸಿದೆ" ಎಂದು ಅಗರ್ಕರ್ ತಿಳಿಸಿದರು.
ಭಾರತದ ಇಂಗ್ಲೆಂಡ್ ಪ್ರವಾಸವು ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆರಂಭಿಕ ಟೆಸ್ಟ್‌ನೊಂದಿಗೆ ಆರಂಭವಾಗಲಿದೆ. ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್ ಟ್ರಾಫರ್ಡ್ ಮತ್ತು ಕೆನ್ನಿಂಗ್ಟನ್ ಓವಲ್ ಉಳಿದ ನಾಲ್ಕು ಟೆಸ್ಟ್‌ಗಳನ್ನು ಆಯೋಜಿಸಲಿವೆ. ನಿರೀಕ್ಷೆಯಂತೆ ಕನ್ನಡಿಗರಾದ ಕೆ.ಎಲ್ ರಾಹುಲ್, ಕರುಣ್ ನಾಯರ್ ಮತ್ತು ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಇದನ್ನೂ ಓದಿ India's Test Squad: ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ, ಶುಭಮನ್ ಗಿಲ್ ನೂತನ ನಾಯಕ!
ಭಾರತ ತಂಡ
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್(ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ(ಕೆಲವು ಪಂದ್ಯಕ್ಕೆ ಮಾತ್ರ), ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್.