Ravi Sajangadde Column: ಭೀಮವ್ವಾ, ಬೊಂಬೆ ಹೇಳುತೈತೆ ನೀನೇ ರಾಜಕುಮಾರಿ !
ಸಭಾಂಗಣದ ಕೆಂಪುಹಾಸಿನ ಬಳಿ ತಲುಪಿದಾಗ ಆಕೆ ಮೊದಲು ಅಲ್ಲೇ ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತಾಪೂರ್ವಕವಾಗಿ ನಮಸ್ಕರಿಸಿದರು. ವಯಸ್ಸಿನ ಕಾರಣದಿಂದಾಗಿ ಭೀಮವ್ವ ನಡೆಯಲು ತ್ರಾಸಪಡುತ್ತಿರುವುದನ್ನು ಗಮನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಿಷ್ಟಾಚಾರವನ್ನು ಬದಿಗೊತ್ತಿ ವೇದಿಕೆಯಿಂದ ಕೆಳಗಿಳಿದು ಭೀಮವ್ವ ಇದ್ದಲ್ಲಿಗೇ ಆಗಮಿಸಿ ‘ಪದ್ಮಶ್ರೀ’ ಪುರಸ್ಕಾರವನ್ನು ನೀಡಿ ಆಕೆಯನ್ನು ಗೌರವಿಸಿ ವಂದಿಸಿದಾಗ, ನೆರೆದ ಎಲ್ಲರಿಂದಲೂ ಮುಗಿಲು ಮುಟ್ಟುವ ಕರತಾಡನ.


ಗುಣಗಾನ
ರವೀ ಸಜಂಗದ್ದೆ
ಅಂದು ಏಪ್ರಿಲ್ 28ರ ಸೋಮವಾರ. ರಾಷ್ಟ್ರಪತಿ ಭವನದಲ್ಲಿ 2025ನೇ ಸಾಲಿನ ನಾಗರಿಕ ಪುರಸ್ಕಾರ ಸಮಾರಂಭ ಆಯೋಜನೆಗೊಂಡಿತ್ತು. ಸಭಾಂಗಣ ಕಿಕ್ಕಿರಿದು ತುಂಬಿತ್ತು. ‘ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳೇಕ್ಯಾತರ’ ಎಂಬ ಹೆಸರನ್ನು ಉದ್ಘೋಷಕರು ಕರೆದಾಗ, ಸಣ್ಣ ಸಣ್ಣ ಹೆಜ್ಜೆ ಇಡುತ್ತಾ ಪ್ರಶಸ್ತಿ ಸ್ವೀಕರಿಸಲು ಬಂದ ಭೀಮವ್ವ ಅಂದಿನ ಆಕರ್ಷಣೆಯ ಕೇಂದ್ರಬಿಂದು!
ಸಭಾಂಗಣದ ಕೆಂಪುಹಾಸಿನ ಬಳಿ ತಲುಪಿದಾಗ ಆಕೆ ಮೊದಲು ಅಲ್ಲೇ ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತಾಪೂರ್ವಕವಾಗಿ ನಮಸ್ಕರಿಸಿದರು. ವಯಸ್ಸಿನ ಕಾರಣದಿಂದಾಗಿ ಭೀಮವ್ವ ನಡೆಯಲು ತ್ರಾಸಪಡುತ್ತಿರುವುದನ್ನು ಗಮನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಿಷ್ಟಾಚಾರವನ್ನು ಬದಿಗೊತ್ತಿ ವೇದಿಕೆಯಿಂದ ಕೆಳಗಿಳಿದು ಭೀಮವ್ವ ಇದ್ದಲ್ಲಿಗೇ ಆಗಮಿಸಿ ‘ಪದ್ಮಶ್ರೀ’ ಪುರಸ್ಕಾರವನ್ನು ನೀಡಿ ಆಕೆಯನ್ನು ಗೌರವಿಸಿ ವಂದಿಸಿದಾಗ, ನೆರೆದ ಎಲ್ಲರಿಂದಲೂ ಮುಗಿಲು ಮುಟ್ಟುವ ಕರತಾಡನ. ಅಲ್ಲಿ ನೆರೆದಿದ್ದು ಆ ಕ್ಷಣಗಳನ್ನು ನೇರವಾಗಿ ಕಣ್ತುಂಬಿಕೊಂಡ ಮತ್ತು ಆಮೇಲೆ ಆ ವಿಡಿಯೋ ತುಣುಕು ವೀಕ್ಷಿಸಿದ ಹಲವರ ಕಣ್ಣುಗಳಲ್ಲಿ ಅವರಿಗೇ ಅರಿವಿಲ್ಲದಂತೆ ತುಂಬಿಕೊಂಡಿತ್ತು ಆನಂದಬಾಷ್ಪ!
