Roopa Gururaj Column: ಪುಟ್ಟ ಹಣತೆಯ ದೊಡ್ಡ ಗುಣ
ನನ್ನ ಬೆಳಕು ಸಾಕು ಎನ್ನುವ ತನಕ ಸಂತೋಷದಿಂದ ಬೆಳಕು ಕೊಡುತ್ತೇನೆ. ಬೆಳಕು ಸಾಕು ಎಂದರೆ ನನ್ನ ಬೆಳಕನ್ನು ನಿಲ್ಲಿಸುವೆ. ಸೂರ್ಯ- ಚಂದ್ರ -ನಕ್ಷತ್ರಗಳು ಬೇಡ ಎಂದರೆ ಅವರು ಬೆಳಕನ್ನು ನಿಲ್ಲಿಸಲು ಆಗುವುದಿಲ್ಲ. ಜನರಿಗೆ ಎಷ್ಟು ಬೇಕು, ಎನ್ನುವುದರ ಅರಿವಿಲ್ಲದೆ ಅವರು ಬೆಳಕನ್ನು ಕೊಡುತ್ತಾರೆ. ನಾನು ಇಲ್ಲದಿದ್ದರೆ ಕತ್ತಲೆಯಲ್ಲಿ ಮನುಷ್ಯನ ಬದುಕು ಹೇಗೆ ಇರುತ್ತದೆ ಊಹಿಸಲು ಸಾಧ್ಯವಿಲ್ಲ.


ಒಂದೊಳ್ಳೆ ಮಾತು
rgururaj628@gmail.com
ಒಮ್ಮೆ ಸೂರ್ಯ-ಚಂದ್ರ- ತಾರೆ- ಆಕಾಶದ ಮಿಂಚು- ಮಿಂಚು ಹುಳ ಹಾಗೆ ಬೆಳಕು ಕೊಡುವ ಎಲ್ಲರೂ, ನಾನು ಶ್ರೇಷ್ಠ-ತಾನು ಹೆಚ್ಚು ಎಂದು ಬೆಳಕಿನ ವಿಚಾರದ ವಾದ ವಿವಾದ ಮಾಡಿ ಕೊಂಡು ಬ್ರಹ್ಮಲೋಕಕ್ಕೆ ಬಂದರು. ಬ್ರಹ್ಮದೇವ ನಮ್ಮಲ್ಲಿ ಯಾರು ಶ್ರೇಷ್ಠರು ಎಂದು ನೀವೇ ಗುರುತಿಸಬೇಕು ಎಂದು ಒಟ್ಟಾಗಿ ಹೇಳಿದರು. ಬ್ರಹ್ಮ ಯೋಚಿಸಿ ಯಾರನ್ನು ಶ್ರೇಷ್ಠ ಎನ್ನುವುದು. ಹಗಲಿನ ಬೆಳಕು ಸೂರ್ಯ, ರಾತ್ರಿ ಹಾಲಿನಂತ ಬೆಳಕು ಚೆಲ್ಲುವ ಚಂದ್ರ, ಹಾಗೆ ಆಕಾಶದ ತುಂಬಾ ಹೊಳೆಯುವ ತಾರೆಗಳು ಎಲ್ಲವೂ ಅವು ಕೊಡುವ ಬೆಳಕು ಆಯಾ ಸಮಯದಲ್ಲಿ ಆ ಬೆಳಕು ಜಗತ್ತಿಗೆ ಉಪಯುಕ್ತವಾಗಿದೆ. ಹೀಗಿರುವಾಗ ಯಾರು ಹೆಚ್ಚು ಎಂದು ಹೇಳುವುದು ಹೇಗೆ? ಗೊಂದಲವಾಗಿ, ತೀರ್ಮಾನ ಹೇಳಲು ಸಾಧ್ಯವಿಲ್ಲದೆ ಎಲ್ಲರ ಅಭಿಪ್ರಾಯ ಸಂಗ್ರಹಿಸಲು ಸಭೆ ಏರ್ಪಡಿಸಿ ದೇವಲೋಕ ದವರನ್ನು ಸಭೆಗೆ ಆಹ್ವಾನಿಸಿದನು.
