CM Siddaramaiah: ಕನ್ನಡದ ಕೃತಿಗಳು ಇಂಗ್ಲಿಷ್ ಸೇರಿ ವಿಶ್ವದ ಭಾಷೆಗಳಿಗೆ ಅನುವಾದಗೊಳಿಸಲು ಸಹಕಾರ: ಸಿದ್ದರಾಮಯ್ಯ
ಹಂಪನಾ ರಚಿಸಿರುವ ʼಚಾರು ವಸಂತʼ ವಿಶೇಷ ಕೃತಿ. ಇಲ್ಲಿಯವರೆಗೆ 16 ಭಾಷೆಗಳಿಗೆ ತರ್ಜುಮೆ ಆಗಿ, ಈಗ 17ನೇ ಭಾಷೆಯಾಗಿ ಪರ್ಷಿಯನ್‌ಗೆ ಅನುವಾದಗೊಂಡಿರುವುದು ಕನ್ನಡದ ಹೆಮ್ಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕನ್ನಡ ವಿಶ್ವದ ಎಲ್ಲ ಭಾಷೆಗಳಿಗೆ ಅನುವಾದಗೊಂಡರೆ ಕನ್ನಡದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.


ಬೆಂಗಳೂರು: ಕನ್ನಡದ ಮಹತ್ವದ ಕೃತಿಗಳು ಇಂಗ್ಲಿಷ್ ಸೇರಿ ವಿಶ್ವದ ಭಾಷೆಗಳಿಗೆ ಭಾಷಾಂತರಗೊಳ್ಳಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಕಮಲಾ ಹಂಪನಾ ಸಾಹಿತ್ಯ ವೇದಿಕೆ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಂಪನಾ ಅವರ ʼಚಾರು ವಸಂತʼ ದೇಸೀಕಾವ್ಯದ ಪರ್ಷಿಯನ್ ಭಾಷಾ ಕೃತಿಯನ್ನು ಜನಾರ್ಪಣೆಗೊಳಿಸಿ ಮಾತನಾಡಿದರು. ಹಂಪನಾ ಕನ್ನಡ ನೆಲದ ಶ್ರೇಷ್ಠ ಸಾಂಸ್ಕೃತಿಕ ವ್ಯಕ್ತಿತ್ವ. ಇವರು ರಚಿಸಿರುವ ʼಚಾರು ವಸಂತʼ ವಿಶೇಷ ಕೃತಿಯಾಗಿದೆ. ಇಲ್ಲಿಯವರೆಗೆ 16 ಭಾಷೆಗಳಿಗೆ ತರ್ಜುಮೆ ಆಗಿ, ಈಗ 17ನೇ ಭಾಷೆಯಾಗಿ ಪರ್ಷಿಯನ್‌ಗೆ ಅನುವಾದಗೊಂಡಿರುವುದು ಕನ್ನಡದ ಹೆಮ್ಮೆ ಎಂದು ತಿಳಿಸಿದರು.
ಕನ್ನಡ ವಿಶ್ವದ ಎಲ್ಲ ಭಾಷೆಗಳಿಗೆ ಅನುವಾದಗೊಂಡರೆ ಕನ್ನಡದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ಹಂಪನಾ ಅವರ ʼಚಾರು ವಸಂತʼ ಕಾವ್ಯ, ನಾಟಕವಾಗಿ ಕೂಡ ಜನಮನ್ನಣೆ ಗಳಿಸಿದೆ. ಹಂಪನಾ ದಂಪತಿ ನನಗೆ ಬಹಳ ವರ್ಷಗಳಿಂದ ಆತ್ಮೀಯರಾಗಿದ್ದರು. ನಾನು ಸಾಹಿತಿ ಅಲ್ಲ. ಆದರೆ ಸಾಹಿತ್ಯ ಮತ್ತು ಸಾಹಿತಿಗಳ ಒಡನಾಟ ಇದೆ. ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾದ ಬಳಿಕ ನಾನು ಕೇಂದ್ರ ಸರ್ಕಾರಕ್ಕೆ ಬರೆಯುವ ಪತ್ರಗಳ ಹೊರತಾಗಿ ಬೇರೆ ಕಡೆ ಇಂಗ್ಲಿಷ್ ಬಳಸುವುದೇ ಇಲ್ಲ. ಹೀಗಾಗಿ ನನಗೆ ಇಂಗ್ಲಿಷ್ ಹೆಚ್ಚು ಬರದಂತಾಯಿತು ಎಂದರು.
ಮಲ ಹೊರುವ ಪದ್ಧತಿ ಬಗ್ಗೆ ಇರುವ ಕೃತಿ ಇದಾಗಿದೆ. ಜಾತಿ ವ್ಯವಸ್ಥೆ ರೂಪಿಸಿದ ಶಾಪ ಅಸ್ಪೃಶ್ಯತೆ. ಇದು ಅಳಿಯಬೇಕು. ಸಾಮಾಜಿಕ, ಆರ್ಥಿಕ ಶಕ್ತಿ ಎಲ್ಲರಿಗೂ ಸಿಕ್ಕಾಗ ಮಾತ್ರ ಜಾತಿ ವ್ಯವಸ್ಥೆ ಅಳಿಯಲು ಸಾಧ್ಯ ಎಂದರು.
ಈ ಸುದ್ದಿಯನ್ನೂ ಓದಿ | DK Shivakumar: ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀಟರ್‌ಗಳಿಗೆ ಹೆಚ್ಚಿಸಲು ಸರ್ಕಾರ ಬದ್ಧ: ಡಿ.ಕೆ.ಶಿವಕುಮಾರ್
ʼಚಾರು ವಸಂತʼ ಅದ್ಭುತ ಕಾವ್ಯ. ಕನ್ನಡ ಭಾಷೆಯ ಉಳಿವು, ಬೆಳವಣಿಗೆಗೆ ಇಂತಹ ಕೃತಿಗಳು ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.