ಅದು ತಮ್ಮ ಮನೆಯ ಹಿರಿಯಜ್ಜಿಗೇ ಪ್ರಶಸ್ತಿ ಬಂದಷ್ಟು ಸಂತಸ-ಸಂಭ್ರಮ-ಆಪ್ಯಾಯತೆಯ ಕ್ಷಣ. ಇಂಥ ವ್ಯಕ್ತಿಗಳು ಮತ್ತು ಕ್ಷಣಗಳೇ ನಾಗರಿಕ ಪುರಸ್ಕಾರಗಳ ಹಾಗೂ ಅವುಗಳನ್ನು ಪ್ರದಾನಿಸುವ ಸಮಾರಂಭಗಳ ಮೌಲ್ಯವನ್ನು ಹೆಚ್ಚಿಸಿರುವುದು ಎಂದರೆ ಅತಿಶಯೋಕ್ತಿ ಆಗಲಾರದು. ೨೦೧೪ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಲವಾರು ಸುಧಾರಣೆಗಳು, ಅಭಿವೃದ್ಧಿ ಕಾರ್ಯಗಳು ಆಗಿರುವುದು, ಜನಸ್ನೇಹಿ ನೀತಿಗಳು ಜಾರಿ ಆಗಿರುವುದು ಸರ್ವವಿದಿತ. ಇಂಥ ಅದೆಷ್ಟೋ ಸಾಧನೆ-ಸತ್ಕಾರ್ಯಗಳಲ್ಲಿ ಜನರ ಮನಸ್ಸಿಗೆ ಮುದ ಮತ್ತು ನೆಮ್ಮದಿ ನೀಡಿದ ಸಂಗತಿಯೆಂದರೆ ‘ಪದ್ಮ ಪ್ರಶಸ್ತಿ’ಗಳಿಗೆ ಆಯ್ಕೆಮಾಡುವಾಗ ಅನುಸ ರಿಸಲಾಗುವ ಪರಿಪಾಠ. ದೇಶದ ಮೂಲೆ ಮೂಲೆಗಳಿಂದ ಹೆಕ್ಕಿ ತೆಗೆದ ಅಮೂಲ್ಯ ರತ್ನಗಳ ಇಂಥ ಪಟ್ಟಿಯೇ ನಿಬ್ಬೆರಗಾಗಿಸುವಂಥದ್ದು.