ಸಭೆಗೆ ಇಂದ್ರ, ವರುಣ, ಅಗ್ನಿ, ಗಂಧರ್ವರು, ಅಪ್ಸರೆಯರು ಎಲ್ಲರೂ ಸೇರಿದರು. ಮತ್ತು ಬೆಳಕಿನ ಸ್ಪರ್ಧೆಯಲ್ಲಿ ಇರುವವರನ್ನು ಬರಲು ಆಹ್ವಾನಿಸಲಾಯಿತು. ಅದರಂತೆ, ಸೂರ್ಯ, ಚಂದ್ರ, ತಾರೆ, ನಕ್ಷತ್ರಗಳು, ನಭೊ ಮಂಡಲದ ಪ್ರತಿನಿಧಿಗಳಾಗಿ ಬಂದರು. ಭೂಮಿಯ ಪ್ರತಿನಿಧಿಯಾಗಿ ಮಿಂಚು ಹುಳ ಸ್ಪರ್ಧೆಗೆ ಬಂದಿತ್ತು.
ಸಭೆ ಆರಂಭವಾಯಿತು ಬ್ರಹ್ಮ ಮಿಂಚು ಹುಳಕ್ಕೆ, ಭೂಮಿಯ ಪ್ರತಿನಿಧಿಯಾಗಿ ನೀನೊಬ್ಬನೇ ಬಂದಿರುವೆಯಾ? ಇನ್ನಾರೂ ಇಲ್ಲವೇ? ಎಂದು ಕೇಳಿದಾಗ ಸಭೆಯಲ್ಲಿದ್ದ ಕೆಲವರು ಎಲ್ಲರ ಮನೆಗಳ ಬೆಳಗುವ “ಹಣತೆ" ಬಂದಿಲ್ಲವೇ ಎಂದರು. ಮಿಂಚು ಹುಳ ಹೇಳಿತು, ನಾನು ಹೊರಡುವ ಮುನ್ನ ಹಣತೆಯನ್ನು ಸಭೆಗೆ ಬರುವಂತೆ ಕರೆದೆ. ಆದರೆ ಹಣತೆ ಹೇಳಿತು. ನಾನು ಈ ಸ್ಪರ್ಧೆಗೆ ಭಾಗವಹಿಸ ಬೇಕೋ ಬೇಡವೋ ನನಗೆ ಗೊತ್ತಿಲ್ಲ. ನೀನು ಹೋಗಿ ಬಾ ಎಂದು ನನ್ನನ್ನು ಕಳಿಸಿತು ಎಂದಿತು.
ಇದನ್ನೂ ಓದಿ: Roopa Gururaj Column: ಲಾಭವಿಲ್ಲದೆ ಯಾರು ಅನಗತ್ಯವಾಗಿ ಸಹಾಯ ಮಾಡುವುದಿಲ್ಲ
ಹಣತೆಯು ಈ ಸಭೆಗೆ ಪ್ರತಿನಿಧಿಯಾಗಿ ಬರುವ ಎಲ್ಲಾ ಅರ್ಹತೆ ಇದೆ ಎಂದು ಬ್ರಹ್ಮದೇವ ಹಣತೆಗೆ ಕರೆ ಕಳಿಸಿದನು. ಸಭೆಯಲ್ಲಿ ವಿಷಯ ಮಂಡಿಸುವ ಅಧಿಕಾರ ಮೊದಲು ಸೂರ್ಯ, ಚಂದ್ರ ತಾರೆಯ ರಿಗೆ ದೊರಕಿತು ಅವರೆಲ್ಲ ತಮ್ಮ ಬಗ್ಗೆ ಅಪರಿಮಿತವಾಗಿ ಹೇಳಿಕೊಂಡು ತಮ್ಮಿಂದಲೇ ಭೂಮಿಗೆ ಬೆಳಕು ಎಂದು ಪ್ರತಿಪಾದಿಸಿದರು.