ಇದನ್ನೂ ಓದಿ: Ravi Sajangadde Column: ಕಸ್ತೂರಿ ರಂಗನ್ ಎಂಬ ಬಹುರಂಗ ಪಾರಂಗತ
ನಿಜಾರ್ಥದಲ್ಲಿ ಪದ್ಮ ಪ್ರಶಸ್ತಿಗಳ ಗೌರವ ಹೆಚ್ಚಿಸಿದ ಕೀರ್ತಿ ಕೇಂದ್ರ ಸರಕಾರಕ್ಕೆ ಮತ್ತು ಹೀಗೆ ಆಯ್ಕೆಗೊಂಡ ಅಮೂಲ್ಯ ರತ್ನಗಳಿಗೆ ಸಲ್ಲುತ್ತದೆ. 2015ರಿಂದೀಚೆಗೆ ‘ಪದ್ಮಶ್ರೀ’ ಪುರಸ್ಕೃತರಾದ ಕರ್ನಾಟಕದ ಎಲೆಮರೆಯ ಕಾಯಿಗಳ ಬಗ್ಗೆ ಒಮ್ಮೆ ಕಣ್ಣು ಹಾಯಿಸೋಣ. ಹರಿಯುವ ತೋಡು-ನದಿಯ ನೀರಿನ ಮೇಲಿಂದ ಜನರಿಗೆ ಓಡಾಡಲು ಅನುಕೂಲ ಮಾಡಿ, ದೇಶಾದ್ಯಂತ 125ಕ್ಕೂ ಹೆಚ್ಚಿನ ತೂಗುಸೇತುವೆ ನಿರ್ಮಿಸಿದ ‘ತೂಗು ಸೇತುವೆಗಳ ಸರದಾರ’ ಗಿರೀಶ್ ಭಾರದ್ವಾಜ್; ಬಸ್ ನಿಲ್ದಾಣದಲ್ಲಿ ಕಿತ್ತಳೆ ಹಣ್ಣು ಮಾರಿ ಬಂದ ದುಡ್ಡಿನಿಂದ ತನ್ನೂರಿಗೆ ಶಾಲೆ ತರಲು ಹೋರಾಡಿ ಯಶಸ್ವಿಯಾದ ‘ಅಕ್ಷರಸಂತ’ ಹರೇಕಳ ಹಾಜಬ್ಬ; ತನ್ನ ಕೃಷಿಭೂಮಿಗೆ ಮತ್ತು ದೈನಂದಿನ ಉಪಯೋಗಕ್ಕೆ, ತಾನೇ ದುಡಿದು ಸುರಂಗ ಕೊರೆದು ನೀರುಪಡೆದು, ಬೋಳುಗುಡ್ಡೆಯನ್ನು ನಂದನವನ ಮಾಡಿದ ‘ಸಾಹಸಿ ಕೃಷಿಕ’ ಅಮೈ ಮಹಾಲಿಂಗ ನಾಯ್ಕ; ತನ್ನ ಪಾಲಿನ ಕೆಲವೇ ಸೆಂಟ್ಸ್ ಜಾಗದಲ್ಲಿ 650ಕ್ಕೂ ಹೆಚ್ಚಿನ ಅಪರೂಪದ ಭತ್ತದ ತಳಿಗಳನ್ನು ಪ್ರೀತಿಯಿಂದ ಬೆಳೆದು ಸಂರಕ್ಷಿಸುತ್ತಿರುವ ‘ಬತ್ತದ ಚಿಲುಮೆಯ ಕೃಷಿಕ’ ಕಾಸರಗೋಡು ಕನ್ನಡಿಗ ಸತ್ಯನಾರಾಯಣ ಬೇಳೇರಿ; ಮದ್ಯಪಾನ ವಿರೋಧಿ ಹೋರಾಟ ಗಾರ್ತಿ ಮತ್ತು ‘ಹಾಲಕ್ಕಿ ಜಾನಪದ ಕೋಗಿಲೆ’ ಬಿರುದಾಂಕಿತೆ, ಬುಡಕಟ್ಟು ಜನಾಂಗದ ಸುಕ್ರಿ ಬೊಮ್ಮಗೌಡ; ಜನಪದ ವೈದ್ಯಕೀಯ ಪದ್ಧತಿಯ ರಾಯಭಾರಿಯಾಗಿ 15000ಕ್ಕೂ ಹೆಚ್ಚು ಯಶಸ್ವಿ ಮಾಮೂಲು ಹೆರಿಗೆ ಮಾಡಿಸಿದ ಸೂಲಗಿತ್ತಿ ನರಸಮ್ಮ; ತಮ್ಮ ಜೀವಿತಾವಧಿಯುದ್ದಕ್ಕೂ 8000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡಿದ ‘ಪರಿಸರವಾದಿ’ ಸಾಲುಮರದ ತಿಮ್ಮಕ್ಕ; ಉತ್ತರ ಕನ್ನಡದ ‘ವೃಕ್ಷಮಾತೆ’ ಹಾಗೂ ಪರಿಸರ ಸಂರಕ್ಷಣೆಗೆ ಇಡೀ ಜೀವನ ಮುಡಿಪಾಗಿರಿಸಿದ ಬುಡಕಟ್ಟು ಹೋರಾಟಗಾರ್ತಿ ತುಳಸಿಗೌಡ- ಹೀಗೆ ಹಲವು ‘ನಿಜಸಾಧಕ’ರ ಮುಡಿಗೇರಿದ ಸೌಭಾಗ್ಯ ಪದ್ಮಶ್ರೀ ಪ್ರಶಸ್ತಿಯದ್ದು.