ಹಣತೆ ಮುಂದೆ ಬರಲಿಲ್ಲ. ಬ್ರಹ್ಮ ಹಣತೆಯನ್ನು ಕರೆದು ನೀನು ಏನಾದರೂ ವಾದ ಮಂಡಿಸು ಎಂದನು. ಹಣತೆ ಹೇಳಿತು ನನಗೆ ವಾದ ಮಂಡಿಸಲು ಆಸೆ ಇಲ್ಲ. ನಾನು ಶ್ರೇಷ್ಠ ಅಥವಾ ಕನಿಷ್ಠನು ಅಲ್ಲ. ನಾನು ನನ್ನ ಕೆಲಸ ಮಾಡುತ್ತಿರುವೆ. ನನ್ನನ್ನು ನಾನೇ ಸುಡುತ್ತಾ ಬೆಳಕು ಕೊಡುವುದರಲ್ಲಿ ನನಗೆ ಬಹಳ ತೃಪ್ತಿ ಇದೆ. ನನ್ನದು ಕಡಿಮೆ ಬೆಳಕಾದರೂ ನನ್ನನ್ನು ನಂಬಿ ದೀಪ ಬೆಳಗಿಸಿದವರಿಗೆ ನಾನು ಬೆಳಕು ಕೊಡುತ್ತೇನೆ.
ನನ್ನ ಬೆಳಕು ಸಾಕು ಎನ್ನುವ ತನಕ ಸಂತೋಷದಿಂದ ಬೆಳಕು ಕೊಡುತ್ತೇನೆ. ಬೆಳಕು ಸಾಕು ಎಂದರೆ ನನ್ನ ಬೆಳಕನ್ನು ನಿಲ್ಲಿಸುವೆ. ಸೂರ್ಯ- ಚಂದ್ರ -ನಕ್ಷತ್ರಗಳು ಬೇಡ ಎಂದರೆ ಅವರು ಬೆಳಕನ್ನು ನಿಲ್ಲಿಸಲು ಆಗುವುದಿಲ್ಲ. ಜನರಿಗೆ ಎಷ್ಟು ಬೇಕು, ಎನ್ನುವುದರ ಅರಿವಿಲ್ಲದೆ ಅವರು ಬೆಳಕನ್ನು ಕೊಡುತ್ತಾರೆ. ನಾನು ಇಲ್ಲದಿದ್ದರೆ ಕತ್ತಲೆಯಲ್ಲಿ ಮನುಷ್ಯನ ಬದುಕು ಹೇಗೆ ಇರುತ್ತದೆ ಊಹಿಸಲು ಸಾಧ್ಯವಿಲ್ಲ.
ನಾನು ಎಲ್ಲಾ ಸಮಯದಲ್ಲೂ ಮನುಷ್ಯರಿಗೆ ಬೇಕು. ಹಬ್ಬ ಹರಿ ದಿನಗಳಲ್ಲಿ , ಸಭೆ ಸಮಾರಂಭ ಗಳಲ್ಲಿ ಹಾಗೂ ಪ್ರತಿನಿತ್ಯ ಎಲ್ಲರ ಮನೆಯಲ್ಲೂ ಕತ್ತಲಾದಾಗ ಬೆಳಗುವ ಬೆಳಕು ನಾನು. ನಾನು ಆದಿಯಿಂದಲೂ ಇರುವೆ ಎಂದೆಂದಿಗೂ ಇರುವೆ. ಚಾಚೂ ತಪ್ಪದೇ ಕರ್ತವ್ಯ ಮಾಡುತ್ತೇನೆ. ನಾನೇ ಶ್ರೇಷ್ಠ ಎಂಬ ಅಹಂ ಇಲ್ಲ. ನನ್ನೊಳಗೆ ನಾನು ಉರಿದು ಬೆಳಕು ಕೊಡುವುದರಲ್ಲಿ ಆನಂದವಿದೆ. ಅದು ನನಗೆ ಭಗವಂತ ಕೊಟ್ಟ ಕೊಡುಗೆ ಎಂದುಕೊಂಡಿರುವೆ ಎಂದು ಶಿರಬಾಗಿ ನಮಸ್ಕರಿಸಿತು.
ಎಲ್ಲರಿಗೂ ಆಗ ಹಣತೆಯ ಬೆಳಕೇ ಶ್ರೇಷ್ಠ ಎಂದು ಮನವರಿಕೆಯಾಯಿತು. ನಾವು ಎಷ್ಟೇ ಸಾಧನೆ ಮಾಡಿದರೂ ನಮ್ಮಲ್ಲಿ ವಿನಯವಿಲ್ಲದಿದ್ದರೆ ಆ ಸಾಧನೆಗೆ ಬೆಲೆ ಇಲ್ಲ.