ಇಂಥ ಅರ್ಹ ಸಾಧಕರನ್ನು ಹುಡುಕಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಈ ಶ್ರೇಷ್ಠರ ಸಾಲಿಗೆ, ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ 96 ವರ್ಷದ ಭೀಮವ್ವ ದೊಡ್ಡ ಬಾಳಪ್ಪ ಶಿಳ್ಳೇಕ್ಯಾತರ ಸೇರುತ್ತಾರೆ. ಇವರು ಕೊಪ್ಪಳ ಜಿಲ್ಲೆಯ ತೊಗಲುಗೊಂಬೆಯಾಟದ ಕಲಾವಿದೆ.
ಭೀಮವ್ವ ಅವರು ಈ ಪ್ರಶಸ್ತಿಗೆ ಭಾಜನರಾಗಿರುವುದು ಇಡೀ ಕರ್ನಾಟಕ ಹೆಮ್ಮೆ ಪಡುವ ವಿಷಯ. ತಲೆತಲಾಂತರದಿಂದ ಕೆಲವೇ ಕೆಲವು ಪರಿವಾರಗಳ ಕೌಟುಂಬಿಕ ಕಲೆಯಾಗಿ ನಡೆದುಕೊಂಡು ಬಂದಿರುವ ತೊಗಲುಗೊಂಬೆಯಾಟವು ಇಂದಿನ ದಿನಗಳಲ್ಲಿ ನೇಪಥ್ಯಕ್ಕೆ ಸರಿಯುತ್ತಿದೆ.
ಸುಮಾರು 7 ದಶಕಕ್ಕೂ ಹೆಚ್ಚು ಕಾಲದಿಂದ ತೊಗಲುಗೊಂಬೆಯಾಟವನ್ನೇ ವೃತ್ತಿಯಾಗಿಸಿಕೊಂಡು, ಪ್ರೀತಿ ಮತ್ತು ಆಸ್ಥೆಯಿಂದ ನಡೆಸಿಕೊಂಡು ಬಂದಿರುವ ಭೀಮವ್ವ, ತಮ್ಮ ನೆಲದ ಕಲೆಯನ್ನು ದೇಶ-ವಿದೇಶಗಳಿಗೂ ಪರಿಚಯಿಸಿ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಈ ಅಪರೂಪದ ಜಾನಪದ ಕಲೆಯನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ.
ಆಧುನಿಕತೆ, ತಂತ್ರಜ್ಞಾನ, ಸಿನಿಮಾ, ಒಟಿಟಿ, ಸಾಮಾಜಿಕ ಜಾಲತಾಣಗಳ ಅಬ್ಬರ ಮತ್ತು ಹಲವು ಸವಾಲುಗಳ ನಡುವೆಯೂ, ಈ ಗ್ರಾಮೀಣ ಕಲೆಯನ್ನು ಉಳಿಸಿ-ಬೆಳೆಸಿದ ಕೀರ್ತಿ ಭೀಮವ್ವನವರಿಗೆ ಸಲ್ಲುತ್ತದೆ. ಶಿಳ್ಳೇಕ್ಯಾತ ಸಮುದಾಯದ ಸಂಜೀವಪ್ಪ-ಹೊಳೆಯಮ್ಮ ದಂಪತಿಯ ಮಗಳಾದ ಭೀಮವ್ವ ಅನಕ್ಷರಸ್ಥೆ. ವಂಶಪಾರಂಪರ್ಯವಾಗಿ ಬಂದ ತೊಗಲುಗೊಂಬೆಯಾಟ ಕಲೆಗೆ ಮಾರು ಹೋಗಿ 14ನೇ ವಯಸ್ಸಿನಿಂದಲೇ ಈ ಕಲಾಪ್ರದರ್ಶನಕ್ಕೆ ಒಡ್ಡಿಕೊಂಡ ಇವರು, ರಾಮಾಯಣ, ಮಹಾಭಾರತ ಸೇರಿದಂತೆ ಇತರ ಕಥೆಗಳನ್ನು ಪ್ರದರ್ಶಿಸುವಲ್ಲಿ ಸಿದ್ಧಹಸ್ತರು.
ಇದಕ್ಕೆ ಕುಟುಂಬದವರೂ ಸಾಥ್ ನೀಡುತ್ತಾರೆ. ಲವ-ಕುಶ ಕಾಳಗ, ಕುರುಕ್ಷೇತ್ರ, ವಿರಾಟಪರ್ವ, ಕರ್ಣಪರ್ವ, ಆದಿಪರ್ವ, ದ್ರೌಪದಿ ವಸಾಪಹರಣ ಮುಂತಾದ ಕಥನಗಳು ಇವರಿಗೆ ಕರತಲಾಮಲಕ. ವಿವಿಧ ಪಾತ್ರಗಳ ತೊಗಲುಗೊಂಬೆಗಳ ತಯಾರಿಕೆ, ಅದಕ್ಕೆ ಬೇಕಾಗುವ ಪರಿಕರಗಳನ್ನು ಬಳಸಿ ಬಣ್ಣ ಮಾಡುವುದು, ಗೊಂಬೆಗಳನ್ನು ಜತನದಿಂದ ಕಾಪಾಡುವುದು ಹೀಗೆ ಈ ಕಲೆಗೆ ಅಗತ್ಯವಿರುವ ಎಲ್ಲ ಕೌಶಲಗಳೂ ಅವರಿಗೆ ಕರಗತ.
ಭಾರತ, ಅಮೆರಿಕ, ಇಟಲಿ, ಇರಾನ್ ಸ್ವಿಜರ್ಲೆಂಡ್, ಇರಾಕ್, ಪ್ಯಾರಿಸ್, ಹಾಲೆಂಡ್ ಮುಂತಾದ ದೇಶಗಳಲ್ಲಿ ಇದುವರೆಗೂ 20000ಕ್ಕೂ ಹೆಚ್ಚಿನ ಕಲಾಪ್ರದರ್ಶನ ನೀಡಿರುವುದು ಇವರ ಹೆಗ್ಗಳಿಕೆ. ಸುಮಾರು 200 ವರ್ಷಗಳಷ್ಟು ಹಳೆಯ ಗೊಂಬೆಗಳೂ ಇವರ ಸಂಗ್ರಹದಲ್ಲಿವೆ. “ಅತಿ ಚಿಕ್ಕ ಮತ್ತು ಹಿಂದುಳಿದ ಹಳ್ಳಿಯಿಂದ ಬಂದವಳು ನಾನು. ಇಂಥ ಹಳ್ಳಿಗಳ ಕಲೆ ಮತ್ತು ಕಲಾವಿದರು ಬೆಳಕಿಗೆ ಬರುವುದೇ ಇಲ್ಲ. ಕೇಂದ್ರ ಸರಕಾರ ನನ್ನನ್ನು ಅಷ್ಟು ದೊಡ್ಡ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಆಶ್ಚರ್ಯ ಮತ್ತು ಸಂತೋಷ ಎರಡನ್ನೂ ತಂದಿದೆ.
ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಮ್ಮಿಯೇ" ಎಂದು ಪ್ರತಿಕ್ರಿಯಿಸುವಾಗ ಇಳಕಲ್ ಸೀರೆ ಯುಟ್ಟಿದ್ದ ಭೀಮವ್ವ ಆನಂದಬಾಷ್ಪ ಸುರಿಸಿ ನಗುವಾದರು, ಮಗುವಾದರು. ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಅನೇಕ ಗ್ರಾಮೀಣ ಕಲೆ, ಜಾನಪದ ಕಲೆ ಮತ್ತು ಇತರ ಕಲಾಪ್ರಕಾರಗಳು ನಶಿಸುತ್ತಿವೆ, ಹಲವು ಈಗಾಗಲೇ ಕಣ್ಮರೆಯಾಗಿವೆ.
ಸಾಂಪ್ರದಾಯಿಕ ಮನರಂಜನಾ ವಿಧಾನಗಳ ಬಗ್ಗೆ ಈಗಿನ ಪೀಳಿಗೆಗೆ ಅರಿವಿಲ್ಲದಿರುವುದು ಮತ್ತು ಇವುಗಳ ಬಗೆಗಿನ ಸಮಾಜದ ಅಸಡ್ಡೆಯೂ ಈ ಪರಿಸ್ಥಿತಿಗೆ ಪ್ರಮುಖ ಕಾರಣ. ವಯೋಸಹಜವಾಗಿ ಕಣ್ಣಿನ ದೃಷ್ಟಿ ಮಬ್ಬಾಗಿದ್ದರೂ, ಕಿವಿ ಮಂದವಾಗಿದ್ದರೂ, 96ರ ಈ ಇಳಿವಯಸ್ಸಿನಲ್ಲೂ ಭೀಮವ್ವರ ಜೀವನೋತ್ಸಾಹ, ಕಲಾಸೇವೆಯ ತುಡಿತ ಕಮ್ಮಿಯಾಗಿಲ್ಲ! ಭೀಮವ್ವನಂಥ ಹಲವರ ಸಮರ್ಪಣಾ ಮನೋಭಾವದಿಂದಾಗಿ ಹಲವಾರು ಜಾನಪದ ಕಲೆಗಳು ಇನ್ನೂ ಉಸಿರಾಡುತ್ತಿವೆ.
ಗ್ರಾಮೀಣ ಕಲೆ, ಜಾನಪದ ಸಂಸ್ಕೃತಿಗಳು ಇತಿಹಾಸದ ಪುಟ ಸೇರುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಕಲಾಸೇವೆಗೆ ಬದುಕನ್ನು ಸಮರ್ಪಿಸಿ, ಅದನ್ನು ಜನಮಾನಸದಲ್ಲಿ ಉಳಿಸುತ್ತಿರುವ ಕೆಲವೇ ಸಾಧಕ ರಲ್ಲಿ ಭೀಮವ್ವ ಒಬ್ಬರು. ಅವರ ತಪಸ್ಸು, ಸೇವೆ, ಸಾಧನೆ ಮುಂದಿನ ಪೀಳಿಗೆಗಳಿಗೂ ಸ್ಪೂರ್ತಿ ಯಾಗಲಿ, ಹಲವು ತಲೆಮಾರುಗಳಿಗೆ ಪ್ರೇರಣೆಯಾಗಲಿ. ತಾಯಿ ಭೀಮವ್ವಾ, ‘ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೇ ರಾಜಕುಮಾರಿ!’
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)